ಕಮಲ-ದಳ ಮೈತ್ರಿ ಅಬಾಧಿತ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ನಾನು ನಮ್ಮ ಅಭ್ಯರ್ಥಿಯನ್ನು ನಿಲ್ಲಿಸುವುದಕ್ಕೆ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್, ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಆರ್.ಅಶೋಕರೊಂದಿಗೆ ಚರ್ಚೆ ನಡೆಸಿ ಅವರೆಲ್ಲರ ಸಹಮತದಿಂದ ಅಭ್ಯರ್ಥಿ ಹಾಕಲಾಯಿತು. ಹೀಗಾಗಿ ನಮ್ಮ ಮೈತ್ರಿಯಲ್ಲಿ ಬಿರುಕು ಬರುವ ಪ್ರಶ್ನೆ ಇಲ್ಲ
-
ಮೈತ್ರಿ ನಡುವೆ ಬಿಕ್ಕಟ್ಟು ಸೃಷ್ಟಿಸಲು ಕಾಂಗ್ರೆಸ್‌ನಿಂದ ವಿಫಲ ಪ್ರಯತ್ನ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಬಿರುಕು ಉಂಟಾಗುವುದಿಲ್ಲ. ಈ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯೂ ಅಲ್ಲ ಹಾಗೂ ನಮ್ಮ ನಡುವೆ ಬಿಕ್ಕಟ್ಟು ಸೃಷ್ಟಿಸಲು ಕಾಂಗ್ರೆಸ್ ವಿಫಲ ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನಮ್ಮ ಅಭ್ಯರ್ಥಿಯನ್ನು ನಿಲ್ಲಿಸುವುದಕ್ಕೆ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್, ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಆರ್.ಅಶೋಕರೊಂದಿಗೆ ಚರ್ಚೆ ನಡೆಸಿ ಅವರೆಲ್ಲರ ಸಹಮತದಿಂದ ಅಭ್ಯರ್ಥಿ ಹಾಕಲಾಯಿತು. ಹೀಗಾಗಿ ನಮ್ಮ ಮೈತ್ರಿಯಲ್ಲಿ ಬಿರುಕು ಬರುವ ಪ್ರಶ್ನೆ ಇಲ್ಲ ಎಂದರು.
ಇದನ್ನೂ ಓದಿ: HD Kumaraswamy: ಮೈಶುಗರ್ ಶಾಲೆ ಅಭಿವೃದ್ಧಿಗೆ 10 ಕೋಟಿ ರೂ. ಶೀಘ್ರ ರಿಲೀಸ್- HDK ಭರವಸೆ
ಶಾಸಕರು ಮಾತ್ರ ಹಾಗೂ ಬಿಜೆಪಿಯ ಹೆಚ್ಚುವರಿ ೬ ಹಿಸಿ ಸಂಘಟನೆ ಮಾಡುತ್ತಿದ್ದೇನೆ. ಈ ಚುನಾವಣೆ ಏನಾಗುತ್ತದೆ ಎನ್ನುವುದು ನನಗೆ ಗೊತ್ತಿಲ್ಲವೇ? ಸುಖಾ ಸುಮ್ಮನೆ ಅಭ್ಯರ್ಥಿ ಹಾಕಲಿಕ್ಕೆ ನಾನೇನು ಮೂರ್ಖನಲ್ಲ. ಏಕೆಂದರೆ, ನಮಗೆ ಇದ್ದಿದ್ದು ಕೇವಲ 18 ಸೀಟು. ಅದರಲ್ಲಿ ಒಬ್ಬರು ಈಗಾಗಲೇ ಕಾಲು ಹೊರಗೆ ಇಟ್ಟಿದ್ದಾರೆ. ಹೀಗಾಗಿ ನಮ್ಮಲ್ಲಿ ಉಳಿದಿದ್ದು 17 ಶಾಸಕರು ಮಾತ್ರ ಹಾಗೂ ಬಿಜೆಪಿಯ ಹೆಚ್ಚುವರಿ 6 ಮತಗಳು ಬರಬಹುದು ಎನ್ನುವುದು ನಮಗಷ್ಟೇ ಅಲ್ಲ, ಎಲ್ಲರ ನಿರೀಕ್ಷೆ ಆಗಿತ್ತು. ಹೀಗೆಯೇ ಎಲ್ಲಾ ಸೇರಿ ಒಟ್ಟಾರೆ ನಮ್ಮ ಅಭ್ಯರ್ಥಿಗೆ 24 ಮತಗಳು ಬರಬಹುದು ಎಂಬ ಲೆಕ್ಕಾಚಾರ ಇಟ್ಟುಕೊಂಡಿದ್ದೆವು. ಆದರೆ, ಕೆಲ ಶಾಸಕರು ಪಕ್ಷದ ಜತೆ ಗಟ್ಟಿಯಾಗಿ ನಿಲ್ಲಲಿಲ್ಲ. ಅನುದಾನಕ್ಕಾಗಿ ಚಂಚಲರಾಗಿದ್ದಾರೆ.
ಕೇವಲ ಈ ನೆಪ ಇಟ್ಟುಕೊಂಡು ನಮ್ಮ ನಡುವೆ ಬಿಕ್ಕಟ್ಟು ಸೃಷ್ಟಿಸಬಹುದು ಎಂದು ಕಾಂಗ್ರೆಸ್ ಪಕ್ಷ ನಂಬಿದ್ದರೆ ಅವರಿಗೆ ನಿರಾಸೆ ಆಗುವುದು ಖಚಿತ. ಅವರ ಆಸೆ ಖಂಡಿತಾ ಕೈಗೂಡುವುದಿಲ್ಲ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ಕೊಡುತ್ತೇನೆ. ಅಡ್ಡ ಮತದಾನ ಮಾಡಿದವರನ್ನು ಪತ್ತೆ ಹಚ್ಚಲು ಮಾಜಿ ಮಂತ್ರಿಗಳಾದ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಬಿಜೆಪಿ ಮೂವರ ತಂಡ ರಚನೆ ಮಾಡಿದೆ. ನಾನು ದೆಹಲಿಗೆ ಹೋದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಈ ಬಗ್ಗೆ ನನಗೆ ಇರುವ ಮಾಹಿತಿ ತಿಳಿಸುತ್ತೇನೆ. ನಮ್ಮ ಶಾಸಕರು ಎಲ್ಲರೂ ಸೇರಿ ಅಂತಿಮ ನಿರ್ಣಯ ಮಾಡುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಇದರ ಬಗ್ಗೆ ನನಗೆ ಪೂರ್ಣ ಮಾಹಿತಿ ಇದೆ.
ಇದನ್ನು ಇನ್ನೂ ಮುಂದಕ್ಕೆ ಎಳೆದುಕೊಂಡು ಹೋಗುವ ಅವಶ್ಯಕತೆ ಇಲ್ಲ. ನನ್ನ ಗುರಿ 2028, ಆ ಚುನಾವಣೆಯಲ್ಲಿ ನಮ್ಮ ಮೈತ್ರಿ ಸರಕಾರ ರಾಜ್ಯದ ಚುಕ್ಕಾಣಿ ಹಿಡಿಯಬೇಕು. ರಾಜ್ಯದಲ್ಲಿ ನಿಜವಾದ ಜನಪರ, ಜನತೆಯ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವಂತಹ ಸರ್ಕಾರ ಬರಬೇಕು. ಅದಕ್ಕಾಗಿ ನನ್ನ ಶ್ರಮ ಮೀಸಲು, ಅದು ಬಿಟ್ಟು ಮುಖ್ಯಮಂತ್ರಿ ಸ್ಥಾನದ ವಿಷಯ ಮುಖ್ಯವಲ್ಲ. ಮೊದಲು ಈ ಕೆಟ್ಟ ಸರಕಾರ ಹೋಗಬೇಕು ಎಂದು ಕುಮಾರಸ್ವಾಮಿ ಹೇಳಿದರು.
ಬೇರೆ ಕಡೆ ಅನುಕೂಲ ಇದ್ದರೆ ಹೋಗಬಹುದು
ಶಾಸಕರ ಸಭೆಯಲ್ಲಿ ಕೆಲವು ವಿಷಯ ಮುಕ್ತವಾಗಿ ಮಾತನಾಡಿದ್ದೇನೆ. ಅವರ ಭವಿಷ್ಯಕ್ಕೆ ತೊಂದರೆ ಕೊಡಲು ನಾನು ಬಯಸುವುದಿಲ್ಲ. ಬೇರೆ ಕಡೆ ಅನುಕೂಲವಾಗುತ್ತದೆ. ಹೋಗುತ್ತೇವೆ ಎಂದರೆ ನಾನು ತಡೆಯುವುದಕ್ಕೆ ಹೋಗುವುದಿಲ್ಲ. ಹೋಗಬೇಕು ಅಂದರೆ ಧೈರ್ಯವಾಗಿ ನನಗೆ ಹೇಳಿಯೇ ಹೋಗಿ ಅಂತ ಹೇಳಿದ್ದೇನೆ. ಅದನ್ನು ಬಿಟ್ಟು ಇಂತಹ ಕೆಲಸಗಳನ್ನು ಮಾಡಿ ಪಕ್ಷಕ್ಕೆ ಧಕ್ಕೆ ತರಬೇಡಿ ಎಂದು ಹೇಳಿದ್ದೇನೆ. ಶಾಸಕರ ಸಭೆಯಲ್ಲಿ ಒಬ್ಬರು ಬಿಟ್ಟರೆ ಉಳಿದ 17 ಮಂದಿ ಹಾಜರಿದ್ದರು. ಅವರೊಂದಿಗೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಿಸೆಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ
ಮೂರು ವರ್ಷದಿಂದ ನಮ್ಮ ಶಾಸಕರಿಗೆ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸಗಳು ಆಗಿಲ್ಲ. ಕಾರ್ಯಕರ್ತರು ಹಾಗೂ ಸಾರ್ವಜನಿಕರ ಒತ್ತಡದ ಕಾರಣಕ್ಕೆ ಜನರಿಗೆ ಮುಖ ತೋರಿಸುವುದು ಕಷ್ಟವಾಗುತ್ತಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಇದು ನಮ್ಮ ಪಕ್ಷದ ಶಾಸಕರ ಪರಿಸ್ಥಿತಿ ಅಷ್ಟೇ ಅಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಪರಿಸ್ಥಿತಿಯೂ ಇದೇ ಆಗಿದೆ. ಆ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯ ಮೇಲೆ ಸ್ವಲ್ಪ ಪರಿಣಾಮ ಬೀರಿದೆ ಎಂದು ಹೇಳಬಹುದು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಟ್ಟರೆ ನಿಮಗೆ (ಕಿಸೆಗೆ) 50 ಕೋಟಿ ಕೊಡುತ್ತೇವೆ. ಅದರ ಜತೆಗೆ 100 ಕೋಟಿ ಅನುದಾನ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ. ಆ ಆಮಿಷಗಳು ಚುನಾವಣೆಯಲ್ಲಿ ಕೆಲಸ ಮಾಡಿವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.
![]()
ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಕ್ರಮ ಜರುಗಿಸದೆ ಬಿಡುವುದಿಲ್ಲ. ಸಮಯ, ಸಂದರ್ಭ ನೋಡಿಕೊಂಡು ಮಾಡುತ್ತೇವೆ. 2028ರ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕಠಿಣ ನಿರ್ಧಾರ ಮಾಡಬೇಕಾಗುತ್ತದೆ.
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ