ಸಾರ್ವಜನಿಕ ಶೌಚಾಲಯಗಳ ಶೋಚನೀಯತೆ ತೆರೆದಿಟ್ಟ ಬಿ.ಪ್ಯಾಕ್ ಸಮೀಕ್ಷಾ ವರದಿ: ನಗರದಲ್ಲಿ 1 ಸಾವಿರಕ್ಕೂ ಅಧಿಕ ಸಾರ್ವಜನಿಕ ಶೌಚಾಲಯಗಳ ತೆರೆಯಲು ಸಲಹೆ
ಬೆಂಗಳೂರು ಇಂದು 1.4 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಜಾಗತಿಕ ನಗರವಾಗಿ ಬೆಳೆಯು ತ್ತಿದ್ದರೂ, ಸಾರ್ವಜನಿಕ ಶೌಚಾಲಯಗಳ ಮೂಲಸೌಕರ್ಯ ಅದಕ್ಕೆ ಅನುಗುಣವಾಗಿ ಅಭಿವೃದ್ಧಿ ಯಾಗಿಲ್ಲ ಎಂಬುದನ್ನು ವರದಿ ಬಹಿರಂಗಪಡಿಸಿದೆ. ನಗರದಲ್ಲಿ 479 ಶೌಚಾಲಯಗಳಿರುವುದು ಜಿಬಿಎ ಅಧಿಕೃತ ದಾಖಲೆಗಳ ಮೂಲಕ ತಿಳಿದು ಬಂದಿದೆ.
-
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಸಾರ್ವಜನಿಕ ಶೌಚಾಲಯಗಳ ಕುರಿತು ಸಮೀಕ್ಷೆ ನಡೆಸಿರುವ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (B.PAC) ಇದರ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ 142 ಸಾರ್ವಜನಿಕ ಶೌಚಾಲಯಗಳ ಕುರಿತು ನಾಗರಿಕರ ಹಾಗೂ ಹಲವು ಸಂಘಸಂಸ್ಥೆಗಳ ನೇತೃತ್ವದಲ್ಲಿ ನಡೆಸಲಾದ ಮೊದಲ ಸಮಗ್ರ ಸಮೀಕ್ಷೆಯಾಗಿದೆ.
ಈ ಸಮೀಕ್ಷೆಯನ್ನು 2026ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿ.ಪ್ಯಾಕ್‌ನ ನಾಗರಿಕ ನಾಯಕರು, ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ವಿದ್ಯಾರ್ಥಿ ಸ್ವಯಂಸೇವಕರು ನಡೆಸಿದ್ದು, ಸಾರ್ವ ಜನಿಕ ಶೌಚಾಲಯಗಳ ಕಾರ್ಯನಿರ್ವಹಣೆ, ಸ್ವಚ್ಛತೆ, ಸುರಕ್ಷತೆ, ಪ್ರವೇಶಸೌಲಭ್ಯ, ಪಾರದರ್ಶಕತೆ ಮತ್ತು ಸೇವಾ ಗುಣಮಟ್ಟ ಕುರಿತು ಸಮಗ್ರ ಮೌಲ್ಯಮಾಪನ ಮಾಡಲಾಗಿದೆ.
ಬೆಂಗಳೂರು ಇಂದು 1.4 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಜಾಗತಿಕ ನಗರವಾಗಿ ಬೆಳೆಯುತ್ತಿದ್ದರೂ, ಸಾರ್ವಜನಿಕ ಶೌಚಾಲಯಗಳ ಮೂಲಸೌಕರ್ಯ ಅದಕ್ಕೆ ಅನುಗುಣವಾಗಿ ಅಭಿವೃದ್ಧಿಯಾಗಿಲ್ಲ ಎಂಬುದನ್ನು ವರದಿ ಬಹಿರಂಗಪಡಿಸಿದೆ. ನಗರದಲ್ಲಿ 479 ಶೌಚಾಲಯ ಗಳಿರುವುದು ಜಿಬಿಎ ಅಧಿಕೃತ ದಾಖಲೆಗಳ ಮೂಲಕ ತಿಳಿದು ಬಂದಿದೆ.
ಇದನ್ನೂ ಓದಿ: Bangalore News: ಜಂತರ್ – ಮಂತರ್ ಯುವ ಸಂಗ್ರಾಮದಿಂದ ಮೋದಿ ಸರ್ಕಾರ ಪತನ ಸನ್ನಿಹಿತ: ಡಾ.ಆನಂದ ಕುಮಾರ್
ಪ್ರಮುಖ ಸಂಶೋಧನಾ ಅಂಶಗಳು
142 ಸಾರ್ವಜನಿಕ ಶೌಚಾಲಯಗಳ ಪರಿಶೀಲನೆಯಲ್ಲಿ ಕಂಡುಬಂದ ಪ್ರಮುಖ ಅಂಶಗಳು:
● 142 ಸಾರ್ವಜನಿಕ ಶೌಚಾಲಯಗಳ ಪರಿಶೀಲನೆ ನಡೆಸಲಾಗಿದೆ.
● 37 ಶೌಚಾಲಯಗಳು (26%) ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ.
● ಕೇವಲ 6 ಶೌಚಾಲಯಗಳು (4.2%) ಮಾತ್ರ "ಅತ್ಯಂತ ಸ್ವಚ್ಛ" ಎಂದು ಗುರುತಿಸಲ್ಪಟ್ಟಿವೆ.
● 58%(82) ಶೌಚಾಲಯಗಳು ನಿರಂತರ ದುರ್ವಾಸನೆಯಿಂದ ಕೂಡಿದ್ದು, ಜನರ ಬಳಕೆಗೆ ಯೋಗ್ಯವಿಲ್ಲ.
● ಕೇವಲ 56% (80) ಶೌಚಾಲಯಗಳಲ್ಲಿ ಮಾತ್ರ ಸಮರ್ಪಕ ಬೆಳಕಿನ ವ್ಯವಸ್ಥೆ ಇದೆ.
● ಕೇವಲ 9 ಶೌಚಾಲಯಗಳಲ್ಲಿ ಮಾತ್ರ ವೀಲ್ ಚೇರ್ ರ‍್ಯಾಂಪ್ ಇದೆ, ಸುಮಾರು 94% ಶೌಚಾಲಯಗಳು ಅಂಗವಿಕಲರ ಬಳಕೆಗೆ ಅನುಕೂಲಕರವಾಗಿಲ್ಲ.
● ಸುಮಾರು 40%ರಲ್ಲಿ ಮಾತ್ರ ನಿರಂತರನೀರಿನ ಸೌಲಭ್ಯ ಇದೆ.
● ಯಾವುದೇ ಶೌಚಾಲಯದಲ್ಲೂ ಸಾಬೂನು ಅಥವಾ ಕಸದ ಬುಟ್ಟಿಗಳಿಲ್ಲ.
● ಕೇವಲ 15% ಶೌಚಾಲಯಗಳಲ್ಲಿ ಮಾತ್ರ ಮಹಿಳಾ ಸಿಬ್ಬಂದಿ ಇದ್ದಾರೆ.
● ಗುತ್ತಿಗೆದಾರರ ವಿವರಗಳು ಹಾಗೂ ಬಳಕೆ ಶುಲ್ಕದ ಮಾಹಿತಿ ಹೆಚ್ಚಿನ ಶೌಚಾಲಯಗಳಲ್ಲಿ ಪ್ರದರ್ಶಿಸಲಾಗಿಲ್ಲ.
● ಕೇವಲ 23 ಸಾರ್ವಜನಿಕ ಶೌಚಾಲಯಗಳಲ್ಲಿ ಕನ್ನಡ ಬಲ್ಲವರು ಇದ್ದಾರೆ. ಉಳಿದಕಡೆ ಕನ್ನಡೇತರರು ಇದ್ದಾರೆ
● ಮಂಗಳಮುಖಿಯರಿಗೆ ವಿಶೇಷವಾಗಿ ಯಾವುದೇ ಶೌಚಾಲಯಗಳಿಲ್ಲ.
● 2 ಶೌಚಾಲಯಗಳಲ್ಲಿ ಸ್ನಾನದ ಕೊಠಡಿಗಳನ್ನು ಅದರ ನಿರ್ವಾಹಕರು ಅಡುಗೆ ಮಾಡಲು ಬಳಸುತ್ತಿದ್ದಾರೆ.
● ಬಹುತೇಕ ಶೌಚಾಲಯಗಳಳು ಧೂಮಪಾನ ಮಾಡುವ ಸ್ಥಳಗಳಾಗಿ ಪರಿವರ್ತನೆಯಾಗಿವೆ.
ಈ ವರದಿ, ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಸಮಸ್ಯೆ ಕೇವಲ ಹೊಸ ಶೌಚಾಲಗಳನ್ನು ನಿರ್ಮಿಸುವುದಲ್ಲ, ಈಗಿರುವ ಶೌಚಾಲಯಗಳನ್ನು ಸ್ವಚ್ಛ, ಸುರಕ್ಷಿತ, ಸುಗಮ ಹಾಗೂ ಕಾರ್ಯ ನಿರ್ವಹಿಸುವಂತೆ ನಿರ್ವಹಿಸುವುದೇ ಮುಖ್ಯ ಸವಾಲಾಗಿದೆ ಎಂದು ವರದಿಯಲ್ಲಿ ತಿಳಿಸುತ್ತದೆ.
ಸರ್ಕಾರಕ್ಕೆ ಪ್ರಮುಖ ಶಿಫಾರಸುಗಳು:
ವರದಿಯ ಆಧಾರದ ಮೇಲೆ ಬಿ.ಪ್ಯಾಕ್ ಸರ್ಕಾರಕ್ಕೆ ಈ ಕೆಳಗಿನ ಶಿಫಾರಸುಗಳನ್ನು ಮಾಡಿದೆ:
● ಕಾರ್ಯನಿರ್ವಹಿಸದ 37 ಶೌಚಾಲಯಗಳನ್ನು 30 ದಿನಗಳೊಳಗೆ ದುರಸ್ತಿ ಮಾಡುವ ವಿಶೇಷ ಅಭಿಯಾನ ಆರಂಭಿಸಬೇಕು.
● ಎಲ್ಲಾ ಸಾರ್ವಜನಿಕ ಶೌಚಾಲಯಗಳ ಯೋಜನೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಏಕೀಕೃತ ಸಾರ್ವಜನಿಕ ಶೌಚಾಲಯ ನಿರ್ವಹಣಾ ಘಟಕ ಸ್ಥಾಪಿಸಬೇಕು.
● ನಿವಾಸಿಗಳ ಸಂಘಗಳು (RWAs), ಎನ್‌ಜಿಒಗಳು ಮತ್ತು ನಾಗರಿಕ ಸಂಘಟನೆಗಳನ್ನು ಸಾರ್ವಜನಿಕ ಶೌಚಾಲಯಗಳ ಮೇಲ್ವಿಚಾರಣೆಯಲ್ಲಿ ಭಾಗಿಯಾಗಿಸಬೇಕು.
● "Build-Only" ಗುತ್ತಿಗೆ ಮಾದರಿಯನ್ನು ರದ್ದುಪಡಿಸಿ, ಐದು ವರ್ಷದ "Operate & Maintain (O&M)" ಮಾದರಿಯನ್ನು ಜಾರಿಗೊಳಿಸಬೇಕು. ನಿರ್ವಹಣೆಯಲ್ಲಿ ವಿಫಲರಾದ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಬೇಕು.
● ಪ್ರತಿಯೊಂದು ಸಾರ್ವಜನಿಕ ಶೌಚಾಲಯದಲ್ಲಿ ನೀರು, ವಿದ್ಯುತ್, ಬೆಳಕು, ಸಾಬೂನು, ಕಸದ ಬುಟ್ಟಿ ಹಾಗೂ ನಿಯಮಿತ ಸ್ವಚ್ಛತೆ ಕಡ್ಡಾಯಗೊಳಿಸಬೇಕು.
● ಅಂಗವಿಕಲರಿಗೆ ಅನುಕೂಲವಾಗುವಂತೆ ಈಗಿರುವ ಶೌಚಾಲಯಗಳನ್ನು ಪರಿಷ್ಕರಿಸಿ, ಹೊಸ ಶೌಚಾಲಯಗಳಲ್ಲಿ ಸಾರ್ವತ್ರಿಕ ಪ್ರವೇಶ (Universal Accessibility) ಕಡ್ಡಾಯಗೊಳಿಸಬೇಕು.
● ಮಹಿಳೆಯರು ಹಾಗೂ ತೃತೀಯಲಿಂಗ ಸಮುದಾಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು She-Toilets ಮತ್ತು Gender Inclusive Toilets ನಿರ್ಮಿಸಬೇಕು.
● ಪ್ರತಿಯೊಂದು ಶೌಚಾಲಯದಲ್ಲೂ ಗುತ್ತಿಗೆದಾರ ಹಾಗೂ ನಿರ್ವಾಹಕರ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು. ಹಾಗೂ ಸಾರ್ವಜನಿಕರು ದೂರು ದಾಖಲಿಸಲು ಅಧಿಕಾರಿಗಳ ಪೋನ್ ನಂಬರ್ ನಮೂದಿಸಿರಬೇಕು.
ಬೆಂಗಳೂರಿಗೆ 1,000ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ: ಬಿ.ಪ್ಯಾಕ್
ನಗರದ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ನಗರ ವಿಸ್ತರಣೆ ಹಾಗೂ ಸಾರ್ವಜನಿಕ ಅಗತ್ಯಗಳನ್ನು ಪರಿಗಣಿಸಿ, ಬೆಂಗಳೂರು ನಗರದಲ್ಲಿ ಜಿಬಿಎ ವತಿಯಿಂದ ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ 1,000ಕ್ಕೂ ಹೆಚ್ಚು ಆಧುನಿಕ, ಸುಲಭ ಬಳಕೆಯೋಗ್ಯ, ಎಲ್ಲಾ ವರ್ಗಗಳನ್ನೂ ಒಳಗೊಳ್ಳುವ ಮತ್ತು ಉತ್ತಮ ನಿರ್ವಹಣೆಯ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವಂತೆ ಬಿ.ಪ್ಯಾಕ್‌ನ ಮುಖ್ಯಸ್ಥರಾದ ರಾಘವೇಂದ್ರ ಪೂಜಾರಿ ಹೆಚ್ ಎಸ್ ಕರ್ನಾಟಕ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಒತ್ತಾಯಿಸಿದರು.
ಹೊಸ ಸಾರ್ವಜನಿಕ ಶೌಚಾಲಯಗಳಿಗೆ ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಮಾರುಕಟ್ಟೆ ಗಳು, ಉದ್ಯಾನಗಳು, ಪ್ರವಾಸಿ ತಾಣಗಳು, ನಿರ್ಮಾಣ ಪ್ರದೇಶಗಳು ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ಸಾರ್ವಜನಿಕ ಶೌಚಾಲಯಗಳ ಸಮೀಕ್ಷಾ ವರದಿ – 2026 ಸರ್ಕಾರ, ನಾಗರಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಿ ಸ್ವಚ್ಛ, ಸುರಕ್ಷಿತ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಬೆಂಗಳೂರಿನ ನಿರ್ಮಾಣಕ್ಕೆ ಮಾರ್ಗಸೂಚಿ ಯಾಗಲಿದೆ ಎಂಬ ವಿಶ್ವಾಸವನ್ನು ಈ ಸಮೀಕ್ಷೆಯ ನೇತೃತ್ವ ವಹಿಸಿದ್ದ ಬಿ.ಕ್ಲಿಪ್‌ನ ಸಂಯೋಜಕ ರಾದ ಮಂಜುನಾಥ್ ಆಶಯ ವ್ಯಕ್ತಪಡಿಸಿದರು.
![]()
"ಸಾರ್ವಜನಿಕ ಶೌಚಾಲಯಗಳು ಐಷಾರಾಮಿ ಸೌಲಭ್ಯಗಳಲ್ಲ, ಅವು ಸಾರ್ವಜನಿಕ ಆರೋಗ್ಯ, ಮಹಿಳೆಯರ ಸುರಕ್ಷತೆ, ಮಾನವ ಘನತೆ ಮತ್ತು ನಗರದ ಜೀವನಮಟ್ಟವನ್ನು ನಿರ್ಧರಿಸುವ ಅತ್ಯಗತ್ಯ ಮೂಲಸೌಕರ್ಯಗಳಾಗಿವೆ. ಜಾಗತಿಕ ನಗರವಾಗಲು ಬಯಸುವ ಬೆಂಗಳೂರು ತನ್ನ ಮೂಲಭೂತ ನಾಗರಿಕ ಸೌಲಭ್ಯಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ."
- ರೇವತಿ ಅಶೋಕ್, ಬಿ.ಪ್ಯಾಕ್ ಸಿಇಒ.