Chakravarthy sulibele: ಧರ್ಮಸ್ಥಳ ಟಾರ್ಗೆಟ್ ಆಗಿದ್ದು ಹೇಗೆ?; ರಹಸ್ಯ ಬಿಚ್ಚಿಟ್ಟ ಸೂಲಿಬೆಲೆ
Dharma samrakshana samavesha: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಿದರು. ಸೌಜನ್ಯಾಗೆ ನ್ಯಾಯ ಸಿಗಬೇಕು ಎಂಬುವುದು ನಮ್ಮ ಒತ್ತಾಯವೂ ಆಗಿದೆ. ನ್ಯಾಯ ಬೇಕಾದರೆ ಸುಪ್ರೀಂ ಕೋರ್ಟ್‌ಗೆ ಹೋಗಬೇಕು. ಹೀಗಾಗಿ ಸೌಜನ್ಯಾ ಅವರ ತಾಯಿ ನ್ಯಾಯಾಲಯದ ಮೂಲಕ ಹೋರಾಟ ಮಾಡಬೇಕಿದೆ. ಇದಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದು ಹೇಳಿದರು.


ಬೆಂಗಳೂರು: ಮಂಗಳೂರಿನಲ್ಲಿ ಹಿಂದುತ್ವದ ಬುಡ ಗಟ್ಟಿಯಾಗಿದ್ದರಿಂದ ಎಡಪಂಥೀಯರ ಪ್ರಯತ್ನಗಳಿಗೆ ಸೋಲಾಗಿದೆ. ನಕ್ಸಲಿಸಂ ಹಬ್ಬಿಸಲು ಪ್ರಯತ್ನಪಟ್ಟರು. ಆದರೆ, ಮಂಗಳೂರಿನ ಹಿಂದೂ ತರುಣರು ಕೇಸರಿ ಶಾಲು ಬಿಟ್ಟು ಬರಲಿಲ್ಲ. ಹಿಂದೂ ಧರ್ಮದ ಮೇಲಿನ ನಂಬಿಕೆ ತೆಗೆಯಬೇಕೆಂದರೆ ದೈವಗಳ ಒಡೆಯ ಅಣ್ಣಪ್ಪ ಹಾಗೂ ಮಂಜುನಾಥ ಸ್ವಾಮಿ ಮೇಲೆ ಪ್ರಹಾರ ಮಾಡಬೇಕು ಎಂದು ಆ ಕ್ಷೇತ್ರದ ಮೇಲೆ ಕೈ ಹಾಕಿದರು ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡಿದರು.
ನೀವು ಎಲ್ಲಾ ಆಕ್ರಮಣಗಳನ್ನು ಗಮನಿಸಿದರೆ ನಾಲ್ಕು ಜನ ಇರುತ್ತಾರೆ. ಒಂದು ಮುಸ್ಲಿಮರು (ಜಿಹಾದಿಗಳು), ಎರಡು ಕ್ರೈಸ್ತರು, ಮೂರು ಲೆಫ್ಟಿಸ್ಟರು, ನಾಲ್ಕನೇಯದು ಅವಕಾಶ ಬಂದಾಗ ಮುಸ್ಲಿಂ, ಕ್ರೈಸ್ತ ಹಾಗೂ ಲೆಫ್ಟಿಸ್ಟ್‌ಗಳಾಗುವ ಕಾಂಗ್ರೆಸ್‌ನವರು ಇರುತ್ತಾರೆ. ಇವರು ಬಹಳ ಡೇಂಜರ್. ಇನ್ನು ಐದನೇಯರು ಯಾರೆಂದರೆ ಇವರಿಗೆಲ್ಲಾ ಬಂದೂಕು ಇಡಲು ಹೆಗಲು ಕೊಡುವ ಜನ ಎಂದು ಹೇಳಿದರು.
ಹಿಂದುತ್ವದ ವಿಚಾರಧಾರೆ ಇರುವ ಹೋರಾಟಗಾರರು ಸಿಕ್ಕಿದರೆ, ಹಿಂದೂ ತರುಣರನ್ನು ಸೆಳೆಯುವುದು ಸುಲಭ ಎಂಬ ಪ್ಲ್ಯಾನ್ ಮಾಡಿದರು. ಇವರ ಹೋರಾಟಗಾರರು ಎಂತಹವರು ಎಂದರೆ, ಯಾವ ಸಂಘಟನೆಯೂ ಅವರನ್ನು ಹಿಂದೂ ಹೋರಾಟಗಾರ ಎಂದು ಹೇಳಲಿಲ್ಲ. ಆದರೆ ಅವರೇ ನಾನು ಹಿಂದುತ್ವದ ಹೋರಾಟಗಾರ ಎಂದು ಪ್ರಚಾರ ಮಾಡಿಕೊಂಡರು. ಇದರ ಪರಿಣಾಮ ಸ್ಥಳೀಯ ಹಿಂದೂ ಕಾರ್ಯಕರ್ತರು ಕೂಡ ದನಿ ಎತ್ತಲು ಹಿಂದೆ ಸರಿದರು. ಹಿಂದುಗಳನ್ನೇ ಒಡೆಯಲು ಈ ರೀತಿ ಷಡ್ಯಂತ್ರ ನಡೆಸಿದರು ಎಂದು ಆರೋಪಿಸಿದರು.
ಇವತ್ತಿನವರೆಗೂ ಹಿಂದುತ್ವದ ವಿಚಾರ ಬಂದಾಗ ನಾವೆಲ್ಲ ಜೈನರನ್ನು ಪ್ರತ್ಯೇಕ ಎಂದು ಭಾವಿಸಿರಲಿಲ್ಲ. ಹೆಗ್ಗಡೆ ಅವರು ಜೈನರು ಎಂದು ಬಹುತೇಕರಿಗೆ ಗೊತ್ತಿರಲಿಲ್ಲ. ಹಿಂದೂ ದೇವಸ್ಥಾನಗಳ ಅಭಿವೃದ್ಧಿಗೆ ಅವರು ನೆರವು ನೀಡಿದ್ದಾರೆ. ಹಲವು ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡುತ್ತಾರೆ. ಕೆರೆಗಳ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ. ಅವರು ಧರ್ಮ ನೋಡಿ ಸಹಾಯ ಮಾಡಿದ್ರಾ ಎಂದು ಪ್ರಶ್ನಿಸಿದರು.
ಸೌಜನ್ಯಾಗೆ ನ್ಯಾಯ ಸಿಗಬೇಕು ಎಂಬುವುದು ನಮ್ಮ ಒತ್ತಾಯವೂ ಆಗಿದೆ. ನ್ಯಾಯ ಬೇಕಾದರೆ ಸುಪ್ರೀಂ ಕೋರ್ಟ್‌ಗೆ ಹೋಗಬೇಕು. ಹೀಗಾಗಿ ಸೌಜನ್ಯಾ ಅವರ ತಾಯಿ ನ್ಯಾಯಾಲಯದ ಮೂಲಕ ಹೋರಾಟ ಮಾಡಬೇಕಿದೆ. ಇದಕ್ಕೆ ನಮ್ಮ ಬೆಂಬಲ ಇರುತ್ತದೆ. ಆದರೆ, ಮೊಬೈಲ್‌ನಲ್ಲಿ ಸಾಕ್ಷ್ಯ ಇದೆ ಎಂದು ಓಡಾಡುವ ವ್ಯಕ್ತಿಯ (ಗಿರೀಶ್ ಮಟ್ಟಣ್ಣಮವರ್) ಮೊಬೈಲ್ ಕದ್ದರೆ ಸಾಕಲ್ಲವೇ? ಎಂದರು. ಇನ್ನು ನ್ಯಾಯ ಬೇಕು ಎನ್ನುವವರನ್ನು ಕೋರ್ಟ್‌ಗೆ ಹೋಗಿ ಎಂದರೆ ಅವರು ಏನು ಹೇಳುತ್ತಾರೆ ಗೊತ್ತಾ?, ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲ ಎನ್ನುತ್ತಾರೆ. ಇವರಿಗೆ ಬೇಕಾದ ನ್ಯಾಯ ಯಾವುದೆಂದರೆ, ಹೊಲಸು ಪದಗಳಿಂದ ಹೀನಾಯವಾಗಿ ನಿಂದಿಸುವುದು, ಆರೋಪ ಮಾಡುವುದು ಎಂದು ಕಿಡಿಕಾರಿದರು.
ಯಾವಾಗ ಸೌಜನ್ಯಾ ಪ್ರಕರಣದಲ್ಲಿ ಹಿಂದುತ್ವವಾದಿ ಮೂಲಕ ಮಾಡಿದ ಹೋರಾಟ ಹಳ್ಳ ಹಿಡಿಯಿತೋ ಆಗ ಹೊಸ ಕುತಂತ್ರ ಮಾಡಿದರು. ನಿಧಾನವಾಗಿ ಇವರಿಗಿಂತ ಬುದ್ಧಿಮತ್ತೆ ಜಾಸ್ತಿ ಇರುವವರನ್ನು ಕರೆತಂದರು. ಧರ್ಮಸ್ಥಳದಲ್ಲಿ ಏನೇ ನಡೆದರೂ, ಯಾರೇ ಸತ್ತರೂ ಅದನ್ನು ಮಾಡಿಸಿದವರು ದೊಡ್ಡವರು ಎಂದು ಆರೋಪ ಮಾಡಿದರು ಎಂದರು.
ಇವರು ಅಂದುಕೊಂಡಂತೆ ದಕ್ಷಿಣ ಕನ್ನಡವನ್ನು ಎಡಪಂಥೀಯರು, ಲಿಬರಲ್‌ಗಳ ಅಡ್ಡ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವತಃ ಆ ಹೋರಾಟಗಾರರೇ ಬೀದಿಗೆ ಬಂದರು. ಅನಾಮಿಕ ಯಾವಾಗ ದೂರು ನೀಡಿದನೋ ಆಗ ಎಡಪಂಥೀಯರು, ಇಸ್ಲಾಮಿಸ್ಟ್‌ಗಳು ಹೋರಾಟ ಮಾಡಲು ಮುಂದಾಗಿದ್ದಾರೆ. ಸ್ವತಃ ಎಸ್‌ಡಿಪಿಐ ಇವರ ಹೋರಾಟಕ್ಕೆ ಕೈಜೋಡಿಸಿದೆ.
ಈ ಸುದ್ದಿಯನ್ನೂ ಓದಿ | Vachanananda Swamiji: ದೇಶ ಇದ್ರೆ ಮಾತ್ರ ಮಠ, ಪೀಠ, ದೇವಸ್ಥಾನಗಳು: ವಚನಾನಂದ ಸ್ವಾಮೀಜಿ
ಧರ್ಮಸ್ಥಳವೇ ಯಾಕೆ ದಾಳಿಗೆ ಗುರಿಯಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಐನೂರು ಕೋಟಿ ರೂ. ವಾರ್ಷಿಕ ವಹಿವಾಟು ದೇವರ ಕೆಲಸಗಳು ನಡೆಯುತ್ತದೆ ಎಂದು ಹತ್ತು ವರ್ಷಗಳ ಹಿಂದೆ ಸಂಸದರೊಬ್ಬರು ಹೇಳಿದ್ದರು. ಪ್ರಸ್ತುತ ವಾರ್ಷಿಕ ವಹಿವಾಟು 750 ರಿಂದ 1000 ಕೋಟಿ ವಹಿವಾಟು ನಡೆಯಬಹುದು. ದೇವಸ್ಥಾನಗಳ ನಿರ್ಮಾಣ, ಧಾರ್ಮಿಕ ಕಾರ್ಯಕ್ರಮಗಳು ಸೇರಿ ಹಲವು ಧಾರ್ಮಿ ಕೆಲಸಗಳು ನಡೆಯುತ್ತವೆ. ಇಲ್ಲಿ ಸಂಸ್ಕೃತಿ ಬಲವಾಗಿ ಬೇರು ಬಿಟ್ಟಿದೆ. ಇದರ ಬೇರು ಎಲ್ಲಿದೆ ಎಂದರೆ ಅದು ಧರ್ಮಸ್ಥಳ. ಈ ಕ್ಷೇತ್ರ ತಾನೂ ಮಾತ್ರ ಗಟ್ಟಿಯಾಗಿ ಉಳಿದುಕೊಂಡಿರುವುದು ಮಾತ್ರವಲ್ಲ, ಇಡೀ ರಾಜ್ಯವನ್ನೇ ಬಲವಾಗಿ ಹಿಡಿದುಕೊಂಡಿದೆ. ಹೀಗಾಗಿ ಕ್ಷೇತ್ರ ಟಾರ್ಗೆಟ್ ಆಗಿದೆ ಎಂದರು.