Ganesh Festival: 10 ವರ್ಷಗಳಿಂದ ಚಿಕ್ಕಬಳ್ಳಾಪುರದಲ್ಲಿಯೇ ಕೊಲ್ಕತ್ತ ಮಾದರಿ ಗಣಪತಿ ತಯಾರಿಸಿ ಮಾರಾಟ ಮಾಡುತ್ತಿರುವ ಲಕ್ಷ್ಮೀಕಾಂತ್
ಕಳೆದ ೧೦ ವರ್ಷಗಳಿಂದ ಅಗಲಗುರ್ಕಿ ಗೇಟ್‌ಬಳಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗುವ ಕೊಲ್ಕತ್ತ ಮೂಲದ ಕಲಾವಿದರು ಚತುರ್ಥಿಗೆ ೨ ತಿಂಗಳು ಪೂರ್ವದಲ್ಲಿ ಆಗಮಿಸುತ್ತಾರೆ. ಇವರು ಗಣಪತಿ ಮೂರ್ತಿ ಜತೆಗೆ ದುರ್ಗಾ ಮೂರ್ತಿಯನ್ನೂ ಕೂಡ ತಯಾರಿಸಿ ಗ್ರಾಹಕಸ್ನೇಹಿ ಬೆಲೆಯಲ್ಲಿ ಮಾರಾಟ ಮಾಡುವುದರಲ್ಲಿ ಸಿದ್ಧಹಸ್ತರು. ಕಲಾವಿದ ಲಕ್ಷ್ಮೀಕಾಂತ್ ಬಳಗದಲ್ಲಿ ೧೦ ಮಂದಿ ಕಲಾವಿದರು ಆಗಮಿ ಸಿದ್ದು ಇವರ ನಂಟು ಹೇಗಿದೆ ಎಂದರೆ ಸ್ಥಳೀಯರೇ ಆಗಿ ಬದಲಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.


ಚಿಕ್ಕಬಳ್ಳಾಪುರ : ಗಣಪತಿ ಹಬ್ಬಕ್ಕೆ ಕೇವಲ ಎರಡು ದಿನಗಳು ಬಾಕಿಯಿದ್ದು ಮಾರುಕಟ್ಟೆಗೆ ಥರಾವರಿ ಗಣಪನ ಆಗಮನವಾಗಿದೆ.ಸರಕಾರ ಪಿಒಪಿ ಗಣಪನಿಗೆ ನಿಷೇಧ ಹೇರಿರುವ ಕಾರಣ ಪರಿಸರ ಸ್ನೇಹಿ ಗಣಪನ ಮೂರ್ತಿಗಳೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ.
ಕಳೆದ ೧೦ ವರ್ಷಗಳಿಂದ ಅಗಲಗುರ್ಕಿ ಗೇಟ್‌ಬಳಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗುವ ಕೊಲ್ಕತ್ತ ಮೂಲದ ಕಲಾವಿದರು ಚತುರ್ಥಿಗೆ ೨ ತಿಂಗಳು ಪೂರ್ವದಲ್ಲಿ ಆಗಮಿಸುತ್ತಾರೆ. ಇವರು ಗಣಪತಿ ಮೂರ್ತಿ ಜತೆಗೆ ದುರ್ಗಾ ಮೂರ್ತಿಯನ್ನೂ ಕೂಡ ತಯಾರಿಸಿ ಗ್ರಾಹಕಸ್ನೇಹಿ ಬೆಲೆಯಲ್ಲಿ ಮಾರಾಟಮಾಡುವುದರಲ್ಲಿ ಸಿದ್ಧಹಸ್ತರು. ಕಲಾವಿದ ಲಕ್ಷ್ಮೀಕಾಂತ್ ಬಳಗದಲ್ಲಿ ೧೦ ಮಂದಿ ಕಲಾವಿದರು ಆಗಮಿಸಿದ್ದು ಇವರ ನಂಟು ಹೇಗಿದೆ ಎಂದರೆ ಸ್ಥಳೀಯರೇ ಆಗಿ ಬದಲಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ಭಾರತೀಯರಲ್ಲಿ ಏಕತೆಯನ್ನು ಪ್ರದರ್ಶಿಸಲು ಪ್ರಾರಂಭವಾದ ಸಾಮೂಹಿಕ ಗಣೇಶೋತ್ಸವ ಈ 79 ವರ್ಷಗಳಲ್ಲಿ ದೇಶದ ಗಲ್ಲಿಗಲ್ಲಿಯನ್ನು ವ್ಯಾಪಿಸಿದೆ. ಒಂದು ದಿನದ ಪೂಜೆಯಿಂದ ಪ್ರಾರಂಭವಾಗಿ ಎರಡು ಮೂರು ತಿಂಗಳ ತನಕ ಈ ಆಚರಣೆ ಮುಂದು ವರೆಯುವ ಮಟ್ಟಿಗೆ ಜನಪ್ರಿಯವಾಗಿದೆ.
ಇದನ್ನೂ ಓದಿ: Ganesh Chaturthi 2025: ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಅನುವು ಮಾಡಿಕೊಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ
ಅದರಂತೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಹಳ್ಳಿಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಧಾರ್ಮಿಕ ಆವರಣವನ್ನು ಮೀರಿ ವೈಭವದ ಆಚರಣೆಯ ಸ್ವರೂಪ ಪಡೆದಿರುವುದೇ ಗಣಪನ ವಿನ್ಯಾಸ ಬದಲಾಗಲು ಕಾರಣವಾಗಿದೆ.ಕೊಲ್ಕತ್ತಾ ಮೂಲಕದ ಕಲಾವಿದರ ಕೈಚಳಕದಲ್ಲಿ ಅರಳಿದ ಗಣಪತಿ ಮೂರ್ತಿಯನ್ನು ಖರೀದಿಸಲು ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ದೊಡ್ಡಬಳ್ಳಾಪುರ ಹೊಸಕೋಟೆ ಭಾಗಗಳಿಂದ ಬರುತ್ತಾರೆ.
ಲಕ್ಷ್ಮೀಕಾಂತ್ ಮತ್ತು ಆತನ ತಂಡ ಯಾವುದೇ ಭಾರವಾದ ಲೋಹ,ವಿಷಕಾರಿ ಬಣ್ಣಗಳನ್ನು ಬಳಸದೆ ಶುದ್ದ ಹುಲ್ಲು ಮತ್ತು ಮಣ್ಣಿನಿಂದಲೆ ತಯಾರಿಸಿದ ಪರಿಸರಸ್ನೇಹಿ ಗಣಪನ ತಯಾರಿಗೆ ಹೆಸರುವಾಸಿ. ಗಂಗಾನದಿಯಿಂದ ತಂದ ಮಣ್ಣು ಲೇಪನ ಮಾಡಿ ಪೂಜಿಸುವ ಗಣಪ ಶ್ರೇಷ್ಟ ಗಣಪ ಎಂದು ನಂಬಿರುವ ಜಿಲ್ಲೆಯ ಮಂದಿ, ಗಣಪನ ಅಭಿಮಾನಿಗಳು ತಿಂಗಳುಗಳ ಮೊದಲೆ ಬುಕಿಂಗ್ ಮಾಡಿ ಅವರಿಗೆ ಬೇಕಾದ ವಿನ್ಯಾಸದ ಗಣಪನನ್ನು ಸೃಷ್ಟಿಸಿಕೊಳ್ಳುತ್ತಾರೆ. ಇಲ್ಲಿ ಮೂರುವರೆ ಅಡಿಯಿಂದ ಹಿಡಿದು ಹನ್ನೆರಡು ಅಡಿ ಎತ್ತರದವೆರಗೂ ಗಣಪನ ಮೂರ್ತಿಗಳು ಮಾರಾಟಕ್ಕಿವೆ.ಈ ಬಾರಿ ೮೦ ವಿವಿಧ ವಿನ್ಯಾಸದ ಗಣಪನ ಮೂರ್ತಿಗಳು ತಯಾರಾಗಿದ್ದು ಈ ಪೈಕಿ 40 ಮೂರ್ತಿಗಳು ಮಾರಾಟವಾಗಿವೆ. ಉಳಿದ ೪೦ ಮೂರ್ತಿಗಳು ಉಳಿದ ಎರಡು ದಿನಗಳಲ್ಲಿ ಮಾರಾಟವಾಗುವ ವಿಶ್ವಾಸವನ್ನು ಈ ಕಲಾವಿದರು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕೊಲ್ಕತ್ತಾ ಕಲಾವಿದ ಲಕ್ಷ್ಮೀಕಾಂತ್ ಕಳೆದ ವರ್ಷ ಗಳಿಗೆ ಹೋಲಿಸಿದರೆ ಈ ಬಾರಿ ಬೇಡಿಕೆ ಕಮ್ಮಿಯಿದೆ. ಎರಡು ತಿಂಗಳ ಅವಧಿಯಲ್ಲಿ ತಯಾರಿಸಿ ರುವ ೮೦ ಮೂರ್ತಿಗಲ್ಲಿ ೪೦ ಮೂರ್ತಿಗಳಿಗೆ ಮುಂಗಡಹಣ ಪಾವತಿಯಾಗಿದೆ. ಉಳಿದ ೪೦ ಮೂರ್ತಿಗಳಿಗೆ ಮುಂಗಡ ಪಾವತಿ ಆಗಿಲ್ಲ.ಜನ ಬಂದು ನೋಡಿಕೊಂಡು ಹೋಗುತ್ತಿದ್ದಾರೆ.ಎಲ್ಲಾ ಮೂರ್ತಿಗಳು ಮಾರಾಟವಾದರೆ ಮಾತ್ರ ನಮ್ಮ ಬದುಕು ಸಾಗಲಿದೆ. ನಮ್ಮಲ್ಲಿ ತಯಾರಾದ ಗಣಪನ ಮೂರ್ತಿಗಳು ಒಡೆಯುವುದಾಗಲಿ, ಸೀಳುವುದಾಗಲಿ ಆಗುವುದಿಲ್ಲ. ಜಲಮಾಲಿನ್ಯಕ್ಕೆ ಕಾರಣವಾಗುವ ಬಣ್ಣಗಳನ್ನು ಬಳಸುವುದೇ ಇಲ್ಲ. ಮಳೆ ಬಂದರೆ ಸಾಕು ಕರಗುವ ಗಣಪತಿ ಮೂರ್ತಿಗಳನ್ನೇ ಮಾಡಲಾಗಿದೆ. ೩ ಸಾವಿರದಿಂದ ೩೦ ಸಾವಿರದ ತನಕ ಇಲ್ಲಿ ಮೂರ್ತಿಗಳು ಬಿಕರಿಗಿವೆ ಆಸಕ್ತರು ಬಂದು ಖರೀದಿಸ ಬಹುದು ಎಂದು ಆಹ್ವಾನ ನೀಡುತ್ತಾರೆ.
ಈ ಬಾರಿ ನಾನಾ ಬಗೆಯ ಪುಷ್ಪಗಳ ವಿನ್ಯಾಸದಲ್ಲಿ ಕೊಲ್ಕತ್ತಾ ಗಣಪನ ಮೂರ್ತಿಗಳನ್ನು ತಯಾರಿಸ ಲಾಗಿದೆ. ಮುಖ್ಯವಾಗಿ ಶಂಖ ಗಣಪ, ಶಿವತಾಂಡವ ಗಣಪ, ಹನುಮ ಗಣಪ,ನೃತ್ಯಪಟು ಗಣಪ, ದಶಾವತಾರಿ ಗಣಪ, ದರ್ಭಾರಿ ಗಣಪ, ಹೀಗೆ ನಾನಾ ರೀತಿಯ ಮೂರ್ತಿಗಳನ್ನು ನೋಡುಗರ ಕಣ್ಣು ಕುಕ್ಕುವ ರೀತಿಯಲ್ಲಿ ಇಲ್ಲಿ ತಯಾರಿಸಿ ಇಡಲಾಗಿದೆ.ಗಣಪನ ಮೂರ್ತಿ ಬೇಕಾದವರು ಈ ಸಂಖ್ಯೆಗೆ ಕರೆ ಮಾಡಿ ಕಲಾವಿದರ ಬದುಕಿಗೆ ಆಸರೆಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಏನೇ ಆಗಲಿ ಜಿಲ್ಲೆಯ ಜನತೆ ಈ ಬಾರಿ ಕೆರೆಕುಂಟೆಗಳ ಅಸ್ತಿತ್ವಕ್ಕೆ ಭಂಗಬಾರದ ರೀತಿಯಲ್ಲಿ, ಪಿಒಪಿ ಗಣಪತಿಯನ್ನು ಪ್ರತಿಷ್ಠಾಪಿಸದೆ, ಪರಿಸರಸ್ನೇಹಿ ಮಣ್ಣಿನ ಗಣಪನ ಆರಾಧನೆಗೆ ಒತ್ತು ನೀಡಬೇಕು. ಜಿಲ್ಲಾಡಳಿತ, ಸ್ಥಳೀಯ ತಾಲೂಕು ಆಡಳಿತಗಳು, ಜಿಲ್ಲಾ ಪೊಲೀಸ್ ಇಲಾಖೆ, ಪರಿಸರ ಮತ್ತು ಮಾಲಿನ್ಯ ಇಲಾಖೆಯ ಮಾರ್ಗಸೂಚಿಗಳನ್ವಯ ಗಣಪತಿ ಪ್ರತಿಷ್ಠಾಪನೆ ಮಾಡಿ ಸಾಮರಸ್ಯವನ್ನು ಕಾಪಾಡಬೇಕು ಎನ್ನುವುದೇ ಪತ್ರಿಕೆಯ ಆಶಯವಾಗಿದೆ.