ಗೋಲ್ಡನ್ ಚಾರಿಯಟ್ ರೈಲಿಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ; ʼಪ್ರೈಡ್ ಆಫ್ ಕರ್ನಾಟಕ' ಯಾನಕ್ಕೆ ಭರ್ಜರಿ ರೆಸ್ಪಾನ್ಸ್, ಟಿಕೆಟ್ ಸೋಲ್ಡ್ ಔಟ್
Golden Chariot Train: ಕರ್ನಾಟಕ ಪ್ರವಾಸೋದ್ಯಮ ಪ್ರಮುಖ ಆಕರ್ಷಣೆ ಗೋಲ್ಡನ್ ಚಾರಿಯಟ್ ರೈಲಿನ 2026-27ನೇ ಸಾಲಿನ ಪ್ರವಾಸಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಉಪಸ್ಥಿತಿಯಲ್ಲಿ ಗೋಲ್ಡನ್ ಚಾರಿಯಟ್ ಪ್ರವಾಸಕ್ಕೆ ಹಸಿರು ನಿಶಾನೆ ತೋರಿದರು.
ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಗೋಲ್ಡನ್ ಚಾರಿಯಟ್ ರೈಲಿಗೆ ಚಾಲನೆ ನೀಡಿದರು. -
ಬೆಂಗಳೂರು, ಅ. 24: ಕರ್ನಾಟಕ ಪ್ರವಾಸೋದ್ಯಮ ಪ್ರಮುಖ ಆಕರ್ಷಣೆಯಾದ ಗೋಲ್ಡನ್ ಚಾರಿಯಟ್ ರೈಲಿನ (Golden Chariot Train) 2026-27ನೇ ಸಾಲಿನ ಪ್ರವಾಸಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಚಾಲನೆ ನೀಡಿದರು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಉಪಸ್ಥಿತಿಯಲ್ಲಿ ಗೋಲ್ಡನ್ ಚಾರಿಯಟ್ (ಸುವರ್ಣ ರಥ) ಪ್ರವಾಸಕ್ಕೆ ಹಸಿರು ನಿಶಾನೆ ತೋರಿದರು. ಆ ಮೂಲಕ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಗಮನ ಸೆಳೆಯಲು ಸಜ್ಜಾಗಿದೆ.
ʼ'ಪ್ರೈಡ್ ಆಫ್ ಕರ್ನಾಟಕ' ಹೆಸರಿನ ಈ ಋತುವಿನ ಮೊದಲ ಯಾನವು ಸಂಪೂರ್ಣವಾಗಿ ಭರ್ತಿಯಾಗಿದ್ದು, 75 ಮಂದಿ ಅತಿಥಿಗಳು ನಾಡಿನ ಭವ್ಯ ಪರಂಪರೆ, ವನ್ಯಜೀವಿ ಸಂಪತ್ತು, ಪ್ರಕೃತಿ ಸೌಂದರ್ಯ ಹಾಗೂ ಸಾಂಸ್ಕೃತಿಕ ಸಿರಿವಂತಿಕೆಯನ್ನು ಈ ಅದ್ಭುತ ಪಯಣದ ಮೂಲಕ ಕಣ್ತುಂಬಿಕೊಳ್ಳಲಿದ್ದಾರೆʼʼ ಎಂದು ಡಿಕೆಶಿ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಗೋಲ್ಡನ್ ಚಾರಿಯಟ್ ರೈಲಿಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್:
ಸುವರ್ಣ ಪಯಣ, ಕರ್ನಾಟಕದ ವೈಭವದ ಅನಾವರಣ ಇಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರವಾಸೋದ್ಯಮ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ಅವರ ಉಪಸ್ಥಿತಿಯಲ್ಲಿ 2026-27ನೇ ಸಾಲಿನ ಕರ್ನಾಟಕದ ಹೆಮ್ಮೆಯ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ (ಸುವರ್ಣ ರಥ) ಪ್ರವಾಸಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದೆ. 'ಪ್ರೈಡ್ ಆಫ್ ಕರ್ನಾಟಕ' ಹೆಸರಿನ ಈ ಋತುವಿನ ಮೊದಲ ಯಾನವು ಸಂಪೂರ್ಣವಾಗಿ ಭರ್ತಿಯಾಗಿದ್ದು, 75 ಮಂದಿ ಅತಿಥಿಗಳು ನಾಡಿನ ಭವ್ಯ ಪರಂಪರೆ, ವನ್ಯಜೀವಿ ಸಂಪತ್ತು, ಪ್ರಕೃತಿ ಸೌಂದರ್ಯ ಹಾಗೂ ಸಾಂಸ್ಕೃತಿಕ ಸಿರಿವಂತಿಕೆಯನ್ನು ಈ ಅದ್ಭುತ ಪಯಣದ ಮೂಲಕ ಕಣ್ತುಂಬಿಕೊಳ್ಳಲಿದ್ದಾರೆ. 2026–27ನೇ ಸಾಲಿನಲ್ಲಿ ಒಟ್ಟು 13 ಯಾನಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಶ್ವದರ್ಜೆಯ ಐಷಾರಾಮಿ ಪ್ರವಾಸೋದ್ಯಮದ ಮೂಲಕ ಕರ್ನಾಟಕದ ಶ್ರೀಮಂತ ಇತಿಹಾಸವನ್ನು ಜಗತ್ತಿಗೆ ಪಸರಿಸುವ ರಾಜ್ಯದ ಮಹತ್ವಾಕಾಂಕ್ಷೆಗೆ ಇದು ಕನ್ನಡಿಯಾಗಿದೆ. ನಮ್ಮ ನಾಡಿನ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ಪ್ರಕೃತಿಯ ಸೊಬಗನ್ನು ಜಗತ್ತಿಗೆ ಪರಿಚಯಿಸಿ, ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿಸುವುದು ನಮ್ಮ ಸಂಕಲ್ಪ. ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ರಾಜ್ಯದ ಆರ್ಥಿಕ ಪ್ರಗತಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ.
— DK Shivakumar (@DKShivakumar) October 24, 2026
ʼʼ2026–27ನೇ ಸಾಲಿನಲ್ಲಿ ಒಟ್ಟು 13 ಯಾನಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಶ್ವದರ್ಜೆಯ ಐಷಾರಾಮಿ ಪ್ರವಾಸೋದ್ಯಮದ ಮೂಲಕ ಕರ್ನಾಟಕದ ಶ್ರೀಮಂತ ಇತಿಹಾಸವನ್ನು ಜಗತ್ತಿಗೆ ಪಸರಿಸುವ ರಾಜ್ಯದ ಮಹತ್ವಾಕಾಂಕ್ಷೆಗೆ ಇದು ಕನ್ನಡಿʼʼ ಎಂದು ಬಣ್ಣಿಸಿದ್ದಾರೆ.
ʼʼನಮ್ಮ ನಾಡಿನ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ಪ್ರಕೃತಿಯ ಸೊಬಗನ್ನು ಜಗತ್ತಿಗೆ ಪರಿಚಯಿಸಿ, ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿಸುವುದು ನಮ್ಮ ಸಂಕಲ್ಪ. ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ರಾಜ್ಯದ ಆರ್ಥಿಕ ಪ್ರಗತಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆʼʼ ಎಂದು ಹೇಳಿದ್ದಾರೆ.
2047ರ ವೇಳೆಗೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಗುರಿ; ಸಿಎಂ ಡಿಕೆ ಶಿವಕುಮಾರ್
ಏನಿದು ಗೋಲ್ಡನ್ ಚಾರಿಯಟ್ ರೈಲು?
ದಕ್ಷಿಣ ಭಾರತ ಸಂಸ್ಕೃತಿ ಮತ್ತು ಪರಂಪರೆಯ ಅನುಭವ ನೀಡುತ್ತ, ಪ್ರವಾಸದಲ್ಲಿ ಅದರ ಸತ್ವವನ್ನು ಕಟ್ಟಿಕೊಡುವ ಐಷಾರಾಮಿ ಪ್ರವಾಸಿ ರೈಲೇ ಗೋಲ್ಡನ್ ಚಾರಿಯಟ್. ಕರ್ನಾಟಕದ ಹೆಮ್ಮೆಯ ಹಾಗೂ ದಕ್ಷಿಣ ಭಾರತದ ಏಕೈಕ ಐಷಾರಾಮಿ ಪ್ರವಾಸಿ ರೈಲು ಇದಾಗಿದೆ. ರಾಜ್ಯ ಮತ್ತು ಕೇಂದ್ರ ಪ್ರವಾಸೋದ್ಯಮ ಇಲಾಖೆ (KSTDC & IRCTC)ಗಳ ಸಹಯೋಗದಲ್ಲಿ ನವೀನ ಸುಧಾರಣೆಗಳೊಂದಿಗೆ ರೈಲು ಓಡಾಟ ನಡೆಸುತ್ತಿದೆ. ಸುಂದರ ವಿನ್ಯಾಸದ ಈ ಚಾರಿಯಟ್ನ ಬೋಗಿಯ ಒಳಾಂಗಣವು ರಾಜಮನೆತನದ ವೈಭೋಗವನ್ನು ಅನುಭವಕ್ಕೆ ತರುವುದು ವಿಶೇಷ.
ಗೋಲ್ಡನ್ ಚಾರಿಯಟ್ ಕರ್ನಾಟಕವನ್ನು ಆಳಿದ ರಾಜಮನೆತನಗಳನ್ನು ಸ್ಮರಿಸುವ ಸಲುವಾಗಿ, ಪ್ರತಿಯೊಂದು ಬೋಗಿಗೂ ಅವುಗಳ ಹೆಸರನ್ನು ಇರಿಸಲಾಗಿದೆ. ಚಾಲುಕ್ಯ, ಕದಂಬ, ಹೊಯ್ಸಳ, ರಾಷ್ಟ್ರಕೂಟ, ಸಂಗಮ, ಶಾತವಾಹನ, ಗಂಗ ಹೀಗೆ ಒಟ್ಟು 16 ಬೋಗಿಗಳಿದ್ದು, ಇವುಗಳಲ್ಲಿ 11 ಬೋಗಿಗಳು ಪ್ರವಾಸಿಗಳ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಿವೆ.
ಇನ್ನು ಪ್ರತಿದಿನ ಯೋಗ ಧ್ಯಾನ ಅಥವಾ ಜಿಮ್ ಸರ್ಕಸ್ ಮಾಡಿ ಮೈದಣಿಸಿ ಆರೋಗ್ಯದ ಕಾಳಜಿ ಮಾಡುವವರು, ಪ್ರವಾಸದಲ್ಲಿ ಇವುಗಳಿಗೆ ಕಾಲ ಸಿಗದು ಎಂದು ಯೋಚಿಸುವ ಅಗತ್ಯವಿಲ್ಲ. ಇಲ್ಲಿನ ʻಆರೋಗ್ಯʼ ಬೋಗಿಯಲ್ಲಿ ಆರೋಗ್ಯ ಸಂಬಂಧಿತ ಕಾಳಜಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಅಗತ್ಯ ಜಿಮ್ ಉಪಕರಣಗಳನ್ನು ಒದಗಿಸಲಾಗಿದೆ. ಅಲ್ಲದೆ ಇಲ್ಲಿ ಸ್ಪಾ, ಮಸಾಜ್ ರೂಮ್ಗಳೂ ಇವೆ. ಜತೆಗೆ ಪ್ರತಿ ರೂಮ್ನಲ್ಲೂ ಟಿವಿ, ಇಂಟರ್ನೆಟ್, ಶೌಚಗೃಹ ಸೌಲಭ್ಯಗಳಿವೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.