Bowring Hospital Tragedy: ಬೌರಿಂಗ್ ಆಸ್ಪತ್ರೆ ದುರಂತದ ತನಿಖೆಗೆ ಸಿಎಂ ಸೂಚನೆ; ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ
Bowring Hospital wall collapse: ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದ ಸ್ಥಳ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಬಳಿಕ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಸಿಎಂ, ಘಟನೆ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಭೇಟಿ. -
ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ ದುರಂತದ (Bowring Hospital Tragedy) ಬಗ್ಗೆ ತನಿಖೆಗೆ ಸೂಚಿಸಲಾಗುವುದು. ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯವಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನು ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಕಾಂಪೌಂಡ್ ಗೋಡೆ ಯಾಕೆ ಕುಸಿಯಿತು ಎಂಬ ಬಗ್ಗೆ ತನಿಖೆಗೆ ಸೂಚಿಸಲಾಗುವುದು. ಒಳಗೆ ಕಾಮಗಾರಿ ನಡೆಯುತ್ತಿತ್ತು, ಅಲ್ಲಿ ಮಣ್ಣು ಹಾಕುತ್ತಿದ್ದರಿಂದ ಗೋಡೆ ಕುಸಿದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಗೋಡೆ ಶಿಥಿಲ ಆಗಿತ್ತಾ, ಇಲ್ವಾ ಎಂಬ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಅಧಿಕಾರಿಗಳಿಗೆ ಸಿಎಂ ತರಾಟೆ
ಬೌರಿಂಗ್ ಆಸ್ಪತ್ರೆ ಬಳಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ಗೋಡೆ ಕುಸಿದ ಘಟನೆ ಬಗ್ಗೆ ಆಕ್ರೋಶಗೊಂಡ ಸಿಎಂ, ಹಳೆ ಗೋಡೆ ನೋಡೋಕಾಗಲ್ವಾ...? ನಿಮ್ಮ ಮಧ್ಯೆ ಕೋ ಆರ್ಡಿನೇಷನ್ ಇರಲ್ವಾ? ಎಚ್ಚರವಹಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು ಎಂದು ಅಧಿಕಾರಿಗಳಿಗೆ ಸಿಎಂ ತರಾಟೆ ತೆಗೆದುಕೊಂಡಿದ್ದಾರೆ.
ಮೃತರ ಗುರುತು ಪತ್ತೆ
ಬೌರಿಂಗ್ ಆಸ್ಪತ್ರೆ ದುರಂತದಲ್ಲಿ ಮೃತರಾದವರ ಗುರುತು ಪತ್ತೆಯಾಗಿದೆ. ಮಾಯಾ (51), ಮುಬಿನ್ ತಾಜ್ (49), ತಬೀನ್ ತಾಜ್ (47), ಸಿಜಿ (47), ಅಜು (35), ಸಾಜಿದ್ (20), ಪ್ರೀತಿ(5) ಮೃತರಾಗಿದ್ದಾರೆ.

Bengaluru Rains: ಬೆಂಗಳೂರಿನಲ್ಲಿ ಭಾರಿ ಮಳೆ; ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು 7 ಮಂದಿ ಸಾವು
ಬೌರಿಂಗ್ ಆಸ್ಪತ್ರೆ ಗೋಡೆಗೆ ಹೊಂದಿಕೊಂಡಂತೆ ಟಾರ್ಪಲ್ ಹಾಕಿ ಬೀದಿ ವ್ಯಾಪಾರಸ್ಥರು ಅಂಗಡಿ ನಡೆಸುತ್ತಿದ್ದರು. ಮಳೆ ಜೋರಾದಾಗ ಫುಟ್‌ಪಾತ್ ಮೇಲಿದ್ದ ವ್ಯಾಪಾರಸ್ಥರು ಮತ್ತು ದಾರಿಹೋಕರು ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲ್ ಅಡಿ ನಿಂತುಕೊಂಡಿದ್ದರು. ಈ ವೇಳೆ ಶಿಥಿಲ ಗೋಡೆ ಕುಸಿದು ದುರಂತ ಸಂಭವಿಸಿದೆ.