ಇನ್ಮುಂದೆ ನೆಟ್‌ವರ್ಕ್ ಇಲ್ಲದೆಯೂ ಕಾಲ್ ಮಾಡಬಹುದು! BSNLನ ಹೊಸ ಸ್ಯಾಟಲೈಟ್ ಫೋನ್ ಬಿಡುಗಡೆ; ಬೆಲೆ ಎಷ್ಟು?
BSNL Satellite Phone: ಮೊಬೈಲ್ ಟವರ್‌ಗಳಿಲ್ಲದ ಪ್ರದೇಶಗಳಲ್ಲಿಯೂ ಸಂಪರ್ಕ ಕಲ್ಪಿಸುವ ಹೊಸ ಸ್ಯಾಟಲೈಟ್ ಫೋನ್ ಅನ್ನು ಬಿಎಸ್‌ಎನ್‌ಎಲ್ ಭಾರತದಲ್ಲಿ ಬಿಡುಗಡೆ ಮಾಡಿದೆ. ₹1,34,166 ಬೆಲೆಯ ಈ ಫೋನ್ ನೇರವಾಗಿ ಉಪಗ್ರಹಗಳ ಮೂಲಕ ಕಾರ್ಯನಿರ್ವಹಿಸಲಿದ್ದು, ರಕ್ಷಣಾ ಪಡೆಗಳು, ವಿಪತ್ತು ನಿರ್ವಹಣಾ ತಂಡಗಳು ಹಾಗೂ ದುರ್ಗಮ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಉಪಯುಕ್ತವಾಗಲಿದೆ. ಆದರೆ, ಈ ಫೋನ್ ಖರೀದಿ ಮತ್ತು ಬಳಕೆಗೆ ದೂರಸಂಪರ್ಕ ಇಲಾಖೆ (DoT)ಯ ವಿಶೇಷ ಅನುಮತಿ ಕಡ್ಡಾಯ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜು. 9: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ (BSNL), ಮೊಬೈಲ್ ಟವರ್‌ಗಳಿಲ್ಲದ ಪ್ರದೇಶಗಳಲ್ಲಿಯೂ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಭಾರತದಲ್ಲಿ ಹೊಸ ಉಪಗ್ರಹ ಫೋನ್ (BSNL Satellite Phone) ಬಿಡುಗಡೆ ಮಾಡಿದೆ. ತೆರಿಗೆ ಸೇರಿ ಈ ಫೋನ್‌ನ ಬೆಲೆ ₹1,34,166 ಆಗಿದ್ದು, ಇದು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಂತೆ ಮೊಬೈಲ್ ಟವರ್‌ಗಳನ್ನು ಅವಲಂಬಿಸದೆ ನೇರವಾಗಿ ಉಪಗ್ರಹಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಕಾಡು, ಪರ್ವತ, ಸಮುದ್ರ ಹಾಗೂ ವಿಪತ್ತುಪೀಡಿತ ಪ್ರದೇಶಗಳಂತಹ ದೂರದ ಸ್ಥಳಗಳಲ್ಲಿಯೂ ಕರೆ ಮಾಡಲು ಸಾಧ್ಯವಾಗಲಿದೆ.
ಬಿಎಸ್‌ಎನ್‌ಎಲ್ ಈ ಉಪಗ್ರಹ ಫೋನ್ ಅನ್ನು ಜಾಗತಿಕ ಉಪಗ್ರಹ ಸಂವಹನ ಸಂಸ್ಥೆ ಇನ್‌ಮಾರ್ಸಾಟ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಮೊಬೈಲ್ ನೆಟ್‌ವರ್ಕ್ ಸಂಪೂರ್ಣವಾಗಿ ಲಭ್ಯವಿಲ್ಲದ ಪ್ರದೇಶಗಳಲ್ಲಿಯೂ ಇದು ಧ್ವನಿ ಕರೆ ಸೌಲಭ್ಯ ಒದಗಿಸುತ್ತದೆ. ತುರ್ತು ಪರಿಸ್ಥಿತಿಯಲ್ಲಿ ನೆರವು ಪಡೆಯಲು SOS ಎಮರ್ಜೆನ್ಸಿ ಫೀಚರ್, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಹಾಗೂ ಕಠಿಣ ಹವಾಮಾನದಲ್ಲಿಯೂ ಬಳಸಬಹುದಾದ ಗಟ್ಟಿಮುಟ್ಟಾದ ವಿನ್ಯಾಸವನ್ನು ಈ ಫೋನ್ ಹೊಂದಿದೆ.
ರೈಲ್ವೆ ನಿಲ್ದಾಣದಲ್ಲಿರುವ 25,000 ವೋಲ್ಟ್ ಓವರ್‌ಹೆಡ್ ತಂತಿಯನ್ನೇ ಕದ್ದ ಕಳ್ಳರು; ಹಲವು ರೈಲು ಸೇವೆಗಳಿಗೆ ತೊಂದರೆ
ಈ ಫೋನ್ ಸಾಮಾನ್ಯ ಗ್ರಾಹಕರಿಗಾಗಿ ಅಲ್ಲ ಎಂದು ಬಿಎಸ್‌ಎನ್‌ಎಲ್ ಸ್ಪಷ್ಟಪಡಿಸಿದೆ. ರಕ್ಷಣಾ ಪಡೆಗಳು, ನೌಕಾಯಾನ, ವಿಪತ್ತು ನಿರ್ವಹಣಾ ತಂಡಗಳು, ಗಣಿಗಾರಿಕೆ, ದೂರದ ಕೈಗಾರಿಕೆಗಳು, ದುರ್ಗಮ ಪ್ರದೇಶಗಳಿಗೆ ತೆರಳುವ ಯಾತ್ರಿಕರು ಹಾಗೂ ಸಾಹಸ ಪ್ರವಾಸಿಗರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಫೋನ್ ರೂಪಿಸಲಾಗಿದೆ.
ಬಿಎಸ್‌ಎನ್‌ಎಲ್‌ನ ಹೊಸ ಫೋನ್:
Well done BSNL with the satellite phone launch 🚨
— Saffron Sting (@SaffronSting) July 9, 2026
Best for adventurer travellers and wanderlust freaks pic.twitter.com/ykZ8ficOZM
ಭಾರತದಲ್ಲಿ ಉಪಗ್ರಹ ಫೋನ್‌ಗಳ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ಈ ಫೋನ್ ಖರೀದಿಸುವ ಅಥವಾ ಬಳಸುವ ಮೊದಲು ದೂರಸಂಪರ್ಕ ಇಲಾಖೆ (Department of Telecommunications - DoT) ಯಿಂದ ಕಡ್ಡಾಯ ಅನುಮತಿ ಪಡೆಯಬೇಕು. ಅನುಮತಿಯಿಲ್ಲದೆ ಉಪಗ್ರಹ ಫೋನ್ ಹೊಂದುವುದು ಅಥವಾ ಬಳಸುವುದು ಕಾನೂನುಬಾಹಿರವಾಗಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಮೀಪದ ಬಿಎಸ್‌ಎನ್‌ಎಲ್ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 9768866652 ಸಂಖ್ಯೆಗೆ ಕರೆ ಮಾಡಬಹುದು. ಇದೇ ವೇಳೆ ದೇಶಾದ್ಯಂತ ತನ್ನ 4G ಸೇವೆಯನ್ನು ವಿಸ್ತರಿಸುತ್ತಿರುವ ಬಿಎಸ್‌ಎನ್‌ಎಲ್ ಈಗಾಗಲೇ ಸುಮಾರು 99,000ಕ್ಕೂ ಹೆಚ್ಚು 4G ತಾಣಗಳನ್ನು ಕಾರ್ಯಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು 4G ಸೈಟ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವೂ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ.