ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆ; ಕಾಂಗ್ರೆಸ್‌ನಿಂದ ಅಧಿಕೃತ ಟಿಕೆಟ್‌ ಘೋಷಣೆ

ಅನುಕಂಪದ ಅಲೆಯಲ್ಲಿಉಪಚುನಾವಣೆ ಗೆಲ್ಲಲು ಆಡಳಿತಾರೂಢ ಕಾಂಗ್ರೆಸ್‌ ಕುಟುಂಬ ರಾಜಕಾರಣಕ್ಕೆ ಮತ್ತೆ ಮಣೆ ಹಾಕಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್‌ ಪುತ್ರ ಸಮರ್ಥ್‌ ಹಾಗೂ ಬಾಗಲಕೋಟೆಯಲ್ಲಿ ಎಚ್‌.ವೈ.ಮೇಟಿ ಕಿರಿಯ ಪುತ್ರ ಉಮೇಶ್‌ ಮೇಟಿಗೆ ಪಕ್ಷದ ವತಿಯಿಂದ ಇದೀಗ ಅಧಿಕೃತವಾಗಿ ಟಿಕೆಟ್‌ ಘೋಷಣೆಯಾಗಿದೆ.

ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Mar 22, 2026 12:13 PM

ಬೆಂಗಳೂರು: ಅನುಕಂಪದ ಅಲೆಯಲ್ಲಿಉಪಚುನಾವಣೆ ಗೆಲ್ಲಲು ಆಡಳಿತಾರೂಢ ಕಾಂಗ್ರೆಸ್‌ ಕುಟುಂಬ ರಾಜಕಾರಣಕ್ಕೆ ಮತ್ತೆ ಮಣೆ ಹಾಕಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್‌ ಪುತ್ರ (Samarth Shamanur) ಸಮರ್ಥ್‌ ಹಾಗೂ ಬಾಗಲಕೋಟೆಯಲ್ಲಿ ಎಚ್‌.ವೈ.ಮೇಟಿ ಕಿರಿಯ ಪುತ್ರ ಉಮೇಶ್‌ ಮೇಟಿಗೆ (Umesh Meti) ಪಕ್ಷದ ವತಿಯಿಂದ ಇದೀಗ ಅಧಿಕೃತವಾಗಿ ಟಿಕೆಟ್‌ ಘೋಷಣೆಯಾಗಿದೆ. ಹಲವು ಸುತ್ತಿನ ಸಭೆ ಬಳಿಕ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಶನಿವಾರ ರಾತ್ರಿ ಸಭೆ ನಡೆಸಿದ್ದರು.

ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಆದರೆ ಈ ಕ್ಷೇತ್ರದಲ್ಲಿ ಮುಸ್ಲಿಂ ಪ್ರಾಬಲ್ಯ ಇರುವುದರಿಂದ ಮುಸ್ಲಿಂ ನಾಯಕರು ತಮ್ಮ ಸಮುದಾಯಕ್ಕೆ ಟಿಕೆಟ್‌ ನೀಡಿ ಎಂದು ಪಟ್ಟು ಹಿಡಿದಿದ್ದರು. ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಅಲ್ಪಸಂಖ್ಯಾತ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಭ್ಯರ್ಥಿಯನ್ನು 50 ಸಾವಿರ ಮತಗಳ ಅಂತರದಿಂದ ಸೋಲಿಸುವ ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಮಣೆ ಹಾಕದ ಹೈಕಮಾಂಡ್‌ ಸಮರ್ಥ್‌ಗೆ ಟಿಕೆಟ್‌ ನೀಡಿದೆ.

ಬಾಗಲಕೋಟೆ ಕ್ಷೇತ್ರದಲ್ಲಿ ದಿವಂಗತ ಶಾಸಕ ಎಚ್.ವೈ. ಮೇಟಿ ಅವರ ಮಕ್ಕಳಾದ ಮಲ್ಲಿಕಾರ್ಜುನ್, ಉಮೇಶ್ ಮತ್ತು ಮಹಾದೇವಿ ನಡುವೆ ಬಹಿರಂಗವಾಗಿಯೇ ಭಾರೀ ಜಗಳ ನಡೆದಿತ್ತು. ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ ಸಂಧಾನ ಸಭೆ ಯಶಸ್ವಿಯಾಗಿದ್ದು, ಅಂತಿಮವಾಗಿ ಕುಟುಂಬದ ಒಮ್ಮತದ ಮೇರೆಗೆ, ಕುರುಬ ಸಮುದಾಯದ ಮತಗಳನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಉಮೇಶ್ ಮೇಟಿ ಅವರಿಗೆ ಟಿಕೆಟ್‌ ನೀಡಲಾಗಿದೆ.

Karnataka bypolls: ಏಪ್ರಿಲ್‌ 9ಕ್ಕೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ; ಮೇ 4ಕ್ಕೆ ಫಲಿತಾಂಶ

ಈಗಾಗಲೇ ಬಿಜೆಪಿ ಎರಡೂ ಕ್ಷೇತ್ರದಲ್ಲಿಯೂ ಅಭ್ಯರ್ಥಿಯನ್ನು ಘೋಷಿಸಿದ್ದು, ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಅವರು ಈಗಾಗಲೇ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್‌ ಘೋಷಿಸಲಾಗಿದ್ದು, ಅವರೂ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.