ಬೆಂಗಳೂರಿನಲ್ಲಿ ಆತಂಕ ಮೂಡಿಸಿದ ಲ್ಯಾಂಬೋರ್ಗಿನಿ ಸ್ಟಂಟ್: ವಿಡಿಯೊ ವೈರಲ್
ಬೆಂಗಳೂರು ಎಂ.ಜಿ. ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಸಾರ್ವಜನಿಕರ ಸಂಚಾರ ಮಧ್ಯೆಯೇ ಅಪಾಯಕಾರಿ ಡ್ರಿಫ್ಟಿಂಗ್ ನಡೆಸಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಹೆಚ್ಚಾಗಿದೆ.
ವೈರಲ್ ಆದ ವಿಡಿಯೊ -
ಬೆಂಗಳೂರು, ಮಾ. 21: ಸಿಲಿಕಾನ್ ಸಿಟಿಯ ಹೃದಯಭಾಗವಾದ ಎಂ.ಜಿ. ರಸ್ತೆಯ (MG Road) ಅನಿಲ್ ಕುಂಬ್ಳೆ ವೃತ್ತದಲ್ಲಿ (Anil Kumble Circle) ತಡರಾತ್ರಿ 2ರಿಂದ 3 ಗಂಟೆಯ ಸುಮಾರಿಗೆ ಲ್ಯಾಂಬೋರ್ಗಿನಿ (Lamborghini) ಕಾರೊಂದು ಅಪಾಯಕಾರಿ ರೀತಿಯಲ್ಲಿ ಡ್ರಿಫ್ಟಿಂಗ್ ಮಾಡುತ್ತ ಹಾವಳಿ ಇಟ್ಟಿರುವ ಘಟನೆ ವರದಿಯಾಗಿದೆ. ಈ ಐಷಾರಾಮಿ ಕಾರಿನ ಅತಿರೇಕದ ವರ್ತನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ಶ್ರೀಮಂತಿಕೆ ಮತ್ತು ಅಧಿಕಾರವಿದ್ದರೆ ಕಾನೂನಿನಿಂದ ತಪ್ಪಿಸಿಕೊಳ್ಳಬಹುದೇ ಎಂಬ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ KA 05 NR 0009 ನೋಂದಣಿ ಸಂಖ್ಯೆಯ ಕಾರು ಸಾರ್ವಜನಿಕ ರಸ್ತೆಯಲ್ಲಿ, ಅದರಲ್ಲೂ ಫ್ಲೈಓವರ್ ಕೆಳಗೆ ಇತರ ವಾಹನಗಳ ಸಂಚಾರವಿರುವಾಗಲೇ 'ಡೋನಟ್' ಸ್ಟಂಟ್‌ಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಜಾಗೃತ ನಾಗರಿಕರೊಬ್ಬರು ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ಮೂಲಕ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ. ಇದೇ ವೇಳೆ, ಪರಿಶೀಲನೆ ನಡೆಸಿದ ನೆಟ್ಟಿಗರು ಈ ವಾಹನವು ಸರಿಯಾದ ನೋಂದಣಿಯನ್ನೇ ಹೊಂದಿಲ್ಲದಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೊ:
A Lamborghini owner has been booked after performing a high-speed drifting stunt at Anil Kumble Circle on MG Road in Bengaluru in the early hours, police said on Saturday.
— Hate Detector 🔍 (@HateDetectors) March 21, 2026
Officials stated that the incident occurred around 2-3 a.m. The luxury car was seen drifting dangerously,… pic.twitter.com/WHzM9KV8Gk
ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ (FIR) ದಾಖಲಾಗಿದ್ದು, "ಹಣದಿಂದ ಸೂಪರ್ ಕಾರ್‌ಗಳನ್ನು ಖರೀದಿಸಬಹುದು, ಆದರೆ ಕಾನೂನಿನಿಂದ ವಿನಾಯಿತಿಯನ್ನಲ್ಲ" ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಸಾರ್ವಜನಿಕರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆಗಳು ರೇಸ್ ಟ್ರ್ಯಾಕ್‌ಗಳಲ್ಲ ಎಂದು ಕಿಡಿಕಾರಿದ್ದಾರೆ. ಚಾಲಕನ ಪರವಾನಗಿಯನ್ನು ರದ್ದುಗೊಳಿಸಬೇಕು ಮತ್ತು ಕಠಿಣ ದಂಡ ವಿಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೆ ಕೆಲವರು "ಇದು ಶ್ರೀಮಂತರ ಆಟ, ಪೊಲೀಸರು ಏನೂ ಮಾಡುವುದಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಚಾಲಕ ಯಾವುದಾದರೂ ಪ್ರಭಾವಿ ಬಿಲ್ಡರ್ ಅಥವಾ ಶಾಸಕರ ಮಗನಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.
ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್ ಎಂದ ನೆಟ್ಟಿಗರು
ಐಷಾರಾಮಿ ಕಾರುಗಳ ಕರಾಳ ಇತಿಹಾಸ
ಈ ಘಟನೆಯು ಈ ಹಿಂದೆ ನಡೆದ ದೆಹಲಿಯ ಬಿಎಂಡಬ್ಲ್ಯು ಹತ್ಯಾಕಾಂಡ (1999), ಪುಣೆಯ ಪೋರ್ಷೆ ಅಪಘಾತ (2024) ಮತ್ತು ಇತ್ತೀಚಿನ ಕಾನ್ಪುರ ಹಾಗೂ ಜೈಪುರದ ಭೀಕರ ಅಪಘಾತಗಳನ್ನು ನೆನಪಿಸುವಂತಿದೆ. ಶ್ರೀಮಂತ ವ್ಯಕ್ತಿಗಳ ಬೇಜವಾಬ್ದಾರಿ ಚಾಲನೆಯಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ದೇಶಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಬೆಂಗಳೂರು ಪೊಲೀಸರು ಈ ಪ್ರಕರಣದಲ್ಲಿ ತಪ್ಪಿತಸ್ಥರ ಹೆಸರನ್ನು ಬಹಿರಂಗಪಡಿಸಿ, ಕಠಿಣ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.