ಬೆಂಗಳೂರು ಸಿಲಿಂಡರ್ ಸ್ಫೋಟ ಪ್ರಕರಣ: ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಂದು ಮಗು ಸಾವು; ಮೃತರ ಸಂಖ್ಯೆ 3ಕ್ಕೆ ಏರಿಕೆ
Bangalore cylinder blast case: ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್ನಲ್ಲಿ ನಡೆದಿದ್ದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಂದು ಮಗು ಮೃತಪಟ್ಟಿದೆ. ಘಟನೆಯಲ್ಲಿ ಈವರೆಗೆ ತಾಯಿ ಹಾಗೂ ಇಬ್ಬರು ಅವಳಿ ಮಕ್ಳಳು ಸಾವನ್ನಪ್ಪಿದ್ದಾರೆ.
-
ಬೆಂಗಳೂರು: ಬೆಂಗಳೂರಿನಲ್ಲಿ ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡ ಘಟನೆಗೆ (Bangalore cylinder blast case) ಸಂಬಂಧಿಸಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಂದು ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಇದರಿಂದ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.
ನಾಯಂಡಹಳ್ಳಿಯ ವಿನಾಯಕ ಲೇಔಟ್ನಲ್ಲಿ ಈ ದುರಂತ ಸಂಭವಿಸಿತ್ತು. ತಂದೆ ಕರಿಲಿಂಗಪ್ಪ ಸ್ಥಿತಿ ಕೂಡ ಗಂಭೀರವಾಗಿದೆ. ಘಟನೆಯಲ್ಲಿ ಈವರೆಗೆ ತಾಯಿ ಹಾಗೂ ಇಬ್ಬರು ಅವಳಿ ಮಕ್ಳಳು ಸಾವನ್ನಪ್ಪಿದ್ದಾರೆ.
ತಾಯಿ ಲಕ್ಷ್ಮಮ್ಮ, ಅವಳಿ ಮಗ್ಗಳಾದ ಗೀತಾ, ಗಿರಿಜಾ ಮೃತ ದುರ್ದೈವಿಗಳು. ಇನ್ನೂ ಇಬ್ಬರು ಮಕ್ಕಳು ಹಾಗೂ ತಂದೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅಕ್ಟೋಬರ್ 2ರಂದು ವಿನಾಯಕ ಲೇಔಟ್ನ ಮನೆಯಲ್ಲಿ ಈ ಘಟನೆ ನಡೆದಿತ್ತು.
ರಾಯಚೂರು ಮೂಲದ ಕುಟುಂಬವೊಂದು ನಾಯಂಡಹಳ್ಳಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಬೆಳಿಗ್ಗೆ ತಿಂಡಿ ರೆಡಿ ಮಾಡಲು ಒಲೆ ಹಚ್ಚುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿತ್ತು.
ಚಿಕ್ಕಬಳ್ಳಾಪುರದಲ್ಲಿ 3 ವರ್ಷದ ಮಗು ಅನುಮಾನಾಸ್ಪದ ಸಾವು!
ಚಿಕ್ಕಬಳ್ಳಾಪುರ: ಊಟ ಮಾಡಿ ಮಲಗಿದ್ದ ಮೂರು ವರ್ಷದ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕು ಜರಬಂಡಹಳ್ಳಿಯಲ್ಲಿ ನಡೆದಿದೆ. ನವೀನ್ ಮತ್ತು ಹಂಸಲೇಖ ದಂಪತಿಯ ಪುತ್ರ ರಿತೀಶ್ (3) ಮೃತಪಟ್ಟ ಮಗು. ಮಗು ಎಂದಿನಂತೆ ಊಟ ಮಾಡಿ ಮಲಗಿತ್ತು ಎನ್ನಲಾಗಿದ್ದು, ಬಳಿಕ ಎಚ್ಚರಗೊಳ್ಳದೆ ಮೃತಪಟ್ಟಿದೆ. ಮಗುವಿನ ದಿಢೀರ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಣ್ಣೆದುರೇ ಆಟವಾಡಿಕೊಂಡು ಇರಬೇಕಿದ್ದ ಪುಟ್ಟ ಕಂದನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮಗುವಿನ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.