ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ʼಮುಂದಿನ 8 ವರ್ಷ ಡಿಕೆಶಿಯೇ ಸಿಎಂ": ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ

DK Shivakumar: ಸಿದ್ದರಾಮಯ್ಯ ಮುಖ್ಯಮಂತ್ರಿ ಹಿದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಕೆಶಿ ಅವರ ಪರಮಾಪ್ತ ಗುರು ರಾಜಗುರು ದ್ವಾರಕನಾಥ್ ಗುರೂಜಿ ಅವರ ಭವಿಷ್ಯ ವೈರಲ್‌ ಆಗಿದೆ. ʼʼಮುಂದಿನ 8 ವರ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರನ್ನು ಅಲ್ಲಾಡಿಸಲು ಯಾರಿಗೂ ಆಗಲ್ಲʼʼ ಎಂದು ಅವರು ಹೇಳಿದ್ದಾರೆ.

8 ವರ್ಷ ಡಿಕೆಶಿಯೇ ಸಿಎಂ ಎಂದ ರಾಜಗುರು ದ್ವಾರಕನಾಥ್ ಗುರೂಜಿ

ರಾಜಗುರು ದ್ವಾರಕನಾಥ್ ಗುರೂಜಿ ಡಿಕೆಶಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole May 28, 2026 5:02 PM

ಬೆಂಗಳೂರು, ಮೇ 28: ʼʼಮುಂದಿನ 8 ವರ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರನ್ನು ಅಲ್ಲಾಡಿಸಲು ಯಾರಿಗೂ ಆಗಲ್ಲʼʼ- ಇದು ಡಿಕೆಶಿ ಅವರ ಪರಮಾಪ್ತ ಗುರು ರಾಜಗುರು ದ್ವಾರಕನಾಥ್ ಗುರೂಜಿ ಅವರ ಭವಿಷ್ಯ. ಈಗಾಗಲೇ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಸುದ್ದಿಗೋಷ್ಠಿ ಮುಗಿಸಿ ದೆಹಲಿಯತ್ತ ತೆರಳಿದ್ದಾರೆ. ಈ ಮಧ್ಯೆ ʼಏಷ್ಯಾನೆಟ್‌ ಸುವರ್ಣ ನ್ಯೂಸ್‌ʼ ಜತೆ ಮಾತನಾಡಿದ ದ್ವಾರಕನಾಥ್ ಗುರೂಜಿ, ಡಿಕೆಶಿ ಅವರಿಗೆ ರಾಜಯೋಗವಿರುವುದಾಗಿ ತಿಳಿಸಿದ್ದಾರೆ. ಸದ್ಯ ಅವರ ಭವಿಷ್ಯವಾಣಿ ಭಾರಿ ಸದ್ದು ಮಾಡುತ್ತಿದೆ.

ಸಿದ್ದರಾಮಯ್ಯ ರಾಜೀನಾಮೆ ಬಳಿಕ ಉಪಮುಖ್ಯಮಂತ್ರಿ ಡಿಕೆಶಿ ಅವರಿಗೆ ಸಿಎಂ ಪಟ್ಟ ಒಲಿಯಲಿದೆ ಎನ್ನುವುದು ಬಹುತೇಕ ಫಿಕ್ಸ್‌ ಆಗಿದೆ. ಆದರೆ ಈ ಬಗ್ಗೆ ಕಾಂಗ್ರೆಸ್‌ ಅಧಿಕೃತವಾಗಿ ಘೋಷಣೆ ಹೊರಡಿಸಿಲ್ಲ. ಸಿದ್ದರಾಮಯ್ಯ ಕೂಡ ಮುಂದಿನ ಮುಖ್ಯಮಂತ್ರಿಯನ್ನು ಹೈಕಮಾಂಡ್‌ ನಿರ್ಧರಿಸಲಿದೆ ಎಂದಿದ್ದಾರೆ. ಹೀಗಾಗಿ ದ್ವಾರಕನಾಥ್ ಗುರೂಜಿ ಅವರ ಭವಿಷ್ಯ ಇದೀಗ ಗಮನ ಸೆಳೆದಿದೆ.

ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌; ಡಿಕೆಶಿ ಸೇರಿ ಹಲವರು ಭಾಗಿ

ದ್ವಾರಕನಾಥ್ ಗುರೂಜಿ ಭವಿಷ್ಯ

ʼ'ಡಿ.ಕೆ. ಶಿವಕುಮಾರ್ ಸೋಮವಾರದ ಒಳಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದಿದ್ದಾರೆ. ʼʼಈಗ ಡಿಕೆಶಿಗೆ ಅತ್ಯಂತ ಸುವರ್ಣ ಸಮಯ ಆರಂಭವಾಗಿದೆ. ಗುರು ಈಗ ಮಿಥುನ ರಾಶಿಯಲ್ಲಿದ್ದಾನೆ. ಇದು ಡಿಕೆಶಿಗೆ ಭಾರಿ ರಾಜಯೋಗ ತರಲಿದೆ. ಹೀಗಾಗಿ ನನ್ನ ಲೆಕ್ಕಾಚಾರದ ಪ್ರಕಾರ ಮುಂದಿನ 8 ವರ್ಷ ರಾಜ್ಯದಲ್ಲಿ ಅವನನ್ನು ಸೋಲಿಸಲು ಯಾರಿಂದಲೂ ಆಗಲ್ಲʼʼ ಎಂದು ವಿವರಿಸಿದ್ದಾರೆ.

35 ವರ್ಷಗಳ ಒಡನಾಟ

ವಿಶೇಷ ಎಂದರೆ ದ್ವಾರಕನಾಥ್ ಗುರೂಜಿ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಸುಮಾರು 35 ವರ್ಷಗಳ ಒಡನಾಟವಿದೆ. ಹೀಗಾಗಿ ಡಿಕೆಶಿ ಅವರನ್ನು ದ್ವಾರಕನಾಥ್ ಗುರೂಜಿ ಏಕವಚನದಲ್ಲೇ ಸಂಬೋಧಿಸುತ್ತಾರೆ. ʼʼಡಿಕೆಶಿ ನನಗೆ ಕಳೆದ 35 ವರ್ಷಗಳಿಂದ ಪರಿಚಯ. ಹಿಂದೆ ಮಾಜಿ ಸಿಎಂ ಬಂಗಾರಪ್ಪ ಅವರ ಸಂಪುಟದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಜೈಲು ಸಚಿವನಾಗಿದ್ದಾಗಲೇ, 'ನೀನು ಮುಂದೊಂದು ದಿನ ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗ್ತೀಯಾ' ಎಂದು ಭವಿಷ್ಯ ಹೇಳಿದ್ದೆ. ಅವನು ಸದಾ ನನ್ನ ಸಂಪರ್ಕದಲ್ಲೇ ಇದ್ದಾನೆ. ಅವನು ನಮ್ಮ ಮನೆಯ ಮಗನಿದ್ದಂತೆ'ʼ ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.

ಶೃಂಗೇರಿಯ ನಂಟು

ʼʼಡಿಕೆಶಿ ಈ ವರ್ಷದ ಒಳಗೇ ಸಿಎಂ ಆಗಬೇಕಿತ್ತು. ಆದರೆ ಪ್ರಕ್ರಿಯೆ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಬಂದಿದ್ದೆ. ನಾನು ಶೃಂಗೇರಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಖುದ್ದು ಡಿ.ಕೆ. ಶಿವಕುಮಾರ್ ನನಗೆ ಫೋನ್ ಕಾಲ್ ಮಾಡಿ 'ಗುರೂಜಿ, ಕೆಲಸ ಆಗಿದೆ' ಎಂದು ಸಿಹಿ ಸುದ್ದಿ ನೀಡಿದ. ನಾನು ಈಗ ಬೆಂಗಳೂರಿಗೆ ಹೋಗಿ ಆತನ ಜತೆ ಮಾತನಾಡುತ್ತೇನೆʼʼ ಎಂದಿದ್ದಾರೆ.

ಸಿದ್ದರಾಮಯ್ಯ ರಾಜಯೋಗ ಅಂತ್ಯ

ʼʼಸಿದ್ದರಾಮಯ್ಯ ಅವರದ್ದು ವೃಶ್ಚಿಕ ರಾಶಿ. ಸದ್ಯ ಅವರಿಗೆ ಗುರು ಬಲ ಮತ್ತು ಶನಿ ಬಲ ಎರಡೂ ಇಲ್ಲ. ಸಿದ್ದರಾಮಯ್ಯ ಅವರ ಸಿಎಂ ಆಗುವ 'ರಾಜಯೋಗ' ಈಗ ಮುಗಿದಿದೆ. ಆದರೆ ಈ ರಾಜ್ಯಕ್ಕೆ ಅವರ ಮಾರ್ಗದರ್ಶನ ಮತ್ತು ಸೇವೆಯ ಅಗತ್ಯ ಖಂಡಿತಾ ಇದೆʼʼ ಎಂದು ಗುರೂಜಿ ವಿವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.