ಕುಡಿದ ಮತ್ತಿನಲ್ಲಿ ಯುವತಿಯರಿಂದ ಕಿರಿಕ್; ಕ್ಯಾಬ್ ಚಾಲಕನ ಮೇಲೆ ಹಲ್ಲೆ, ಪೊಲೀಸರೊಂದಿಗೆ ಅಸಭ್ಯ ವರ್ತನೆ
ಕಂಠಪೂರ್ತಿ ಕುಡಿದ ಯುವತಿಯರಿಬ್ಬರು ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರೋಡ್‌ನ ಹುಳಿಮಾವು-ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಿರಿಕ್ ಮಾಡಿದ ಯುವತಿಯರನ್ನು ಉತ್ತರ ಭಾರತ ಮೂಲದ ಲೀಸಾ ಮತ್ತು ಮ್ಯಾಥ್ಯೂ ಎಂದು ಗುರುತಿಸಲಾಗಿದೆ.
ಎಐ ಚಿತ್ರ. -
ಬೆಂಗಳೂರು, ಫೆ. 8: ಕಂಠಪೂರ್ತಿ ಕುಡಿದ ಯುವತಿಯರಿಬ್ಬರು ಮಧ್ಯರಾತ್ರಿ ಕಿರಿಕ್ ಮಾಡಿಕೊಂಡಿದ್ದು, ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರೋಡ್‌ನ ಹುಳಿಮಾವು-ದೇವರಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಿರಿಕ್ ಮಾಡಿದ ಯುವತಿಯರನ್ನು ಲೀಸಾ ಮತ್ತು ಮ್ಯಾಥ್ಯೂ ಎಂದು ಗುರುತಿಸಲಾಗಿದೆ (Bengaluru News). ಉತ್ತರ ಭಾರತೀಯ ಮೂಲದ ಇವರು ಸಾರ್ವಜನಿಕರ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಇವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಕಾರು, ಬೈಕ್ಗಳಿಗೆ ಗುದ್ದಿದೆ. ಪ್ರಶ್ನಿಸಿದವರ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಪೊಲೀಸರ ಜತೆಗೂ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ
ಕಂಠಪೂರ್ತಿ ಮದ್ಯ ಸೇವಿಸಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಲೀಸಾ ಮತ್ತು ಮ್ಯಾಥ್ಯೂ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ಕ್ಯಾಬ್ ಒಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಯುವತಿಯರನ್ನು ಕ್ಯಾಬ್ ಚಾಲಕ ಅಹ್ಮದ್ ಪ್ರಶ್ನೆ ಮಾಡಿದ್ದಕ್ಕೆ, ಆತನಿಗೆ ನಿಂದಿಸಿ ಪರಾರಿಯಾಗಲು ಯತ್ನಿಸಿದರು. ಆಗ ಯುವತಿಯರನ್ನು ಸ್ಥಳೀಯರು ತಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವತಿಯರು ಕೈಗೆ ಚೈನ್ ಸುತ್ತಿಕೊಂಡು ಅಹ್ಮದ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅಸಭ್ಯ ಸನ್ನೆ ತೋರಿಸಿ ನಿಂದಿಸಿದ್ದಾರೆ.
ಬೆಂಗಳೂರು-ದೆಹಲಿ ವಿಮಾನದಲ್ಲಿ ನಾಟಕೀಯ ಬೆಳವಣಿಗೆ; ಕಂಠಪೂರ್ತಿ ಕುಡಿದುಬಂದ ಪ್ರಯಾಣಿಕನಿಂದ ಗಲಾಟೆ
ಸ್ವಲ್ಪ ಹೊತ್ತಿನಲ್ಲೇ ಆಗಮಿಸಿದ ಪೊಲೀಸರ ಬಳಿಯೂ ಈ ಯುವತಿಯರು ಹೈಡ್ರಾಮಾ ನಡೆಸಿದ್ದಾರೆ. ಜೆ.ಪಿ. ನಗರ ಹಾಗೂ ಕೋರಮಂಗಲದಲ್ಲಿ ವಾಸವಾಗಿರುವ ಈ ಇಬ್ಬರು ಯುವತಿಯರು ಸ್ನೇಹಿತನ ಜತೆ ಪಾರ್ಟಿ ಮುಗಿಸಿ ವಾಪಸ್ ಹೋಗುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಾಲಕ ಹೇಳಿದ್ದೇನು?
ಘಟನೆ ಬಗ್ಗೆ ವಿವರಿಸಿದ ಕ್ಯಾಬ್ ಚಾಲಕ ಅಹ್ಮದ್, ʼʼಲೀಸಾ ಮತ್ತು ಮ್ಯಾಥ್ಯೂ ಸಂಚರಿಸುತ್ತಿದ್ದ ಸ್ಕೂಟಿ ಹಿಂದಿನಿಂದ ಬಂದು ನನ್ನ ಕ್ಯಾಬ್ಗೆ ಟಚ್ ಆಗಿದೆ. ಹೀಗಾಗಿ ಗಾಡಿ ನಿಲ್ಲಿಸಿ ಈ ಬಗ್ಗೆ ಪ್ರಶ್ನಿಸಿದೆ. ನಾನು ಮಾತನಾಡುತ್ತಿದ್ದರೂ ಕ್ಯಾರೇ ಎನ್ನದೆ ಅವರು ಗಾಡಿ ಸ್ಟಾರ್ಟ್ ಮಾಡಿಕೊಂಡು ಹೋಗೋಕೆ ಯತ್ನಿಸಿದರು. ಕೂಡಲೇ ಸ್ಥಳೀಯರೆಲ್ಲ ಸೇರಿ ಅವರನ್ನು ಅಡ್ಡಗಟ್ಟಿದರು. ಯುವತಿಯರು ಚೈನ್ ಸುತ್ತಿಕೊಂಡು ನನ್ನ ಮುಖ, ಕೈ, ಬೆನ್ನಿನ ಮೇಲೆ ದಾಳಿ ನಡೆಸಿದರು. ಈ ವೇಳೆ ಸ್ಥಳೀಯರೆಲ್ಲ ನನ್ನ ಸಹಾಯಕ್ಕೆ ಧಾವಿಸಿದರು. ಆಮೇಲೆ ಬಂದ ಪೊಲೀಸರ ಜತೆಯೂ ಯುವತಿಯರು ಅಸಭ್ಯವಾಗಿ ವರ್ತಿಸಿದ್ದಾರೆʼʼ ಎಂದು ಹೇಳಿದ್ದಾರೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ.