ಹಳೆಯ ಮೀಸಲಾತಿ ಪದ್ಧತಿ ಜಾರಿಗೆ ಬಲಗೈ ಸಮುದಾಯಗಳ ಒಕ್ಕೂಟ ಆಗ್ರಹ; ಸಚಿವ ಎಂ.ಬಿ.ಪಾಟೀಲ್‌ಗೆ ಮನವಿ ಸಲ್ಲಿಕೆ
ಒಳಮೀಸಲಾತಿ ಇಲ್ಲದ ಹಳೆಯ ಮೀಸಲಾತಿ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಸ್ಥಳಕ್ಕೆ ತೆರಳಿ, ಒಕ್ಕೂಟದ ಮನವಿ ಸ್ವೀಕರಿಸಿ ಮಾತನಾಡಿದ್ದಾರೆ.
ಬಲಗೈ ಸಮುದಾಯಗಳ ಒಕ್ಕೂಟದಿಂದ ಸಚಿವ ಎಂ.ಬಿ.ಪಾಟೀಲ್‌ಗೆ ಮನವಿ ಪತ್ರ ಸಲ್ಲಿಕೆ. -
ಬೆಂಗಳೂರು: ಒಳ ಮೀಸಲಾತಿಗೆ (Internal reservation) ಸಂಬಂಧಿಸಿದಂತೆ ರಾಜ್ಯ ಸರಕಾರವು ಸಂಬಂಧಿಸಿದ ಎಲ್ಲಾ ಒಳಪಂಗಡಗಳ ಹಿತಾಸಕ್ತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಪ್ರತಿಯೊಂದು ಸಾಧಕಬಾಧಕಗಳನ್ನು ವಿಸ್ತೃತವಾಗಿ ಚರ್ಚಿಸಲಾಗುವುದು. ನಂತರ ಎಲ್ಲರಿಗೂ ನ್ಯಾಯ ಸಿಗುವಂತಹ ಸೂತ್ರವನ್ನು ರೂಪಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು.
ಒಳಮೀಸಲಾತಿ ಇಲ್ಲದ ಹಳೆಯ ಮೀಸಲಾತಿ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಬುಧವಾರ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಒಕ್ಕೂಟದ ಮನವಿ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಇದ್ದರು.
ರಾಜ್ಯದ ಕಾಂಗ್ರೆಸ್ ಸರಕಾರವು ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ. ಹೀಗಾಗಿ ನಾವು ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಯಾವುದೇ ಉಪಕ್ರಮವನ್ನು ಜಾರಿಗೆ ತರುವ ಮೊದಲು ಎಲ್ಲ ಮಗ್ಗುಲುಗಳಿಂದಲೂ ಚರ್ಚಿಸಬೇಕಾಗುತ್ತದೆ ಎಂದು ಅವರು ಪ್ರತಿಭಟನಾನಿರತರಿಗೆ ಆಶ್ವಾಸನೆ ನೀಡಿರು.
ಧರಣಿನಿರತರ ಪರವಾಗಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಸಮುದಾಯದ ಹಲವು ಸ್ವಾಮೀಜಿಗಳು ಮತ್ತು ಮುಖಂಡರು ಇದ್ದರು. ಸಚಿವರುಗಳ ಜತೆಯಲ್ಲಿ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೂಡ ಇದ್ದರು.
ಮುಖ್ಯಮಂತ್ರಿ ಪದವಿ ಗುದ್ದಾಟ ವಿಷಯಾಂತರಕ್ಕೆ ಒಳ ಮೀಸಲಾತಿ ಬಳಕೆ: ಧಮ್ಮ ಧೀವಿಗೆ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ್
ಬಲಗೈ ಸಮುದಾಯಗಳ ಒಕ್ಕೂಟದ ಬೇಡಿಕೆಗಳೇನು?
- ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರವು ತಿರಸ್ಕರಿಸುವುದು.
- ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿಅಂಶಗಳೊಂದಿಗೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡುವುದು, ವ್ಯತ್ಯಾಸಗಳು ಕಂಡುಬಂದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳುವುದು.
- ರಾಜ್ಯ ಸರ್ಕಾರವು ದಿನಾಂಕ: 03.09.2025ರಂದು ಯಾವುದೇ ಮಾನದಂಡವನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯುವುದು.
- ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆ ಸಂಖ್ಯೆ ಸಕಇ/08/ಎಸ್‌ಸ್ಎಲ್ ಪಿ/2024 (ಭಾಗ-5) ದಿನಾಂಕ: 08.10.2025ರ ನಿರ್ದೇಶನದಂತೆ ಜಾತಿ ಪ್ರಮಾಣ ಪತ್ರಗಳನ್ನು ಪ್ರವರ್ಗ - A, B ಮತ್ತು C ಎಂದು ವರ್ಗೀಕರಿಸಿರುವುದನ್ನು ಹಿಂಪಡೆದು ಮೂಲ ಜಾತಿಗಳನ್ನು ನಮೂದಿಸಿ, ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸೂಕ್ತ ಆದೇಶ ಹೊರಡಿಸುವುದು.
- ಪರಿಶಿಷ್ಟ ಜಾತಿ ಸಮುದಾಯಕ್ಕೆ ಈಗಾಗಲೇ ನೀಡಿರುವ ಕಾಯಂ ಜಾತಿ ಪ್ರಮಾಣ ಪತ್ರಗಳನ್ನು ಹೊಸ ಜಾತಿ ಪ್ರಮಾಣ ಪತ್ರಗಳೊಂದಿಗೆ ಪರಿಗಣಿಸಲು ಸೂಕ್ತ ಆದೇಶ ಹೊರಡಿಸುವುದು.
- ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳನ್ನು ಬಲಗೈ ಗುಂಪಿನಲ್ಲಿ ಉದ್ಯೋಗ, ಶಿಕ್ಷಣ ಮತ್ತು ಇತರೆ ಸೌಲಭ್ಯ ಪಡೆಯಲು ಅಧಿಸೂಚನೆ ಹೊರಡಿಸುವುದು.
- ಚಿತ್ರದುರ್ಗ ಜಿಲ್ಲೆಯಲ್ಲಿ ಹೊಲೆಯ ಸಮುದಾಯ ಕೇವಲ 223 ಎಂದು ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯಲ್ಲಿ ದಾಖಲಿಸಿರುವುದನ್ನು ಮರು ಪರಿಶೀಲಿಸಿ ಉದ್ದೇಶ ಪೂರ್ವಕವಾಗಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿರುವ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡುವುದು.