Dr N Someshwara Column: ನ್ಯೂಗಿನಿಯ ನೂಂಬಾ ನನಗಂತೂ ಬೇಕೇ ಬೇಕು. ನಿಮಗೆ ?!
ಮಾನವಶಾಸ್ತ್ರಜ್ಞರು ನೂಂಬಾವನ್ನು ಗುಟುಕು ಗುಟುಕಾಗಿ ಚಪ್ಪರಿಸಿ ಕುಡಿದರು. ಕುಡಿಯು ತ್ತಿರುವಂತೆ ದಣಿವು ಮರೆಯಾಯಿತು. ನವ ಚೈತನ್ಯವು ಮೂಡಿತು. ಹೊಸ ಚುರುಕಿನೊಡನೆ ಉತ್ಸಾಹವೂ ಮೂಡಿತು. ಈ ಪಾನೀಯ ಅವರಿಗೆ ಅದ್ಭುತವಾಗಿ ಕಂಡಿತು. ಮರುದಿವಸ ಪಾನೀಯ ಕುಡಿದು ಕಾಡಿನೊಳಗೆ ಹೊರಟರು.
-
ಹಿಂದಿರುಗಿ ನೋಡಿದಾಗ
ಮಾನವ ಶಾಸ್ತ್ರಜ್ಞರು ಹಲವು ವರ್ಷಗಳ ಹಿಂದೆ ನ್ಯೂಗಿನಿಯಲ್ಲಿರುವ ಸಿಪ್‌ಸೆಪ್ ಬುಡಕಟ್ಟಿ ನವರನ್ನು ಭೇಟಿಯಾಗಲು ಹೋದರು. ಆ ಜನರು ತಮ್ಮಲ್ಲಿಗೆ ಬಂದ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕುಡಿಯಲು ಅವರಿಗೆ ‘ನೂಂಬಾ’ ಎಂಬ ಪಾನೀಯವನ್ನು ನೀಡಿದರು. ಈ ಪಾನೀಯ ಸ್ವಲ್ಪ ಕಹಿಯಾಗಿತ್ತು. ಆದರೆ ರುಚಿರುಚಿಯಾಗಿತ್ತು. ಈ ಪಾನೀಯವನ್ನು ದೇವರು ತಮಗಾಗಿ ಕರುಣಿಸಿದ್ದಾರೆಂದೂ, ಇದನ್ನು ಕುಡಿದವರು ಆರೋಗ್ಯವಂತರೂ ಹಾಗೂ ಶಕ್ತಿಶಾಲಿಗಳಾಗಿಯೂ ಇರುತ್ತಾರೆಂದೂ ಬುಡಕಟ್ಟಿನವರು ವಿವರಿಸಿದರು.
ಮಾನವಶಾಸ್ತ್ರಜ್ಞರು ನೂಂಬಾವನ್ನು ಗುಟುಕು ಗುಟುಕಾಗಿ ಚಪ್ಪರಿಸಿ ಕುಡಿದರು. ಕುಡಿಯು ತ್ತಿರುವಂತೆ ದಣಿವು ಮರೆಯಾಯಿತು. ನವ ಚೈತನ್ಯವು ಮೂಡಿತು. ಹೊಸ ಚುರುಕಿನೊಡನೆ ಉತ್ಸಾಹವೂ ಮೂಡಿತು. ಈ ಪಾನೀಯ ಅವರಿಗೆ ಅದ್ಭುತವಾಗಿ ಕಂಡಿತು. ಮರುದಿವಸ ಪಾನೀಯವನ್ನು ಕುಡಿದು ಕಾಡಿನೊಳಗೆ ಹೊರಟರು.
ಅವರು ದಣಿವಿಲ್ಲದೆ ನಡೆಯಲಾರಂಭಿಸಿದರು, ಓಡಲಾರಂಭಿಸಿದರು. ಬೆಟ್ಟ ಗುಡ್ಡ ಹತ್ತಿ ಇಳಿಯಲಾರಂಭಿಸಿದರು. ಅವರಿಗೆ ಸುಸ್ತಾಗಲಿಲ್ಲ. ಈ ಶಾಸ್ತ್ರಜ್ಞರ ಗುಂಪಿನಲ್ಲಿ ಒಬ್ಬಾಕೆಗೆ ಅಸ್ತಮವಿತ್ತು. ಈ ಪಾನೀಯವನ್ನು ಸೇವಿಸುತ್ತಿರುವಂತೆ ತನ್ನ ಅಸ್ತಮದ ಲಕ್ಷಣಗಳು ಕಡಿಮೆಯಾಗುತ್ತಿವೆ ಎಂದು ಆಕೆ ಹೇಳಿದಳು.
ನೂಂಬಾ ಎರಡು ತೊಂದರೆಗಳನ್ನು ಉಂಟು ಮಾಡುತ್ತಿತ್ತು. ಮೊದಲನೆಯದು ರಾತ್ರಿ ನೂಂಬಾವನ್ನು ಸೇವಿಸಿದರೆ ಅವರಿಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಎರಡನೆಯದು ಒಂದು ದಿವಸ ನೂಂಬಾವನ್ನು ಸೇವಿಸಲಿಲ್ಲವೆಂದರೆ ಮರುದಿವಸ ತಲೆನೋವು ಬರುತ್ತಿತ್ತು. ಮಾನವ ಶಾಸ್ತ್ರಜ್ಞರು ನೂಂಬಾದ ಈ ಎರಡು ಅನನುಕೂಲತೆಗಳನ್ನು ಅಷ್ಟಾಗಿ ಲೆಕ್ಕಿಸ ಲಿಲ್ಲ. ಅವರಿಗೆ ನೂಂಬಾ ತುಂಬಾ ಹಿಡಿಸಿಬಿಟ್ಟಿತ್ತು!
ಇದನ್ನೂ ಓದಿ: Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !
ನ್ಯೂಗಿನಿಯಿಂದ ಹಿಂದಿರುಗುವಾಗ ಒಂದಷ್ಟು ನೂಂಬಾವನ್ನು ತೆಗೆದುಕೊಂಡು ಬಂದರು. ವಿಶ್ವವಿದ್ಯಾಲಯದಲ್ಲಿ ತಮ್ಮ ಸಹೋದ್ಯೋಗಿ ಗಳಿಗೆ ಕುಡಿಯಲು ಕೊಟ್ಟರು. ನೂಂಬಾ ಅವರಿಗೆಲ್ಲ ತುಂಬಾ ಇಷ್ಟವಾಗಿಬಿಟ್ಟಿತು. ನೂಂಬಾಸವಿದ ಕೆಲವು ಸಂಶೋಧಕರು ನೂಂಬಾ ಮೂಲಿಕೆಯ ಗುಣಾವಗುಣಗಳ ಸಮಗ್ರ ಸಂಶೋಧನೆಯನ್ನು ಮಾಡಬಯಸಿ ದರು.
ಮಾನವಶಾಸ್ತ್ರಜ್ಞರು ತುಂಬಾ ಸಂತೋಷದಿಂದ ನೂಂಬಾವನ್ನು ಸಂಶೋಧಕರಿಗೆ ನೀಡಿದರು. ಸಂಶೋಧಕರು ಈ ನೂಂಬಾವನ್ನು ಗಂಭೀರವಾಗಿ ಪರಿಗಣಿಸಿ ಪ್ರಯೋಗ ಗಳನ್ನು ಆರಂಭಿಸಿದರು. ಅವರ ಮನಕದಡುವಂಥ ಫಲಿತಾಂಶಗಳು ಒಂದೊಂದಾಗಿ ಬರಲಾರಂಭಿಸಿದವು.
? ನೂಂಬಾ ಅತ್ಯುತ್ತಮ ದರ್ಜೆಯ ಚಟ ವಸ್ತುವಾಗಿತ್ತು. ಜನರು ಇದಕ್ಕೆ ದಾಸರಾಗಬಲ್ಲವ ರಾಗಿದ್ದರು. ಇದನ್ನು ಸತತವಾಗಿ ಉಪಯೋಗಿಸುವವರು ಕಾಲಕ್ರಮೇಣ ತಾಳಿಕೆಯನ್ನು (ಟಾಲರೆನ್ಸ್) ಬೆಳೆಸಿಕೊಳ್ಳುತ್ತಿದ್ದರು. ಅಂದರೆ ಆರಂಭದಲ್ಲಿ ಒಂದು ಲೋಟ ನೂಂಬಾ ನೀಡುವ ಚೈತನ್ಯವು ದಿನಕಳೆದಂತೆ ಎರಡು ಲೋಟ ಸೇವಿಸಿದರೆ ಮಾತ್ರ ದೊರೆಯುತ್ತಿತ್ತು. ಇಲ್ಲವೇ ನೂಂಬಾವನ್ನು ದುಪ್ಪಟ್ಟು ಪ್ರಬಲಗೊಳಿಸಿ ಸೇವಿಸಬೇಕಾಗಿತ್ತು.
? ಒಂದು ದಿವಸ ನೂಂಬಾ ಸೇವನೆಯನ್ನು ತಪ್ಪಿಸಿದರೆ, ಮರುದಿವಸ ತಲೆನೋವು ಬರು ತ್ತಿತ್ತು. ಇದು ಹಲವು ಪ್ರತ್ಯಾಹಾರ ಲಕ್ಷಣಗಳಲ್ಲಿ (ವಿತ್‌ಡ್ರಾವಲ್ ಸಿಂಪ್ಟಮ್ - ನೂಂಬಾ ಸೇವನೆಯನ್ನು ಹಠಾತ್ ನಿಲ್ಲಿಸುವುದರಿಂದ ಕಂಡು ಬರುವಂಥವು) ಒಂದಾಗಿತ್ತು. ತಲೆನೋವು ಮಾತ್ರವಲ್ಲದೆ ಮಲ ಬದ್ಧತೆ, ನಿದ್ರಾಹೀನತೆ ಹಾಗೂ ಇತರ ಚಟ ವಸ್ತುಗಳ ಸೇವನಾ ಬಯಕೆ ಕಂಡು ಬರುತ್ತಿತ್ತು.
? ನೂಂಬಾ ಉತ್ತೇಜಕ (ಸ್ಟಿಮ್ಯುಲೆಂಟ್) ಗುಣವನ್ನು ಹೊಂದಿತ್ತು. ಇದು ನಿದ್ರೆಯನ್ನು ಕೆಡಿ ಸುತ್ತಿತ್ತು ಎಂಬುದನ್ನು ಮಾನವ ಶಾಸ್ತ್ರಜ್ಞರು ಗಮನಿಸಿದ್ದರಲ್ಲವೆ! ಅದರ ಜತೆಗೆ ಆತಂಕ (ಆಂಕ್ಸೈಟಿ), ಕಿರಿಕಿರಿ (ಇರಿಟಬಿಲಿಟಿ), ರಕ್ತ ಹೀನತೆ, ಭೇದಿ, ಎದೆ ಉರಿ, ಹೊಟ್ಟೆ ಉರಿ, ಸ್ನಾಯು ಬಿಗಿತ ಮುಂತಾದ ಲಕ್ಷಣಗಳನ್ನು ತೋರುತ್ತಿತ್ತು. ಕೆಲವರಲ್ಲಿ ಕ್ರೋಧ ತಡೆ ಹಿಡಿಯುವ ಸಾಮರ್ಥ್ಯವನ್ನು ಕಡಿಮೆಗೊಳಿಸಿ ಸಿಡುಕುವಂತೆ ಮಾಡುತ್ತಿತ್ತು.
? ನೂಂಬಾ ಮತ್ತೊಂದು ಗಂಭೀರ ಅವಗುಣವನ್ನು ಹೊಂದಿತ್ತು. ಪ್ರತಿದಿನ 5 ಲೋಟ ನೂಂಬಾ ಕುಡಿಯುತ್ತಿದ್ದರೆ (ಮಾನವ ಶಾಸ್ತ್ರಜ್ಞರು ದಿನವೂ 5 ಲೋಟ ಕುಡಿಯುತ್ತಿದ್ದರು) ಅವರ ಕೊಲೆಸ್ಟರಾಲ್ ಹಾಗೂ ರಕ್ತದೊತ್ತಡ ಏರುತ್ತಿತ್ತು. ಹೃದಯಾಘಾತವಾಗುವ ಸಾಧ್ಯತೆ ದುಪ್ಪಟ್ಟಾಗುತ್ತಿತ್ತು.
? ಕೆಲವು ಅಧ್ಯಯನಗಳನ್ವಯ, ನೂಂಬಾ ಮಕ್ಕಳನ್ನು ಹೆರುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಗರ್ಭಕಟ್ಟಿದ ಪ್ರಾಣಿಗಳಿಗೆ ನೂಂಬಾ ನೀಡಿದಾಗ, ಅವುಗಳಿಗೆ ಹುಟ್ಟಿದ ಮರಿಗಳು ಅನೇಕ ಜನ್ಮದತ್ತ ವೈಕಲ್ಯಗಳನ್ನು ಹೊಂದಿದ್ದವು.
? ನೂಂಬಾವನ್ನು ಸತತವಾಗಿ ಸೇವಿಸುತ್ತಿದ್ದರೆ, ಅದು ಅರ್ಬುದ ಉದ್ಭವಕ್ಕೆ ಕಾರಣವಾಗ ಬಹುದೆಂಬ ಗುಮಾನಿಯೂ ಬಲವಾಯಿತು.
ನಿಮಗೆ ನೂಂಬಾ ಬೇಕೆ?: ನೂಂಬಾ ಪಾನೀಯವನ್ನು ತಂದುಕೊಟ್ಟರೆ, ಅದನ್ನು ನೀವು ಕುಡಿಯುವಿರಾ? ನೂಂಬಾ ಕುಡಿಯುವುದರಿಂದ ಚುರುಕುತನ, ಉಲ್ಲಾಸ, ಶಕ್ತಿ ಎಲ್ಲ ಬರುತ್ತದೆ. ಆದರೆ ದೀರ್ಘಕಾಲ ಸೇವಿಸಿದರೆ ಚಟದೊಂದಿಗೆ ನಿದ್ರಾಹೀನತೆ, ಎದೆ ಉರಿ, ಬೇಧಿ, ಅಧಿಕ ರಕ್ತ ದೊತ್ತಡ, ಹೃದಯಾಘಾತಗಳಾಗುವ ಸಾಧ್ಯತೆಯಿರುತ್ತದೆ. ಮಕ್ಕಳನ್ನು ಹೆರುವ ಸಾಮರ್ಥ್ಯ ದೋಷಪೂರಿತವಾಗಿ ಜನ್ಮದತ್ತ ವೈಕಲ್ಯಗಳನ್ನು ಹೊಂದಿರುವ ಮಕ್ಕಳು ನಿಮಗೆ ಹುಟ್ಟಬಹುದು!
ಏನು ಹೇಳುತ್ತೀರಿ ?: ಬೇಡವೇ ಬೇಡ ಈ ನೂಂಬಾ ಎನ್ನುತ್ತೀರ? ಹಾಗಿದ್ದ ಮೇಲೆ ಕಾಫಿ ಕುಡಿಯುವುದನ್ನು ನಿಲ್ಲಿಸಿಬಿಡಿ. ‘ಹಾ! ಏನೆಂದಿರಿ?’ ಎನ್ನಬೇಡಿ. ಹೌದು. ಕಾಫಿ ಕುಡಿಯುವು ದನ್ನು ಇಂದಿನಿಂದಲೇ ನಿಲ್ಲಿಸಿಬಿಡಿ. ಏಕೆಂದರೆ ನಾವು ನೀವು ಯಾವುದನ್ನು ‘ಕಾಫಿ’ ಎಂದು ಕರೆಯುತ್ತೇವೆಯೋ, ಅದನ್ನು ನ್ಯೂಗಿನಿ ಸಪ್‌ಸಿಪ್ ಬುಡಕಟ್ಟಿನವರು ನೂಂಬಾ ಎಂದು ಕರೆಯುತ್ತಾರೆ.
ಹಾಂ !
ನೂಂಬಾ ... ಅಲ್ಲ ಅಲ್ಲ ... ಈ ಕಾಫಿ ಇಷ್ಟೊಂದು ಅವಗುಣಗಳನ್ನು ಹೊಂದಿರುವ ಅಪಾಯಕಾರೀ ಪಾನೀಯವೇ? ಬನ್ನಿ, ಕಾಫಿಯ ನಿಜರೂಪವನ್ನು ತಿಳಿಯಲು ಪ್ರಯತ್ನಿ ಸೋಣ.
ಕಾಫಿಗಿಡವು ‘ರುಬಿಯೇಸಿ’ ಎಂಬ ಸಸ್ಯ ವಂಶಕ್ಕೆ ಸೇರಿದೆ. ಈ ವಂಶದ ಇತರ ಗಿಡಗಳಲ್ಲಿ ಗಾರ್ಡೀನಿಯ, ಇಪಿಕಾಕ್ ಮತ್ತು ಸಿಂಕೋನ ಮುಖ್ಯವಾದುವು. ಈಗ ಕಾಫಿಯಲ್ಲಿ ಮೂರು ಪ್ರಭೇದಗಳು ಖ್ಯಾತವಾಗಿವೆ. ಅವೇ ಕಾ- ಅರೇಬಿಕ, ಕಾ- ಲಿಬೆರಿಕಾ ಮತ್ತು ಕಾ- ರೋಬಸ್ಟ.
ಕಾಫಿಯ ಗುಣಾವಗುಣಗಳಿಗೆ ಕಾರಣವಾದ ರಾಸಾಯನಿಕವೇ ಕೆಫೀನ್. ಇದು ಕಾಫಿಯಲ್ಲ ಲ್ಲದೆ ಕೋಕೋ, ಟೀ, ಕೋಲಾ ಮುಂತಾದವುಗಳಲ್ಲೂ ಇರುತ್ತದೆ. ಜತೆಗೆ ನೆಗಡಿ, ಫ್ಲೂ, ತಲೆನೋವಿಗೆ ನೀಡುವ ಕೆಲವು ಗುಳಿಗೆಗಳು, ನಿದ್ರಾ ನಿಯಂತ್ರಕ ಔಷಧ, ಋತುನೋವು ನಿವಾರಕ ಗುಳಿಗೆಗಳಲ್ಲಿಯೂ ಕೆಫೀನ್ ಇರುತ್ತದೆ.
ಕಾಫಿಯಲ್ಲಿರುವ ಕೆಫೀನ್ ಪ್ರಮಾಣ, ಕಾಫಿಯನ್ನು ಹೇಗೆ ಮಾಡುತ್ತೇವೆ ಎಂಬುದನ್ನು ಆಧರಿಸುತ್ತದೆ. ಒಂದು ಕಪ್ ಇನ್‌ಸ್ಟಂಟ್ ಕಾಫಿಯಲ್ಲಿ ಸುಮಾರು 65 ಮಿ. ಗ್ರಾಂ ಕೆಫೀನ್ ಇರುತ್ತದೆ. ಫಿಲ್ಟರ್ ಕಾಫಿಯಲ್ಲಿ 100ರಿಂದ 150 ಮಿ. ಗ್ರಾಂ ಕೆಫೀನ್ ಇರುತ್ತದೆ.
ಕಾಫಿ ಕೇವಲ ನಮ್ಮ ಸಂಸ್ಕೃತಿಯಲ್ಲಿ ಮಾತ್ರವಲ್ಲ, ಜಗತ್ತಿನ ಬಹುಪಾಲು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಮಡಿಯಲ್ಲಿ ಇರುವವರಿಗೂ ಕಾಫಿ ದೋಷವಲ್ಲ! ಅಷ್ಟು ಜನಪ್ರಿಯವಾಗಿ ಬಿಟ್ಟಿದೆ! ಕಾಫಿ ಸೇವನೆಯಿಂದ ನಮಗಾಗುವ ಉಪಯೋಗಗಳನ್ನು ಈ ಕೆಳಕಂಡಂತೆ ಪಟ್ಟಿಮಾಡಬಹುದು:
? ಇದೊಂದು ಕೇಂದ್ರ ನರಮಂಡಲದ ಉತ್ತೇಜಕ. ದೀರ್ಘಕಾಲ ವಾಹನ ನಡೆಸಬೇಕಾದಾಗ ಕಾಫಿ ಸೇವನೆ ಒಳ್ಳೆಯದು. ಇದು ನಿದ್ರಿಸದಂತೆ ತಡೆಯುತ್ತದೆ. ಏಕಾಗ್ರತೆಗೆ ನೆರವಾಗುತ್ತದೆ. ದಣಿವಾಗುವುದಿಲ್ಲ.
? ನೆಗಡಿ ಮಾತ್ರೆಗಳಲ್ಲಿ ಸಾಮಾನ್ಯವಾಗಿ ‘ಹಿಸ್ಟಮಿನ್‌ರೋಧಕ’ ಔಷಧವಿರುತ್ತದೆ. ಈ ಔಷಧದ ಪ್ರಮುಖ ಪಾರ್ಶ್ವ ಪರಿಣಾಮ ನಿದ್ರೆ. ಹಾಗಾಗಿ ನೆಗಡಿ ಔಷಧಗಳಲ್ಲಿನ ಕೆಫೀನ್, ಹಿಸ್ಟಮಿನ್‌ರೋಧಕ ಔಷಧದ ಪಾರ್ಶ್ವ ಪರಿಣಾಮವಾದ ನಿದ್ರೆಯನ್ನು ತಡೆಗಟ್ಟಲು ನೆರವಾಗುತ್ತದೆ.
? ಕಾಫಿ ದೈಹಿಕ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಕ್ರೀಡಾಸ್ಪರ್ಧಿಗಳು ಕಾಫಿ ಸೇವಿಸಿ ಉತ್ತಮ ಪ್ರದರ್ಶನವನ್ನು ನೀಡಬಹುದು. ಆದರೆ ಎಚ್ಚರಿಕೆ! ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾ ಕಮಿಟಿಯು ಕ್ರೀಡಾ ಸ್ಪರ್ಧಿಗಳು ಸೇವಿಸಬಾರದು ಎಂದು ನಿಷೇಧಿಸಿರುವ ಔಷಧಗಳ ಪಟ್ಟಿಯಲ್ಲಿ ಕಾಫಿಯೂ ಸೇರಿದೆ. ಸ್ಪರ್ಧಿಯ ಮೂತ್ರದಲ್ಲಿ ನಿಗದಿತ ಪ್ರಮಾಣ ಕ್ಕಿಂತ ಹೆಚ್ಚಿನ ಕೆಫೀನ್ ಕಂಡುಬಂದರೆ ಅವನು ಪದಕವನ್ನು ಕಳೆದು ಕೊಳ್ಳಬಹುದು. ಮುಂದೆ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಬಹಿಷ್ಕಾರಕ್ಕೂ ಒಳಗಾಗಬಹುದು.
? ಕಾಫಿ ಸೇವನೆಯು ಅಸ್ತಮದ ಆಕ್ರಮಣವನ್ನು ಮಂದಗೊಳಿಸಬಲ್ಲದು, ತಡೆಗಟ್ಟಲೂ ಬಲ್ಲದು. ಕೆಫೀನ್ ಶ್ವಾಸನಾಳವನ್ನು ವಿಸ್ತರಿಸುತ್ತದೆ. ಹಾಗಾಗಿ ಗಾಳಿ ಸರಾಗವಾಗಿ ಶ್ವಾಸ ಕೋಶಗಳಲ್ಲಿ ಚಲಿಸಬಲ್ಲದು. ಅಮೆರಿಕ ಮತ್ತು ಯುರೋಪಿನ ನಾಟಿವೈದ್ಯರು ಅಸ್ತಮ ತಡೆಗಟ್ಟಲು ಕಾಫಿ ಕಷಾಯವನ್ನು ನೀಡುತ್ತಿದ್ದರು. ಇದನ್ನು ಇಂದಿನ ವೈದ್ಯ ವಿಜ್ಞಾನವೂ ಬೆಂಬಲಿಸುತ್ತದೆ.
? ಕಾಫಿಯು ಕೆಲವರಲ್ಲಿ ದೇಹದ ತೂಕವನ್ನು ಇಳಿಸುತ್ತದೆ. ಕಾಫಿ ಸೇವನೆಯು ಇವರ ಮೂಲ ಉಪಚಯ ವೇಗವನ್ನು (ಬೇಸಿಕ್ ಮೆಟಬಾಲಿಕ್ ರೇಟ್) ಶೇ.4ರಷ್ಟು ಹೆಚ್ಚಿಸ ಬಲ್ಲದು. ಇದರ ಫಲವಾಗಿ ಇವರ ದೇಹದ ಬೊಜ್ಜು ಸ್ವಲ್ಪ ಕರಗುತ್ತದೆ.
? ಅಂತಾರಾಷ್ಟ್ರೀಯ ಪ್ರಯಾಣಿಕರ ಒಂದು ಪ್ರಮುಖ ಸಮಸ್ಯೆಯೆಂದರೆ ಜೆಟ್ ದಣಿವು (ಜೆಟ್ ಲ್ಯಾಗ್). ಇವರು ದಿನವೊಂದರಲ್ಲಿ ಹಲವು ಕಾಲ, ಪ್ರದೇಶಗಳನ್ನು ಕ್ರಮಿಸ ಬೇಕಾಗುತ್ತದೆ. ಹಾಗಾಗಿ ಇವರಲ್ಲಿ ನಿದ್ರಾಹೀನತೆ, ಸುಸ್ತು, ಕಾಲದೇಶಗಳ ಪರಿವೆಯಿಲ್ಲದ ಭ್ರಾಂತ ಸ್ಥಿತಿಯು ತಲೆದೋರುತ್ತದೆ. ಇದನ್ನು ತಡೆಗಟ್ಟಲು ಕಾಫಿಯನ್ನು ಸೇವಿಸಬೇಕು. ಕೆಲವು ವಿಮಾನಗಳಲ್ಲಿ ನೀವು ಪಶ್ಚಿಮಾಭಿಮುಖವಾಗಿ ಪಯಣಿಸುತ್ತಿದ್ದರೆ ಕಾಫಿಯನ್ನು ಬೆಳಗಿನಜಾವ ಸೇವಿಸಬೇಕೆಂದು, ಪೂರ್ವಾಭಿಮುಖವಾಗಿ ಹೋಗುತ್ತಿದ್ದರೆ ಮಧ್ಯಾಹ್ನದ ಹೊತ್ತು ಅಥವಾ ಸಂಜೆಯ ಹೊತ್ತು ಸೇವಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ.
ಕಾಫಿ ಸೇವನೆಯಿಂದ ನಮಗೆ ಸಂಭವಿಸಬಹುದಾದ ತೊಂದರೆಗಳು ಸಾಕಷ್ಟಿವೆ. ಈ ಬಗ್ಗೆ ಅನೇಕ ಸಂಶೋಧನೆಗಳೂ, ಅಧ್ಯಯನಗಳೂ ನಡೆದಿವೆ. ಇಂದಿಗೂ ನಡೆಯುತ್ತಿವೆ. ಅವು ಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು:
? ಕಾಫಿ ಸೇವನೆಯು ಜಠರಾಮ್ಲದ ಉತ್ಪಾದನೆಯನ್ನು ತೀವ್ರಗೊಳಿಸುತ್ತದೆ. ಹಾಗಾಗಿ ಜಠರ ಅಥವಾ ಕರುಳಿನಲ್ಲಿ ಹುಣ್ಣುಗಳನ್ನು ಹೊಂದಿರುವವರು ಕಾಫಿ ಸೇವನೆ ನಿಲ್ಲಿಸಬೇಕು ಅಥವಾ ಮಿತಿಗೊಳಿಸಬೇಕು.
? ಮೂರು ಲೋಟ ಕಾಫಿ ಸೇವನೆಯು ರಕ್ತದೊತ್ತಡವನ್ನು ಶೇ.15ರಷ್ಟು ಹೆಚ್ಚಿಸುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೃದಯಾಘಾತವಾಗಿದ್ದರೆ ಅಥವಾ ಲಕ್ವ ಹೊಡೆ ದಿದ್ದರೆ ನೀವು ಹುಷಾರಾಗಬೇಕು. ಕಾಫಿಯನ್ನು ಸೇವಿಸಬಹುದೆ? ಎಷ್ಟರವರೆಗೆ ಸೇವಿಸ ಬಹುದು? ಎಂದು ಒಮ್ಮೆ ನಿಮ್ಮ ವೈದ್ಯರಲ್ಲಿ ವಿಚಾರಿಸುವುದು ಒಳ್ಳೆಯದು.
? ನೀವು ಪ್ರತಿದಿನ ಬೆಳಗ್ಗೆ ಒಂದೆರಡು ಕಪ್ ಕಾಫಿ ಕುಡಿಯುತ್ತಿದ್ದರೆ ನಿಮ್ಮ ಕೊಲೆಸ್ಟರಾಲ್ ಪ್ರಮಾಣವು ಶೇ.5ರಷ್ಟು ಹೆಚ್ಚಬಹುದು. ದಿನಕ್ಕೆ 5 ರಿಂದ 10 ಕಪ್ ಕುಡಿಯುತ್ತಿದ್ದರೆ ಈ ಪ್ರಮಾಣವು ಶೇ.10ರಷ್ಟನ್ನು ಮೀರಬಹುದು.
ಕುದಿಸಿದ ಕಾಫಿ ಮಾತ್ರ ಕೊಲೆಸ್ಟರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂಬಂಶವನ್ನು ಇತ್ತೀಚಿನ ಸಂಶೋಧನೆಗಳು ಹೊರಗೆಡವಿದೆ. ಇನ್‌ಸ್ಟಂಟ್ ಕಾಫಿ ಅಥವಾ ಫಿಲ್ಟರ್ ಕಾಫಿ ಸೇವನೆ ಕೊಲೆಸ್ಟರಾನ್ನು ಹೆಚ್ಚಿಸುವುದಿಲ್ಲವಂತೆ. ಈ ವೈರುಧ್ಯಕ್ಕೆ ನಿಖರವಾದ ಕಾರಣ ಮಾತ್ರ ವಿಜ್ಞಾನಿಗಳಿಗೆ ತಿಳಿದಿಲ್ಲ.
ನಿಮ್ಮ ಕೊಲೆಸ್ಟರಾಲ್ ಪ್ರಮಾಣ ಆಧಿಕವಾಗಿದ್ದು, ಹೃದ್ರೋಗ ಅಥವಾ ಲಕ್ವಕ್ಕೆ ಎಡೆಗೊ ಡುವ ಸಾಧ್ಯತೆಯಿದ್ದಲ್ಲಿ ಕಾಫಿ ಸೇವನೆಯ ಬಗ್ಗೆ ನಿಮ್ಮ ವೈದ್ಯರಲ್ಲಿ ಒಮ್ಮೆ ವಿಚಾರಿಸಿ. ಕಾಫಿ ಸೇವನೆಯನ್ನು ಬಿಡಲು ಅಸಾಧ್ಯವಾದಲ್ಲಿ ಇನ್‌ಸ್ಟಂಟ್ ಅಥವಾ ಫಿಲ್ಟರ್ ಕಾಫಿಯನ್ನು ಮಾತ್ರ ಸೇವಿಸಿ.
? ಕಾಫಿ ಸೇವನೆಯು ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್‌ಗಳಿಗೆ ಕಾರಣವಾಗುವುದರ ಜತೆಗೆ ಹೃದಯಾಘಾತ ಸಾಧ್ಯತೆಯನ್ನು ದುಪ್ಪಟ್ಟುಗೊಳಿಸಿದರೆ, 10 ಕಪ್ ಸೇವನೆ ಮುಪ್ಪಟ್ಟುಗೊಳಿಸುತ್ತದೆ ಎಂದು ಹೇಳುತ್ತದೆ ‘ಅಮೆರಿಕನ್ ಜರ್ನಲ್ ಆಫ್ ಎಪಿಡೆಮಿ ಯಾಲಜಿ’ಯ ಒಂದು ಲೇಖನ.
? ಜನ್ಮದತ್ತ ವೈಕಲ್ಯಗಳಿಗೆ ಕೆಫೀನ್ ಕಾರಣವಾಗಬಹುದು ಎಂಬುದನ್ನು ಪ್ರಾಣಿಗಳ ಮೇಲೆ ನಡೆದಿರುವ ಅನೇಕ ಅಧ್ಯಯನಗಳು ತೋರಿಸಿವೆ. ಒಬ್ಬ ಕಾಫಿ ಭಕ್ತ ಎಷ್ಟು ಕೆಫೀನನ್ನು ಕಾಫಿಯ ಮೂಲಕ ಸೇವಿಸಬಹುದೋ, ಅದಕ್ಕಿಂತಲೂ ಹಲವು ಪಟ್ಟು ಹೆಚ್ಚಿನ ಕೆಫೀನನ್ನು ಈ ಪ್ರಾಣಿಗಳಿಗೆ ನೀಡಲಾಗಿತ್ತು. ಹಾಗಾಗಿ ಪ್ರಾಣಿಗಳಲ್ಲಿ ಕಂಡುಬಂದ ಫಲಿತಾಂಶವನ್ನು ಮನುಷ್ಯರಿಗೆ ಅನ್ವಯಿಸುವುದು ತರವಲ್ಲ. ಆದರೂ ಸಹ ಗರ್ಭವತಿಯರು ಕಾಫಿ ಸೇವನೆಯ ಬಗ್ಗೆ ತುಸು ಎಚ್ಚರವಹಿಸುವುದು ಒಳ್ಳೆಯದು.
? ಕಾಫಿ ಸೇವನೆಯು ಸ್ತನಾರ್ಬುದ, ಮೂತ್ರಾಶಯಾರ್ಬುದ, ಅಂಡಾಶಯಾರ್ಬುದ, ಮಾಂಸಲಿಯಾರ್ಬುದ (ಪ್ಯಾಂಕ್ರಿಯಾಸ್ ಕ್ಯಾನ್ಸರ್) ಮತ್ತು ಶುಕ್ಲ ಗ್ರಂಥಿ ಅರ್ಬುದ (ಪ್ರಾಸ್ಟ್ರೇಟ್ ಕ್ಯಾನ್ಸರ್)ಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಈ ಹೇಳಿಕೆ ಆಧಾರರಹಿತವಾದದ್ದು ಎಂದು ಕೆಲವು ಅಧ್ಯಯನಗಳು ವಾದಿಸಿವೆ.
ಹಾಗಾಗಿ ಕಾಫಿ ಸೇವನೆಗೂ ಹಾಗೂ ಅರ್ಬುದೋದ್ಭವಕ್ಕೂ ಇರಬಹುದಾದ ನಂಟಿನ ಬಗ್ಗೆ ಸ್ಪಷ್ಟ ಚಿತ್ರ ಇನ್ನೂ ನಮಗೆ ದೊರೆಯಬೇಕಿದೆ. ಆದರೂ, ಕಾಫಿ ಬೀಜವನ್ನು ಹುರಿದಾಗ ಕೆಲವು ಕ್ಯಾನ್ಸರ್ ಕಾರಕಗಳು ರೂಪುಗೊಳ್ಳುತ್ತವೆ ಎಂದು ಭಾವಿಸಲಾಗಿದೆ. ಹಾಗಾಗಿ ಆನುವಂಶಿಕ ಕ್ಯಾನ್ಸರ್ ಹಿನ್ನೆಲೆಯನ್ನು ಹೊಂದಿರುವ ಜನರು ಕಾಫಿ ಸೇವನೆಯನ್ನು ಮಿತಗೊಳಿಸಬಹುದು.
? ಕಾಫಿ ಸೇವನೆಯು ಮಹಿಳೆಯರ ಸ್ತನಗಳಲ್ಲಿ ‘ನಾರಿ ನೀರುಚೀಲ’ಗಳನ್ನು (ಫೈಬ್ರೋಸಿಸ್ಟ್) ಉಂಟುಮಾಡಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಇದೊಂದು ಅಪಾಯ ರಹಿತ ನೀರುಗಡ್ಡೆ. ಆದರೆ ಸಾಕಷ್ಟು ಕಿರಿಕಿರಿಯನ್ನುಂಟುಮಾಡಬಹುದು. ನಿಮಗೆ ಅಂಥ ತೊಂದರೆಗಳಿದ್ದಲ್ಲಿ ಎಲ್ಲ ಕೆಫೀನ್ ಮೂಲಗಳನ್ನು ವರ್ಜಿಸಿ. ಅಂದರೆ ಕಾಫಿ, ಟೀ, ಕೋಕೋ, ಚಾಕಲೇಟ್, ಕೆಫೀನ್‌ಯುಕ್ತ ಪಾನೀಯ ಹಾಗೂ ಔಷಧಗಳನ್ನು ಸೇವಿಸಬೇಡಿ. ಕಿರಿಕಿರಿ ಕಡಿಮೆಯಾದರೆ, ಕೆಫೀನನ್ನು ಸದಾಕಾಲಕ್ಕೆ ನಿಲ್ಲಿಸಬಹುದು.
? ಕೆಫೀನ್, ಕಬ್ಬಿಣದ ಅಂಶದ ಹೀರಿಕೆಯನ್ನು ಏರುಪೇರು ಮಾಡುತ್ತದೆ. ಹಾಗಾಗಿ ಕಬ್ಬಿ ಣಾಂಶ ಕೊರತೆಯ ರಕ್ತಹೀನತೆಯನ್ನು ಹೊಂದಿರುವವರು ಅಥವಾ ಅನಿಯಂತ್ರಿತ ಮಾಸಿಕ ಋತುಧರ್ಮವನ್ನು ಹೊಂದಿರುವವರು ಕಾಫಿ ಸೇವನೆಯನ್ನು ನಿಲ್ಲಿಸುವು ದೊಳ್ಳೆಯದು.
? ದಿನಕ್ಕೆ ಒಂದು ಕಪ್ ಕಾಫಿ ಸೇವಿಸುವ ಮಹಿಳೆಯರಲ್ಲಿ ಗರ್ಭ ಕಟ್ಟುವ ಸಾಮರ್ಥ್ಯ ಅರ್ಧ ದಷ್ಟು ಕಡಿಮೆಯಾಗಬಹುದು ಎಂದು ‘ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎನ್ʼವೈರ್ನಮೆಂಟಲ್ ಹೆಲ್ತ್’ನ ಅಧ್ಯಯನ ತಿಳಿಸುತ್ತದೆ. ಹಾಗಾಗಿ ಗರ್ಭ ಧರಿಸ ಬಯಸುವ ಮಹಿಳೆಯರು ಹಾಗೂ ಗರ್ಭ ಧರಿಸುವಲ್ಲಿ ತೊಂದರೆಯಾಗಿರುವ ಮಹಿಳೆಯರು ಕಾಫಿ ಸೇವನೆಯನ್ನು ನಿಲ್ಲಿಸುವುದೊಳ್ಳೆಯದು.
ಕಾಫಿ ಸೇವನೆ ಗರ್ಭ ಕಟ್ಟುವುದನ್ನು ತಡೆಯುತ್ತದೆ ಎನ್ನುವುದಾದರೆ, ಅದನ್ನು ಸಂತಾನ ನಿಯಂತ್ರಕವಾಗಿ ಬಳಸಬಹುದೆ ಎಂದೇ ಹೇಳಬೇಕಾಗುತ್ತದೆ. ಕಾಫಿ ಸೇವನೆಯು ಗರ್ಭ ಕಟ್ಟುವ ಸಾಮರ್ಥ್ಯಕ್ಕೆ ಸ್ವಲ್ಪಮಟ್ಟಿಗೆ ಅಡ್ಡಿಯನ್ನು ಉಂಟು ಮಾಡುತ್ತದೆಯೇ ಹೊರತು ಅದನ್ನು ಪರಿಪೂರ್ಣ ತಡೆಗಟ್ಟುವುದಿಲ್ಲ. ಈಗ ಒಂದು ಪ್ರಶ್ನೆಯನ್ನು ಕೇಳಲೇಬೇಕಾಗುತ್ತದೆ.
ನಿಜಕ್ಕೂ ಕಾಫಿ ಸೇವನೆಯು ಸುರಕ್ಷಿತವೇ?
ಆರೋಗ್ಯವಾಗಿರುವ, ಗರ್ಭಿಣಿಯಲ್ಲದೆ, ಬಾಣಂತಿಯಲ್ಲದೆ, ಹೊಟ್ಟೆಹುಣ್ಣು, ಅತಿರಕ್ತ ದೊತ್ತಡ, ಸಕ್ಕರೆ ಕಾಯಿಲೆ, ಅತಿ ಕೊಲೆಸ್ಟ್ರಾಲ್, ಆತಂಕ, ಗರ್ಭಧಾರಣಾ ತೊಂದರೆಗಳು, ಹೃದಯರೋಗಗಳು ಇತ್ಯಾದಿಗಳನ್ನು ಹೊಂದಿದವರು ಕಾಫಿಯನ್ನು ಮಿತವಾಗಿ ಸೇವಿಸಿ ದರೆ, ಬಹುಶಃ ಅವರಿಗೆ ಕಾಫಿ ಸುರಕ್ಷಿತ ಪಾನೀಯವಾಗಬಲ್ಲದು. ಕಾಫಿಯನ್ನು ಎರಡು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡಬಾರದು. 65 ವರ್ಷ ಮೀರಿದವರಿಗೂ ಅಷ್ಟು ಒಳ್ಳೆಯದಲ್ಲ. ಕಾಫಿಯನ್ನು ಪಾನೀಯ ರೂಪದಲ್ಲಿ ದಿನಕ್ಕೆ ಮೂರು ಕಪ್‌ಗಳಷ್ಟು ಸೇವಿಸಬಹುದು.
ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಕಿರಿಕಿರಿ, ನಡುಕ, ಆತಂಕ, ನರ ಬೇನೆ (ಆಂಕ್ಸೈಟಿ ನ್ಯೂರೋಸಿಸ್), ನಿದ್ರಾಹೀನತೆ, ಹೃದಯಬಡಿತ ಹೆಚ್ಚಳ, ಬೇಧಿ, ಎದೆ ಉರಿ ಇತ್ಯಾದಿ ತೊಂದರೆಗಳು ಕಂಡುಬರಬಹುದು. ಕೆಫೀನನ್ನು ಔಷಧ ರೂಪದಲ್ಲಿ ಸೇವಿಸ ಬಯಸುವುದಾದರೆ ಅದಕ್ಕೆ ವೈದ್ಯರ ಮಾರ್ಗದರ್ಶನ ಅಗತ್ಯ!
ಕೊನೆಯ ಮಾತು: ನಿಮ್ಮ ಮನೆಯ ಮುಂದೆ ಸ್ಥಳವಿದ್ದರೆ ಒಂದೆರಡು ಕಾಫಿ ಗಿಡ ನೆಡಿ. ಇದರ ಬಿಳಿ ಬಿಳಿ ಹೂವುಗಳು ಬಲು ಸುಂದರ- ಆಕಷಕ, ಸುವಾಸನೆಯೂ ಆಹ್ಲಾದಕರ!