ಸಾಯಿ ಪಲ್ಲವಿ ಸಿನಿ ಪಯಣದ ಗೋಲ್ಡನ್ ಇಯರ್ ಇದು; ರಾಮಾಯಣದ ಬೆನ್ನಲ್ಲೇ ಕಲ್ಕಿ-2 ಚಿತ್ರಕ್ಕೂ ಎಂಟ್ರಿ!
Sai Pallavi Movies 2026: ನಟಿ ಸಾಯಿ ಪಲ್ಲವಿ ಅವರು ಈ ವರ್ಷ ಸಾಧನೆಯ ಶಿಖರ ಏರುವುದು ಖಚಿತವಾಗಿದೆ. ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿರುವ ಸಾಯಿ ಪಲ್ಲವಿ, ಈಗ 'ಕಲ್ಕಿ 2' ಸೀಕ್ವೆಲ್‌ನಲ್ಲಿ ದೀಪಿಕಾ ಪಡುಕೋಣೆ ಬದಲಿಗೆ ಸುಮತಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ಧನುಷ್ ನಿರ್ಮಾಣದ ಹೊಸ ಸಿನಿಮಾ ಹಾಗೂ ಆಮಿರ್ ಖಾನ್ ಪುತ್ರನ ಜೊತೆ ಬಾಲಿವುಡ್‌ಗೂ ಪದಾರ್ಪಣೆ ಮಾಡುತ್ತಿದೆ.
-
ನೈಜ ಅಭಿನಯಕ್ಕೆ ಹೆಸರಾಗಿರುವ ನಟಿ ಸಾಯಿ ಪಲ್ಲವಿ, ಗ್ಲಾಮರಸ್ ಪಾತ್ರಗಳಿಗಿಂತ ಗಟ್ಟಿ ಪಾತ್ರಗಳಿಗೆ ಆದ್ಯತೆ ನೀಡುವ ಮೂಲಕ ಫೇಮಸ್ ಆಗಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸುವ ಅವರು ಇದೀಗ ವೃತ್ತಿಜೀವನದಲ್ಲಿ ದೊಡ್ಡ ಎತ್ತರಕ್ಕೆ ಏರಿದ್ದಾರೆ. ತಮ್ಮ ಸಹಜ ಅಭಿನಯದ ಮೂಲಕ ಅವರು ಈಗಾಗಲೇ ಹಲವಾರು ಅತ್ಯುತ್ತಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿರುವ ಅವರು ಈ ವರ್ಷ ದೊಡ್ಡ ಸಾಧನೆ ಮಾಡಲಿದ್ದಾರೆ ಮತ್ತು ಸಿನಿಪ್ರಿಯರ ಕಣ್ಣು ಕೂಡ ಅವರ ಮೇಲಿದೆ.
ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸಾಯಿ ಪಲ್ಲವಿ
ಇಡೀ ಭಾರತವೇ ಕುತೂಹಲದಿಂದ ಕಾಯುತ್ತಿರುವ ಸಿನಿಮಾ ʻರಾಮಾಯಣʼ. ನಮಿತ್ ಮಲ್ಹೋತ್ರ ಮತ್ತು ಯಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ, ನಿತೀಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಸೀತಾ ಮಾತೆಯ ಪಾತ್ರ ಮಾಡುತ್ತಿರುವುದು ಗೊತ್ತೇ ಇದೆ. 2026ರಲ್ಲಿ ಈ ಸಿನಿಮಾ ತೆರೆಕಾಣುವುದರಿಂದ ಸಾಯಿ ಪಲ್ಲವಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅದರ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದ ಭಾಗವಾಗಿದ್ದಾರೆ ಈ ನಟಿ.
D55: ಶ್ರೀಲೀಲಾ ಬೆನ್ನಲ್ಲೇ ಧನುಷ್ ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ
ಕಲ್ಕಿ ಟೀಂ ಸೇರಿದ ಸಾಯಿ ಪಲ್ಲವಿ
ದೀಪಿಕಾ ಪಡುಕೋಣೆ ಅವರ ಬದಲಾಗಿ 'ಕಲ್ಕಿ 2' ಸೀಕ್ವೆಲ್‌ನಲ್ಲಿ 'ಸುಮತಿ' (Sum-80) ಪಾತ್ರಕ್ಕೆ ಸಾಯಿ ಪಲ್ಲವಿ ಅವರೇ ಅಂತಿಮವಾಗಿದ್ದಾರೆ ಎಂದು 'ಕಲ್ಕಿ' ಚಿತ್ರತಂಡದ ಆಪ್ತ ಮೂಲಗಳು ತಿಳಿಸಿವೆ. ಕಥೆಯು 'ಸುಮತಿ' ಪಾತ್ರದ ಸುತ್ತಲೇ ಸುತ್ತುವುದರಿಂದ, ಸೀಕ್ವೆಲ್‌ನಲ್ಲಿ ಈ ಪಾತ್ರವು ಉತ್ತಮ ಸ್ಕ್ರೀನ್ ಪ್ರೆಸೆನ್ಸ್ ಜೊತೆಗೆ ಹೆಚ್ಚು ಪರಿಣಾಮಕಾರಿಯಾಗಿರುವ ನಿರೀಕ್ಷೆಯಿದೆ. ಹಾಗಾಗಿ, ಸಾಯಿ ಪಲ್ಲವಿ ಈ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹೀಗೆ ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಿಂದ ಪ್ರೇರಿತವಾದ ಎರಡು ಪೌರಾಣಿಕ ಮತ್ತು ಫ್ಯಾಂಟಸಿ ಚಿತ್ರಗಳಲ್ಲಿ ನಟಿಸುವ ಜೀವಮಾನದ ಅವಕಾಶವನ್ನು ಪಡೆಯುವ ಮೂಲಕ ಅವರು ಭಾರತೀಯ ಚಿತ್ರರಂಗದಲ್ಲಿ ಅಪರೂಪದ ಸಾಧನೆ ಮಾಡಲು ಸಜ್ಜಾಗಿದ್ದಾರೆ ಸಾಯಿ ಪಲ್ಲವಿ.
ಧನುಷ್ ಜೊತೆ ಮತ್ತೆ ನಟನೆ
ಇದರ ಜೊತೆಗೆ ನಟ ಧನುಷ್ ಅವರ ಜೊತೆಗೆ ಹೊಸ ಸಿನಿಮಾಕ್ಕೂ ಸಾಯಿ ಪಲ್ಲವಿ ಸೆಲೆಕ್ಟ್ ಆಗಿದ್ದಾರೆ. ಈ ಸಿನಿಮಾವನ್ನು ಅಮರನ್ ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡುತ್ತಿದ್ದು, ಸ್ವತಃ ಧನುಷ್ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಚಿತ್ರದಲ್ಲಿ ಶ್ರೀಲೀಲಾ ಮತ್ತು ಮಮ್ಮುಟ್ಟಿ ಕೂಡ ನಟಿಸುತ್ತಿದ್ದು, ಚಿತ್ರದ ಮೇಲೆ ಆಗಲೇ ನಿರೀಕ್ಷೆ ಹೆಚ್ಚಿದೆ. ಇದೆಲ್ಲದರೊಂದಿಗೆ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರ ಏಕ್ ದಿನ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ ನಟಿ ಸಾಯಿ ಪಲ್ಲವಿ. ಮೇ 1ರಂದು ಆ ಸಿನಿಮಾ ತೆರೆಗೆ ಬರಲಿದೆ.