ಮಹಿಳಾ ಅಭ್ಯರ್ಥಿ ಜತೆ ಹೊಸ ಮುಖ ಸೇರ್ಪಡೆ ಸಂಭವ: ಮತ್ತೆ ʼಸಂಪುಟ್ಟʼ ಸರ್ಜರಿ ?
ವಾಲ್ಮೀಕಿ ಹಗರಣದ ಆರೋಪಿ ಬಿ.ನಾಗೇಂದ್ರರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಬಿಜೆಪಿ ಪಟ್ಟುಹಿಡಿದಿದೆ. ಅವರ ತಲೆದಂಡವಾಗಬಹುದೆಂದು ಹೇಳಲಾಗಿದೆ. ಶಿವಕುಮಾರ್ ಅವರು ಒಂದು ಸ್ಥಾನವನ್ನು ಖಾಲಿ ಉಳಿಸಿಕೊಂಡು ಸಂಪುಟ ಭರ್ತಿ ಮಾಡಿಕೊಂಡಿದ್ದಾರೆ. ಆದರೆ ಇದೀಗ ಹತ್ತಾರು ಶಾಸಕರು ಅಸಮಾಧಾನಗೊಂಡಿದ್ದು, ಪಕ್ಷ ಮತ್ತು ಸರಕಾರದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ.
-
ಡಿಕೆ ದೆಹಲಿಗೆ, ಕನಿಷ ರಾಜ್ಯಪಾಲರ ಆದೇಶ ಮೂವರು ಸಚಿವರಿಗೆ ಕೊಕ್ ಸಾಧ್ಯತೆ
ವಾಲ್ಮೀಕಿ ಹಗರಣದ ಆರೋಪಿ ಬಿ.ನಾಗೇಂದ ತಲೆದಂಡ?
ಬೆಂಗಳೂರು: ಡಿ.ಕೆ.ಶಿವಕುಮಾರ್ ಸಂಪುಟ ಭರ್ತಿಯಾಗಿದ್ದರೂ, ಕಾಂಗ್ರೆಸ್‌ನಲ್ಲಿ ಬೂದಿಮುಚ್ಚಿದ ಕೆಂಡ ವಾಗಿರುವ ಶಾಸಕರ ಅಸಮಾಧಾನಕ್ಕೆ ಮದ್ದು ಅರೆಯಲು ಸಂಪುಟಕ್ಕೆ ‘ಸಣ್ಣ ಶಸ್ತ್ರಚಿಕಿತ್ಸೆ’ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಮುಂದಾಗಿದ್ದು, ಈ ಸಂಬಂಧ ಶೀಘ್ರದಲ್ಲಿಯೇ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ.
ವಾಲ್ಮೀಕಿ ಹಗರಣದ ಆರೋಪಿ ಬಿ.ನಾಗೇಂದ್ರರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಬಿಜೆಪಿ ಪಟ್ಟುಹಿಡಿದಿದೆ. ಅವರ ತಲೆದಂಡವಾಗಬಹುದೆಂದು ಹೇಳಲಾಗಿದೆ. ಶಿವಕುಮಾರ್ ಅವರು ಒಂದು ಸ್ಥಾನವನ್ನು ಖಾಲಿ ಉಳಿಸಿಕೊಂಡು ಸಂಪುಟ ಭರ್ತಿ ಮಾಡಿಕೊಂಡಿದ್ದಾರೆ. ಆದರೆ ಇದೀಗ ಹತ್ತಾರು ಶಾಸಕರು ಅಸಮಾಧಾನಗೊಂಡಿದ್ದು, ಪಕ್ಷ ಮತ್ತು ಸರಕಾರದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಪಕ್ಷ ಹಾಗೂ ಸರಕಾರದ ವಿರುದ್ಧ ಸಂದೇಶ ರವಾನೆ ಯಾಗುತ್ತಿರುವುದರಿಂದ, ಖಾಲಿಯಿರುವ ಒಂದು ಸ್ಥಾನದೊಂದಿಗೆ ಒಂದಿ ಬ್ಬರು ಹಾಲಿ ಸಚಿವರಿಂದ ರಾಜೀನಾಮೆ ಪಡೆದು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಿ, ಒಪ್ಪಿಗೆ ಪಡೆದುಕೊಂಡು ಬರಲು ಹಾಗೂ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಸಂಬಂಧ ಚರ್ಚೆ ನಡೆಸಲು ಈ ವಾರದಲ್ಲಿಯೇ ದೆಹಲಿಗೆ ತೆರಳುವ ಸಾಧ್ಯತೆಯಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಗುರು ವಾರ, ಶುಕ್ರವಾರ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆಯಾದರೂ, ಈ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದು, ಹಲವು ಶಾಸಕರು ರಾಜೀನಾಮೆಯ ಎಚ್ಚರಿಕೆ ರವಾನಿಸಿದ್ದರು. ಆ ಸಮಯದಲ್ಲಿಯೇ, ಶಿವಕುಮಾರ್ ಹಾಗೂ ಹೈಕ ಮಾಂಡ್ ನಾಯಕರು ಮಳೆಗಾಲದ ಅಧಿವೇಶನದ ಬಳಿಕ ಸಂಪುಟ ದಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಮಾಡುವ ಸುಳಿವನ್ನು ನೀಡಿದ್ದರು. ಆದ್ದರಿಂದ ಇದೀಗ ಅಧಿವೇಶನ ಮುಗಿದಿರುವುದರಿಂದ ಈ ಬಗ್ಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ: B Nagendra: ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ಬಿ. ನಾಗೇಂದ್ರಗೆ ತುಸು ರಿಲೀಫ್; ಹೈಕೋರ್ಟ್ ಮಹತ್ವದ ಆದೇಶ
ಸದ್ಯ ರಾಜ್ಯದಲ್ಲಿ ಒಂದು ಸ್ಥಾನ ಹೊರತುಪಡಿಸಿ ಎಲ್ಲಾ ಸಚಿವ ಸ್ಥಾನಗಳನ್ನು ತುಂಬಲಾಗಿದೆ. ಅಸಮಾಧಾ ನಗೊಂಡಿರುವ ಮೂರ್ನಾಲ್ಕು ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡಲು ಈಗಿರುವ ಸಚಿವರಲ್ಲಿ ಒಂದಿಬ್ಬರಿಂದ ರಾಜೀನಾಮೆ ಪಡೆಯುವ ಅನಿವಾರ್ಯತೆಯಿದೆ. ಆದರೆ ಯಾರನ್ನು ಸಂಪುಟದಿಂದ ಕೈಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ದೆಹಲಿಯಲ್ಲಿ ಚರ್ಚಿಸಿ ತೀರ್ಮಾನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಖಾಲಿಯಿರುವ ಒಂದು ಸಚಿವ ಸ್ಥಾನ ಮಹಿಳೆಯರಿಗೆ ಮೀಸಲು ಎನ್ನುವುದು ಬಹುತೇಕ ಖಚಿತ ವಾಗಿರುವುದರಿಂದ ಆ ಸ್ಥಾನದ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್, ಖನೀಜ್ ಫಾತಿಮಾ, ನಯನಾ ಮೋಟಮ್ಮ, ಅನ್ನಪೂರ್ಣ ತುಕಾರಾಮ್, ಆರತಿ ಕೃಷ್ಣ ಕಣ್ಣಿಟ್ಟಿದ್ದಾರೆ. ಇದರೊಂದಿಗೆ ಹೈಕಮಾಂಡ್ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಇದಿದ್ದರಿಂದ ಸಹಜವಾಗಿಯೇ ಅವರೂ ಸಂಪುಟ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.
ಇನ್ನುಳಿದಂತೆ ಹಿರಿಯ ಶಾಸಕರಾದ ಎಂ.ಕೃಷ್ಣಪ್ಪ, ಟಿ.ಬಿ.ಜಯಚಂದ್ರ ಸೇರಿದಂತೆ ಹಲವು ಹಿರಿಯ ಶಾಸಕರು ತಮಗೆ ಸಂಪುಟದಲ್ಲಿ ಸ್ಥಾನ ನೀಡದೇ ಹೋದರೆ ‘ತಮ್ಮ ದಾರಿ ನಾವು ನೋಡಿಕೊಳ್ಳು ತ್ತೇವೆ’ ಎನ್ನುವ ಪರೋಕ್ಷ ಸಂದೇಶವನ್ನು ರವಾನಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಬದಲಾವಣೆ ಮಾಡಬೇಡಿ ಎನ್ನುವ ಸಂದೇಶವನ್ನು ಹೈಕಮಾಂಡ್ ನೀಡಿದ್ದರೂ, ಅನಿವಾರ್ಯ ಕಾರಣಕ್ಕೆ ಕೆಲವು ಬದಲಾವಣೆಯ ಆಲೋಚನೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಕೈಬಿಡೋದು ಯಾರನ್ನು?: 33 ಸಚಿವರಿರುವ ಸಂಪುಟಕ್ಕೆ ಸರ್ಜರಿ ಮಾಡುವ ಆಲೋಚನೆಯಲ್ಲಿ ಹೈಕಮಾಂಡ್ ಹಾಗೂ ಡಿ.ಕೆ.ಶಿವಕುಮಾರ್ ಇದ್ದರೂ, ಯಾರನ್ನು ಕೈಬಿಡಲಾಗುತ್ತದೆ ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲ.
ಸಂಪುಟಕ್ಕೆ ಸೇರಿಸಿಕೊಂಡ ತಿಂಗಳು ಕಳೆಯುವ ಮೊದಲೇ, ಸಂಪುಟದಿಂದ ಕೈಬಿಟ್ಟರೆ ಈಗಿರುವ ಬಂಡಾಯಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಹೆಸರಲ್ಲಿ ನಾಗೇಂದ್ರ ಅವರನ್ನು ಕೈಬಿಟ್ಟು ಅದೇ ಜಿಲ್ಲೆಯ ಅನ್ನಪೂರ್ಣ ಅವರಿಗೆ ಸ್ಥಾನ ಕೊಟ್ಟರೆ ಮಹಿಳಾ ಪ್ರಾತಿನಿಧ್ಯ, ಸಮುದಾಯ ಹಾಗೂ ಜಿಲ್ಲೆಯ ಪ್ರಾತಿನಿಧ್ಯ ನೀಡಿದಂತಾ ಗುತ್ತದೆ. ಆದರೆ ಇದಕ್ಕೆ ನಾಗೇಂದ್ರ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ? ಎನ್ನುವ ಆತಂಕ ನಾಯಕ ರಲ್ಲಿದೆ.
ಈಗಾಗಲೇ ಹಿರಿಯ ನಾಯಕರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ಬೇಸರವಿದೆ. ಹೀಗಿರು ವಾಗ, ಹಿರಿಯ ಸಚಿವರಿಂದ ರಾಜೀನಾಮೆ ಪಡೆದರೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಭಾರೀ ಹೊಡೆತ ಬೀಳಲಿದೆ. ಆಗ ಆಗುವ ಡ್ಯಾಮೇಜ್ ಅನ್ನು ಯಾವ ರೀತಿ ನಿಯಂತ್ರಣ ಮಾಡಬೇಕು ಎನ್ನುವ ಗೊಂದಲವಿದೆ.
ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಸವರಾಜ ಶಿವಣ್ಣನವರ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನ ಗೊಂಡಿರುವ ಸಿದ್ದು, ಅಂತರ ಕಾಯ್ದುಕೊಂಡಿ ದ್ದಾರೆ. ಈ ಅಸಮಾಧಾನವನ್ನು ಈಗಲೇ ಸರಿಪಡಿಸದೇ ಹೋದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳುವ ಆತಂಕವಿದೆ. ಆದ್ದರಿಂದ ಈ ಬಾರಿಯ ಸರ್ಜರಿಯ ವೇಳೆ ಶಿವಣ್ಣನವರ್‌ಗೆ ಸ್ಥಾನ ಕೊಡಬೇಕಾದ ಒತ್ತಡದಲ್ಲಿ ಡಿಕೆ ಹಾಗೂ ಹೈಕಮಾಂಡ್ ಇದೆ. ಈ ಎಲ್ಲವನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವ ಕುತೂಹಲ ಇದೀಗ ಪಕ್ಷದಲ್ಲಿ ಮೂಡಿದೆ.
ಎಂಎಲ್‌ಸಿ, ನಿಗಮ ಮಂಡಳಿ ಬಗ್ಗೆ ಯೂ ಚರ್ಚೆ ಸಚಿವ ಸಂಪುಟಕ್ಕೆ ಸರ್ಜರಿ ಮಾಡುವ ಬಗ್ಗೆ ಚರ್ಚಿಸುವುದರೊಂದಿಗೆ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಬಗ್ಗೆಯೂ ಈ ಭೇಟಿಯ ವೇಳೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಇದರೊಂದಿಗೆ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ನಿರ್ದೇಶಕರ ಆಯ್ಕೆ, ಜಿಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
2028ರ ವಿಧಾನಸಭಾ ಚುನಾವಣೆಗೆ 1 ವರ್ಷ 8 ತಿಂಗಳು ಮಾತ್ರ ಬಾಕಿಯಿರುವುದರಿಂದ ಈಗಲೂ ಕಾರ್ಯಕರ್ತರಿಗೆ ಅಧಿಕಾರ ನೀಡದಿದ್ದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಶೀಘ್ರವೇ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ. ಇನ್ನು ರಾಜ್ಯ ದಲ್ಲಿ 100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಬಗ್ಗೆಯೂ ಈ ಭೇಟಿಯ ವೇಳೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ನಿಮ್ಮೊಂದಿಗೆ ನಾನು-ನನ್ನೊಂದಿಗೆ ನೀವಿರಿ ಈ ಎಲ್ಲ ಗೊಂದಲದ ನಡುವೆಯೂ ಕಾಂಗ್ರೆಸ್ ಶಾಸಕ ರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಸತತ ಏಳು ಗಂಟೆಗಳ ಕಾಲ 27 ಜಿಲ್ಲೆಗಳ ಕಾಂಗ್ರೆಸ್ ಶಾಸಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ‘ನಿಮ್ಮೊಂದಿಗೆ ನಾನಿದ್ದೇನೆ-ನನ್ನೊಂದಿಗೆ ನೀವು ಇರಿ. ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ’ ಎನ್ನುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ, ಅನುದಾನ ಹಂಚಿಕೆ, ಭಾರತ್ ಜೋಡೋ ಯುವ ಸಂಘ ಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. 2028ರ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
*
ಏಕೆ ಈ ಸರ್ಕಸ್?
ಶಿವಕುಮಾರ್ ಸಿಎಂ ಆದ ನಂತರ 2 ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ
34 ಸಚಿವ ಸ್ಥಾನದ ಪೈಕಿ 33 ಭರ್ತಿ, ಇನ್ನೊಂದು ಖಾಲಿ, ಅಸಮಾಧಾನಿತರ ಸಂಖ್ಯೆ ಅಗಣಿತ
ಎಂ.ಕೃಷ್ಣಪ್ಪ, ಟಿ.ಬಿ.ಜಯಚಂದ್ರ, ಬಸವರಾಜ್ ಶಿವಣ್ಣನವರ್‌ಗೆ ಪಟ್ಟದ ಮೇಲೆ ಕಣ್ಣು
ಒಳಗೊಳಗೇ ಭಾರೀ ಸಂಘರ್ಷ, ಇದನ್ನು ಸರಿಪಡಿಸಲು ಸಿಎಂ ಶಿವಕುಮಾರ್ ಸರ್ಕಸ್
ವಾಲ್ಮೀಕಿ ಆರೋಪಿ ಸಚಿವ ನಾಗೇಂದ್ರ ಸೇರಿ ಮೂವರನ್ನು ಕೈಬಿಟ್ಟು, ಮೂವರಿಗೆ ಅವಕಾಶ?