ರಾಮಲಿಂಗಾರೆಡ್ಡಿಗೆ ನಾನು ಮಾತು ಕೊಟ್ಟಿದ್ದು ನಿಜ: ಖಾತೆ ಹಂಚಿಕೆ ಬಗ್ಗೆ ಸಿಎಂ ಡಿಕೆಶಿ ಪ್ರತಿಕ್ರಿಯೆ
DK Shivakumar: ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನಿನಗೆ ಕೊಡುತ್ತೇನೆ ಎಂದು ಡಿಕೆಶಿ ಭರವಸೆ ಕೊಟ್ಟಿದ್ದರು. ಆದರೆ ಈಗ ಜಲಸಂಪನ್ಮೂಲ ಕೊಟ್ಟಿದ್ದಾರೆ. ಹೀಗಾಗಿ ರಾಜೀನಾಮೆ ನೀಡಿರುವುದಾಗಿ ರಾಮಲಿಂಗಾರೆಡ್ಡಿ ಹೇಳಿದ್ದರು. ಅವರ ಹೇಳಿಕೆಗೆ ಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಜತೆ ರಾಮಲಿಂಗಾರೆಡ್ಡಿ. -
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದರು. ಇದೀಗ ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ.ಶಿವಕುಮಾರ್ ಅವರು, ರಾಮಲಿಂಗಾರೆಡ್ಡಿಗೆ ನಾವು ಮಾತು ಕೊಟ್ಟಿದ್ದು ನಿಜ. ಆದರೆ, ಏನು ಮಾಡೋದು, ಇದು ಹೈಕಮಾಂಡ್ ನಿರ್ಧಾರವಾಗಿದೆ ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.
ಕೆೆ.ಎಚ್. ಮುನಿಯಪ್ಪ ಜತೆ ಮಾತನಾಡಿ, ಒಪ್ಪಿಸಿದ್ದೇವೆ. ನೀವು ಯಾವ ಖಾತೆ ಕೊಟ್ಟರೂ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇನ್ನು ರಾಮಲಿಂಗಾರೆಡ್ಡಿಗೆ ನಾನು ಮಾತು ಕೊಟ್ಟಿದ್ದು ನಿಜ. ನಾನು ಮುಂದೆ ಹೋಗಿ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡ್ತೀವಿ ಎಂದು ಹೇಳಿದ್ದು ನಿಜ. ಆದರೆ, ಹೈಕಮಾಂಡ್ ಒಂದು ತೀರ್ಮಾನ ಮಾಡಿದ್ದಾರೆ. ಕೃಷ್ಣಬೈರೇಗೌಡರಿಗೆ ಆ ಖಾತೆ ಕೊಟ್ಟಿದ್ದಾರೆ. ಪಕ್ಷದಲ್ಲಿ ತೀರ್ಮಾನ ಮಾಡಿದಾಗ ಒಪ್ಪಿಕೊಳ್ಳಬೇಕಾಗುತ್ತದೆ.
ಈಗ ರಾಮಲಿಂಗಾರೆಡ್ಡಿ ಅವರಿಗೆ ನೀಡಿರುವುದೂ ದೊಡ್ಡ ಖಾತೆಯೇ. ಅವರು ಕೇಳಿರುವುದರಲ್ಲಿ ತಪ್ಪೇನಿಲ್ಲ. ನಾನು ಮಾತು ಕೊಟ್ಟಿರುವುದು ನಿಜ. ಆದರೆ, ಪಕ್ಷದ ವರಿಷ್ಠರನ್ನು ಬಿಟ್ಟು ನಾನು ಮಾತನಾಡಲು ಸಾಧ್ಯವಿಲ್ಲ. ಸದ್ಯ ರಾಮಲಿಂಗಾರೆಡ್ಡಿಯವರು ಹೊರಗೆ ಇದ್ದಾರೆ. ಖುದ್ದಾಗಿ ನಾನೇ ಭೇಟಿಯಾಗಿ ಮಾತನಾಡುವೆ ಎಂದು ತಿಳಿಸಿದ್ದಾರೆ.
ರಾಜೀನಾಮೆಯಿಂದ ಹಿಂದೆ ಸರಿದ ಕೆ.ಎಚ್.ಮುನಿಯಪ್ಪ
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ಸಚಿವ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಅವರು ಕೂಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಆದರೆ, ರಾಹುಲ್ ಗಾಂಧಿ ಅವರ ಜತೆ ಚರ್ಚೆ ಬಳಿಕ ಅವರು ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆಗೆಂದು ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಜತೆ ಸಿಎಂ ಡಿಕೆ ಶಿವಕುಮಾರ್ ಅವರು ಸಚಿವರ ಖಾತೆ ಕ್ಯಾತೆ ವಿಚಾರ ಪ್ರಸ್ತಾಪಿಸಿದ್ದಾರೆ. ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ಬಗ್ಗೆ ರಾಹುಲ್ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಇದೇ ವೇಳೆ ಕೆ.ಎಚ್ ಮುನಿಯಪ್ಪ ಅವರ ಅಸಮಾಧಾನವೂ ಸಹ ಚರ್ಚೆಯಾಗಿದೆ.
ಡಿಕೆಶಿ ಸಂಪುಟದಲ್ಲಿ ಮತ್ತೆ ಆಹಾರ ಇಲಾಖೆ ಜವಾಬ್ದಾರಿ ನೀಡಿದ್ದಕ್ಕೆ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರು ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಖುದ್ದು ರಾಹುಲ್ ಗಾಂಧಿ ಅವರ ಬಳಿಯೇ ಇಂದು ಅಸಮಾಧಾನ ತೋಡಿಕೊಂಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರು ಗೊಂದಲ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಸಮಾಧಾನಗೊಂಡಿರುವ ಮುನಿಯಪ್ಪ, ಐ ಆ್ಯಮ್ ಹ್ಯಾಪಿ ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುನಿಯಪ್ಪ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೆ. ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಐ ಆ್ಯಮ್ ಹ್ಯಾಪಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ.