ಜೂನ್ 10ರಂದು ಮತ್ತೊಂದು ಇತಿಹಾಸ ಬರೆಯಲಿದೆ ಬಿಜೆಪಿ: ನೆಹರೂ ದಾಖಲೆ ಹಿಂದಿಕ್ಕಲಿದ್ದಾರೆ ನರೇಂದ್ರ ಮೋದಿ
Narendra Modi: 2026ರ ಜೂನ್ 10ರಂದು ಪ್ರಧಾನಿ ನರೇಂದ್ರ ಮೋದಿ 4,399 ದಿನಗಳ ಸತತ ಪ್ರಧಾನಿತ್ವ ಪೂರ್ಣಗೊಳಿಸಿ, ಜವಾಹರಲಾಲ್ ನೆಹರೂ ಅವರ 4,398 ದಿನಗಳ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಇದರೊಂದಿಗೆ ಅವರು ಭಾರತದ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.
ಜವಾಹರಲಾಲ್ ನೆಹರೂ ಮತ್ತು ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ದೆಹಲಿ, ಜೂ. 5: ಪ್ರಧಾನಿ ನರೇಂದ್ರ ಮೋದಿ (Narendra Modi) ಜೂನ್ 10ರಂದು ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ಅವರ ಅವಧಿಯ ದಾಖಲೆಯನ್ನು ಹಿಂದಿಕ್ಕಿ ದೇಶದ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಸತತ ಮೂರನೇ ಅವಧಿಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಜೂನ್ 10ರಂದು ಅವರು ಪ್ರಧಾನಿಯಾಗಿ ಸತತ 4,399 ದಿನಗಳನ್ನು ಪೂರ್ಣಗೊಳಿಸಲಿದ್ದು, ನೆಹರೂ ಅವರ ಸತತ 4,398 ದಿನಗಳ ದಾಖಲೆಯನ್ನು ಮೀರಲಿದ್ದಾರೆ.
ಭಾರತದ ಮೊದಲ ಪ್ರಧಾನಿ ಆಗಿದ್ದ ಜವಾಹರ್ ಲಾಲ್ ನೆಹರೂ 16 ವರ್ಷ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 1951-52, 1957 ಹಾಗೂ 1962ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲುವಿನತ್ತ ಮುನ್ನಡೆಸಿದ್ದ ನೆಹರೂ, 1964ರ ಮೇ 27ರಂದು ನಿಧನರಾಗುವವರೆಗೂ ಒಟ್ಟು 6,131 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.
ಇಂದಿರಾ ಗಾಂಧಿ ದಾಖಲೆ ಹಿಂದಿಕ್ಕಿದ ಮೋದಿ
ಇದಕ್ಕೂ ಮುನ್ನ, 2025ರ ಜುಲೈ 25ರಂದು ಮೋದಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸತತ ಪ್ರಧಾನಿತ್ವದ ದಾಖಲೆಯನ್ನೂ ಹಿಂದಿಕ್ಕಿದ್ದರು. ಇಂದಿರಾ ಗಾಂಧಿ 1966ರ ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ ನಿರಂತರವಾಗಿ 4,077 ದಿನ ಪ್ರಧಾನಿಯಾಗಿದ್ದರು.
ರಾಜತಾಂತ್ರಿಕತೆ ಬದಲಾಯಿಸಿದ ಮೋದಿ-ಟ್ರಂಪ್
ನಂತರ 1980ರಿಂದ 1984ರವರೆಗೆ ಮತ್ತೊಮ್ಮೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಒಟ್ಟು ಅವಧಿ 15 ವರ್ಷ 350 ದಿನಗಳಾಗಿತ್ತು. ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಅವರು, ಭಾರತೀಯ ರಾಜಕೀಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಮೋದಿ ಮತ್ತು ನೆಹರೂ ಇಬ್ಬರೂ ತಮ್ಮ ಪಕ್ಷಗಳನ್ನು ಸತತ ಮೂರು ಲೋಕಸಭೆ ಚುನಾವಣೆಯಲ್ಲಿ ಗೆಲುವಿನತ್ತ ಮುನ್ನಡೆಸಿದ ಸಾಧನೆಯನ್ನು ಹೊಂದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಅವಧಿಯನ್ನು ಪರಿಗಣಿಸಿದರೆ, ಮೋದಿ ಈಗಾಗಲೇ ಅತಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ವಾತಂತ್ರ್ಯಾನಂತರ ಜನಿಸಿದ ಭಾರತದ ಮೊದಲ ಪ್ರಧಾನಿಯಾಗಿರುವ ನರೇಂದ್ರ ಮೋದಿ, ಕಾಂಗ್ರೆಸೇತರ ಪಕ್ಷದ ಅತಿ ದೀರ್ಘಾವಧಿ ಪ್ರಧಾನಿಯೂ ಆಗಿದ್ದಾರೆ. ಅಲ್ಲದೆ, ಎರಡು ಪೂರ್ಣಾವಧಿ ಕೇಂದ್ರ ಸರ್ಕಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಏಕೈಕ ಪ್ರಧಾನಿಯೂ ಹೌದು.
2001ರಲ್ಲಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ, ಬಳಿಕ 2014ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಜೂನ್ 10ರಂದು ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ.