Nandini milk price hike: ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ; ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆ ಶಾಕ್ ನೀಡಿದೆ. ನಂದಿನ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಿಸಲು ನಿರ್ಧರಿಸಲಾಗಿದೆ.
-
ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕೆಎಂಎಫ್ ನಂದಿನಿ ಹಾಲಿನ ದರವನ್ನು (Nandini milk price hike) ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನವೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಹಾಲಿನ ದರ ಹೆಚ್ಚಳಕ್ಕೆ ಹಲವು ತಿಂಗಳುಗಳಿಂದ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಕೆಎಂಎಫ್ ಕೂಡ ಸರ್ಕಾರಕ್ಕೆ ಕಳೆದ ತಿಂಗಳೇ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಸರ್ಕಾರ ದರ ಏರಿಕೆಗೆ ಸಮ್ಮತಿ ಸೂಚಿಸಿದೆ.
ದರ ಏರಿಕೆಯ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲು ನಿರ್ಧರಿಸಲಾಗಿದೆ. ರೈತರಿಗೆ ಬಮುಲ್ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಲೀಟರ್‌ಗೆ 33 ರೂ. ದಿಂದ 35 ರೂ. ನೀಡಲಾಗುತ್ತಿದ್ದು, ಆ ಮೊತ್ತ 40 ರಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ. ಹೆಚ್ಚುವರಿ 1 ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ.
ಹಾಲಿನ ದರ ಏರಿಕೆ ಬಗ್ಗೆ ಸಚಿವ ಕೃಷ್ಣಬೈರೇಗೌಡ ಅವರು ಪ್ರತಿಕ್ರಿಯಿಸಿ, ಹಾಲಿನ ದರ ಹೆಚ್ಚಳ ಮಾಡಲು ಹಾಲು ಉತ್ಪಾದಕರು ಹಾಗೂ ಹಾಲು ಒಕ್ಕೂಟಗಳಿಂದ ಬೇಡಿಕೆ ಬಂದಿತ್ತು. ಈ ಬಗ್ಗೆ ಮೇಲ್ಮನೆಯಲ್ಲೂ ಚರ್ಚೆ ನಡೆದು, ಎಲ್ಲ ಪಕ್ಷಗಳ ಸದಸ್ಯದಿಂದ ಸಹಮತ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಬೆಲೆ ಏರಿಕೆ ನಂತರ ಹಾಲಿನ ದರ ಎಷ್ಟಾಗಲಿದೆ?
ಹೊಸ ದರ (ಹಳೆ ದರ)
- ಗುಡ್‌ಲೈಫ್ 70 ರೂ. (62 ರೂ.)
- ಟೋನ್ಡ್ ಹಾಲು 54 ರೂ. (46 ರೂ.)
- ಹೋಮೊಜಿನೈಸ್ಡ್ ಹಾಲು 60 ರೂ. (52 ರೂ.)
- ಸ್ಪೆಷಲ್ ಹಾಲು 60 ರೂ. (52 ರೂ.)
ಬಸ್ ಟಿಕೆಟ್ ದರ ಹೆಚ್ಚಿಸಲೂ ಸರ್ಕಾರ ಚಿಂತನೆ
ಹಾಲಿನ ದರ ಏರಿಕೆ ಬಳಿ ಬಸ್ ಟಿಕೆಟ್ ದರ ಹೆಚ್ಚಿಸಲೂ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳು ಸಾಧ್ಯತೆ ಇದೆ. ಸಾರಿಗೆ ನಿಗಮಗಳು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ KSRTC, NWKRTC, KKRTC ಮೂರು ನಿಗಮಗಳಿಗೆ ಶೇ.25-26ರಷ್ಟು ಏರಿಕೆ ಮಾಡಬೇಕೆಂದು ಅತುಲ್ ತಿವಾರಿ ಸಮಿತಿ ವರದಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಹಾಗೆಯೇ ಬಿಎಂಟಿಸಿ ಟಿಕೆಟ್ ದರದಲ್ಲಿ ಶೇ.42ರಷ್ಟು ಮೇಲೆ ಹೆಚ್ಚಳ ಮಾಡಬೇಕೆಂದು ಕಮಿಟಿ ಶಿಫಾರಸ್ಸು ಮಾಡಿದೆ. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಮೂರು ನಿಗಮಗಳ ಬಸ್ ದರ ಶೇ.13-15 ಏರಿಕೆ ಮಾಡೋ ಸಾಧ್ಯತೆಯಿದೆ. ಹಾಗೆಯೇ ಬಿಎಂಟಿಸಿ ನಿಗಮ ಭಾರೀ ನಷ್ಟದಲ್ಲಿರೋ ಕಾರಣ, ಬಿಎಂಟಿಸಿ ಬಸ್ ಟಿಕೆಟ್ ದರ ಶೇ.15-17 ರಷ್ಟು ಏರಿಕೆ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.