ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನರ್ಸ್‌ಗಳ ನೌಕರಿ ಹಾದಿಗೆ ಮುಳ್ಳಾದ ಅಧಿಕಾರಿಗಳು: ಬಿಎಂಸಿಯಲ್ಲಿ ನೂರಾರು ನರ್ಸ್‌ಗಳ ನೌಕರಿ ನರಳಾಟ

ದೇಶದ ಪ್ರತಿಷ್ಠಿತ ವೈದ್ಯಕೀಯ ಮಹಾ ಸಂಸ್ಥೆಯಾದ ಬೆಂಗಳೂರು ಮೆಡಿಕಲ್ ಕಾಲೇಜಿ (ಬಿಎಂಸಿಆರ್‌ಐ) ನಲ್ಲಿ ಈಗ ರೋಗಿಗಳನ್ನು ರಕ್ಷಿಸುವ 150ಕ್ಕೂ ಹೆಚ್ಚು ನರ್ಸ್‌ʼಗಳಲ್ಲಿ ನೌಕರಿಗೆ ಕುತ್ತು ತರುವ ನೋವು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ. ಈ ನೋವು ನಿವಾರಿಸಬೇಕಾದ ಕಾಲೇಜಿನ ಡೀನ್ ಮತ್ತು ಡೈರೆಕ್ಟರ್ ಅವರಿಗೂ ಈ ಸೋಂಕು ಶುರುವಾಗಿದೆ.

ಬಿಎಂಸಿಯಲ್ಲಿ ನೂರಾರು ನರ್ಸ್‌ಗಳ ನೌಕರಿ ನರಳಾಟ

-

Profile
Ashok Nayak Oct 29, 2026 7:28 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ದೇಶದ ಪ್ರತಿಷ್ಠಿತ ವೈದ್ಯಕೀಯ ಮಹಾ ಸಂಸ್ಥೆಯಾದ ಬೆಂಗಳೂರು ಮೆಡಿಕಲ್ ಕಾಲೇಜಿ (ಬಿಎಂಸಿಆರ್‌ಐ) ನಲ್ಲಿ ಈಗ ರೋಗಿಗಳನ್ನು ರಕ್ಷಿಸುವ 150ಕ್ಕೂ ಹೆಚ್ಚು ನರ್ಸ್‌ʼಗಳಲ್ಲಿ ನೌಕರಿಗೆ ಕುತ್ತು ತರುವ ನೋವು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ. ಈ ನೋವು ನಿವಾರಿಸಬೇಕಾದ ಕಾಲೇಜಿನ ಡೀನ್ ಮತ್ತು ಡೈರೆಕ್ಟರ್ ಅವರಿಗೂ ಈ ಸೋಂಕು ಶುರುವಾಗಿದೆ. ಅಚ್ಚರಿ ಎಂದರೆ ಇದನ್ನು ಕೂಡಲೇ ಸರಿಪಡಿಸಬೇಕೆಂದು ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಂದ ಅನೇಕ ಬಾರಿ ಆದೇಶ, ಸೂಚನೆಗಳು ಇದ್ದರೂ ಬಿಎಂಸಿಆರ್‌ಐನ ಆಡಳಿತ ಹೊಣೆ ಹೊತ್ತ ಡೀನ್ ಮತ್ತು ಸಿಎಒ (ಮುಖ್ಯ ಆಡಳಿತಾಧಿಕಾರಿ ) ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೌನ ವಹಿಸಿದ್ದಾರೆ ಎನ್ನಲಾಗಿದೆ.

ಇದೇ ನಿರ್ಲಕ್ಷ್ಯ ಮುಂದುವರಿದರೆ ಬಿಎಂಸಿಯಲ್ಲಿ ಸುಮಾರು 150ಕ್ಕೂ ಹೆಚ್ಚು ನರ್ಸ್‌ಗಳು ಯಾವುದೇ ಕ್ಷಣದಲ್ಲಿ ಕೆಲಸ ಕಳೆದುಕೊಂಡು ಜಾಗ ಖಾಲಿ ಮಾಡಬೇಕಾಗುತ್ತದೆ. ಅಂದಹಾಗೆ ಇದು ಬಿಎಂಸಿಯ ನರ್ಸ್‌ಗಳು ತುರ್ತಾಗಿ ಬಿಎಸ್‌ಸಿ ಪದವಿ ಪಡೆದು ತಮ್ಮ ನೌಕರಿ ಉಳಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯ ಸಮಸ್ಯೆ. ಇದನ್ನು ಕೂಡಲೇ ಸರಿಪಡಿಸಿಕೊಳ್ಳುವುದಕ್ಕೆ ಸರಕಾರ ಎಲ್ಲ ರೀತಿಯ ಅವಕಾಶವನ್ನೂ ನೀಡಿದೆಯಾದರೂ ಬಿಎಂಸಿ ಆಡಳಿತ ಅಧಿಕಾರಿಗಳು ತಮ್ಮ ಕೈ ಬೆಚ್ಚಗೆ ಮಾಡಿಕೊಳ್ಳಲು ನರ್ಸ್‌ಗಳ ಭವಿಷ್ಯದ ಕಡತಕ್ಕೆ ಅಡ್ಡ ಕೈ ಹಾಕುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: BMC: ಬಿಎಂಸಿ ಜೇಷ್ಠತಾ ಪಟ್ಟಿಯಲ್ಲೇ ಗೋಲ್ ಮಾಲ್ !

ಇದಕ್ಕೆ ಮೂಲ ಕಾರಣವೆಂದರೆ, ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಪ್ರಸ್ತಾಪಿಸಿರುವಂತೆ ಇನ್ನು ಮುಂದೆ ನರ್ಸ್‌ಗಳು ಕಡ್ಡಾಯವಾಗಿ ಬಿಎಸ್‌ಸಿ ಪದವಿ ಪಡೆದಿರಬೇಕು ಎನ್ನುವುದು. ಇದನ್ನು ಕೂಡಲೇ ಸರಕಾರ ಅನುಷ್ಠಾನ ಮಾಡಬೇಕಿದ್ದು, ಇದರ ಮೊದಲ ಬಿಸಿ ಬಿಎಂಸಿಗೆ ತಟ್ಟಿದೆ.

ಏಕೆಂದರೆ, ಬಿಎಂಸಿಯಲ್ಲಿರುವ ಸುಮಾರು 90 ನರ್ಸ್‌ಗಳನ್ನು ಹೊರತುಪಡಿಸಿದರೆ ಉಳಿದವರು ಪಿಯುಸಿ ನಂತರ ನರ್ಸಿಂಗ್ ಡಿಪ್ಲೋಮಾ ಮಾಡಿದ್ದಾರೆ. ಇವರು ಕೂಡಲೇ ಬಿಎಸ್‌ಸಿ ನರ್ಸಿಂಗ್ ಪದವಿ ಪಡೆದು ಅಪ್‌ಗ್ರೇಡ್ ಮಾಡಿಕೊಳ್ಳಬೇಕಿದೆ. ಇದಕ್ಕೆ ಸರಕಾರ ಎಲ್ಲ ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಸರಕಾರ ನರ್ಸ್‌ಗಳಿಗೆ ತನ್ನದೇ ವೆಚ್ಚದಲ್ಲಿ ನರ್ಸಿಂಗ್ ವಿಷಯದಲ್ಲಿ ಬಿಎಸ್‌ಸಿ ಪದವಿ ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ಇದಕ್ಕೆ ಬಿಎಂಸಿ ಆಡಳಿತಾಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಸರಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ.

ಹೀಗಾಗಿ ಬಿಎಂಸಿಯ ಬಹುತೇಕ ನರ್ಸ್‌ʼಗಳು ಈಗ ತಮ್ಮ ನೌಕರಿ ಕಳೆದುಕೊಳ್ಳುವ ಭೀತಿಯಲ್ಲಿ ದ್ದಾರೆ. ಇದನ್ನು ಸರಿಪಡಿಸಬೇಕಾದ ಆಡಳಿತ ಮುಖ್ಯಸ್ಥರಾದ ಡೀನ್ ಅವರಿಗೂ ಇದೇ ಭೀತಿ ಇದೆ. ಏಕೆಂದರೆ ಇವರ ನೇಮಕ ಅಕ್ರಮ ಎಂದು ಆರೋಪಿಸಿ ಹಿರಿಯ ವೈದ್ಯಾಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಅಂದರೆ ಸರಕಾರ ಡೀನ್ ಅವರನ್ನು ನೇಮಕ ಮಾಡುವಾಗ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕರಾದ ಡಾ.ವಿಶ್ವನಾಥ ಹಾಗೂ ಕಮ್ಯೂನಿಟಿ ಮೆಡಿಷಿನ್‌ನ ಡಾ.ರಂಗನಾಥ್ ಎಂಬ ಇಬ್ಬರು ಹಿರಿಯ ತಜ್ಞ ವೈದ್ಯರನ್ನು ಹಿಂದಿಕ್ಕಿ ನಿಯಮ ಮೀರಿ ಮಾಜಿ ಸಚಿವರೊಬ್ಬರ ಸೊಸೆಯೂ ಆಗಿರುವ ಕಿರಿಯ ವೈದ್ಯರೊಬ್ಬರನ್ನು ಡೀನ್ ಮಾಡಿರುವುದು ಈಗ ಕೋರ್ಟ್ ಮೆಟ್ಟಿಲೇರುವ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಆಡಳಿತವೇ ಅಡ್ಡಿ

ಎಲ್ಲ ನರ್ಸ್‌ಗಳು ಬಿಎಸ್‌ಸಿ ಪದವಿ ಪಡೆಯುವಂತಾಗಲು ಪ್ರತಿ ಕಾಲೇಜಿಗೆ ಶೇ.5ರಷ್ಟು ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಅವರ ಕಚೇರಿಯಂದಲೇ ಸೂಚನೆ ಹೋಗಿದೆ. ಆದರೆ ಇದರ ಹೊಣೆ ಹೊತ್ತವರು ಕೈ ಬೆಚ್ಚಗಾದರೆ ಮಾತ್ರ ಅನುಮತಿ ಎಂದು ಎಲ್ಲ ಅರ್ಜಿಗಳನ್ನು ಕಾಯ್ದಿರಿಸಿಕೊಳ್ಳು ತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ವಿಭಾಗದಲ್ಲಿ ಕೈಗೆ ಕಾಸಿನ ವ್ಯವಸ್ಥೆಯಾದರೆ ಮಾತ್ರ ಕೆಲಸ ಎನ್ನುವಂತಾಗಿದ್ದು, ಇದು ವೈದ್ಯಕೀಯ ಶಿಕ್ಷಣ ಇಲಾಖೆ ಗಮನಕ್ಕೂ ಬಂದಿದೆ. ಆದರೂ ಸಚಿವರಿಂದ ಯಾವುದೇ ಕ್ರಮ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ನರ್ಸಿಂಗ್ ಅಕ್ರಮ?

ಬಿಎಂಸಿಯಲ್ಲಿ ಸುಮಾರು 800ಕ್ಕೂ ಹೆಚ್ಚು ನರ್ಸ್‌ʼಗಳಿರಬೇಕು. ಆದರೆ ಇರುವ ನರ್ಸ್‌ಗಳು ಸುಮಾರು 300 ಮಾತ್ರ. ಇವರಲ್ಲಿ ಪದವಿ ಪಡೆದು ಅಪ್‌ಗ್ರೇಡ್ ಆದರವರು ಬರೀ 80 ಮಂದಿ ಮಾತ್ರ. ಉಳಿದವರು ಐಎನ್‌ಸಿ ನಿಯಮದ ಪ್ರಕಾರ ಬಿಎಂಸಿ ಪದವಿಯೊಂದಿಗೆ ಅಪ್‌ಗ್ರೇಡ್ ಮಾಡಿಕೊಳ್ಳ ಬೇಕೆಂದು ಕಾಲೇಜು ವ್ಯಾಪ್ತಿಯ ವಿಕ್ಟೋರಿಯಾ, ಪಿಎಂಎಸ್‌ಎಸ್‌ವೈ, ಮಿಂಟೋ, ಟ್ರಾಮಾ ಸೇರಿದಂತೆ ವಿವಿಧ ಆಸ್ಪತ್ರೆಗಳಿಂದ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಾಲೇಜಿನ ಡೀನ್ ಅವರು ನರ್ಸ್‌ಗಳು ಪದವಿ ಪಡೆಯಲು ಅನುಮತಿ ನೀಡಲು ಮೀನಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ.

ಬದಲಾಗಿ ಬರೀ ಪಿಎಂಎಸ್‌ಎಸ್‌ವೈ ಆಸ್ಪತ್ರೆ ನರ್ಸ್‌ಗಳಿಗೆ ಮಾತ್ರ ಬಿಎಸ್‌ಸಿ ಪಡೆಯಲು ಅವಕಾಶ ನೀಡಿ, ಉಳಿದ ಕಾಲೇಜಿನ ನರ್ಸ್‌ಗಳಿಗೆ ಅವಕಾಶ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ನರ್ಸ್‌ಗಳಿಗೆ ಕೋರ್ಟ್‌ʼಗೆ ಆದೇಶ ಪಡೆದು ಬನ್ನಿ ಎನ್ನುತ್ತಿದ್ದಾರೆ ಎಂದು ನರ್ಸ್‌'ಗಳು ದೂರು ತ್ತಿದ್ದಾರೆ. ಇದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಗಮನಕ್ಕೆ ಬಂದಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ನರ್ಸ್‌ಗಳು ದೂರಿದ್ದಾರೆ.