Janivara Row: ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು
ಸಿಇಟಿ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆದ ಘಟನೆ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದ್ದರು. ಇನ್ನು ಈ ಕುರಿತು ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿತ್ತು. ಹೀಗಾಗಿ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮಡಿವಾಳದ ಕೃಪಾನಿಧಿ ಕಾಲೇಜು. -
ಬೆಂಗಳೂರು: ಸಿಇಟಿ ಪರೀಕ್ಷೆ (Karnataka CET Exam 2026) ವೇಳೆ ವಿದ್ಯಾರ್ಥಿಗಳ ಜನಿವಾರ (Janivara Row) ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಸಿಬ್ಬಂದಿಯಾದ ಸುಧಾಕರ್, ಗಿರಿಜಮ್ಮ, ಆರ್.ಸರಿತಾ ಎಂಬುವವರನ್ನು ಕಾಲೇಜು ಪ್ರಾಂಶುಪಾಲ ಅಶಿಮ್ ಅಮಾನತು ಮಾಡಿದ್ದಾರೆ.
ಜನಿವಾರ ತೆಗೆಸಿದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಡಿಸಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪತ್ರ ಬರೆಯಲಾಗಿತ್ತು. ವಸ್ತ್ರಸಂಹಿತೆ ಅಧಿಕಾರಿಗಳ ನೇಮಕ ಮಾಡಿದರೂ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ಜನಿವಾರ ತೆಗೆಸಲು ವಸ್ತ್ರಸಂಹಿತೆಯಲ್ಲಿ ಸೂಚನೆ ನೀಡಿಲ್ಲ. ಆದರೂ ಜನಿವಾರ ತೆಗೆಸಿದ್ದು ಉದ್ದೇಶಪೂರ್ವಕ ಘಟನೆಯಂತೆ ಕಂಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿದ ವಿವರ ನೀಡುವಂತೆ ಪತ್ರ ಮುಖೇನ ಕೆಇಎ ಸೂಚಿಸಿತ್ತು.
ಶಿಸ್ತು ಕ್ರಮಕ್ಕೆ ಸೂಚಿಸಿದ್ದ ಕೆಇಎ
ಏಪ್ರಿಲ್ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿ ಸೂಚಿಸಿದ್ದು, ಜನಿವಾರ ತೆಗೆದ ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ.
ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಬರೆದ ಪತ್ರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿತ್ತು. ಇದರ ಬೆನ್ನಲ್ಲೇ ಸಿಬ್ಬಂದಿ ವಿರುದ್ಧ ಕಾಲೇಜು ಪ್ರಾಂಶುಪಾಲರಿಂದ ಶಿಸ್ತು ಕ್ರಮ ಜರುಗಿಸಲಾಗಿದೆ.