ಭ್ರಷ್ಟರಿಗೆ ಬಹುಮಾನ, ಪೇಮೆಂಟ್ ಕೊಟ್ಟವರಿಗೆ ಸಚಿವ ಸ್ಥಾನ: ಡಿಕೆಶಿ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಟೀಕೆ
Karnataka cabinet expansion: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಟೀಕಿಸಿದೆ. ಲೂಟಿಕೋರ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟರಿಗೆ ಮಾತ್ರ ಆದ್ಯತೆ, ಮಾನ್ಯತೆ. ಭ್ರಷ್ಟ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಪೇಮೆಂಟ್ ಕೊಟ್ರೆ ಸಾಕು ಸಚಿವರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗುತ್ತೆ ಎಂದು ಬಿಜೆಪಿ ಆರೋಪಿಸಿದೆ.
-
ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಅರ್ಹತೆ, ನಿಷ್ಠೆ, ಜನಸೇವೆ ಮುಖ್ಯವಲ್ಲ. ಪೇಮೆಂಟ್ ಕೊಟ್ಟವರಿಗಷ್ಟೇ ಸಚಿವ ಸ್ಥಾನ. 'ಪೇಮೆಂಟ್' ಮಾನದಂಡ ಎಂದು ಕಾಂಗ್ರೆಸ್ ಕಾರ್ಯಕರ್ತರು ಈಗ ಬಹಿರಂಗವಾಗಿ ಕೇಳುತ್ತಿದ್ದಾರೆ. ಕನ್ನಡಿಗರ ಹಣ ಲೂಟಿ ಮಾಡುವವರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಬಹುಮಾನ ಸಿಕ್ಕಿದ್ದು, ಭ್ರಷ್ಟಾಚಾರದಲ್ಲಿಯೂ ಪ್ರಾಮಾಣಿಕತೆ ತೋರುವವರಿಗೆ ಗೌರವ ಸಿಕ್ಕಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿರುವ ರಾಜ್ಯ ಬಿಜೆಪಿ, ಲೂಟಿಕೋರ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟರಿಗೆ ಮಾತ್ರ ಆದ್ಯತೆ, ಮಾನ್ಯತೆ. ಭ್ರಷ್ಟ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಪೇಮೆಂಟ್ ಕೊಟ್ರೆ ಸಾಕು ಸಚಿವರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಗುತ್ತೆ, ಅದಕ್ಕೊಂದು ಉದಾಹರಣೆ ಎಂದರೆ ಮಂಕಾಳ ವೈದ್ಯ ಅವರನ್ನು ಕೈಬಿಟ್ಟು ಎಸ್‌ಎಸ್ ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಿರುವುದು. ಮಧ್ಯಾಹ್ನದವರೆಗೆ ಮಂಕಾಳ ವೈದ್ಯ ಹೆಸರು ಮೊದಲ ಪಟ್ಟಿಯಲ್ಲಿತ್ತು. ಮಧ್ಯಾಹ್ನದ ನಂತರ ಮಂಕಾಳ ವೈದ್ಯ ಹೆಸರು ಡಿಲಿಟ್ ಆಗಿ ಎಸ್.ಎಸ್ ಮಲ್ಲಿಕಾರ್ಜುನ್ ಸೇರ್ಪಡೆ ಆಗಿದೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ಹೇಳಿದಂತೆ ನೂತನ ಸಚಿವರ ಘನಂದಾರಿ ಸಾಧನೆಯ ಪಟ್ಟಿ
- ಬಿ. ನಾಗೇಂದ್ರ- ₹187 ಕೋಟಿ ವಾಲ್ಮೀಕಿ ನಿಗಮ ಹಣ ವರ್ಗಾವಣೆ ಪ್ರಕರಣದ ಸಿಬಿಐ ಆರೋಪಪಟ್ಟಿಯಲ್ಲಿರುವ ಆರೋಪಿ!
- ಮಧು ಬಂಗಾರಪ್ಪ - ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದಿಂದ ದೋಷಿ ಎಂಬ ತೀರ್ಪು ಪಡೆದಿರುವ, ಶಿಕ್ಷಣ ಇಲಾಖೆಯನ್ನು ಹಾಳು ಮಾಡಿದ ಅನಕ್ಷರಸ್ಥ!
- ವಿಜಯಾನಂದ ಕಾಶಪ್ಪನವರ್ - ಪತ್ರಕರ್ತನಿಗೆ ಬೆದರಿಕೆ ಹಾಕಿ ವಿರೋಧಿಗಳ ಮೇಲೆ ನಕಲಿ ಕೇಸ್ ಹಾಕಿ ಗೂಂಡಾಗಿರಿ ಮಾಡುತ್ತಿರುವ ಗೂಂಡಾ ರಾಜಕಾರಣಿ!
- ಸಂತೋಷ್ ಲಾಡ್ - ಹೆಲ್ತ್ ಕಿಟ್ ಹೆಸರಿನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಕೋಟಿ ಕೋಟಿ ಅಕ್ರಮ ನಡೆಸಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಕಳಂಕಿತ!
- ಕೆ.ಎಂ. ಶಿವಲಿಂಗೇಗೌಡ - ಸದನದಲ್ಲಿ ಅಸಂಸದೀಯ ಪದಗಳನ್ನು ಬಳಸಿ ಕಲಾಪದ ಗೌರವವನ್ನೇ ಹಾರಜು ಹಾಕುವ ಎಲುಬಿಲ್ಲದ ನಾಲಿಗೆ!
- ಇದು ಸಚಿವ ಸಂಪುಟವಲ್ಲ; ಹೊಡಿ, ಬಡಿ, ಕಡಿ ಆರೋಪ, ಅಹಂಕಾರ, ಅವ್ಯವಸ್ಥೆ ಮತ್ತು ಅಯೋಗ್ಯತೆಗೆ ಕಾಂಗ್ರೆಸ್ ನೀಡಿದ ಬಹುಮಾನ. ಅರ್ಹತೆಗಿಲ್ಲ ಆದ್ಯತೆ, ನೈತಿಕತೆಗಿಲ್ಲ ಬೆಲೆ, ಜನಾಭಿಪ್ರಾಯಕ್ಕಿಲ್ಲ ಗೌರವ, ಅನರ್ಹರಿಗೆ ಅಧಿಕಾರ ನೀಡುವುದೇ ಡಿ.ಕೆ.ಶಿವಕುಮಾರ್ ಸರ್ಕಾರದ ಕೊತ್ವಾಲ್ ಮಾಡೆಲ್ ಎಂದು ಕಿಡಿಕಾರಿದೆ.
ಲೂಟಿಕೋರ @INCKarnataka ಸರ್ಕಾರದಲ್ಲಿ ಭ್ರಷ್ಟರಿಗೆ ಮಾತ್ರ ಆದ್ಯತೆ, ಮಾನ್ಯತೆ..!#CongressFailsKarnataka pic.twitter.com/ICHr6DTpY5
— BJP Karnataka (@BJP4Karnataka) August 3, 2026
ಯಾರಿಗೆ ಯಾವ ಕೋಟಾದಲ್ಲಿ ಸಚಿವ ಸ್ಥಾನ?
ಹೊಡಿ-ಬಡಿ-ಕಡಿ ಕೋಟಾದಲ್ಲಿ ಸಚಿವರಾಗಿ ಆಯ್ಕೆಯಾದ ಶ್ರೀ ವಿಜಯಾನಂದ ಕಾಶಪ್ಪನವರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಹಗಲು ದರೋಡೆ ಹಾಗೂ ಲೂಟಿ ಕೋಟಾದಲ್ಲಿ ವಾಲ್ಮೀಕಿ ನಿಗಮದ ₹187 ಕೋಟಿ ಅನುದಾನವನ್ನು ಕಳ್ಳತನ ಮಾಡಿ ಮತ್ತೊಮ್ಮೆ ಸಚಿವರಾಗಿರುವ ಶ್ರೀ ಬಿ.ನಾಗೇಂದ್ರ ಅವರಿಗೆ ಹಾರ್ದಿಕ ಅಭಿನಂದನೆಗಳು. Beep ಹಾಗೂ ಬೈಗುಳ ಕೋಟಾದಿಂದ ಸಚಿವರಾಗಿರುವ ಶ್ರೀ ಶಿವಲಿಂಗೇಗೌಡ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಬಿಜೆಪಿ ಲೇವಡಿ ಮಾಡಿದೆ.
ಸಂಪುಟ ವಿಸ್ತರಣೆ ಅಂದ್ರೆ ಕಾಂಗ್ರೆಸ್‌ಗೆ ಬಂಡಾಯ ವಿಸ್ತರಣೆ ಇದ್ದಂತೆ
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಶೂನ್ಯಕ್ಕಿಳಿದಿವೆ, ಖಜಾನೆ ಖಾಲಿಯಾಗಿದೆ, ರೈತರು-ಸಂಕಷ್ಟದಲ್ಲಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಮಂತ್ರಿಗಿರಿ ಹಂಚಿಕೆ, ಅಸಮಾಧಾನ ಶಮನ ಮತ್ತು ರಾಜೀನಾಮೆ ನಾಟಕಗಳೇ ಮುಖ್ಯವಾಗಿವೆ. ಸಂಪುಟ ವಿಸ್ತರಣೆ ಅಂದ್ರೆ ಕಾಂಗ್ರೆಸ್‌ಗೆ ಬಂಡಾಯ ವಿಸ್ತರಣೆ ಇದ್ದಂತೆ. ಸಚಿವ ಸ್ಥಾನ ಸಿಗಲಿಲ್ಲ ಅಂತ 12 ಜನ ಶಾಸಕರು ರಾಜೀನಾಮೆಗೆ ಕ್ಯೂ ನಿಂತಿದ್ದಾರೆ. ಇನ್ನು ಎಷ್ಟು ವಿಕೆಟ್ ಉರಳಲಿದ್ದಾವೆ ಅನ್ನೋದೇ ಉಳಿದಿರೋ ಸಸ್ಪೆನ್ಸ್. ಈ ಸಸ್ಪೆನ್ಸ್ ನಡುವೆ ರಾಜ್ಯದ ಅಭಿವೃದ್ಧಿ ಅಯೋಮಯ ಎಂದು ಬಿಜೆಪಿ ಟೀಕಿಸಿದೆ.