ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ಸೇರಿ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸರ್ಕಾರ ಅಸ್ತು
ಲಾಡ್ಲೆ ಮಶಾಕ್ ದರ್ಗಾ ಕೇಸ್ ಹಾಗೂ ಕನ್ನಡ ಪರ ಹೋರಾಟಗಾರರ ವಿರುದ್ಧದವು ಸೇರಿದಂತೆ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನಿಸಿದೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧದ 10 ಪ್ರಕರಣಗಳು, ಕಾವೇರಿ ಹೋರಾಟಗಾರರ ವಿರುದ್ಧದ ಪ್ರಕರಣಗಳು ಸೇರಿವೆ.
ಸಂಗ್ರಹ ಚಿತ್ರ -
ಬೆಂಗಳೂರು: ಲಾಡ್ಲೆ ಮಶಾಕ್ ದರ್ಗಾ ಕೇಸ್ (Ladle Mashaq Dargah) ಹಾಗೂ ಕನ್ನಡ ಪರ ಹೋರಾಟಗಾರರ ವಿರುದ್ಧದವು ಸೇರಿದಂತೆ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನಿಸಿದೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧದ 10 ಪ್ರಕರಣಗಳು, ಕಾವೇರಿ ಹೋರಾಟಗಾರರ ವಿರುದ್ಧದ ಪ್ರಕರಣಗಳು, ಕನ್ನಡ ಪರ ಹೋರಾಟ, ಕಳಸಾ-ಬಂಡೂರಿ ಯೋಜನೆ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ರೈತರು ಹಾಗೂ ದಲಿತ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳೂ ಇವುಗಳಲ್ಲಿ ಸೇರಿವೆ ಎಂದು ತಿಳಿದು ಬಂದಿದೆ.
2022ರ ಶಿವರಾತ್ರಿಯಂದು ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗದ ಪೂಜೆಯ ಸಂದರ್ಭದಲ್ಲಿ ದೊಡ್ಡ ಗಲಾಟೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಕಿಡಿಗೇಡಿಗಳು ರಾಘವ ಚೈತನ್ಯ ಶಿವಲಿಂಗದ ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದರು. ಬಳಿಕ ಅದನ್ನ ಸ್ವಚ್ಛಗೊಳಿಸಿ ಪೂಜೆಗೆ ಅಂತ ತೆರಳಿದ್ದ ಅಂದಿನ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಹಾಗು ಡಿಸಿ, ಎಸ್ಪಿ ಕಾರಿನ ಮೇಲೆ ಬಡಿಗೆಗಳಿಂದ ಹೊಡೆದು ಕಲ್ಲು ತೂರಾಟ ಮಾಡಿ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು.
ಈ ಗಲಾಟೆ ಪ್ರಕರಣ ಸಂಬಂಧ ವಿವಿದ ಮುಸ್ಲಿಂ ಮುಖಂಡರು ಹಾಗೂ ಯುವಕರ ವಿರುದ್ಧ ದಾಖಲಾಗಿದ್ದ ಒಟ್ಟು 13 ಪ್ರಕರಣಗಳನ್ನ ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. 52 ಪ್ರಕರಣ ಹಿಂಪಡೆಯಲು ಸಂಪುದಲ್ಲಿ ನಿರ್ಧಾರ ವಿಚಾರ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಂಘಟನೆಗಳು, ರೈತರ ಮೇಲೆ ಇದ್ದ ಕೇಸ್ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಕಾನೂನಾತ್ಮಕವಾಗಿ ಕೇಸ್ ಹಿಂಪಡೆಯಲು ತೀರ್ಮಾನ ಆಗಿದೆ ಎಂದವರು ತಿಳಿಸಿದ್ದಾರೆ.
ಬಿಜೆಪಿ ಆಕ್ರೋಶ
ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ಕಿಡಿ ಕಾರಿರುವ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ, ರಾಜ್ಯ ಸರ್ಕಾರ ಒಂದು ಕಡೆ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿ ಸುಳ್ಳು ಮೊಕದ್ದಮೆ ದಾಖಲಿಸುವ ಜೊತೆಗೆ ರೌಡಿಶೀಟ್ ತೆರೆದು ಪೊಲೀಸ್ ಇಲಾಖೆಯ ಮೂಲಕ ಕಿರುಕುಳ ಕೊಡುವ ಕೆಲಸ ಮಾಡುತ್ತಿದೆ. ಮತ್ತೊಂದು ಕಡೆ ಮುಸ್ಲಿಮರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ ಪಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.