ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KR Puram Triple Murder Case: ನನ್ನ ಕುಟುಂಬವನ್ನು ರಕ್ಕಸನಂತೆ ಕೊಂದಿದ್ದು ಪ್ರಿಯಕರ ಕೆನೆತ್;‌ ವಿಚಾರಣೆ ವೇಳೆ ಉಲ್ಟಾ ಹೊಡೆದ ಶ್ವೇತಾ!

ಕೆ.ಆರ್‌.ಪುರ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ, ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಶ್ವೇತಾ ನೀಡಿರುವ ಹೊಸ ಹೇಳಿಕೆ ಇಡೀ ತನಿಖೆಯ ದಿಕ್ಕನ್ನೇ ಬದಲಿಸಿದೆ. ಈವರೆಗೆ ಕುಟುಂಬದವರನ್ನು ತಾನೇ ಕೊಂದಿದ್ದು ಎಂದು ಹೇಳುತ್ತಿದ್ದ ಶ್ವೇತಾ ಇದೀಗ ಪೊಲೀಸರ ಮುಂದೆ ಉಲ್ಟಾ ಹೊಡೆದಿದ್ದಾಳೆ ಎನ್ನಲಾಗಿದೆ.

ನನ್ನ ಕುಟುಂಬವನ್ನು ರಕ್ಕಸನಂತೆ ಕೊಂದಿದ್ದು ಕೆನೆತ್: ಶ್ವೇತಾ

-

Prabhakara R
Prabhakara R Jun 28, 2026 11:05 PM

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದ (KR Puram Triple Murder Case) ಆರೋಪಿಗಳಾದ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನೆತ್ ವಿಚಾರಣೆ ವೇಳೆ ಹಲವು ಆಘಾತಕಾರಿಗಳು ವಿಚಾರಗಳು ಹೊರಬರುತ್ತಿವೆ. ಇಷ್ಟು ದಿನ ಪೊಲೀಸರ ಮುಂದೆ “ನಾನೇ ಎಲ್ಲರನ್ನೂ ಕೊಲೆ ಮಾಡಿದ್ದು" ಎಂದು ಹೇಳುತ್ತಿದ್ದ ಶ್ವೇತಾ, ಇದೀಗ ಉಲ್ಟಾ ಹೊಡೆದಿದ್ದು, ನನ್ನ ಕುಟುಂಬವನ್ನು ರಕ್ಕಸನಂತೆ ಕೊಂದಿದ್ದು ಪ್ರಿಯಕರ ಕೆನೆತ್ ಎಂದು ಹೇಳಿದ್ದಾಳೆ.

ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಶ್ವೇತಾ ನೀಡಿರುವ ಹೊಸ ಹೇಳಿಕೆ ಇಡೀ ತನಿಖೆಯ ದಿಕ್ಕನ್ನೇ ಬದಲಿಸಿದೆ. ತಾನು ಚಾಕುವನ್ನೇ ಮುಟ್ಟಿಲ್ಲ, ನನ್ನ ತಾಯಿಯನ್ನು ರಕ್ಕಸನಂತೆ ಚಾಕುವಿನಿಂದ ಮನಬಂದಂತೆ ಇರಿದು ಕೊಂದಿದ್ದು ಕೆನೆತ್. ನಾನು ಕೇವಲ ಬಾಗಿಲ ಬಳಿ ನಿಂತು ನೋಡುತ್ತಿದ್ದೆ ಅಷ್ಟೇ. ನನ್ನ ತಂದೆ ಮತ್ತು ತಂಗಿಯನ್ನೂ ಅವನೇ ಕೊಂದಿದ್ದಾನೆ. ನಾನು ಕೊಲೆ ಮಾಡಿಲ್ಲ, ಆದರೆ, ಆತನಿಗೆ ಸಹಾಯ ಮಾಡಿದ್ದೇನೆ ಅಷ್ಟೇ ಎಂದು ಕಣ್ಣೀರು ಹಾಕಿದ್ದಾಳೆ ಎಂದು ತಿಳಿದುಬಂದಿದೆ.

ಮರಣೋತ್ತರ ಪರೀಕ್ಷೆಯ ವರದಿ ಶ್ವೇತಾಳ ತಾಯಿಯ ಕೊಲೆ ಎಷ್ಟು ಕ್ರೂರವಾಗಿ ನಡೆದಿತ್ತು ಎಂಬುದನ್ನು ಬಿಚ್ಚಿಟ್ಟಿದೆ. ಶ್ವೇತಾಳ ತಾಯಿಯ ದೇಹದ ಮೇಲೆ ಬರೋಬ್ಬರಿ 22 ಬಾರಿ ಚಾಕುವಿನಿಂದ ಇರಿಯಲಾಗಿದೆ. ವಿಶೇಷವೆಂದರೆ, ಎಲ್ಲಾ ಇರಿತಗಳೂ ಒಂದೇ ಮಾದರಿಯಲ್ಲಿ ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಶ್ವೇತಾ ಪದೇ ಪದೇ ಹೇಳಿಕೆ ಬದಲಾಯಿಸುತ್ತಿರುವುದರಿಂದ ಸದ್ಯ ಪೊಲೀಸರು ಈ ಇರಿತಗಳು ಶ್ವೇತಾಳದ್ದಾ ಅಥವಾ ಕೆನೆತ್‌ನದ್ದಾ ಎಂಬ ಎರಡೂ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ.

ಮನೆಯಲ್ಲಿ ಮೂವರ ರಕ್ತದ ಮಡುವಿನ ಹೆಣಗಳನ್ನು ಬಿಸಾಡಿದ ಈ ನರಹಂತಕ ಜೋಡಿ, ಅದೇ ರಾತ್ರಿ ನಗರದಲ್ಲಿ ಮಧ್ಯರಾತ್ರಿಯವರೆಗೂ ಯಾವುದೇ ಭಯವಿಲ್ಲದೇ ಜಾಲಿಯಾಗಿ ಸುತ್ತಾಡಿದೆ. ಸಿಕ್ಕಿಬೀಳಬಾರದೆಂದು ಹೈವೇ ಬಿಟ್ಟು ಗಲ್ಲಿ ರಸ್ತೆಗಳು ಹಾಗೂ ಸಬ್ ರೋಡ್‌ಗಳ ಮೂಲಕ ಹೊಸೂರು ಮಾರ್ಗವಾಗಿ ಬೈಕ್‌ನಲ್ಲಿ ತಮಿಳುನಾಡಿನ ತಿರುವಣ್ಣಾಮಲೈ ತಲುಪಿದ್ದರು.

ಟ್ರ್ಯಾಕ್ ಮಾಡಬಾರದೆಂದು ಇಬ್ಬರೂ ಮೊಬೈಲ್ ಬಳಸದೇ, ಕೇವಲ 50 ಸಾವಿರ ರೂಪಾಯಿ ನಗದು ಹಣದೊಂದಿಗೆ ಪರಾರಿಯಾಗಿದ್ದರು. ತಿರುವಣ್ಣಾಮಲೈನಲ್ಲಿ ಬೈಕ್ ಬಿಟ್ಟು ಖಾಸಗಿ ಬಸ್ ಮೂಲಕ ಪಾಂಡಿಚೇರಿಗೆ ತೆರಳಿದ್ದ ಕೆನೆತ್ ಮತ್ತು ಶ್ವೇತಾ, ಅಲ್ಲಿ ಯಾವುದೇ ರೂಮ್ ಬುಕ್ ಮಾಡದೇ ಸಿಕ್ಕಿಬೀಳುವ ಭೀತಿಯಿಂದ ಬೀಚ್‌ಗಳು ಹಾಗೂ ಗಲ್ಲಿ ರಸ್ತೆಗಳಲ್ಲೇ ಅಲೆದಾಡುತ್ತಿದ್ದರು.

ಕೊಲೆ ಮಾಡಿದ ದಿನದಿಂದ ಬಂಧನವಾಗುವವರೆಗೂ ಕೆನೆತ್ ಸಂಪೂರ್ಣವಾಗಿ ಮದ್ಯದ ಮತ್ತಿನಲ್ಲೇ ತೇಲಾಡುತ್ತಿದ್ದ. ಕೆ.ಆರ್. ಪುರಂ ಪೊಲೀಸರು ಇಬ್ಬರನ್ನೂ ಮುಖಾಮುಖಿ ಕೂರಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಕೊಲೆಯ ಅಸಲಿ ಸತ್ಯ ಹೊರಬರಲಿದೆ.