Dr K Sudhakar: ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರ ವಿರುದ್ಧ ಪ್ರಕರಣ ದಾಖಲಿಸಬೇಕು, ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ: ಸಂಸದ ಡಾ.ಕೆ.ಸುಧಾಕರ್
ಶಾಸಕರ ವಿರುದ್ಧ ಪ್ರತಿಭಟಿಸುವುದಿದ್ದರೆ, ಕಾರ್ಯಕರ್ತರು ಒಂದು ದಿನ ನಿಗದಿ ಮಾಡಬಹುದಿತ್ತು. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಟಿಸಬಾರದಿತ್ತು. ಎಲ್ಲಿಗೂ ಬಾರದ ಶಾಸಕರು ಬೇಕೆಂದೇ ದುರುದ್ದೇಶದಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಶಾಸಕರು ಮೊದಲು ಸಿದ್ದರಾಮಯ್ಯ(Siddaramaiah)ನವರ ಪರವಾಗಿದ್ದು, ಬಳಿಕ ಸಿಎಂ ಡಿ.ಕೆ.ಶಿವಕುಮಾರ್(Chief Minister D K Shivkumar) ಅವರ ಪರವಾಗಿದ್ದಾರೆ
ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದಿರುವ ಸಂಘರ್ಷಕ್ಕೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ನೀಡಿದ ಪ್ರಚೋದನೆಯೇ ಕಾರಣ. ಆದ್ದರಿಂದ ಪೊಲೀಸ್ ಇಲಾಖೆ ಶಾಸಕರ ವಿರುದ್ಧ ಘಟನೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಆಗ್ರಹಿಸಿದರು. -
ಚಿಕ್ಕಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಜಯಂತಿ(Nadaprabhu Kempe Gowda Jayanti) ಕಾರ್ಯಕ್ರಮದಲ್ಲಿ ನಡೆದಿರುವ ಸಂಘರ್ಷಕ್ಕೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ನೀಡಿದ ಪ್ರಚೋದನೆಯೇ ಕಾರಣ. ಆದ್ದರಿಂದ ಪೊಲೀಸ್ ಇಲಾಖೆ ಶಾಸಕರ ವಿರುದ್ಧ ಘಟನೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಆಗ್ರಹಿಸಿದರು.
ಜಿಲ್ಲೆಯ ಒಕ್ಕಲಿಗರ ಭವನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಂಪೇ ಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಅಮಾಯಕ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಪ್ರಚೋದನೆ ನೀಡಿರುವುದೇ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿರುವುದರಿಂದ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ನಾನು ಪೊಲೀಸ್ ಅಧಿಕಾರಿಗಳ ಬಳಿ ಆಗ್ರಹಿಸಿದ್ದೇನೆ. ಆದರೂ ಪೊಲೀಸರು ಕ್ರಮ ವಹಿಸಿಲ್ಲ. ಆದ್ದರಿಂದ ನಾವೆಲ್ಲರೂ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲು ಕ್ರಮ ವಹಿಸಬೇಕಿದೆ. ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ಮಾಡೋಣ ಎಂದರು.
ಶಾಸಕರ ರಾಜಕೀಯ ತಂತ್ರ
ಶಾಸಕರ ವಿರುದ್ಧ ಪ್ರತಿಭಟಿಸುವುದಿದ್ದರೆ, ಕಾರ್ಯಕರ್ತರು ಒಂದು ದಿನ ನಿಗದಿ ಮಾಡಬಹುದಿತ್ತು. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಟಿಸಬಾರದಿತ್ತು. ಎಲ್ಲಿಗೂ ಬಾರದ ಶಾಸಕರು ಬೇಕೆಂದೇ ದುರುದ್ದೇಶದಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂಬುದನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಶಾಸಕರು ಮೊದಲು ಸಿದ್ದರಾಮಯ್ಯ(Siddaramaiah)ನವರ ಪರವಾಗಿದ್ದು, ಬಳಿಕ ಸಿಎಂ ಡಿ.ಕೆ.ಶಿವಕುಮಾರ್(Chief Minister D K Shivkumar) ಅವರ ಪರವಾಗಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(Former Chief Minister H D Kumaraswamy), ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(Former Prime Minister H D Devegowda)ರನ್ನು ನಿಂದಿಸಿದರೆ, ಮುಖ್ಯಮಂತ್ರಿಗೆ ಹತ್ತಿರವಾಗಬಹುದು ಎಂಬ ತಂತ್ರವನ್ನು ಅವರು ಮಾಡಿದ್ದಾರೆ. ಅದಕ್ಕಾಗಿ ದೇವನಹಳ್ಳಿಗೂ ಹೋಗಿ ಮಾಧ್ಯಮಗಳ ಮುಂದೆ ಮಾತಾಡಿದ್ದಾರೆ. ಚಿಕ್ಕಬಳ್ಳಾಪುರದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆಯಾಗಬೇಕು, ನಾನು ದೊಡ್ಡ ನಾಯಕನೆಂದು ಬಿಂಬಿಸಿಕೊಳ್ಳಬೇಕೆಬ ತಂತ್ರವನ್ನು ಅವರು ಮಾಡಿದ್ದಾರೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ ನನಗೆ ಉದ್ವೇಗ ಉಂಟುಮಾಡಿದೆ. ಚುನಾಯಿತ ಪ್ರತಿನಿಧಿ ಜನರ ಮುಂದೆ ನಡೆದುಕೊಂಡ ರೀತಿಯಿಂದ ನಾವೆಲ್ಲರೂ ತಲೆ ತಗ್ಗಿಸುವಂತಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ನೋಡಲು ಕೂಡ ನನಗೆ ಭಯವಾಗುತ್ತಿದೆ. ಒಬ್ಬ ಶಾಸಕ ಜನರಿಂದ ಈ ರೀತಿ ನಿಂದಿಸಿ ಕೊಳ್ಳುವುದನ್ನು ನಾನು ಈವರೆಗೂ ನೋಡಿಲ್ಲ. ಚಿಕ್ಕಬಳ್ಳಾಪುರದ ಮಾನವನ್ನು ಶಾಸಕರು ನಯಾ ಪೈಸೆಗೂ ಉಳಿಸಿಲ್ಲ. ಯಾವುದೇ ಕಾರ್ಯಕರ್ತನಿಗೆ ಅನ್ಯಾಯವಾದರೂ ಎಲ್ಲರೂ ಒಂದಾಗಿ ಪ್ರತಿಭಟಿಸಬೇಕು. ಕಾರ್ಯಕರ್ತರ ವಿರುದ್ಧ ದಾಖಲಾದ ಕೇಸುಗಳ ವಿರುದ್ಧ ಹೋರಾಟ ಮಾಡುವ ಖರ್ಚನ್ನು ನಾನು ಭರಿಸುತ್ತೇನೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೀರಾವರಿ ಕ್ಷೇತ್ರಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆ ಎಂಬುದು ಇವರಿಗೆ ಗೊತ್ತಿಲ್ಲ. ಅವರು ಯಾವ ಪಂಚೆ ಧರಿಸಿದರೂ ಶಾಸಕರಿಗೆ ಏನಾಗಬೇಕಿದೆ? ಶಾಸಕರ ಹೆಸರಲ್ಲಿ ಬೆಂಗಳೂರು ಸಮೀಪ ಎರಡು ನಿವೇಶನಗಳಿವೆ. ಅದರ ಬದಲು ಸಾಮಾನ್ಯರಿಗೆ ನಿವೇಶನ ಮಾಡಿಸಿಕೊಡಬೇಕಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ಸ್ವಾತಂತ್ರ‍್ಯ ದಿನಾಚರಣೆ ಮೊದಲಾದ ಕಾರ್ಯಕ್ರಮಗಳಲ್ಲಿ ಶಾಸಕರು ಭಾಗವಹಿಸುವುದೇ ಇಲ್ಲ.
ಯಾವ ಸಮುದಾಯಕ್ಕೂ ಶಾಸಕರು ಒಳಿತು ಮಾಡುವುದಿಲ್ಲ. ಪ್ರತಿ ವರ್ಷ ಕೈವಾರ ತಾತಯ್ಯ ಜಯಂತಿ ಆಚರಿಸುತ್ತಿದ್ದೆವು. ನಾನು ಸಚಿವನಾಗಿದ್ದಾಗ ಆಚರಣೆ ಮಾಡಿ, ಆ ಸಮುದಾಯಕ್ಕೆ ಮಂಡಳಿ ಮಾಡಿಸಿಕೊಟ್ಟಿದ್ದೆ. ಆದರೆ ಶಾಸಕರು ಜಿಲ್ಲಾಧಿಕಾರಿ ಕಚೇರಿಯ ಒಂದು ಕೋಣೆಯಲ್ಲಿ ಕೈವಾರ ತಾತಯ್ಯ ಜಯಂತಿ ಆಚರಣೆಯಾಗುವಂತೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದ ಶಾಸಕರು ಯಾವುದೇ ಜಾತಿ ಸಮುದಾಯಗಳನ್ನು ಒಂದಾಗಿ ಕರೆದೊಯ್ಯುವುದಿಲ್ಲ. ತಮ್ಮ ಸ್ವಂತ ಜಾತಿಯವ ರಿಗೂ ಅಪಮಾನ ಮಾಡಿದ್ದಾರೆ. ಶಾಸಕ ಹುದ್ದೆಯಲ್ಲಿರುವವರು ತೊಡೆ ತಟ್ಟುವುದು, ಮೀಸೆ ತಿರುವು ದು, ಭುಜ ತಟ್ಟಿಕೊಳ್ಳುವುದು ಸರಿಯಲ್ಲ ಎಂದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಆಯೋಜಕ ರನ್ನೇ ಪೊಲೀಸರು ಹೊರಗಿಟ್ಟಿದ್ದರು. ಈ ಬಗ್ಗೆ ನಾನು ಪೊಲೀಸರ ಬಳಿ ಮಾತನಾಡಿ ಆಯೋಜಕ ರನ್ನು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದೆ. ಆ ಸಮಯ ದಲ್ಲಿ ಶಾಸಕರಿಗೆ ಕ್ಷಮೆ ಕೇಳುವಂತೆ ಕಾರ್ಯಕರ್ತರು ಆಗ್ರಹಿಸಿದಾಗ, ಅವರನ್ನು ಒಳಗೆ ಬಿಡದಂತೆ ಪೊಲೀಸರಿಗೆ ಶಾಸಕರು ಸೂಚನೆ ನೀಡಿದ್ದರು. ಆ ಸಮಯದಲ್ಲಿ ಉದ್ವಿಗ್ನ ವಾತಾವರಣ ಉಂಟಾ ಗಿದ್ದು, ಕಾರ್ಯಕರ್ತರು ಸಿಟ್ಟಿಗೆದ್ದರು.
ಕಾರ್ಯಕರ್ತರು ತಮ್ಮ ಬುದ್ಧಿಯನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳಬೇಕೆಂದು ಮಾಜಿ ಸಿ.ಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಘಟನೆಯಿಂದಾಗಿ ಅನೇಕ ಕಾರ್ಯಕರ್ತರು ಸಮಸ್ಯೆ ಗೊಳಗಾಗಿದ್ದಾರೆ. ಎಲ್ಲ ಮುಖಂಡರು ಕಾರ್ಯಕರ್ತರ ಜೊತೆ ಇದ್ದಾರೆ. ಇದೇ ರೀತಿ ಮುಂದುವರಿದರೆ ಯಾವುದೇ ಕಾರಣಕ್ಕೆ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ. ಶಾಸಕರು ಪ್ರತಿ ಜಾತಿಗಳನ್ನು ಒಡೆಯುತ್ತಿದ್ದಾರೆ. ನಾವು ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋದರೆ, ಈಗಿನ ಶಾಸಕರು ಎಲ್ಲ ಜಾತಿಗಳ ಜನರನ್ನು ಪ್ರತ್ಯೇಕವಾಗಿ ನೋಡುತ್ತಿದ್ದಾರೆ ಎಂದರು.