ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬ್ರಾಹ್ಮಣರ ದೊಡ್ಡ ಬಂಡವಾಳ ಜ್ಞಾನ ಮತ್ತು ವಿಚಾರಶಕ್ತಿ: ವಿಶ್ವೇಶ್ವರ ಭಟ್

ಬ್ರಾಹ್ಮಣ ಸಮುದಾಯದ ದೊಡ್ಡ ಬಂಡವಾಳ ಹಣವಲ್ಲ, ಬದಲಾಗಿ ಜ್ಞಾನ, ವಿಚಾರಶಕ್ತಿ, ಪ್ರಾಮಾಣಿಕತೆ ಮತ್ತು ಹೊಸ ಆಲೋಚನೆಗಳನ್ನು ರೂಪಿಸುವ ಸಾಮರ್ಥ್ಯ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದರು. ವಿಪ್ರ ವ್ಯಾಪಾರ ವೇದಿಕೆ ವತಿಯಿಂದ ಶನಿವಾರ ಶ್ರೀ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಪ್ರ ಸಮ್ಮಿಲನ-2026’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬ್ರಾಹ್ಮಣರ ದೊಡ್ಡ ಬಂಡವಾಳ ಜ್ಞಾನ ಮತ್ತು ವಿಚಾರಶಕ್ತಿ: ವಿಶ್ವೇಶ್ವರ ಭಟ್

ವಿಪ್ರ ಸಮ್ಮಿಲನ-2026 ಕಾರ್ಯಕ್ರಮ -

Vishakha Bhat Heggar
Vishakha Bhat Heggar Aug 9, 2026 11:06 AM

ಬೆಂಗಳೂರು: ಬ್ರಾಹ್ಮಣ ಸಮುದಾಯದ ದೊಡ್ಡ ಬಂಡವಾಳ ಹಣವಲ್ಲ, ಬದಲಾಗಿ ಜ್ಞಾನ, ವಿಚಾರಶಕ್ತಿ, ಪ್ರಾಮಾಣಿಕತೆ ಮತ್ತು ಹೊಸ ಆಲೋಚನೆಗಳನ್ನು ರೂಪಿಸುವ ಸಾಮರ್ಥ್ಯ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ( Vishweshwar Bhat) ತಿಳಿಸಿದರು. ವಿಪ್ರ ವ್ಯಾಪಾರ ವೇದಿಕೆ ವತಿಯಿಂದ ಶನಿವಾರ ಶ್ರೀ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಪ್ರ ಸಮ್ಮಿಲನ-2026’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಾಹ್ಮಣರನ್ನು ಅಧ್ಯಯನ, ಪೌರೋಹಿತ್ಯ, ಆಡಳಿತ ಹಾಗೂ ಶಿಕ್ಷಕ ವೃತ್ತಿಗಳಿಗೆ ಮಾತ್ರ ಸೀಮಿತಗೊಳಿಸುವ ಮನೋಭಾವ ಬದಲಾಗಬೇಕು. ಕಾಲ ಬದಲಾಗಿದ್ದು, ಬ್ರಾಹ್ಮಣರೂ ಯಶಸ್ವಿ ಉದ್ಯಮಿಗಳಾಗಿ ಬೆಳೆಯುವ ಅಗತ್ಯವಿದೆ. ನನ್ನ ತಂದೆ ಮತ್ತು ತಾತ ಪೌರೋಹಿತ್ಯದ ಜತೆಗೆ ವ್ಯಾಪಾರವನ್ನೂ ಮಾಡುತ್ತಿದ್ದರು. ಬೆಳಗಿನ ಜಾವ ಎದ್ದು ಮಂತ್ರಾಭ್ಯಾಸ, ಸಂಸ್ಕಾರ ಹಾಗೂ ಅಧ್ಯಯನ ನಡೆಸಿಕೊಂಡು ಜೀವನ ಸಾಗಿಸುವ ಪರಂಪರೆ ಇತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಬ್ರಾಹ್ಮಣರು ತಮ್ಮ ಮಿತಿಗಳನ್ನು ಮೀರಿ ಹೊಸ ಕ್ಷೇತ್ರಗಳಿಗೆ ಕಾಲಿಡಬೇಕು ಎಂದರು.

ವಿಪ್ರ ಬಿಸಿನೆಸ್ ಫೋರಂ’ ಕೇವಲ ಜಾತಿ ಆಧಾರಿತ ವೇದಿಕೆಯಾಗದೆ, ವಿಪ್ರ ಸಮುದಾಯದ ಯುವಕರು ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ವೇದಿಕೆಯಾಗಬೇಕು. ವೇದೋಪನಿಷತ್ತುಗಳ ಅಧ್ಯಯನ, ಉಪನಯನ, ಸಂಸ್ಕಾರ ಹಾಗೂ ಜ್ಞಾನಕ್ಕೆ ಮಹತ್ವ ನೀಡುವುದರ ಜತೆಗೆ ಛಲ ಮತ್ತು ಪರಿಶ್ರಮದಿಂದ ಬದುಕಿನಲ್ಲಿ ಮುನ್ನಡೆಯಬೇಕು.ಹೊಸ ಉದ್ಯಮ ಆರಂಭಿಸುವಾಗ ‘ಬಂಡವಾಳ ಎಲ್ಲಿದೆ?’ ಎಂಬ ಪ್ರಶ್ನೆ ಸಾಮಾನ್ಯ. ಆದರೆ ಉದ್ಯಮಕ್ಕೆ ಹಣವೊಂದೇ ಬಂಡವಾಳವಲ್ಲ. ಬುದ್ಧಿವಂತಿಕೆ, ವಿಚಾರಶಕ್ತಿ, ಪ್ರಾಮಾಣಿಕತೆ ಮತ್ತು ಹೊಸ ಆಲೋಚನೆಗಳು ಕೂಡ ದೊಡ್ಡ ಬಂಡವಾಳ. ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಹೊಸ ವಿಚಾರವನ್ನು ರೂಪಿಸುವ ಸಾಮರ್ಥ್ಯವಿರುವವರಿಗೆ ಅವಕಾಶಗಳು ಹೆಚ್ಚಿವೆ ಎಂದರು.

WhatsApp Image 2026-08-09 at 10.24.16 AM

ಉದ್ಯಮದಲ್ಲಿ ಸಾಲವೂ ಒಂದು ಸಾಧನವಾಗಬಹುದು. ದೊಡ್ಡ ಉದ್ಯಮಗಳನ್ನು ಕಟ್ಟಿದವರು ತಮ್ಮದೇ ಹಣದಿಂದ ಮಾತ್ರ ಬೆಳೆದಿಲ್ಲ, ಅಗತ್ಯಕ್ಕೆ ತಕ್ಕಂತೆ ಸಾಲ ಪಡೆದು, ಅದನ್ನು ಮರುಪಾವತಿಸುವ ಜವಾಬ್ದಾರಿಯೊಂದಿಗೆ ವ್ಯವಹಾರವನ್ನು ವಿಸ್ತರಿಸಿದ್ದಾರೆ. ವಿಜಯ ಸಂಕೇಶ್ವರ ಅವರ ಉದ್ಯಮಶೀಲತೆ ಉಲ್ಲೇಖಿಸಿ, ದೊಡ್ಡ ಗುರಿ ಇಟ್ಟುಕೊಂಡು ಅಪಾಯವನ್ನು ನಿರ್ವಹಿಸುವ ಧೈರ್ಯ ಉದ್ಯಮಿಗಳಿಗೆ ಅಗತ್ಯ. ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಸೇರಿದಂತೆ ಹಲವು ಉದ್ಯಮಿಗಳು ಸಣ್ಣ ಪ್ರಮಾಣದಲ್ಲಿ ಆರಂಭಿಸಿ ದೊಡ್ಡ ಸಂಸ್ಥೆಗಳನ್ನು ನಿರ್ಮಿಸಿದ್ದಾರೆ. ಇತರರಿಂದ ಬಂಡವಾಳ ಪಡೆದು ಅದನ್ನು ಸಮರ್ಥವಾಗಿ ಬಳಸಿಕೊಂಡು ಉದ್ಯಮ ಬೆಳೆಸುವ ಸಾಮರ್ಥ್ಯವೂ ಉದ್ಯಮಶೀಲತೆಯ ಭಾಗವಾಗಿದೆ ಎಂದರು.

WhatsApp Image 2026-08-09 at 10.45.00 AM (1)

ಈ ವೇಳೆ ಪ್ರೊ. ರಾಧಾಕೃಷ್ಣ ಮಾತನಾಡಿ, ಕಳೆದ ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯದಿರುವುದು ಸಮುದಾಯದ ರಾಜಕೀಯ ಅಸ್ತಿತ್ವದ ಬಗ್ಗೆ ಆತಂಕ ಮೂಡಿಸಿದೆ. ಬ್ರಾಹ್ಮಣ ಸಮುದಾಯದ ಬಗ್ಗೆ ಸಮಾಜದಲ್ಲಿ ನವಿರಾದ ರೀತಿಯ ತಿರಸ್ಕಾರದ ಮನೋಭಾವ ಬೆಳೆಯುತ್ತಿರುವುದು ಗಮನಕ್ಕೆ ಬರುತ್ತಿದೆ. ರಾಜಕೀಯ ಕ್ಷೇತ್ರದಲ್ಲಿನ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವುದು ಈ ಬೆಳವಣಿಗೆಯ ಭಾಗವಾಗಿದೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಜನಸಂಖ್ಯೆಯ ಪ್ರಮಾಣವೂ ಇಳಿಕೆಯಾಗುತ್ತಿದೆ. ಹಿಂದೆ ಸುಮಾರು ಶೇ.4ರಷ್ಟಿದ್ದ ಸಮುದಾಯದ ಜನಸಂಖ್ಯೆ ಇದೀಗ ಸುಮಾರು ಶೇ.2.8ಕ್ಕೆ ಇಳಿದಿದೆ. ಸಮುದಾಯದ ಜನರು ಉದ್ಯೋಗ, ಶಿಕ್ಷಣ ಹಾಗೂ ಇತರ ಕಾರಣಗಳಿಂದ ಬೇರೆ ರಾಜ್ಯಗಳು ಮತ್ತು ದೇಶಗಳಿಗೆ ವಲಸೆ ಹೋಗುತ್ತಿರುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದರು.

ವಿಶ್ವವಾಣಿ ಪುಸ್ತಕ ಬಿಡುಗಡೆ ಸಮಾರಂಭ; ವಿಶ್ವೇಶ್ವರ ಭಟ್ ಜತೆ ಅಭಿಮಾನಿಗಳು!

ವಿಪ್ರ ಸಮ್ಮಿಲನ–2026 ಕಾರ್ಯಕ್ರಮದಲ್ಲಿ ಬಿಬಿಎಫ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಪ್ರೊ. ಕೆ.ಇ. ರಾಧಾಕೃಷ್ಣ , ಎಸಿಪಿ ಗೀತಾ ಕುಲಕರ್ಣಿ, ಎಫ್ ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಸೇರಿದಂತೆ ವಿಪ್ರ ವ್ಯಾಪಾರ ವೇದಿಕೆಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಘಟನೆಯ ಮೊಬೈಲ್ ಅಪ್ಲಿಕೇಶನ್, ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.