MLC Abdul jabbar: ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್; ಶೀಘ್ರದಲ್ಲೇ ನೂತನ ಸಮಿತಿ ರಚನೆ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯವಿತ್ತು. ಆದರೆ, ತಮ್ಮ ಬೇಡಿಕೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಎಂಎಲ್‌ಸಿ ಹಾಗೂ ಟಿಕೆಟ್ ಆಕಾಂಕ್ಷಿ ಅಬ್ದುಲ್ ಜಬ್ಬಾರ್ ಸಹ ಪ್ರಚಾರದಿಂದ ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಹೈಕಮಾಂಡ್ ಮುಂದಾಗಲಿದೆ ಎಂಬ ಮಾಹಿತಿ ಬೆನ್ನಲ್ಲೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ.
ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಮತ್ತು ಡಿ.ಕೆ.ಶಿವಕುಮಾರ್. -
ಬೆಂಗಳೂರು, ಏ. 12: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ (MLC Abdul jabbar) ಅವರು ನೀಡಿರುವ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಂಗೀಕರಿಸಿದ್ದಾರೆ. "ಅಬ್ದುಲ್ ಜಬ್ಬಾರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ. ನೂತನ ಸಮಿತಿ ಶೀಘ್ರ ರಚನೆಗೆ ಕ್ರಮ ವಹಿಸಲಾಗಿದೆ ಎಂದು ಶಿವಕುಮಾರ್ ಅವರು ಹೇಳಿದ್ದಾರೆ.
ಉಪಚುನಾವಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ
ಉಪಚುನಾವಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪಕ್ಷದ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಶನಿವಾರ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಇವರ ರಾಜೀನಾಮೆಯನ್ನು ಡಿ.ಕೆ. ಶಿವಕುಮಾರ್ ಅವರು ಅಂಗೀಕರಿಸಿದ್ದಾರೆ.
ದಾವಣಗೆರೆ ಉಪಚುನಾವಣಾ ಸಂದರ್ಭದಲ್ಲಿ ಪಕ್ಷದ ಅಂತರಿಕ ಬೆಳವಣಿಗೆಗಳು ಮತ್ತು ನಾಯಕರ ನಡುವಿನ ಮುನಿಸು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾಗಬಹುದು ಎಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ವರದಿ ನೀಡಿದ್ದರು. ಪ್ರಚಾರದಿಂದ ದೂರ ಉಳಿದ ಹಿನ್ನೆಲೆಯಲ್ಲಿ ಅಬ್ದುಲ್ ಜಬ್ಬಾರ್ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್ ಮುಂದಾಗಿತ್ತು. ಹೀಗಾಗಿ ತಮ್ಮನ್ನು ಅಮಾನತು ಮಾಡುತ್ತಾರೆ ಎಂಬ ಸೂಚನೆ ಸಿಗುತ್ತಿದ್ದಂತೆಯೇ ಕೆಪಿಸಿಸಿ ಅಲಸಂಖ್ಯಾತ ಘಟಕದ ಅಧ್ಯಕ್ಷ ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದಲ್ಲದೆ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅಲ್ಪಸಂಖ್ಯಾತ ಶಾಸಕರಿಂದ ದೂರು ದಾಖಲಾದ ಹಿನ್ನೆಲೆಯಲ್ಲಿ ಶಿಸ್ತುಕ್ರಮದ ಭೀತಿ ಎದುರಾಗಿದೆ. ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿರುವ ನಡುವೆಯೇ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.