ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾಂಗ್ರೆಸ್‌ಗೆ ತಲೆನೋವಾದ ಪಕ್ಷ ವಿರೋಧಿ ಚಟುವಟಿಕೆ; ಸಚಿವ ಜಮೀರ್ ಆಪ್ತೆಯ ತಲೆದಂಡ

Afreen Khan: ಕಾಂಗ್ರೆಸ್‌ನಲ್ಲಿ ಕೆಲವು ದಿನಗಳಿಂದ ಬಿಡುವಿಲ್ಲದ ಚಟುವಟಿಕೆ ನಡೆಯುತ್ತಿದ್ದು, ಇದೀಗ ಮತ್ತೊಂದು ವಿಕೆಟ್‌ ಪತನವಾಗಿದೆ. ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆಯಾಗಿದ್ದ, ಸಚಿವ ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಅಫ್ರಿನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಸಚಿವ ಜಮೀರ್ ಆಪ್ತೆ  ಅಫ್ರಿನ್ ಖಾನ್ ತಲೆದಂಡ

ಅಫ್ರಿನ್ ಖಾನ್ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Apr 15, 2026 7:43 PM

ಬೆಂಗಳೂರು, ಏ. 15: ಕಾಂಗ್ರೆಸ್‌ನಲ್ಲಿ ಕೆಲವು ದಿನಗಳಿಂದ ಬಿಡುವಿಲ್ಲದ ಚಟುವಟಿಕೆ ನಡೆಯುತ್ತಿದ್ದು, ಇದೀಗ ಮತ್ತೊಂದು ವಿಕೆಟ್‌ ಪತನವಾಗಿದೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಿಧಾನ ಪರಿಷತ್ ಸದಸ್ಯ ನಸೀ‌ರ್ ಅಹ್ಮದ್ (Naseer Ahmed) ಅವರನ್ನು ವಜಾ ಮಾಡಿದ ಬೆನ್ನಲ್ಲೇ ಇದೀಗ ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆಯಾಗಿದ್ದ, ಸಚಿವ ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಅಫ್ರಿನ್ ಖಾನ್ (Afreen Khan) ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಅಫ್ರಿನ್ ಖಾನ್ ಅವಹೇಳನಕಾರಿ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಅಲ್ಲದೆ ರಿಜ್ವಾನ್ ಅರ್ಷದ್ ಅವರನ್ನು ‘ಮೀರ್ ಸಾದಿಕ್’ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದು ಪಕ್ಷದ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅಫ್ರಿನ್ ಖಾನ್ ತಲೆದಂಡವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಫ್ರಿನ್ ಖಾನ್ ಹೇಳಿಕೆ:



ಉಚ್ಚಾಟನೆ ಆದೇಶಕ್ಕೆ ಪ್ರತಿಕ್ರಿಯಿಸಿದ ಅಫ್ರಿನ್ ಖಾನ್ ಪಕ್ಷದ ವಿರುದ್ಧ ಸಿಡಿದೆದ್ದಾರೆ. ʼʼನಾನು ಏಪ್ರಿಲ್ 4ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಆದರೆ ಇಂದು ನನ್ನನ್ನು ಹೊರಹಾಕಲಾಗಿದೆ. ಇದು ಮೂರ್ಖತನದ ನಿರ್ಧಾರʼʼ ಎಂದು ಹೇಳಿದ್ದಾರೆ.

ಶಿಸ್ತು ಕ್ರಮ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗದ ಕಾರಣಕ್ಕೆ ನಸೀರ್ ಅಹ್ಮದ್ ಪ್ರಚಾರದಿಂದ ದೂರ ಉಳಿದಿದ್ದರು. ಇದರಿಂದ ಸಿಟ್ಟಿಗೆದ್ದ ಹೈಕಮಾಂಡ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತಾಕೀತು ಮಾಡಿತ್ತು. ನಸೀರ್‌ ಅಹಮದ್‌ ಅವರ ವಿಧಾನ ಪರಿಷತ್ತಿನ ಸದಸ್ಯತ್ವ ಅವಧಿ ಬರುವ ಮೇನಲ್ಲಿ ಪೂರ್ಣಗೊಳ್ಳಲಿತ್ತು.

ಹೈಕಮಾಂಡ್‌ ಕಠಿಣ ನಿಲುವು, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್ ರಾಜೀನಾಮೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದೆ, ಪಕ್ಷದ ಒಂದಿಷ್ಟು ಅಲ್ಪಸಂಖ್ಯಾತ ಹಿರಿಯ ಮುಖಂಡರು ಪಕ್ಷವನ್ನು ಸೋಲಿಸಲು ಹುನ್ನಾರ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ವರಿಷ್ಠರು, ಮೇಲ್ಮನೆ ಸದಸ್ಯರಾದ ಅಬ್ದುಲ್‌ ಜಬ್ಬಾರ್‌ ಮತ್ತು ನಸೀರ್‌ ಅಹ್ಮದ್ ಅವರಿಗೆ ನೋಟಿಸ್‌ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಬ್ಬಾರ್‌ ಕಾಂಗ್ರೆಸ್‌ ಅಲ್ಪಸಂಖ್ಯಾತ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವಜಾ ಏಕೆ?

ದಾವಣಗೆರೆ ಉಪಚುನಾವಣೆಯ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಸಮರ್ಥ್‌ ಅವರಿಗೆ ಕೆಲವು ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಪ್ರಚಾರದ ವೇಳೆ ಈ ನಾಯಕರು ಪಾಲ್ಗೊಂಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಅಬ್ದುಲ್‌ ಜಬ್ಬಾರ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಉಪಸಮರದ ವೇಳೆ ಜಬ್ಬಾರ್‌ ಮತ್ತು ನಸೀರ್‌ ಅಹ್ಮದ್‌ ಅವರ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸಲಾಗಿತ್ತು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಲು ಕೆಲ ನಾಯಕರ ಗುಂಪು ಸಂಚು ರೂಪಿಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹ್ಮದ್ ವಜಾ; ಡಿಸಿಎಂ ಡಿಕೆಶಿ ಹೇಳಿದ್ದೇನು?

ಈ ಬಗ್ಗೆ ಉಪಸಮರದ ಹೈಕಮಾಂಡ್‌ ಉಸ್ತುವಾರಿಗಳು ವರಿಷ್ಠರಿಗೆ ವರದಿ ನೀಡಿದ್ದರು. ಅದರಂತೆ ಅಬ್ದುಲ್‌ ಜಬ್ಬಾರ್‌ ಮತ್ತು ನಸೀರ್‌ ಅಹ್ಮದ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೆ ಸಚಿವ ಜಮೀರ್‌ ಅಹಮದ್‌ ಖಾನ್‌ ವಿರುದ್ಧವೂ ಹೈಕಮಾಂಡ್‌ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಇನ್ನೆಷ್ಟು ಮಂದಿಯ ತಲೆದಂಡವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.