ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನ್ಯಾಪ್‌ಗೆ ಯತ್ನ; ಬೆಂಗಳೂರಿನಲ್ಲಿ ರಾಜಸ್ಥಾನದ ಗ್ಯಾಂಗ್‌ಗೆ ಹಿಗ್ಗಾಮುಗ್ಗಾ ಥಳಿಸಿದ ಜನ!
Bengaluru Kidnap Case: ಬೆಂಗಳೂರಿನಲ್ಲಿ ರಾಜಸ್ಥಾನ ಮೂಲದ ಯುವತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಕಿಡ್ನ್ಯಾಪ್‌ಗೆ ಯತ್ನಿಸಿದ ಮೂವರು ಕೂಡ ರಾಜಸ್ಥಾನದವರೆಂದು ತಿಳಿದುಬಂದಿದೆ. ವಿಜಯನಗರದ ಹೊಸಹಳ್ಳಿ ಬಳಿ ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಥಳಿಸಿದ್ದಾರೆ.
-
ಬೆಂಗಳೂರು: ಮನೆಗೆ ನುಗ್ಗಿ ವಿವಾಹಿತ ಯುವತಿಯನ್ನು ಕಿಡ್ನ್ಯಾಪ್ (Bengaluru Kidnap Case) ಮಾಡಲು ಯತ್ನಿಸಿದ ರಾಜಸ್ಥಾನ ಗ್ಯಾಂಗ್‌ಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ. ಇನ್ನು ಆರೋಪಿಗಳು ಯುವತಿಯನ್ನು ಕಿಡ್ನ್ಯಾಪ್ ಮಾಡುವ ವೇಳೆ ಎದುರಿಗೆ ಬಂದವರ ಮೇಲೆಲ್ಲಾ ಕಾರು ಹರಿಸಿದ್ದರಿಂದ ಹಲವರಿಗೆ ಗಾಯಗಳಾಗಿವೆ.
ರಾಜಸ್ಥಾನ ಮೂಲದ ಯುವತಿಯನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಅಪಹರಿಸಲು ಯತ್ನಿಸಲಾಗಿದೆ. ಕಿಡ್ನ್ಯಾಪ್‌ಗೆ ಯತ್ನಿಸಿದ ಮೂವರು ಕೂಡ ರಾಜಸ್ಥಾನದವರೆಂದು ತಿಳಿದುಬಂದಿದೆ. ಇತ್ತೀಚಿಗೆ ವ್ಯಕ್ತಿಯೊಬ್ಬ ರಾಜಸ್ಥಾನ ಮೂಲದ ಯುವತಿಯನ್ನು ಪ್ರೀತಿಸಿ, ಮದುವೆಯಾಗಿ ಕಳೆದ 15 ದಿನದ ಹಿಂದಷ್ಟೇ ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ.
ಬುಧವಾರ ಏಕಾಏಕಿ ಮೂವರ ಗ್ಯಾಂಗ್, ಮನೆಗೆ ನುಗ್ಗಿ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಅಪಹರಿಸಿಕೊಂಡು ಹೋಗುವಾಗ ಎದುರಿಗೆ ಬಂದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೇ ವಿಜಯನಗರದ ಹೊಸಹಳ್ಳಿಯ ದಂಡಿ ಮಾರಮ್ಮ ದೇವಸ್ಥಾನದ ಬಳಿ ಪ್ರಶ್ನಿಸಲು ಬಂದವರ ಮೇಲೆ ಹಾಗೂ ಕಾರಿಗೆ ಅಡ್ಡಬಂದ ಜನರ ಮೇಲೆ ಕಾರು ಹರಿಸಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ.
ಯುವತಿಯನ್ನು ಕಿಡ್ನ್ಯಾಪ್ ಮಾಡಿ ಪರಾರಿಯಾಗಲು ಯತ್ನಿಸಿದವರ ಕಾರನ್ನು ಸಾರ್ವಜನಿಕರು 50ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಸುಮಾರು 9 ಕಿ.ಮೀ ದೂರದವರೆಗೆ ಚೇಸ್ ಮಾಡಿದ್ದಾರೆ. ಬಳಿಕ ಸಾರ್ವಜನಿಕರು ಕಾರನ್ನು ಅಡ್ಡಗಟ್ಟಿ, ಕಲ್ಲು ತೂರಾಟ ನಡೆಸಿದ್ದಾರೆ. ಎಸ್ಕೇಪ್ ಆಗಲು ಯತ್ನಿಸಿದ ಮೂವರು ಕಿಡ್ನ್ಯಾಪರ್‌ಗಳನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಈ ಘಟನೆಯಲ್ಲಿ ಯುವಕನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಮಹಿಳೆಯರ ಮೇಲೆ ಕಾರು ಹರಿಸಲಾಗಿದೆ.
ಸದ್ಯ ಸಂತ್ರಸ್ತ ಯುವತಿಯನ್ನು ಸಾರ್ವಜನಿಕರು ರಕ್ಷಿಸಿದ್ದು, ಕಿಡ್ನ್ಯಾಪರ್‌ಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಮಾಗಡಿ ರೋಡ್ ಸಂಚಾರ ಪೊಲೀಸರು ಹಾಗೂ ವಿಜಯನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನೆಯಲ್ಲಿ ಗಾಯಗೊಂಡಿರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.