ಎಫ್‌ಕೆಸಿಸಿಐ ವತಿಯಿಂದ ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್ ಅವರಿಗೆ ‘ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ 2026’ ವಿತರಣೆ
ಕಿರ್ಲೋಸ್ಕರ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್ ಅವರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘವು (ಎಫ್‌ಕೆಸಿಸಿಐ) ನೀಡುವ ಪ್ರತಿಷ್ಠಿತ ‘ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ 2026’ ಪ್ರದಾನ ಮಾಡಲಾಗಿದೆ. ಎಫ್‌ಕೆಸಿಸಿಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಉದ್ಯಮ, ವ್ಯಾಪಾರ ಮತ್ತು ಸಮಾಜಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
-
ಬೆಂಗಳೂರು: ಕಿರ್ಲೋಸ್ಕರ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್ ಅವರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘವು (ಎಫ್‌ಕೆಸಿಸಿಐ) ನೀಡುವ ಪ್ರತಿಷ್ಠಿತ ‘ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ 2026’ ಪ್ರದಾನ ಮಾಡಲಾಗಿದೆ.
ಎಫ್‌ಕೆಸಿಸಿಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಉದ್ಯಮ, ವ್ಯಾಪಾರ ಮತ್ತು ಸಮಾಜಕ್ಕೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
1999ರಲ್ಲಿ ಪ್ರಶಸ್ತಿ ಸ್ಥಾಪನೆಯಾದ ಬಳಿಕ, ಈ ಗೌರವಕ್ಕೆ ಪಾತ್ರರಾದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಗೀತಾಂಜಲಿ ಕಿರ್ಲೋಸ್ಕರ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಡಾ.ಕಿರಣ್ ಮಜುಂದಾರ್-ಶಾ ಈ ಪ್ರಶಸ್ತಿ ಪಡೆದಿದ್ದರು.
ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಮಾತನಾಡಿ, ಕಳೆದ ಹಲವು ವರ್ಷಗಳಲ್ಲಿ ಕೈಗಾರಿಕೆ, ಉದ್ಯಮ ಶೀಲತೆ, ಆರ್ಥಿಕ ಅಭಿವೃದ್ಧಿ ಮತ್ತು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ 26 ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ತಿಳಿಸಿದರು.
“ಎನ್.ಆರ್. ನಾರಾಯಣ ಮೂರ್ತಿ, ಅಜೀಂ ಪ್ರೇಮ್‌ಜಿ, ವಿಜಯ್ ಮಲ್ಯ, ಡಾ.ಕಿರಣ್ ಮಜುಂದಾರ್-ಶಾ ಸೇರಿದಂತೆ ಹಲವಾರು ಗಣ್ಯರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ,” ಎಂದು ಅವರು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್ ಮಾತನಾಡಿ, ಈ ಗೌರವವನ್ನು ವಿನಯ ದಿಂದ ಸ್ವೀಕರಿಸುತ್ತಿದ್ದು, ಇದು ಹೆಚ್ಚಿನ ಹೊಣೆಗಾರಿಕೆಯನ್ನು ನೆನಪಿಸುತ್ತದೆ ಎಂದು ಹೇಳಿದರು.
“ವ್ಯವಹಾರವು ಕೇವಲ ಆರ್ಥಿಕ ಪ್ರಗತಿಗೆ ಸೀಮಿತವಾಗದೆ, ಸುಸ್ಥಿರತೆ, ಸಮಾವೇಶಿತ ಬೆಳವಣಿಗೆ ಮತ್ತು ಸಮುದಾಯ ಅಭಿವೃದ್ಧಿಗೂ ಚಾಲನೆ ನೀಡಬೇಕು. ಆರ್ಥಿಕ ಪ್ರಗತಿ ಮತ್ತು ಸಮಾಜದ ಅಭಿವೃದ್ಧಿ ಜೊತೆಯಾಗಿ ಸಾಗಬೇಕು,” ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಕೆ. ಲಕ್ಷ್ಮಣ್, ಎಫ್‌ಕೆಸಿಸಿಐ ನಿಯೋಜಿತ ಅಧ್ಯಕ್ಷ ಸಾಯಿರಾಮ್ ಪ್ರಸಾದ್ ಸೇರಿದಂತೆ ಹಲವು ಗಣ್ಯರು, ಉದ್ಯಮ ನಾಯಕರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿಯನ್ನು ಎಫ್‌ಕೆಸಿಸಿಐ 1999ರಲ್ಲಿ ಸ್ಥಾಪಿಸಿದ್ದು, ಕೈಗಾರಿಕೆ, ವ್ಯಾಪಾರ ಮತ್ತು ಸಮಾಜದಲ್ಲಿ ವಿಶಿಷ್ಟ ಸಾಧನೆ, ನಾಯಕತ್ವ ಮತ್ತು ಮಹತ್ವದ ಕೊಡುಗೆ ನೀಡಿದ ಗಣ್ಯರನ್ನು ಗೌರವಿಸುವ ಉದ್ದೇಶ ಹೊಂದಿದೆ.