ಬೈಕ್‌ನಲ್ಲಿ ಹೋಗುವಾಗಲೇ ಗಂಡನಿಗೆ ಹೃದಯಾಘಾತ; ರಸ್ತೆಯಲ್ಲಿ ಪತ್ನಿ ಅಂಗಲಾಚಿದ್ರೂ ಸಿಗಲಿಲ್ಲ ಸಹಾಯ
Bengaluru News: ಬೆಂಗಳೂರಿನ ಬನಶಂಕರಿ ಮೂರನೇ ಸ್ಟೇಜ್ ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ಬೈಕ್‌ನಲ್ಲಿ ಹೋಗುವಾಗಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಮಾಜದಲ್ಲಿ ಮಾನವೀಯತೆ ಸತ್ತಿದೆ. ನನ್ನ ಗಂಡ ಹೃದಯಾಘಾತದಿಂದ ರಸ್ತೆಯಲ್ಲಿ ಬಿದ್ದಾಗ, ಸಹಾಯ ಮಾಡುವಂತೆ ಅಂಗಲಾಚಿದೆ. ಆದರೆ, ಯಾರೂ ಮುಂದೆ ಬರಲಿಲ್ಲ ಎಂದು ಮೃತ ವ್ಯಕ್ತಿಯ ಪತ್ನಿ ನೋವು ತೋಡಿಕೊಂಡಿದ್ದಾರೆ.
ಮೃತ ವೆಂಕಟರಮಣನ್ -
ಬೆಂಗಳೂರು: ಬೈಕ್‌ನಲ್ಲಿ ಹೋಗುವಾಗಲೇ ಹೃದಯಾಘಾತವಾಗಿ (heart attack) ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟ ಘಟನೆ ಬೆಂಗಳೂರಿನಲ್ಲಿ (Bengaluru News) ನಡೆದಿದೆ. ರಸ್ತೆಯಲ್ಲಿ ಬಿದ್ದಿದ್ದ ಪತಿಯ ಜೀವ ಉಳಿಸಲು ಪತ್ನಿ ಕೈಮುಗಿದು ಅಂಗಲಾಚಿದರೂ ಯಾರು ಕೂಡ ನೆರವಿಗೆ ಬಾರದ ಹೃದಯ ವಿದ್ರಾವಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಏನಿದು ಘಟನೆ?
ಬನಶಂಕರಿ ಮೂರನೇ ಸ್ಟೇಜ್ ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ವೆಂಕಟರಮಣನ್ ಅವರು ಬೈಕ್‌ನಲ್ಲಿ ಹೋಗುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗಿನ ಜಾವ ಅವರಿಗೆ ಮನೆಯಲ್ಲಿಯೇ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ಬೈಕ್‌ನಲ್ಲಿಯೇ ದಂಪತಿ ಕತ್ರಿಗುಪ್ಪೆ ಜನತಾ ಬಜಾರ್ ಸಮೀಪದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ವೈದ್ಯರು ಇಲ್ಲದ ಕಾರಣ ಮತ್ತೊಂದು ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಇಸಿಜಿ ಮಾಡಿದಾಗ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿರೋದು ಪತ್ತೆಯಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡದೆ ಜಯದೇವ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಿದ್ದಾರೆ.
ಆಂಬ್ಯುಲೆನ್ಸ್ ಕೂಡ ಕೊಡದೇ ಬೇಗ ಇಲ್ಲಿಂದ ಹೋಗುವಂತೆ ಸೂಚನೆ ನೀಡಿದ್ದಾರೆ. ಆಂಬ್ಯುಲೆನ್ಸ್ ಸಿಗದ ಹಿನ್ನೆಲೆ ಜೀವ ಉಳಿಸಿಕೊಳ್ಳಲು ಬೈಕ್‌ನಲ್ಲಿಯೇ ದಂಪತಿ ತೆರಳಿದ್ದರು. ಜಯದೇವ ಆಸ್ಪತ್ರೆಗೆ ಹೋಗುವಾಗ ಕದಿರೇನಹಳ್ಳಿ ಬ್ರಿಡ್ಜ್ ಸಮೀಪ ಮತ್ತೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಇದರಿಂದ ಅಸ್ವಸ್ಥಗೊಂಡು ಬೈಕ್‌ನಿಂದ ಬಿದ್ದಿದ್ದಾರೆ.
ಪತ್ನಿ ರೂಪ ಅವರು ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸುವಂತೆ ಕೂಗಿ, ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ಯಾರೂ ಕೂಡ ಇವರ ಸಹಾಯಕ್ಕೆ ಬಂದಿಲ್ಲ. 15 ನಿಮಿಷದ ಬಳಿಕ ಒಬ್ಬರು ಕ್ಯಾಬ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ವೆಂಕಟರಮಣನ್ ಪ್ರಾಣ ಹೋಗಿದೆ.
ಸಹಾಯಕ್ಕಾಗಿ ಮಹಿಳೆ ಅಂಗಲಾಚಿದ ವಿಡಿಯೊ
#Heartbreaking incident in Bengaluru has left many shaken and questioning humanity. Thirty-four-year-old Venkataramanan suffered a sudden cardiac arrest while riding a bike with his wife. Near Kadrihalli Bridge, he collapsed on the road, gasping for life. His wife screamed for… pic.twitter.com/VXSUDWDq8Z
— Bharathirajan (@bharathircc) December 17, 2025
ಮಾನವೀಯತೆ ಸತ್ತಿದೆ
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ವೆಂಕಟರಮಣನ್ (34) ಅವರ ಪತ್ನಿ ರೂಪ, ಮಾಧ್ಯಮಗಳೊಂದಿಗೆ ದುಃಖವನ್ನು ಹಂಚಿಕೊಂಡಿದ್ದಾರೆ. ಸಮಾಜದಲ್ಲಿ ಮಾನವೀಯತೆ ಸತ್ತಿದೆ. ನನ್ನ ಗಂಡ ಹೃದಯಾಘಾತದಿಂದ ರಸ್ತೆಯಲ್ಲಿ ಬಿದ್ದಾಗ, ಸಹಾಯ ಮಾಡುವಂತೆ ಅಂಗಲಾಚಿದೆ. ಆದರೆ, ಯಾರೂ ಮುಂದೆ ಬರಲಿಲ್ಲ. ಅವರು ತುಂಬಾ ಜನಕ್ಕೆ ಸಹಾಯ ಮಾಡಿದ್ದರು. ಆದ್ರೆ ಅವರ ಸಹಾಯಕ್ಕೆ ಯಾರೂ ಕೂಡ ಬಂದಿಲ್ಲ. ಕೈಮುಗಿದು ಕೇಳಿಕೊಂಡರೂ ವಾಹನ ಸವಾರರು ಸಹಾಯ ಮಾಡಲಿಲ್ಲ. ಜನ ಮಾನವೀಯತೆಯನ್ನೇ ಮರೆತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
ಕೌಟುಂಬಿಕ ಕಲಹ; ಪತ್ನಿಯನ್ನು ಕತ್ತುಹಿಸುಕಿ ಕೊಂದು ಪತಿಯೂ ಆತ್ಮಹತ್ಯೆ!
ಒಬ್ಬರು ಯಾರಾದರೂ ಸಹಾಯ ಮಾಡಿದ್ದರೆ ಅವರು ಬದುಕುಳಿಯುತ್ತಿದ್ದರು. ಇಬ್ಬರೂ ಸಣ್ಣ ಮಕ್ಕಳಿದ್ದಾರೆ, ಅವರನ್ನು ಈಗ ನಾನೇ ನೋಡಿಕೊಳ್ಳಬೇಕು. ಸದ್ಯ ಪತಿಯ ಎರಡೂ ಕಣ್ಣನ್ನು ದಾನ ಮಾಡಿದ್ದೇವೆ. ಅದರಿಂದ ಯಾರಿಗಾದ್ರೂ ದೃಷ್ಟಿ ಬಂದರೆ ಅವರಿಗಾದರೂ ಉಪಯೋಗ ಆಗಲಿ. ಜನ ಸ್ವಲ್ಪವಾದರೂ ಮಾನವೀಯತೆ ಹೊಂದಿರಬೇಕು ಎಂದು ಹೇಳಿದ್ದಾರೆ.