ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಈ ವರ್ಷ ದೇಶದ ವಿವಿಧೆಡೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ಎಷ್ಟು ಮಂದಿ? ಇಲ್ಲಿದೆ ವಿವರ

Stampedes in India: 2025ರಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡರು. ಧಾರ್ಮಿಕ ಕಾರ್ಯಕ್ರಮಗಳು, ಸಾರ್ವಜನಿಕ ಸಮಾರಂಭಗಳು ಹಾಗೂ ಜನಸಂದಣಿ ಹೆಚ್ಚಿದ್ದ ಸ್ಥಳಗಳಲ್ಲಿ ನಡೆದ ಈ ದುರ್ಘಟನೆಯು ಚರ್ಚೆ ಹಾಗೂ ಟೀಕೆಗೆ ಕಾರಣವಾಯಿತು.

ದೇಶದ ವಿಧೆಡೆ ಸಂಭವಿಸಿದ ಕಾಲ್ತುಳಿತಗಳ ಪಟ್ಟಿ

ಸಂಗ್ರಹ ಚಿತ್ರ -

Priyanka P
Priyanka P Dec 17, 2025 5:34 PM

ನವದೆಹಲಿ, ಡಿ. 17: 2025ರ ಕೊನೆಯ ಭಾಗದಲ್ಲಿದ್ದೇವೆ. ದೇಶದಲ್ಲಿ ಏನೆಲ್ಲ ಅವ್ಯವಸ್ಥೆಯಾಯಿತು ಎಂಬುದನ್ನು ಮೆಲುಕು ಹಾಕುವ ಸಮಯವಿದು. ದೇವಾಲಯಗಳು, ಹಬ್ಬಗಳ ಕಾರಣ ಜನಸಂದಣಿಯಿಂದ ತುಂಬಿದ ರೈಲು ನಿಲ್ದಾಣಗಳು, ರಾಜಕೀಯ ರ‍್ಯಾಲಿಗಳು ಮತ್ತು ಕ್ರೀಡಾ ಆಚರಣೆಗಳು ಜನದಟ್ಟಣೆಯಿಂದಾಗಿ ಕೆಲವು ಸಮಾರಂಭಗಳು ಭಯಾನಕವಾಗಿ ಮಾರ್ಪಟ್ಟವು. ವಿವಿಧ ರಾಜ್ಯಗಳಲ್ಲಿ ಸಂಭವಿಸಿದ ಕಾಲ್ತುಳಿತಗಳು 127 ಜೀವಗಳನ್ನು ಬಲಿ ತೆಗೆದುಕೊಂಡಿತು. ಇದು ದೇಶದ ಬೆಳೆಯುತ್ತಿರುವ ನಗರ ಮತ್ತು ಕಾರ್ಯಕ್ರಮಗಳಲ್ಲಿ ಜನಸಂದಣಿಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಂಧ್ರ ಪ್ರದೇಶದ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ

ನವೆಂಬರ್ 1ರಂದು ಆಂಧ್ರ ಪ್ರದೇಶದ ಶ್ರಿಕಾಕುಳಂ ಜಿಲ್ಲೆಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 10 ಮಂದಿ ಮೃತಪಟ್ಟಿದ್ದರು. ಹಿಂದೂ ಧರ್ಮದ ಪವಿತ್ರ ದಿನವಾದ ಏಕಾದಶಿಯಂದು ಕಾಶಿಬುಗ್ಗದಲ್ಲಿರುವ ಈ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಈ ದುರ್ಘಟನೆ ಸಂಭವಿಸಿತ್ತು.

ಡೊನಾಲ್ಡ್ ಟ್ರಂಪ್‍ - ಶುಭಾಂಶು ಶುಕ್ಲಾ: 2025ರ ಟಾಪ್ 10 ಸುದ್ದಿಯಲ್ಲಿದ್ದವರಿವರು

ತಿರುಮಲ ಬೆಟ್ಟದಲ್ಲಿ ಅವ್ಯವಸ್ಥೆ

ಜನವರಿ 9ರಂದು ಆಂಧ್ರ ಪ್ರದೇಶದ ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅವ್ಯವಸ್ಥೆ ಭುಗಿಲೆದ್ದಿತ್ತು. ದೇವಾಲಯದ ಸಂಕೀರ್ಣದ ಒಳಗೆ ಕಾಲ್ತುಳಿತ ಸಂಭವಿಸಿ ಆರು ಭಕ್ತರು ಮೃತಪಟ್ಟಿದ್ದರು.

ಮಹಾಕುಂಭ ಕಾಲ್ತುಳಿತ

ಜನವರಿ 29ರಂದು, ಉತ್ತರ ಪ್ರದೇಶದ ಪ್ರಯಾಗ್ ರಾಜ್‍ನಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭದಲ್ಲಿ ದುರಂತ ಸಂಭವಿಸಿತ್ತು. ಕಿರಿದಾದ ಹಾದಿಯಲ್ಲಿ ನಡೆಯುತ್ತಿದ್ದ ಯಾತ್ರಿಕರು ಜನದಟ್ಟಣೆಯಲ್ಲಿ ಸಿಲುಕಿಕೊಂಡರು. ಬ್ಯಾರಿಕೇಡ್ ತಾಗಿ ಕೆಲವರು ಎಡವಿಬಿದ್ದರು. ಭಯಗೊಂಡ ಕೆಲವರು ಓಡಿದರು. ಇದು ಕಾಲ್ತುಳಿತಕ್ಕೆ ಕಾರಣವಾಗಿಯಿತು. ಈ ದುರ್ಘಟನೆಯಲ್ಲಿ 30 ಜನರು ಪ್ರಾಣ ಕಳೆದುಕೊಂಡರು.

ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ

ಫೆಬ್ರವರಿ 15ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಜನದಟ್ಟಣೆಯಿಂದ ತುಂಬಿದ ಪಾದಾಚಾರಿ ಸೇತುವೆಯಲ್ಲಿ ಕಾಲ್ತುಳಿತ ಉಂಟಾಗಿತ್ತು. ರೈಲು ವಿಳಂಬವಾದದ್ದರಿಂದ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದರು. ಇದರಿಂದ 18 ಮಂದಿ ಪ್ರಾಣ ಕಳೆದುಕೊಂಡು, ಅನೇಕರು ಗಾಯಗೊಂಡಿದ್ದರು.

ಗೋವಾ ಜಾತ್ರೆಯಲ್ಲಿ ಸಂಭವಿಸಿದ್ದ ಕಾಲ್ತುಳಿತ

ಮೇ 3ರಂದು ಗೋವಾದ ಶಿರ್ಗಾವ್ ಗ್ರಾಮದಲ್ಲಿ ನಡೆದಿದ್ದ ಲೈರೈ ಜಾತ್ರೆಯ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಬೆಂಕಿ ಆಚರಣೆಯ ಬಳಿ ಉಂಟಾದ ಜನಸಂದಣಿಯು ತಳ್ಳಾಟ-ನೂಕಾಟಕ್ಕೆ ಕಾರಣವಾಗಿ ಕಾಲ್ತುಳಿತ ಸಂಭವಿಸಿತ್ತು.

ಬೆಂಗಳೂರು ಐಪಿಎಲ್ ದುರಂತ

ಆರ್‌ಸಿಬಿ 18 ವರ್ಷಗಳ ನಂತರ ಐಪಿಎಲ್ ಕಪ್ ಗೆದ್ದ ಸಂಭ್ರಮಾಚಾರಣೆ ವೇಳೆ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ದುರಂತ ಸಂಭವಿಸಿತ್ತು. ಸಾವಿರಾರು ಅಭಿಮಾನಿಗಳು ಸೇರಿದ್ದರಿಂದ ತಳ್ಳಾಟ-ನೂಕಾಟ ಉಂಟಾಯಿತು. ಉಸಿರಾಡಲು, ಚಲಿಸಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗೆ ದುರಂತ ನಡೆದೇ ಹೋಯ್ತು 11 ಮಂದಿ ಮೃತಪಟ್ಟರು. ಈ ದುರ್ಘಟನೆಯು ವ್ಯಾಪಕ ಚರ್ಚೆಗೆ ಕಾರಣವಾಯಿತು.

ಈ ವರ್ಷ ಭಾರತದ ರಾಜಕೀಯ ಸ್ಥಿತಿಗತಿ ಹೇಗಿತ್ತು? ಇಲ್ಲಿದೆ ಹಿನ್ನೋಟ

ಹರಿದ್ವಾರ ತೀರ್ಥಯಾತ್ರೆ

ಜುಲೈ 27ರಂದು, ಹರಿದ್ವಾರದ ಮಾನಸ ದೇವಿ ದೇವಸ್ಥಾನಕ್ಕೆ ಹೋಗುವ ಕಡಿದಾದ ಮತ್ತು ಕಿರಿದಾದ ಮಾರ್ಗದಲ್ಲಿ ಎಂಟು ಯಾತ್ರಿಕರು ಮೃತಪಟ್ಟಿದ್ದರು. ಕಿರಿದಾದ ಮಾರ್ಗದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಈ ದುರಂತ ಸಂಭವಿಸಿತ್ತು.

ಕರೂರ್ ರಾಜಕೀಯ ರ‍್ಯಾಲಿ

ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ, ನಟ-ರಾಜಕಾರಣಿ ವಿಜಯ್ ಅವರ ರ‍್ಯಾಲಿಯಲ್ಲಿ ದುರಂತ ಸಂಭವಿಸಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ನೂಕಾಟ ಉಂಟಾಯಿತು. ಜನರು ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಿದರು. ಈ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಬಲಿಯಾಗಿದ್ದು 39 ಮಂದಿ. ಈ ಘಟನೆ ಭಾರಿ ಟೀಕೆಗೆ ಕಾರಣವಾಯ್ತು.