ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

PES University: ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಅದ್ಧೂರಿಯಾಗಿ ನಡೆದ ʼಕಲ್‌ನೈಟ್ 26 ಕಾರ್ಯಕ್ರಮ

PES University: ಪಿಇಎಸ್ ವಿಶ್ವವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಉತ್ಸವ 'ಆತ್ಮತೃಷ' ದ ಸಾಂಸ್ಕೃತಿಕ ರಾತ್ರಿ ʼಕಲ್‌ನೈಟ್ʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜೆ. ಸೂರ್ಯಪ್ರಸಾದ್ ಹಾಗೂ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ವಿ. ಕೃಷ್ಣ ಅವರು ಶನಿವಾರ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು.

ಪಿಇಎಸ್ ವಿವಿಯಲ್ಲಿ ಅದ್ಧೂರಿಯಾಗಿ ನಡೆದ ʼಕಲ್‌ನೈಟ್ʼ ಕಾರ್ಯಕ್ರಮ

ಪಿಇಎಸ್ ವಿಶ್ವವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಉತ್ಸವ 'ಆತ್ಮತೃಷ' ದ ಸಾಂಸ್ಕೃತಿಕ ರಾತ್ರಿ ʼಕಲ್‌ನೈಟ್ʼ ಕಾರ್ಯಕ್ರಮ ಜರುಗಿತು. -

Profile
Siddalinga Swamy Apr 4, 2026 7:19 PM

ಬೆಂಗಳೂರು, ಏ.4: ಪಿಇಎಸ್ ವಿಶ್ವವಿದ್ಯಾಲಯದ (PES University) ವಾರ್ಷಿಕ ಸಾಂಸ್ಕೃತಿಕ ಉತ್ಸವ 'ಆತ್ಮತೃಷ' ದ ಸಾಂಸ್ಕೃತಿಕ ರಾತ್ರಿ ʼಕಲ್‌ನೈಟ್ʼ ಕಾರ್ಯಕ್ರಮ ಅದ್ಧೂರಿಯಾಗಿ ಶನಿವಾರ ನೆರವೇರಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಜೆ. ಸೂರ್ಯಪ್ರಸಾದ್ ಹಾಗೂ ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ. ವಿ. ಕೃಷ್ಣ ಅವರು ಶನಿವಾರ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭ ಉದ್ಘಾಟಿಸಿದರು.

ದೀಪ ಪ್ರಜ್ವಲನೆಯ ನಂತರ ಉಪಕುಲಪತಿ ಡಾ. ಜೆ. ಸೂರ್ಯಪ್ರಸಾದ್ ಅವರು ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಆತ್ಮತೃಷ ಆಯೋಜನಾ ತಂಡದ ಅಪಾರ ಶ್ರಮವನ್ನು ಶ್ಲಾಘಿಸಿ, ವಾರಪೂರ್ತಿ ನಡೆದ ಈ ಮಹೋತ್ಸವದ ಯಶಸ್ವಿ ನಿರ್ವಹಣೆಗೆ ಅವರ ಕೊಡುಗೆಯನ್ನು ಮೆಚ್ಚಿದರು. ಜತೆಗೆ, ಡಾ. ವಿ. ಕೃಷ್ಣ ಅವರ ಬೆಂಬಲ ಮತ್ತು ಉತ್ಸಾಹ ಈ ಉತ್ಸವದ ಬೆನ್ನೆಲುಬಾಗಿದೆ ಎಂದು ಪ್ರಶಂಸಿಸಿದರು.

ಸ್ವಾಗತ ಭಾಷಣ ಮಾಡಿದ ಡಾ. ವಿ. ಕೃಷ್ಣ ಅವರು, ರಾಷ್ಟ್ರಕವಿ ಕುವೆಂಪುರವರ ಪ್ರಸಿದ್ಧ ನುಡಿ "ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು" ಎಂಬುದನ್ನು ಉಲ್ಲೇಖಿಸಿ ಪ್ರೇಕ್ಷಕರಿಂದ ಭಾರೀ ಕರತಾಡನವನ್ನು ಗಳಿಸಿದರು. ಇನ್ನು ಪಿಇಎಸ್ ಸಂಸ್ಥಾಪಕರಾದ ದಿವಂಗತ ಡಾ. ಎಂ. ಆ‌ರ್. ದೊರೆಸ್ವಾಮಿ ಅವರನ್ನು ಸ್ಮರಿಸಿ, ಆತ್ಮತೃಷದ ಪ್ರತಿಯೊಂದು ಆವೃತ್ತಿಯನ್ನು ಅವರ ಉಪದೇಶಗಳು ಮತ್ತು ಮೌಲ್ಯಗಳಿಗೆ ಸಮರ್ಪಿಸಿದರು. ಜತೆಗೆ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹರ್ ದೊರೆಸ್ವಾಮಿ ಅವರ ಅಪಾರ ಕೊಡುಗೆಯನ್ನು ವಿಶೇಷವಾಗಿ ಉಲ್ಲೇಖಿಸಿದರು.

ನಂತರ ಡಾ. ಕೃಷ್ಣ ಅವರು ಮುಖ್ಯ ಅತಿಥಿ ಡಾ. ಜೆ. ಸೂರ್ಯಪ್ರಸಾದ್ ಅವರನ್ನು ಸನ್ಮಾನಿಸಿದರು. ಆತ್ಮತೃಷ ತಂಡದ ಮುಖ್ಯಸ್ಥ ಅನಿರುದ್ ಅವರು ಡಾ. ಕೃಷ್ಣ ಅವರಿಗೆ ಪುಷ್ಪಗುಚ್ಚವನ್ನು ನೀಡಿ ಸನ್ಮಾನಿಸಿದರು. ಸನ್ಮಾನ ಸಮಾರಂಭದ ಅಂತ್ಯದೊಂದಿಗೆ, ಕಲ್‌ನೈಟ್‌ನ ಮನರಂಜನಾ ಕಾರ್ಯಕ್ರಮಗಳು ಆರಂಭವಾದವು.

ಕಲ್‌ನೈಟ್ ಪ್ರತಿಭೆ, ಸೃಜನಶೀಲತೆ ಮತ್ತು ಕಲಾತ್ಮಕ ವೈಭವವು ಮೇಲೈಸಿದ ಅದ್ಭುತ ಆಚರಣೆಯಾಗಿ, ವಿದ್ಯಾರ್ಥಿಗಳ ಸೃಜನಾತ್ಮಕ ನೈಪುಣ್ಯವನ್ನು ಬೆಳಕಿಗೆ ತರಲು ಆಯೋಜಿಸಿದ ಕಾರ್ಯಕ್ರಮವಾಗಿದೆ. ಟೀಮ್ ಟ್ರಾನ್ಸ್, ಟೀಮ್ ಮೆರಾಕಿ, ಕನ್ನಡ ಕೂಟ, ಪಿಇಎಸ್‌ಯು ಮ್ಯೂಸಿಕ್ ಕ್ಲಬ್, ಟೀಮ್ ಸಂಸ್ಕೃತಿ, ನೌಟಂಕಿ ತಂಡ ಪಿಇಎಸ್‌ಯು ಟಾಕೀಸ್, ಟೀಮ್ ಅಂತರಾ, ಮತ್ತು ಟೀಮ್ ಎಂಕೋರ್ ಮುಂತಾದ ವಿದ್ಯಾರ್ಥಿ ಕ್ಲಬ್‌ಗಳು ನಾಟಕದಿಂದ ಸಂಗೀತ, ನೃತ್ಯದಿಂದ ಫ್ಯಾಷನ್‌ವರೆಗೆ ವಿವಿಧ ಕಲಾರೂಪಗಳನ್ನು ಪ್ರದರ್ಶಿಸಿದರು.

ಮೊದಲ ಪ್ರದರ್ಶನವಾಗಿ ಪ್ರದರ್ಶನಕಲಾ ವಿಭಾಗದ ವಿದ್ಯಾರ್ಥಿಗಳು ತ್ರಿಶ್ರ ಜಾತಿ ತ್ರಿಪುಟ ತಾಳದಲ್ಲಿ ಸೋಲ್ಕಟ್ಟು ಪ್ರದರ್ಶನ ನೀಡಿದರು. ಡಾ. ವಿ. ಕೃಷ್ಣ ಅವರ ಮಾರ್ಗದರ್ಶನದಲ್ಲಿ ನಡೆದ ಈ 9 ನಿಮಿಷಗಳ ಪ್ರದರ್ಶನವು ಅಚ್ಚುಕಟ್ಟಾಗಿ ನಡೆಯುತ್ತ, ಪ್ರೇಕ್ಷಕರನ್ನು ಆಕರ್ಷಿಸಿತು.

PES University

ಇಂಡಿಯನ್ ರಾಕ್ ಪ್ಯೂಷನ್ ಬ್ಯಾಂಡ್ 'ಎಕ್ಯೂಬರೆನ್ಸ್' ಮೊದಲ ಸಂಗೀತ ಪ್ರದರ್ಶನ ನೀಡಿತು. ಭಾರತೀಯ ಸಂಗೀತದ ಸಾರ ಮತ್ತು ರಾಕ್‌ ತೀವ್ರತೆಯನ್ನು ಮಿಶ್ರಣಗೊಳಿಸಿ ಇಲಯ ನಿಲಾ ಮತ್ತು 'ದಿಲ್ ಸೆ' ಹಾಡುಗಳನ್ನು ಹಾಡಿದರು. ಕನ್ನಡ ಕೂಟದ ಸಂಗೀತ ತಂಡ 'ಇಂಚರ' ಜನಪ್ರಿಯ ಕನ್ನಡ ಗೀತೆ 'ತುಳಸಿ' ಯನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿತು. ನಂತರ 'ಇ# ಬ್ಯಾಂಡ್ ತಮ್ಮ ಶಕ್ತಿಯುತ ಪ್ರದರ್ಶನದಿಂದ ವಾತಾವರಣವನ್ನು ಕಂಗೊಳಿಸುವಂತೆ ಮಾಡಿತು. ಅವರು 'ಫಿನಿಯಸ್ ಅಂಡ್ ಫರ್ಬ್ ಕಾರ್ಟೂನ್‌ನ ಥೀಮ್ ಸಾಂಗ್ ಅನ್ನು ಹಾಡಿ ಹಳೆ ನೆನಪುಗಳು ಮರುಕಳಿಸುವಂತೆ ಮಾಡಿದರು. ಅವರ ಪ್ರದರ್ಶನ ವಿದ್ಯಾರ್ಥಿಗಳಿಗೆ ಪರೀಕ್ಷೆ, ಇಂಟರ್ನ್‌ಶಿಪ್ ಮತ್ತು ಪೋಸ್ಟೆಂಟ್ ಒತ್ತಡವನ್ನು ಕ್ಷಣಕಾಲ ಮರೆಸುವಂತೆ ಮಾಡಿತು.

ಬೆಂಗಳೂರು ಮೂಲದ ಮೆಟಲ್ ಬ್ಯಾಂಡ್ 'ಎಕೊ ಚೇಂಬರ್' ತಮ್ಮ ಮೂಲ ಗೀತೆ 'ಸಿಂಥಟಿಕ್' ಹಾಗೂ ಸ್ಕ್ರಿಪ್‌ನಾಟ್‌ನ 'ಡುಯಾಲಿಟಿ' ಹಾಡನ್ನು ಪ್ರದರ್ಶಿಸಿದರು. ನಂತರ 'ಪಿಚ್ ಫೀಸ್ ಅಕಪೆಲ್ಲಾ ತಂಡವು ಮನಮೋಹಕ ಪ್ರದರ್ಶನ ನೀಡಿತು. ನೌಟಂಕಿ ತಂಡವು ಕಥನ ಶೈಲಿಯಲ್ಲಿ ಸ್ಪರ್ಧೆ, ಪ್ರೀತಿ ಮತ್ತು ದ್ರೋಹವನ್ನು ಒಳಗೊಂಡ ನಾಟಕವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಭಾವನಾತ್ಮಕ ಪ್ರಯಾಣಕ್ಕೆ ಕರೆದೊಯ್ದಿತು.

ಟೀಮ್ ಆಂಗಿಕ ಮೊದಲ ನೃತ್ಯ ಪ್ರದರ್ಶನ ನೀಡಿತು. ಗೋಪಾಲಕೃಷ್ಣ ಭಾರತಿ ಅವರ 'ನಟನಂ ಆದಿನಾರ್ ಕೀರ್ತನೆಯನ್ನು ಪ್ರದರ್ಶಿಸಿ, ಚಿದಂಬರಂನಲ್ಲಿ ಶಿವನ ಆನಂದ ತಾಂಡವವನ್ನು ಮನೋಜ್ಞವಾಗಿ ಮೂಡಿಸಿದರು. ಪ್ರದರ್ಶನ ಕಲಾ ವಿಭಾಗವು ನಂತರ ರಾಗ ಕಡನ ಕುತೂಹಲದಲ್ಲಿ ತಿಲಾನ ನೃತ್ಯವನ್ನು ಪ್ರದರ್ಶಿಸಿತು, ಇದು ಕಥಕ್ ಮತ್ತು ಭರತನಾಟ್ಯ ಶೈಲಿಗಳ ಸಂಯೋಜನೆಯಾಗಿತ್ತು. ಟೀಮ್ ಎಂಕೋರ್ ಪಾಶ್ಚಾತ್ಯ ಸ್ಟ್ರೀಟ್ ಡ್ಯಾನ್ಸ್ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿತು. ಟೀಮ್ ಅಂತರಾ ಬಾಲಿವುಡ್ ಝಲಕ್ ತಂದು ವೇದಿಕೆಯನ್ನು ಬೆಳಗಿಸಿತು. ಕನ್ನಡ ಕೂಟದ ಬಾಲನ್ ಮತ್ತು ಬೆಡಗು ತಂಡಗಳು ತಮ್ಮ ಉತ್ಸಾಹಭರಿತ ನೃತ್ಯಗಳಿಂದ ಮೆಚ್ಚುಗೆ ಗಳಿಸಿದವು.

PES University: ಪಿಇಎಸ್‌ ವಿಶ್ವವಿದ್ಯಾಲಯದ ಬೆಸ್ಟ್‌ನಲ್ಲಿ ಉದ್ಯಮ ಸಿದ್ಧತೆಗಾಗಿ ಕಾರ್ಯಕ್ರಮ

ಟೀಮ್ ಸಂಸ್ಕೃತಿ 'ಇಕ್ ಜುನೂನ್' ಎಂಬ ಥೀಮ್‌ನೊಂದಿಗೆ ನೃತ್ಯ ಪ್ರದರ್ಶಿಸಿತು. ಪರಂಪರೆ ಮತ್ತು ಆಧುನಿಕತೆಯ ಸಮನ್ವಯದಿಂದ ಅವರು ಪ್ರೇಕ್ಷಕರ ಮನ ಗೆದ್ದರು. ಟೀಮ್ ಟ್ರಾನ್ಸ್ ಅವರ ಸಮನ್ವಯಿತ ನೃತ್ಯ ಪ್ರದರ್ಶನವು ಪ್ರೇಕ್ಷಕರ ಮೇಲೆ ಅಚ್ಚಳಿಯದ ಗುರುತು ಮೂಡಿಸಿತು. ಕೊನೆಯ ಪ್ರದರ್ಶನವನ್ನು ಟೀಮ್ ಮೆರಾಕಿ ನೀಡಿತು. ಅವರ ಫ್ಯಾಷನ್ ಪ್ರದರ್ಶನವು ಪ್ರೇಕ್ಷಕರಿಂದ ಭಾರೀ ಕರತಾಡನವನ್ನು ಗಳಿಸಿತು.