West Asia Crisis: ಭಾರತಕ್ಕೆ ಬರುತ್ತಿದ್ದ ಇರಾನ್ನ ತೈಲ ತುಂಬಿದ ಹಡಗು ಚೀನಾದತ್ತ ತೆರಳುತ್ತಿರುವ ಕಾರಣ ಬಹಿರಂಗ; ಈ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು?
ಇರಾನ್‌ನಿಂದ ಭಾರತಕ್ಕೆ ಬರುತ್ತಿದ್ದ ತೈಲ ತುಂಬಿದ ಹಡಗು ಚೀನಾದತ್ತ ಮುಖ ಮಾಡಿದೆ. ಪಾವತಿ ಸಮಸ್ಯೆಯಿಂದ ಹಡಗನ್ನು ಚೀನಾದತ್ತ ತಿರುಗಿಸಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ವ್ಯಾಪಾರ ಒಪ್ಪಂದದ ಕಾರಣದಿಂದ ಈ ಸಹಜ ಬೆಳವಣಿಗೆ ನಡೆದಿದೆ ಎಂದು ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಏ. 4: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ (West Asia Crisis) ತೀವ್ರಗೊಳ್ಳುತ್ತಿರುವ ಮಧ್ಯೆ ಇರಾನ್‌ನಿಂದ ಭಾರತಕ್ಕೆ ಬರುತ್ತಿದ್ದ ತೈಲ ತುಂಬಿದ ಹಡಗು ಚೀನಾದತ್ತ ಮುಖ ಮಾಡಿದೆ. ಭಾರತಕ್ಕೆ ಆಗಮಿಸಬೇಕಿದ್ದ ಈ ಹಡಗು ಏಪ್ರಿಲ್ 3ರಂದು ಇದ್ದಕ್ಕಿದ್ದತಂತೆ ಚೀನಾದತ್ತ ತೆರಳುತ್ತಿರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ನಿಖರ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಪಾವತಿ ಸಮಸ್ಯೆಯಿಂದ ಹಡಗನ್ನು ಚೀನಾದತ್ತ ತಿರುಗಿಸಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ವ್ಯಾಪಾರ ಒಪ್ಪಂದದ ಕಾರಣದಿಂದ ಈ ಸಹಜ ಬೆಳವಣಿಗೆ ನಡೆದಿದೆ ಹೊರತು ಇದರ ಹಿಂದೆ ಪಾವತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತದ ಪೆಟ್ರೋಲಿಯಂ ಸಚಿವಾಲಯ ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದೆ. ಪಾವತಿ ಸಮಸ್ಯೆಯಿಂದ ಹಡಗು ಚೀನಾದತ್ತ ತೆರಳುತ್ತಿದೆ ಎನ್ನುವ ಸುದ್ದಿ ಸುಳ್ಳು ಎಂದು ತಿಳಿಸಿದೆ. ಆ ಮೂಲಕ ನಿನ್ನೆಯಿಂದ ಹರಿದಾಡುತ್ತಿರುವ ವದಂತಿಗೆ ಫುಲ್ ಸ್ಟಾಪ್ ಇಟ್ಟಿದೆ.
ಪೆಟ್ರೋಲಿಯಂ ಸಚಿವಾಲಯದ ಎಕ್ಸ್ ಪೋಸ್ಟ್:
The news reports and social media posts of an Iranian crude cargo being diverted from Vadinar, India to China due to “payment issues” are factually incorrect. 🇮🇳India imports crude oil from 40+ countries, with companies having full flexibility to source oil from different sources…
— Ministry of Petroleum and Natural Gas #MoPNG (@PetroleumMin) April 4, 2026
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆಯೂ ಭಾರತೀಯ ಸಂಸ್ಕರಣಾಗಾರಗಳು ಇರಾನ್‌ನಿಂದ ಕಚ್ಚಾ ತೈಲವನ್ನು ಪಡೆದುಕೊಳ್ಳುತ್ತಿವೆ ಮತ್ತು ಪಾವತಿ ಕುರಿತಾದ ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿಸಿದೆ. ಗುಜರಾತ್‌ನ ವಡಿನಾರ್‌ಗೆ ಆಗಮಿಸಿಬೇಕಿದ್ದ ಹಡಗು ಇದ್ದಕ್ಕಿದ್ಧಂತೆ ಚೀನಾದ ಡಾಂಗ್ಯಿಂಗ್‌ನತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಾಕಷ್ಟು ಊಹಾಪೋಹ ಹರದಾಡಿದ್ದವು.
ಹೊರ್ಮುಜ್ ಜಲಸಂಧಿ ದಾಟಿ ದೇಶದತ್ತ ಧಾವಿಸುತ್ತಿದೆ ಎಲ್‌ಪಿಜಿ ಹೊತ್ತ 7ನೇ ಹಡಗು
ಪೆಟ್ರೋಲಿಯಂ ಸಚಿವಾಲಯ ಹೇಳಿದ್ದೇನು?
ʼʼಪಾವತಿ ಸಮಸ್ಯೆಯ ಕಾರಣದಿಂದಾಗಿ ಕಚ್ಚಾ ತೈಲ ಹೊತ್ತುಕೊಂಡ ಭಾರತದತ್ತ ಹೊರಟಿದ್ದ ಇರಾನಿನ ಹಡಗು ಚೀನಾದ ಕಡೆ ಮುಖ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದು ಸಂಪೂರ್ಣ ಆಧಾರರಹಿತ. ಭಾರತವು 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ನಮ್ಮ ಕಂಪನಿಗಳು ವಾಣಿಜ್ಯ ಬಳಕೆಯ ಆಧಾರದ ಮೇಲೆ ವಿವಿಧ ಮೂಲಗಳು ಮತ್ತು ಭೌಗೋಳಿಕ ಪ್ರದೇಶಗಳಿಂದ ತೈಲವನ್ನು ಪಡೆಯಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿವೆʼʼ ಎಂದಿದೆ.
ʼʼಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ಭಾರತೀಯ ಕಂಪನಿಗಳು ಇರಾನ್ ಸೇರಿದಂತೆ ವಿವಿಧ ದೇಶಗಳಿಂದ ಕಚ್ಚಾ ತೈಲ ಪಡೆದುಕೊಳ್ಳುತ್ತಿವೆ. ಈಗ ಹರಡುತ್ತಿರುವ ವದಂತಿಯಂತೆ ಇರಾನಿನ ಕಚ್ಚಾ ತೈಲ ಆಮದಿಗೆ ಯಾವುದೇ ಪಾವತಿಯ ಅಡಚಣೆ ಇಲ್ಲ. ವ್ಯಾಪಾರ ಆಪ್ಟಿಮೈಸೇಶನ್ ಮತ್ತು ಕಾರ್ಯಾಚರಣೆಯ ವೈವಿಧ್ಯತೆಯ ಆಧಾರದ ಮೇಲೆ ಹಡಗಿನ ಗಮ್ಯ ಸ್ಥಾನ ಸಮುದ್ರದ ಮಧ್ಯೆಯೇ ಕೆಲವೊಮ್ಮೆ ಬದಲಾಗುತ್ತದೆ. ಈ ಸಹಜ ಬೆಳವನಿಗೆಯೇ ಈ ಹಡಗಿನ ವಿಚಾರದಲ್ಲೂ ಆಗಿದೆʼʼ ಎಂದು ತಿಳಿಸಿದೆ.
''ಭಾರತ ಕಚ್ಚಾ ತೈಲದ ವಿಚಾರದಲ್ಲಿ ಸಂಪೂರ್ಣ ಸುರಕ್ಷಿತವಾಗಿದೆ. ಬೇಕಾದಷ್ಟು ದಾಸ್ತಾನಿದೆ. ಎಲ್‌ಪಿಜಿ ಸಂಗ್ರಹವೂ ಸಾಕಷ್ಟಿದೆ. ಸುಮಾರು 44 ಟಿಎಂಟಿ ಎಲ್‌ಪಿಜಿ ಹೊತ್ತ ಇರಾನಿನ ಹಡಗು ಸೀ ಬರ್ಡ್ ಏಪ್ರಿಲ್ 2ರಂದು ಮಂಗಳೂರಿಗೆ ಆಗಮಿಸಿದೆʼʼ ಎಂದು ವಿವರಿಸಿದೆ.
7ನೇ ಎಲ್‌ಪಿಜಿ ಟ್ಯಾಂಕರ್ ಹೊರ್ಮುಜ್ ಜಲಸಂಧಿ ದಾಟುತ್ತಿದ್ದಂತೆ ಭಾರತಕ್ಕೆ ವಿಶೇಷ ಸಂದೇಶ ರವಾನಿಸಿದ ಇರಾನ್
ಭಾರತದತ್ತ 8ನೇ ಹಡಗು
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ ಇರಾನ್ ಹೊರ್ಮುಜ್ ಜಲಸಂಧಿಗೆ ನಿರ್ಬಂಧ ಹೇರಿದ ನಂತರ ಇದುವರೆಗೆ ಎಲ್‌ಪಿಜಿ ಹೊತ್ತ 8 ಹಡಗುಗಳು ಭಾರತಕ್ಕೆ ಆಗಮಿಸಿವೆ. ಈಗಾಗಲೇ ಇರಾನ್ ಭಾರತವನ್ನು ತನ್ನ ಸ್ನೇಹಿತ ಎಂದು ಸಂಬೋಧಿಸಿದ್ದು, ಹಡಗುಗಳ ಸಾಗಾಟಕ್ಕೆ ಅನುಮತಿ ನೀಡುತ್ತಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.