ಪೊಲೀಸ್ ಕಾನ್ಸ್‌ಟೇಬಲ್ ಎಕ್ಸಾಂ: ಡ್ರೆಸ್‍ಕೋಡ್, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
KEA RPC Exam 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ನಡೆಸಲಾಗುತ್ತಿರುವ ಕರ್ನಾಟಕ ರಾಜ್ಯ ಪೊಲೀಸ್ (RPC) ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ-2026ರ ಲಿಖಿತ ಪರೀಕ್ಷೆಯು ಆಗಸ್ಟ್ 2, 2026 (ಭಾನುವಾರ) ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೆಇಎ ಸೂಚನೆಯನ್ನು ನೀಡಿದೆ
ಸಂಗ್ರಹ ಚಿತ್ರ -
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ನಡೆಸಲಾಗುತ್ತಿರುವ ಕರ್ನಾಟಕ ರಾಜ್ಯ ಪೊಲೀಸ್ (RPC) ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ-2026ರ (KEA RPC Exam 2026) ಲಿಖಿತ ಪರೀಕ್ಷೆಯು ಆಗಸ್ಟ್ 2, 2026 (ಭಾನುವಾರ) ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೆಇಎ ಸೂಚನೆಯನ್ನು ನೀಡಿದೆ. ಒಟ್ಟು 4.54 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷೆಯು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12:00ರವರೆಗೆ ನಡೆಯಲಿದ್ದು, ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವುದು ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯ ಭದ್ರತಾ ತಪಾಸಣೆ, ಸಿಸಿಟಿವಿ ನಿಗಾ ಹಾಗೂ ಎಐ (AI) ಆಧಾರಿತ ಮುಖ ಗುರುತಿಸುವಿಕೆ (Face Recognition) ವ್ಯವಸ್ಥೆಯ ಮೂಲಕ ಗುರುತು ಪರಿಶೀಲನೆ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಬಂದ ತಕ್ಷಣ, ಪ್ರಿನ್ಸಿಪಾಲ್ ನೇತೃತ್ವದಲ್ಲಿ ಕೇಂದ್ರದ ಐದು ವಿದ್ಯಾರ್ಥಿಗಳ ಸಮಕ್ಷಮದಲ್ಲೇ ಪ್ರಶ್ನೆಪತ್ರಿಕೆಯ ಸಿಲ್ಡ್ ಬಾಕ್ಸ್ ತೆರೆಯಲಾಗುತ್ತದೆ. ಪ್ರಶ್ನೆಪತ್ರಿಕೆ ಬಾಕ್ಸ್ ಓಪನ್ ಮಾಡುವುದರಿಂದ ಹಿಡಿದು ಪರೀಕ್ಷಾ ಕೊಠಡಿಗೆ ತಲುಪುವವರೆಗೆ ಅಭ್ಯರ್ಥಿಗಳ ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್, ಎಲೆಕ್ಟ್ರಾನಿಕ್ ಪೆನ್, ಪುಸ್ತಕಗಳು, ಚೀಟಿಗಳು, ವಾಲೆಟ್, ಕೈಚೀಲ, ಗಾಗಲ್ಸ್, ಬೆಲ್ಟ್, ಕ್ಯಾಪ್, ಆಹಾರ ಪದಾರ್ಥಗಳು ಹಾಗೂ ನೀರಿನ ಬಾಟಲಿಯನ್ನು ತರಲು ಅವಕಾಶವಿರುವುದಿಲ್ಲ. ನಿಷೇಧಿತ ವಸ್ತುಗಳನ್ನು ಕೇಂದ್ರದಲ್ಲಿ ಇಡಲು ಯಾವುದೇ ಪ್ರತ್ಯೇಕ ವ್ಯವಸ್ಥೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
KEA Exam: ಒಳ ಮೀಸಲಾತಿ ಎಫೆಕ್ಟ್; ವಿವಿಧ ಹುದ್ದೆಗಳ ನೇಮಕಾತಿಗೆ ಮೇ 9, 10ರಂದು ನಡೆಯಬೇಕಿದ್ದ ಪರೀಕ್ಷೆ ರದ್ದು
ಅಭ್ಯರ್ಥಿಗಳು ಉದ್ದ ತೋಳಿನ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗಬಾರದು ಎಂದು ಸೂಚಿಸಲಾಗಿದೆ. ಕಿವಿ, ತಲೆ ಅಥವಾ ಮುಖ ಮುಚ್ಚುವ ಉಡುಪುಗಳನ್ನು ಧರಿಸುವಂತಿಲ್ಲ. ಮೂಗುತಿ ಮತ್ತು ಮಂಗಳಸೂತ್ರವನ್ನು ಹೊರತುಪಡಿಸಿ ಇತರ ಲೋಹದ ಆಭರಣಗಳನ್ನು ಧರಿಸುವುದಕ್ಕೂ ಅವಕಾಶವಿಲ್ಲ. ಶೂ ಧರಿಸುವ ಬದಲು ಚಪ್ಪಲಿ ಧರಿಸುವಂತೆ ಸೂಚಿಸಲಾಗಿದೆ. ಕಿವಿ ಭಾಗದಲ್ಲಿ ಬ್ಲೂಟೂತ್ ಅಥವಾ ಇಯರ್‌ಫೋನ್ ಸಾಧನ ಬಳಸಿ ಅಕ್ರಮ ಎಸಗುವುದನ್ನು ತಡೆಯಲು ಸೂಕ್ಷ್ಮ ಕೇಂದ್ರಗಳಲ್ಲಿ ENT (ಕಿವಿ, ಮೂಗು, ಗಂಟಲು) ವೈದ್ಯರನ್ನು ತಪಾಸಣೆಗೆ ನೇಮಿಸಲಾಗಿದೆ.