ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ಹೃದಯಾಘಾತದಿಂದ ನಿಧನ

ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್‌. ಪ್ರಸಾದ್‌ (66) ಹೃದಯಾಘಾತದಿಂದ ಇಂದು ವಿಧಿವಶರಾದರು. ಇಂದು ಬೆಳಗ್ಗೆ 10.30 ರ ಸುಮಾರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಮ್ಯಾಂಡೋಲಿನ್ ಪ್ರಸಾದ್ ಎಂದೇ ಪ್ರಸಿದ್ಧರಾಗಿದ್ದ ಅವರು ಕನ್ನಡ ಚಲನಚಿತ್ರ ರಂಗ ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ಹೃದಯಾಘಾತದಿಂದ ನಿಧನ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 25, 2026 1:33 PM

ಬೆಂಗಳೂರು: ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್‌. ಪ್ರಸಾದ್‌ (66) ಹೃದಯಾಘಾತದಿಂದ (Mandolin N.S Prasad) ಇಂದು ವಿಧಿವಶರಾದರು. ಇಂದು ಬೆಳಗ್ಗೆ 10.30 ರ ಸುಮಾರಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮ್ಯಾಂಡೋಲಿನ್ ಪ್ರಸಾದ್ ಎಂದೇ ಪ್ರಸಿದ್ಧರಾಗಿದ್ದ ಅವರು ಕನ್ನಡ ಚಲನಚಿತ್ರ ರಂಗ ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಪ್ರಸಾದ್‌, ಮ್ಯಾಂಡೋಲಿನ್ ವಾದ್ಯವನ್ನು ಸುಗಮ ಸಂಗೀತದಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1960 ಮಾರ್ಚ್‌ 15 ರಂದು ಮೈಸೂರಿನಲ್ಲಿ ಜನಿಸಿದ ಪ್ರಸಾದ್‌, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿಯನ್ನು ಪಡೆದಿದ್ದಾರೆ. ಪ್ರಸಾದ್‌ ಅವರಿಗೆ ಚಿಕ್ಕಂದಿನಿಂದಲೇ ಸಂಗೀತದಲ್ಲಿ ಅಪಾರ ಒಲವಿತ್ತು. ಪ್ರಖ್ಯಾತ ವಿದ್ವಾನ್ ವಿ. ದೇಶಿಕಾಚಾರ್ ಅವರ ಬಳಿ ಆರಂಭಿಕ ವೀಣೆ ತರಬೇತಿಯನ್ನು ಪಡೆದುಕೊಂಡರು. ಬಳಿಕ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಮ್ಯಾಂಡೋಲಿನ್ ವಾದ್ಯದಲ್ಲಿ ಪರಿಣತಿ ಸಾಧಿಸಿದರು. ಮ್ಯಾಂಡೋಲಿನ್ ಜೊತೆಗೆ ಗಿಟಾರ್, ಕೀಬೋರ್ಡ್, ಮ್ಯಾಂಡೋಲಾ ಮತ್ತು ಬ್ಯಾಂಜೋ ವಾದ್ಯಗಳನ್ನು ಸರಾಗವಾಗಿ ನುಡಿಸುತ್ತಿದ್ದರು.

ಪಾಶ್ಚಾತ್ಯ ಮೂಲದ ಮ್ಯಾಂಡೋಲಿನ್ ವಾದ್ಯವನ್ನು ಕನ್ನಡದ ಸುಗಮ ಸಂಗೀತ (ಭಾವಗೀತೆಗಳು) ಕ್ಷೇತ್ರಕ್ಕೆ ಅಳವಡಿಸಿದ ಪ್ರಮುಖ ಕೀರ್ತಿ ಪ್ರಸಾದ್‌ ಅವರಿಗೆ ಸಲ್ಲುತ್ತದೆ. ಕನ್ನಡದ ದಿಗ್ಗಜ ಸಂಗೀತ ನಿರ್ದೇಶಕ ಸಿ. ಅಶ್ವಥ್ ಅವರೊಂದಿಗೆ ಸುಮಾರು 36 ವರ್ಷಗಳ ಕಾಲ ಪ್ರಮುಖ ಸಂಗೀತ ಸಂಯೋಜಕರಾಗಿ ಮತ್ತು ವಾದ್ಯಗಾರರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ 'ಮೈಸೂರು ಮಲ್ಲಿಗೆ', 'ನಾಗಮಂಡಲ', 'ಚಿನ್ನಾರಿ ಮುತ್ತ', 'ಕೋಟ್ರೇಶಿ ಕನಸು', 'ಶಿಶುನಾಳ ಶರೀಫ' ಮತ್ತು 'ಸಿಂಗಾರವ್ವ ಮತ್ತು ಅರಮನೆ' ಮುಂತಾದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳಿಗೆ ವಾದ್ಯ ಸಂಯೋಜನೆ ಮಾಡಿದ್ದಾರೆ. ಇವರು ಹಿನ್ನೆಲೆ ಸಂಗೀತ ನೀಡಿದ 'ಮಿಠಾಯಿ ಮನೆ' ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ರಾಜ್ಯ ಪ್ರಶಸ್ತಿ ಸಂದಿದೆ. ಮೈಸೂರು ಅನಂತಸ್ವಾಮಿ, ಶೀಮೊಗ್ಗ ಸುಬ್ಬಣ್ಣ, ಪುತ್ತೂರು ನರಸಿಂಹ ನಾಯಕ್ ಮತ್ತು ರತ್ನಮಾಲಾ ಪ್ರಕಾಶ್ ಮುಂತಾದ ಪ್ರಸಿದ್ಧ ಗಾಯಕರೊಂದಿಗೆ ಪ್ರಸಾದ್‌ ಕೆಲಸ ಮಾಡಿದ್ದಾರೆ.

ಮಾಜಿ ಸಚಿವ ಸಿ.ವೀರಣ್ಣ ನಿಧನ; ಗಣ್ಯರಿಂದ ಸಂತಾಪ

ಕೇವಲ ಭಾರತದಲ್ಲಿ ಮಾತ್ರವಲ್ಲ ಅಮೆರಿಕ, ಸಿಂಗಾಪುರ, ಮಸ್ಕತ್, ಬಹ್ರೇನ್ ಸೇರಿದಂತೆ ಸುಮಾರು 13ಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಯುವ ಪ್ರತಿಭೆಗಳಿಗೆ ಸಂಗೀತ ಕಲಿಸಲು ಮತ್ತು ಮ್ಯಾಂಡೋಲಿನ್ ಜನಪ್ರಿಯಗೊಳಿಸಲು ಇವರು ರಾಗಶ್ರೀ ಮ್ಯೂಸಿಕ್ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಇವರ ಸುದೀರ್ಘ ಸಂಗೀತ ಸೇವೆಯನ್ನು ಗುರುತಿಸಿ 2009 ರಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ , ಮಿರ್ಚಿ ಮ್ಯೂಸಿಕ್ ಸ್ಪೆಷಲ್ ಜ್ಯೂರಿ ಪ್ರಶಸ್ತಿ, ಅತ್ಯುತ್ತಮ ಸ್ಟ್ರಿಂಗ್ ಪ್ಲೇಯರ್ ಸೇರಿದಂತೆ ಹಲವು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮೃತರು ಪತ್ನಿ, ಪುತ್ರಿ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮ್ಯಾಂಡೋಲಿನ್‌ ಪ್ರಸಾದ್‌ ಅವರ ನಿಧನಕ್ಕೆ ಸುಗಮ ಸಂಗೀತ ಪರಿಷತ್‌ ಅಧ್ಯಕ್ಷ ವೈ.ಕೆ ಮುದ್ದುಕೃಷ್ಣ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.