ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಂತಿಮ ಘಟ್ಟದಲ್ಲಿ ಎಸ್‌ಐಆರ್: 2,85,646 ಅರ್ಜಿಗಳ ವಿಚಾರಣೆಯಷ್ಟೇ ಬಾಕಿ: 1.10 ಲಕ್ಷವಷ್ಟೇ ಫಾರ್ಮ್ 7 ಸಲ್ಲಿಕೆ

ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಸಂಬಂಧಿಸಿ ದಂತೆ ರಾಜ್ಯಾದ್ಯಂತ 1,10,654 ಫಾರ್ಮ್ 7 ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್ 9ರ ವೇಳೆಗೆ ರಾಜ್ಯದಲ್ಲಿ ಒಟ್ಟು 4,51,61,393 ಮತದಾರರಿದ್ದು, ಅವರಲ್ಲಿ 2,24,03,422 ಪುರುಷರು, 2,27,55,113 ಮಹಿಳೆಯರು ಹಾಗೂ 2,858 ತೃತೀಯ ಲಿಂಗದ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಅಂಕಿ-ಅಂಶಗಳನ್ನು ಬಹಿರಂಪಡಿಸಿದೆ.

1.10 ಲಕ್ಷವಷ್ಟೇ ಫಾರ್ಮ್ 7 ಸಲ್ಲಿಕೆ

-

Profile
Ashok Nayak Oct 10, 2026 11:34 AM

ಬೆಂಗಳೂರು: ರಾಜ್ಯದಲ್ಲಿ ಭಾರಿ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದ, ಸುಮಾರು 50 ಲಕ್ಷ ಮತದಾರರನ್ನು ಕೈಬಿಡಲು ಪ್ರಯತ್ನ ನಡೆದಿವೆ ಎನ್ನುವ ಕಾಂಗ್ರೆಸ್ ಆರೋಪದ ನಡುವೆಯೇ ಶುಕ್ರವಾರದ ಅಂತ್ಯಕ್ಕೆ ಕೇವಲ 1,10,654 ಫಾರ್ಮ್ 7 ಅರ್ಜಿ ಸಲ್ಲಿಕೆಯಾಗಿರುವುದನ್ನು ಚುನಾವಣಾ ಆಯೋಗ ಬಹಿರಂಗಪಡಿಸಿದೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ಸಂಬಂಧಿಸಿ ದಂತೆ ರಾಜ್ಯಾದ್ಯಂತ 1,10,654 ಫಾರ್ಮ್ 7 ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್ 9ರ ವೇಳೆಗೆ ರಾಜ್ಯದಲ್ಲಿ ಒಟ್ಟು 4,51,61,393 ಮತದಾರರಿದ್ದು, ಅವರಲ್ಲಿ 2,24,03,422 ಪುರುಷರು, 2,27,55,113 ಮಹಿಳೆಯರು ಹಾಗೂ 2,858 ತೃತೀಯ ಲಿಂಗದ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಅಂಕಿ-ಅಂಶಗಳನ್ನು ಬಹಿರಂಪಡಿಸಿದೆ. ಆದರೆ ಈವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಯಲ್ಲಿ ಒಟ್ಟು 43,82,315 ನೋಟಿಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ 43,73,745 ನೋಟಿಸ್‌ಗಳನ್ನು ವಿತರಿಸಲಾಗಿದೆ.

ಈ ಮೂಲಕ ಶೇ.99.80ರಷ್ಟು ನೋಟಿಸ್ ವಿತರಣೆ ಪೂರ್ಣಗೊಂಡಿದೆ. ವಿತರಿಸಲಾದ ನೋಟಿಸ್‌ ಗಳಿಗೆ ಸಂಬಂಧಿಸಿದಂತೆ 40,88,099 ವಿಚಾರಣೆಗಳು ಪೂರ್ಣಗೊಂಡಿದ್ದು, ಇದು ಶೇ.93.47 ರಷ್ಟಾಗಿದೆ. ಇನ್ನೂ 2,85,646 ವಿಚಾರಣೆಗಳು ಬಾಕಿ ಉಳಿದಿವೆ.

ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

23 ಲಕ್ಷ ಅರ್ಜಿ ಸಲ್ಲಿಕೆ: ಜೂ.16ರಿಂದ ಅ.8ರವರೆಗೆ ರಾಜ್ಯದಲ್ಲಿ ವಿವಿಧ ಉದ್ದೇಶಗಳಿಗಾಗಿ ಒಟ್ಟು 23,02,215 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 9,52,497 ಫಾರ್ಮ್-6, 4,712 ಫಾರ್ಮ್-6ಎ, 1,10,654 ಫಾರ್ಮ್-7 ಹಾಗೂ 12,34,352 ಫಾರ್ಮ್-8 ಅರ್ಜಿಗಳು ಸೇರಿವೆ.

ಫಾರ್ಮ್-6 ಅನ್ನು ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮತ್ತು ಎನ್ಯುಮರೇಶನ್ ಮ್ಯಾಪಿಂಗ್‌ನಲ್ಲಿ ಬಿಟ್ಟು ಹೋದವರ ಮರು ಸೇರ್ಪಡೆಗೆ ಬಳಸಲಾಗುತ್ತದೆ. ವಿದೇಶದಲ್ಲಿ ವಾಸಿಸುವ ಭಾರತೀಯ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಫಾರ್ಮ್-6ಎ ಸಲ್ಲಿಸಬಹುದಾಗಿದೆ.

ಫಾರ್ಮ್-7 ಅನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವುದಕ್ಕೆ ಆಕ್ಷೇಪ ಸಲ್ಲಿಸಲು ಅಥವಾ ಈಗಿರುವ ಹೆಸರನ್ನು ಅಳಿಸಲು ಕೋರಲು ಬಳಸಲಾಗುತ್ತದೆ. ಫಾರ್ಮ್-8 ಮೂಲಕ ಮತ ದಾರರ ಪಟ್ಟಿಯಲ್ಲಿನ ವಿವರಗಳ ತಿದ್ದುಪಡಿ, ವಿಳಾಸ ಬದಲಾ ವಣೆ ಹಾಗೂ ಮತದಾರರ ಗುರುತಿನ ಚೀಟಿ ಬದಲಾವಣೆಗೆ ಅರ್ಜಿ ಸಲ್ಲಿಸಬಹುದು. ಫಾರ್ಮ್-9, 10,11, 11ಎ ಮತ್ತು 11ಬಿ ಮೂಲಕ ಸ್ವೀಕರಿಸಲಾದ ಹಕ್ಕು ಹಾಗೂ ಆಕ್ಷೇಪಣೆಗಳ ಕ್ಷೇತ್ರವಾರು ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಸಿಇಒ ಕಚೇರಿ ತಿಳಿಸಿದೆ.

ಸುಳ್ಳು ಅರ್ಜಿ ಸಲ್ಲಿಸಿದರೆ ಕ್ರಮ

ಫಾರ್ಮ್-6, 6ಎ, 7 ಮತ್ತು 8ರ ಮೂಲಕ ಸುಳ್ಳು ಹಕ್ಕು ಅಥವಾ ಆಕ್ಷೇಪಣೆಗಳನ್ನು ಸಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಚುನಾವಣಾಧಿ ಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ಟೋಬರ್ 1ರಂದು ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ, ಮತದಾರರ ನೋಂದಣಾಧಿಕಾರಿಗಳ ಮುಂದೆ ದೊಡ್ಡ ಪ್ರಮಾಣದಲ್ಲಿ ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಅರ್ಜಿಗಳು ನೈಜವಾಗಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸ ಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

image

ಫಾರ್ಮ್ 7 ಅರ್ಜಿಯಲ್ಲಿ ಉದ್ದೇಶಪೂರ್ವಕ ಸುಳ್ಳು ಹೇಳಿಕೆ ಅಥವಾ ಘೋಷಣೆ ನೀಡಿರುವುದು ತನಿಖೆ ಯಲ್ಲಿ ದೃಢಪಟ್ಟರೆ, ಜನಪ್ರತಿನಿಧಿ ಕಾಯಿದೆ- 1950ರ ಸೆಕ್ಷನ್ 31ರ ಅಡಿಯಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಆದರೆ, ಇಂತಹ ಕ್ರಮಕ್ಕೂ ಮೊದಲು ಮತದಾರರ ನೋಂದಣಿ ನಿಯಮಗಳು-1960ರ ನಿಯಮ 20ರ ಅಡಿಯಲ್ಲಿ ವಿಚಾರಣೆ ನಡೆಸ ಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಫಾರ್ಮ್-6, 6ಎ, 7 ಮತ್ತು 8ರ ದುರ್ಬಳಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

-ಅನ್ಬುಕುಮಾರ್, ಮುಖ್ಯ ಚುನಾವಣಾಧಿಕಾರಿ