Cabinet Meaning: ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ 'ಪ್ರಜಾಸೇವೆ ಇಲಾಖೆ' ಸ್ಥಾಪನೆ: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ
ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಯಾದಗಿರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 620 ನೂತನ ಬಸ್ ಖರೀದಿ, ಕರ್ನಾಟಕದ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಕರ್ನಾಟಕ ಭವನ ಸೇರಿ ಪ್ರಮುಖ ನಿರ್ಧಾರಗಳನ್ನು ಕ್ಯಾಬಿನೆಟ್ ಕೈಗೊಂಡಿದೆ.
-
ಬೆಂಗಳೂರು, ಜೂ.20: ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ಹೊಸ ಇಲಾಖೆ ಸ್ಥಾಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿ ಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸೌಧದಲ್ಲಿ ಎರಡನೇ ಕ್ಯಾಬಿನೆಟ್ ಸಭೆ ಬಳಿಕ ಸಿಎಂ ಡಿ.ಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಹತ್ವದ ನಿರ್ಣಯಗಳನ್ನು ಘೋಷಿಸಿದ್ದಾರೆ.
“ಸಾರ್ವಜನಿಕರ ಕುಂದುಕೊರತೆಗಳು, ಸಾರ್ವಜನಿಕ ಹೋರಾಟಗಳ ಅಹವಾಲುಗಳನ್ನು ಆಲಿಸಲು “ಪ್ರಜಾಸೇವೆ ಇಲಾಖೆ” ಯನ್ನು ಹೊಸದಾಗಿ ಪ್ರಾರಂಭ ಮಾಡಲಾಗುತ್ತಿದೆ. ಪ್ರತ್ಯೇಕ ಸಚಿವರಿಗೆ ಇದರ ಜವಾಬ್ದಾರಿವಹಿಸಲಾಗುವುದು. ಜನರ ಕಷ್ಟ ಭಾವನೆಗಳನ್ನು ಅರಿತು, ಕಾನೂನು ಚೌಕಟ್ಟಿನಲ್ಲಿ ಸ್ಪಂದಿಸುವುದು ನಮ್ಮ ಸರ್ಕಾರದ ಗುರಿ. ಹೀಗಾಗಿ ಈ ಇಲಾಖೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು. ಅವರು ಎಲ್ಲಾ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ಈ ಮೂಲಕ ಜನರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಿದೆ. ನನಗೆ ಹಾಗೂ ಇತರೇ ಸಚಿವರಿಗೆ ನೀಡಿದ ಮನವಿಗಳನ್ನು ಈ ಇಲಾಖೆ ಅಡಿಯಲ್ಲಿ ತರಲು ಆಲೋಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿಯ ಜಿಲ್ಲೆಯ ಕ್ಷೇತ್ರಗಳಲ್ಲಿ ವಾರಕ್ಕೆ ಒಮ್ಮೆ ಸ್ಥಳೀಯ ಶಾಸಕರೊಂದಿಗೆ ಈ ಇಲಾಖೆ ಮೂಲಕ ಜನಸ್ಪಂದನ ಸಭೆಗಳನ್ನು ನಡೆಸಬೇಕು. ಆನಂತರ ಅದನ್ನು ಪರಿಶೀಲಿಸುವ ಕೆಲಸ ಮಾಡಲಾಗುವುದು ಎಂದರು.
ವಿದ್ಯುತ್ ಸಂಪರ್ಕ ಪಡೆಯಲು 15 ದಿನಗಳ ಕಾಲಾವಕಾಶ
“31.05.2026 ರ ಒಳಗೆ ಪೂರ್ಣಗೊಂಡಿರುವ ಎಲ್ಲಾ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ವಿನಾಯಿತಿ ನೀಡಲಾಗಿದ್ದು, ಈ ವಿಚಾರವಾಗಿ ಸರ್ಕಾರಿ ಆದೇಶ ಬಂದ ದಿನದಿಂದ 15 ದಿನಗಳ ಕಾಲಾವಕಾಶ ನೀಡಲಾಗುವುದು. ಕಟ್ಟಡ ಮಾಲೀಕರು ಕಟ್ಟಡದ ಜೊತೆಗಿನ ಫೋಟೋ ಹಾಗೂ ಜಿಪಿಎಸ್ ದಾಖಲೆ ಕಡ್ಡಾಯವಾಗಿ ಸಲ್ಲಿಕೆ ಮಾಡಬೇಕು” ಎಂದರು.
"ಗ್ರಾಮೀಣ ಭಾಗದ, ರೇಷ್ಮೆ ಸಾಕಾಣಿಕೆ ಮನೆ, ಕೊಟ್ಟಿಗೆಗಳಿಗೆ ವಿನಾಯಿತಿ ನೀಡಲಾಗಿದೆ. ಹೊಸದಾಗಿ ನಿರ್ಮಾಣ ಮಾಡಿದರೆ ಅವಕಾಶವಿಲ್ಲ. ಇಂಧನ ಸಚಿವರು, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ದಿ ಸಚಿವರ ಬಳಿ ಇದರ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮೋದನೆ
“ಯಾದಗಿರಿಯ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ100 ಕೋಟಿ ರೂ. ವೆಚ್ಚದಲ್ಲಿ ನೂತನ 200 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. 18 ಕೋಟಿ ರೂ. ವೆಚ್ಚದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಗಳ ಆರು ಸಿವಿಲ್ ಕಾಮಗಾರಿಗಳಿಗೆ ಮತ್ತು ಬೆಂಗಳೂರು ವೈದ್ಯಕೀಯ ಸಂಶೋಧನಾ ಆಸ್ಪತ್ರೆಗೆ ಸುಮಾರು 60 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗೆ ಆಡಳಿತಾತ್ಮಕ ಅನುಮೋದನೆ" ಎಂದು ಮಾಹಿತಿ ನೀಡಿದರು.
620 ಬಸ್ ಖರೀದಿಗೆ ಅನುಮೋದನೆ
"620 ನೂತನ ಬಸ್ ಗಳ ಖರೀದಿಗೆ 235 ಕೋಟಿ ರೂ. ವೆಚ್ಚ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳ ಅಡಿಯಲ್ಲಿ 11 ಕಡೆ ಎಲೆಕ್ಟ್ರಿಕ್ ಬಸ್ ಗಳ ಡಿಪೋಗಳನ್ನು ತೆರೆಯಲು 112 ಕೋಟಿ ವೆಚ್ಚ ಮಾಡಲಾಗುವುದು. 30 ಕೋಟಿ ರೂ. ವೆಚ್ಚದಲ್ಲಿ ಸಂಡೂರು ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ. 620 ಬಸ್ ಗಳ ಪೈಕಿ ಗ್ರಾಮೀಣ ಪ್ರದೇಶಗಳಿಗೆ 400 ಬಸ್ ಗಳು ಹಾಗೂ ವಾಯುವ್ಯ ಸಾರಿಗೆ ನಿಗಮಕ್ಕೆ 220 ಬಸ್ ಗಳ ಖರೀದಿಗೆ ಅನುಮತಿ ನೀಡಲಾಗಿದೆ” ಎಂದರು.
ಕರ್ನಾಟಕದ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಕರ್ನಾಟಕ ಭವನ
ಯುಪಿಎಸ್ ಸೇರಿದಂತೆ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಒಂದೇ ಸೂರಿನಡಿ ಎಲ್ಲಾ ಅನುಕೂಲ ದೊರೆಯಬೇಕು ಎನ್ನುವ ಕಾರಣಕ್ಕೆ ಕೆಐಡಬ್ಲ್ಯೂಬಿ ವತಿಯಿಂದ ನವ ದೆಹಲಿಯಲ್ಲಿ ಕರ್ನಾಟಕ ಭವನ 4 ಅನ್ನು ನಿರ್ಮಾಣ ಮಾಡಲು 80 ಕೋಟಿಗೆ ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ಹಾಗೂ ಶೇ 50, ಇತರೇ ಸಮುದಾಯದ ವಿದ್ಯಾರ್ಥಿಗಳಿಗೆ ಶೇ 50 ರಷ್ಟು ಮೀಸಲು ಇಡಲಾಗಿದೆ” ಎಂದರು.
ದೆಹಲಿಯಲ್ಲಿ ಕಾನೂನು ವಿಭಾಗ ಸದೃಢ
“ಸುಪ್ರೀಂ ಕೋರ್ಟಿನಲ್ಲಿರುವ ವ್ಯಾಜ್ಯಗಳ ಇತ್ಯರ್ಥಕ್ಕೆ ದೆಹಲಿಯ ಕಾನೂನು ವಿಭಾಗವನ್ನು ಮತ್ತಷ್ಟು ಸದೃಢಗೊಳಿಸಲು ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೆಸಿಡೆನ್ಸಿಯಲ್ ಕಮಿಷನರ್ ಕಚೇರಿ ಕಾರ್ಯವೈಖರಿ ನನಗೆ ಸಮಾಧಾನ ತಂದಿಲ್ಲ. ಆದ ಕಾರಣಕ್ಕೆ ಅದನ್ನು ಹೊಸದಾಗಿ ಸಮೀಕರಿಸಲಾಗುತ್ತಿದೆ” ಎಂದರು.
ಕೇಂದ್ರದ ಯೋಜನೆಗಳನ್ನು ಕರ್ನಾಟಕಕಕ್ಕೆ ತರಲು ಅಧಿಕಾರಿಗಳ ತಂಡ ನಿಯೋಜನೆ
“ಕೇಂದ್ರದ ಯೋಜನೆಗಳನ್ನು ರಾಜ್ಯಕ್ಕೆ ತರುವುದು ಹೇಗೆ? ಯಾವ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕು. ಯಾವ ಯೋಜನೆಗಳು ಇತರೇ ರಾಜ್ಯಗಳಲ್ಲಿದೆ. ತಮಿಳುನಾಡು, ಆಂಧ್ರ ಪ್ರದೇಶ, ಗುಜರಾತ್ ಸೇರಿದಂತೆ ಇತರೇ ರಾಜ್ಯಗಳು ಯಾವ ಯೋಜನೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಯಲು ಹೊಸ ಅಧಿಕಾರಿಗಳ ತಂಡ ರಚಿಸಿ ನೇಮಕ ಮಾಡಲಾಗುತ್ತಿದೆ” ಎಂದರು.
“ಈಗಾಗಲೇ ದೆಹಲಿಗೆ ತೆರಳಿ ಕರ್ನಾಟಕದ ಅಧಿಕಾರಿಗಳ ಸಭೆ ನಡೆಸಿ ಅವರ ಸಲಹೆ ಪಡೆದಿದ್ದೇನೆ. ನಮ್ಮ ಅಧಿಕಾರಿಗಳು ಹಲವಾರು ಸಲಹೆ ನೀಡಿದ್ದು, ಕರ್ನಾಟಕದ ಏಳಿಗೆಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿರುವ ನಮ್ಮ ಅಧಿಕಾರಿಗಳು ತಂಡಗಳನ್ನು ರಚಿಸಿಕೊಂಡು ಇಲಾಖೆಗೆ ಅನುಗುಣವಾಗಿ ಸಲಹೆ ನೀಡಲು ಮುಂದ ಬಂದಿದ್ದಾರೆ. ಇವರ ಜೊತೆಗೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ನಿವೃತ್ತ ಅಧಿಕಾರಿಗಳನ್ನು ಈ ತಂಡಕ್ಕೆ ನೇಮಕ ಮಾಡಲಾಗಿದೆ” ಎಂದರು.
“ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಳಸಾಪೂರ ಗ್ರಾಮದಲ್ಲಿನ ಒಟ್ಟು 18 ಎಕರೆ ಜಮೀನಿನಲ್ಲಿ 50:50ರ ಅನುಪಾತದಲ್ಲಿ ರೈತರು ಹಾಗೂ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ರೂ.19.69 ಕೋಟಿಗಳ ಅಂದಾಜು ಮೊತ್ತದಲ್ಲಿ ವಸತಿ ಯೋಜನೆಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ” ಎಂದು ತಿಳಿಸಿದರು.
“ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಜಮೀನಿನ ಪೈಕಿ ಸ್ವಯಂಪ್ರೇರಿತವಾಗಿ ಜಮೀನು ನೀಡಲು ರೈತರು ಮುಂದೆ ಬಂದಿದ್ದಾರೆ. ಇದರ ಕಾಲಾವಕಾಶವನ್ನು 31.10.2026 ರವರೆಗೆ ವಿಸ್ತರಿಸಲು ಅನುಮತಿ ನೀಡಲಾಗಿದೆ” ಎಂದು ಹೇಳಿದರು.
“ಒಂದಷ್ಟು ಕ್ಯಾಬಿನೆಟ್ ಉಪ ಸಮಿತಿಗಳ ಜವಾಬ್ದಾರಿ ಮುಖ್ಯಮಂತ್ರಿಗೆ ನೀಡಲಾಗಿದೆ. ಕುಡಿಯುವ ನೀರಿನ ವಿಚಾರವಾಗಿ ಸಚಿವಸಂಪುಟ ವಿಸ್ತರಣೆಯಾದ ತಕ್ಷಣ ಜವಾಬ್ದಾರಿ ನೀಡಲಾಗುವುದು. ಪ್ರಸ್ತುತ ಈಗ ಇರುವವರೇ ನೀರಿನ ಸಮಸ್ಯೆ ಬರದಂತೆ ನಿಗಾವಹಿಸಬೇಕು ಎಂದು ತಿಳಿಸಲಾಗಿದೆ” ಎಂದು ಹೇಳಿದರು.
ಇ- ಆಡಳಿತ ಸೇರಿ ಎಲ್ಲವನ್ನೂ ಬಳಸಿ ಜನರ ಸಮಸ್ಯೆ ನಿವಾರಣೆ
ನೂತನ ಸಚಿವಾಲಯದ ಮೂಲಕ ಎಲ್ಲಾ ಇಲಾಖೆಗಳ ಸಮನ್ವಯತೆಗೆ ಯಾವ ಕ್ರಮ ಕೈಗೊಳ್ಳುವಿರಿ ಎಂದು ಕೇಳಿದಾಗ, “ನಮಗೆ ಜನರ ಹಿತ ಮುಖ್ಯ. ಇಲ್ಲಿ ಯಾರೂ ಸಹ ಸರ್ವಜ್ಞರಲ್ಲ. ಸಕಾಲ, ಇ- ಆಡಳಿತ ಸೇರಿದಂತೆ ಎಲ್ಲವನ್ನು ಬಳಸಿ ಜನರ ಸಮಸ್ಯೆ ನಿವಾರಿಸಲಾಗುವುದು. ಮಾಧ್ಯಮದಲ್ಲಿ ಬಂದಂತಹ ವಿಚಾರಗಳನ್ನು ತಿಳಿದು ನಾವೂ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಮಾಧ್ಯಮಗಳ ಗಮನಕ್ಕೆ ಬಂದಿದ್ದನ್ನು ಸರ್ಕಾರದ ಗಮನಕ್ಕೆ ತರಬೇಕು.
MLC Election: ಕಾಂಗ್ರೆಸ್‌ಗೆ ಹೋಗೋದಾದ್ರೆ ಈಗಲೇ ಹೋಗಿ; ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಎಚ್‌ಡಿಕೆ ಕಿಡಿ
ಬಸ್ ಟಿಕೆಟ್ ದರ ಏರಿಕೆ; ಜನರ ಹಿತದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ
ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಕೇಳಿದಾಗ, “ಖಾಸಗಿ ಹಾಗೂ ನಿಗಮದ ಡಿಪೋಗಳಲ್ಲಿನ ಡೀಸೆಲ್ ಬೆಲೆ ವ್ಯತ್ಯಾಸ ದರ ಸುಮಾರು 40 ರೂಪಾಯಿಯಷ್ಟಿದೆ. ಇದು ಗಾಬರಿಯಾಗುವ ಸಂಖ್ಯೆ. ಡೀಸೆಲ್ ಬೆಲೆ ಹೆಚ್ಚಾದರೆ ಟಿಕೆಟ್ ಬೆಲೆ ಹೆಚ್ಚಳ ಆಗಬೇಕು ಎಂದು ಈ ಹಿಂದೆ ತೀರ್ಮಾನ ಮಾಡಲಾಗಿತ್ತು. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ಕೆಎಸ್‌ಆರ್‌ಟಿಸಿಯೂ ಉಳಿಬೇಕು. ಜನರಿಗೂ ಅನುಕೂವಾಗಬೇಕು. ಏಕೆಂದರೆ ಪ್ರಧಾನ ಮಂತ್ರಿಗಳೇ ಸಾರ್ವಜನಿಕ ಸಾರಿಗೆಗಳನ್ನು ಬಳಸಿ ಇಂಧನ ಉಳಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಇದರ ಬಗ್ಗೆ ಜನರ ಹಿತ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗವುದು. ಖಾಸಗಿಯವರು ಡಿಪೋಗಳ ಬದಲಾಗಿ ಸಾರ್ವಜನಿಕರಿಗೆ ಇರುವ ಬಂಕ್‌ಗಳಲ್ಲಿ ಡಿಸೇಲ್ ಖರೀದಿ ಮಾಡುತ್ತಿದ್ದಾರೆ. ಇದರ ಬಗ್ಗೆ ವರದಿ ಕೇಳಿದ್ದೇನೆ” ಎಂದರು.