Transport workers strike: ಸಾರಿಗೆ ನೌಕರರ ಜತೆಗಿನ ಸರ್ಕಾರದ ಸಂಧಾನ ವಿಫಲ; ನಾಳೆ ಮಧ್ಯರಾತ್ರಿಯಿಂದಲೇ ಬಸ್ ಬಂದ್!
Karnataka transport employees: 2024ರ ಜನವರಿಯಿಂದ ಶೇ.25ರಷ್ಟು ವೇತನ ನೀಡಬೇಕು, ಬಾಕಿ ವೇತನ ಪೂರ್ಣ ಪ್ರಮಾಣದಲ್ಲಿ ಪಾವತಿಯಾಗಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ (ಸಂಗ್ರಹ ಚಿತ್ರ) -
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಹೀಗಾಗಿ ನಾಳೆ ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಬಸ್ ಮುಷ್ಕರ ಆರಂಭವಾಗುವುದು ಖಚಿತವಾಗಿದೆ. ಮೇ 20ರಿಂದ ಸಾರಿಗೆ ನೌಕರರ ಒಕ್ಕೂಟಗಳು ಜಂಟಿಯಾಗಿ ಸಾರಿಗೆ ಮುಷ್ಕರಕ್ಕೆ (Transport workers strike) ಕರೆ ನೀಡಿದ್ದು, ಮುಷ್ಕರ ನಡೆದರೆ ಸರ್ಕಾರಿ ಸಾರಿಗೆ ಸಂಚಾರದಲ್ಲಿ ಭಾರಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಅಧಿಕಾರಿಗಳ ಮನವೊಲಿಕೆಗೆ ಸಾರಿಗೆ ಸಂಘಟನೆಗಳು ಒಪ್ಪಿಗೆ ನೀಡಿಲ್ಲ. ಮತ್ತೆ ಮೇ 25ಕ್ಕೆ ಸಭೆಗೆ ಬರುವಂತೆ ಅಧಿಕಾರಿಗಳು ಹೇಳಿದ್ದರೂ ಮುಖಂಡರು ಒಪ್ಪಿಗೆ ನೀಡಲಿಲ್ಲ. ನಾಳೆ ಮಧ್ಯಾಹ್ನದ ಒಳಗಾಗಿ ಸಭೆ ಕರೆದು ಬೇಡಿಕೆ ಈಡೇರಿಕೆ ಸಂಬಂಧ ಮಾತನಾಡುವಂತೆ ಆಗ್ರಹಿಸಿದರು. ಇದಕ್ಕೆ ಅಧಿಕಾರಿಗಳು ಸರ್ಕಾರ ಸದ್ಯದ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಪಟ್ಟು ಸಡಿಲಿಸದ ಸಾರಿಗೆ ನೌಕರ ಸಂಘಟನೆ ಮುಖಂಡರು ನಾಳೆ ಮಧ್ಯರಾತ್ರಿಯಿಂದಲೇ ಬಸ್ ಸಂಚಾರ ಸ್ಥಗಿತಕ್ಕೆ ತೀರ್ಮಾನಿಸಿದ್ದಾರೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬಸ್ ಬಂದ್‌ನಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುವ ಆತಂಕ ಎದುರಾಗಿದೆ.
ಮತ್ತೊಂದೆಡೆ ಎಸ್‌ಸಿ, ಎಸ್‌ಟಿ ನೌಕರರ ಸಂಘ ಮುಷ್ಕರದಿಂದ ಹೊರ ಬಂದಿದ್ದು, ಮುಷ್ಕರದಲ್ಲಿ ಭಾಗಿಯಾಗುವುದಿಲ್ಲ, ಇಲಾಖೆಯ ಆದೇಶದಂತೆ ನಡೆದುಕೊಳ್ತೇವೆ ಎಂದು ಹೇಳಿದೆ.
ಸಾರಿಗೆ ನೌಕರರ ಬೇಡಿಕೆಗಳು ಏನು?
- 2024ರ ಜನವರಿಯಿಂದ ಶೇ.25ರಷ್ಟು ವೇತನ ನೀಡಬೇಕು. ಬಾಕಿ ವೇತನ ಪೂರ್ಣ ಪ್ರಮಾಣದಲ್ಲಿ ಪಾವತಿಯಾಗಬೇಕು
- 26 ತಿಂಗಳ ಬಾಕಿ ವೇತನ ಒಂದೇ ಕಂತಿನಲ್ಲಿ ಕೊಡಬೇಕು, ಭತ್ಯೆ ಹೆಚ್ಚಳ ಮಾಡಬೇಕು
- ಕೋವಿಡ್‌ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಿ
- ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು 1 ತಿಂಗಳು ಗಡವು
- 26 ತಿಂಗಳ ಬಾಕಿ ಹಣ 1,272 ಕೋಟಿ ಬಿಡುಗಡೆ ಮಾಡಬೇಕು
ಬಲಿಷ್ಠ ಆರ್ಥಿಕ ವ್ಯವಸ್ಥೆ ಹಾಳಾಗಿದೆ; ಪ್ರಧಾನಿ ಈ ದೇಶದ ಜನರ ಕ್ಷಮೆ ಕೇಳಬೇಕು ಎಂದು ಡಿ.ಕೆ.ಸುರೇಶ್ ಆಗ್ರಹ
ಪರ್ಯಾಯ ವ್ಯವಸ್ಥೆ
ನೌಕರರು ಮುಷ್ಕರ ನಡೆಸಿದರೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. 2 ಸಾವಿರ ಟ್ರೈನೀ, 5 ಸಾವಿರ ಡ್ರೈವರ್‌ಗಳನ್ನು ಬಳಕೆ ಮಾಡಿಕೊಂಡು ಖಾಸಗಿ ವಾಹನಗಳನ್ನು ಬಳಸಿ ಸಮಸ್ಯೆಯಾಗದಂತೆ ನಿರ್ವಹಣೆ ಮಾಡುವುದಾಗಿ ಹೇಳಿದ್ದಾರೆ. ಎಸ್ಮಾ ಜಾರಿ ಮಾಡಿದ್ದೇವೆ. ಎಲ್ಲಾ ನೌಕರರಿಗೆ ಭಾಗಿಯಾಗಬೇಡಿ ಎಂದು ಮನವಿ ಮಾಡಿದ್ದೇವೆ. ತುಮಕೂರಿನಲ್ಲಿ ನಡೆಯಲಿರುವ ಸಾಧನಾ ಸಮಾವೇಶಕ್ಕೆ ಎರಡು ಸಾವಿರ ಬಸ್‌ಗಳನ್ನು ನೀಡುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾ ಹೇಳಿದ್ದಾರೆ.