MLA Vinay Kulkarni: ಜೈಲುಪಾಲಾದ ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು; ಮುಂದಿರುವ ಆಯ್ಕೆಗಳೇನು?
Yogesh Gowda murder case: ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜೀವಾವಧಿ ಜೈಲು ಶಿಕ್ಷೆ ನೀಡಲಾಗಿದ್ದು, ಇದೀಗ ವಿನಯ್ ಕುಲಕರ್ಣಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕನ ಮುಂದಿರುವ ಆಯ್ಕೆಗಳೇನು ಎಂಬ ಮಾಹಿತಿ ಇಲ್ಲಿದೆ.
ಶಾಸಕ ವಿನಯ್ ಕುಲಕರ್ಣಿ. -
ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ (Yogesh Gowda Murder Case) ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಸೇರಿ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಕ್ಷೆ ನೀಡಲಾಗಿದ್ದು, ಇದರಿಂದ ವಿನಯ್ ಕುಲಕರ್ಣಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವುದು ಫಿಕ್ಸ್ ಆಗಿದೆ.
ಶಾಸಕ ಸ್ಥಾನದಿಂದ ಅನರ್ಹ
ಜನಪ್ರತಿನಿಧಿ ಕಾಯ್ದೆ 1951ರ ಅನ್ವಯ ಯಾವುದೇ ಶಾಸಕನ ವಿರುದ್ಧ 2 ವರ್ಷಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆ ಪ್ರಕಟವಾದರೆ ತಕ್ಷಣ ಆತನ ಶಾಸಕ ಸ್ಥಾನ ರದ್ದಾಗುತ್ತದೆ. ಸದ್ಯ ವಿನಯ್ ಕುಲಕರ್ಣಿ ಪ್ರಕರಣ ಸಂಬಂಧ ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತು ಹಿನ್ನೆಲೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. 2 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ವಿನಯ್ ಕುಲಕರ್ಣಿ ಅನರ್ಹರಾಗಲಿದ್ದಾರೆ.
ಐಪಿಸಿ 302, 120ಬಿ, 201, 148, 149, ಸೆಕ್ಷನ್ ಅಡಿಯಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ತೀರ್ಪು ಪ್ರಕಟವಾಗಿರುವುದರಿಂದ ವಿನಯ್ ಕುಲಕರ್ಣಿ ಬಂಧನವಾಗಿದೆ. ಹೀಗಾಗಿ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿರುವ ಕಾರಣ ಅವರು ಪ್ರತಿನಿಧಿಸುವ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಲಿದೆ.
ವಿನಯ್ ಕುಲಕರ್ಣಿ ಮುಂದಿರುವ ಆಯ್ಕೆ ಏನು?
ಸದ್ಯ ವಿನಯ್ ಕುಲಕರ್ಣಿ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ವಿನಯ್ ಕುಲಕರ್ಣಿ ಮುಂದಿರುವ ಆಯ್ಕೆಗಳೇನು ಎನ್ನುವುದನ್ನು ನೋಡುವುದಾರೆ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಕೋರಬಹುದು. ಇಲ್ಲ ದೋಷಿಯನ್ನಾಗಿಸಿದ ತೀರ್ಪಿಗೂ ತಡೆಯಾಜ್ಞೆ ಕೋರಬಹುದು. ತಡೆಯಾಜ್ಞೆ ಸಿಕ್ಕರೆ ಮಾತ್ರ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಉಳಿಯಲಿದೆ. ಅಲ್ಲಿ ಒಂದು ವೇಳೆ ಅವರ ವಿರುದ್ಧ ತೀರ್ಪು ಬಂದರೆ ಜೈಲು ಸೇರಬೇಕು ಮಾತ್ರವಲ್ಲ ಅವರ ಶಾಸಕ ಸ್ಥಾನ ಕೂಡ ವಜಾಗೊಳ್ಳಲಿದೆ.
ಕ್ಷೇತ್ರಕ್ಕೆ ಕಾಲಿಡದೇ ಜಯಭೇರಿ ಬಾರಿಸಿದ್ದ ಶಾಸಕ
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿನಯ್ ಕುಲಕರ್ಣಿಗೆ ಕ್ಷೇತ್ರ ಪ್ರವೇಶಕ್ಕೆ ಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಧಾರವಾಡ ಕ್ಷೇತ್ರಕ್ಕೆ ಪ್ರವೇಶ ಇಲ್ಲದಿದ್ದರೂ ಸಹ ವಿನಯ್ ಕುಲಕರ್ಣಿ 2023ರ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕ್ಷೇತ್ರದಿಂದ ಹೊರಗಿದ್ದುಕೊಂಡೇ ಅಂದು ಹಾಲಿ ಬಿಜೆಪಿ ಶಾಸಕರಾಗಿದ್ದ ಅಮೃತ್ ದೇಸಾಯಿ ಅವರನ್ನು ಸೋಲಿಸಿ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದರು.
ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ
2016ರಲ್ಲಿ ಧಾರವಾಡದ ಜಿಮ್ನಲ್ಲಿ ಯೋಗೇಶ್ ಗೌಡ ಕೊಲೆ ನಡೆದಿತ್ತು. ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್ ಗೌಡ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದಿದ್ದರಿಂದ ಹೈ ಪ್ರೊಫೈಲ್ ಕೇಸ್ ಆಗಿತ್ತು. ಈ ಕೊಲೆಯಲ್ಲಿ ವಿನಯ್ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು. ಬಳಿಕ ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಉಲ್ಲೇಖಿಸಿತ್ತು.