ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka EVM Survey: ಚುನಾವಣಾ ಆಯೋಗದ ಹಳೆಯ ಸಮೀಕ್ಷೆ ಬಳಸಿಕೊಂಡು ಜನರ ದಾರಿತಪ್ಪಿಸುವ ಯತ್ನ: ಸಿಎಂ

ಚುನಾವಣಾ ಆಯೋಗ ದುರುದ್ದೇಶದಿಂದ ಸಂಶಾಯಸ್ಪದ ಸಂಸ್ಥೆಯ ಮೂಲಕ ನಡೆಸಿರುವ ದೋಷಪೂರಿತ ಸಮೀಕ್ಷೆಯ ವರದಿಯನ್ನು ಬಳಸಿಕೊಂಡು ನಂತರದ ದಿನಗಳಲ್ಲಿ ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎನ್ನುವುದನ್ನು ಭಾರತೀಯ ಜನತಾ ಪಕ್ಷ ಅರ್ಥಮಾಡಿಕೊಳ್ಳಬೇಕು.

ಇವಿಎಂ ವಿಶ್ವಾಸಾರ್ಹತೆ ಸಮೀಕ್ಷೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ) -

Prabhakara R
Prabhakara R Jan 2, 2026 8:28 PM

ಬೆಂಗಳೂರು: ಚುನಾವಣಾ ಆಯೋಗದ ಹಳೆಯ ಸಮೀಕ್ಷೆಯೊಂದನ್ನು ( Karnataka EVM Survey ) ಬಳಸಿಕೊಂಡು ಜನರ ದಾರಿತಪ್ಪಿಸುವ ವ್ಯರ್ಥಪ್ರಯತ್ನ ರಾಜ್ಯದಲ್ಲಿ ವಿರೋಧಪಕ್ಷಗಳಿಂದ ನಡೆಯುತ್ತಿರುವುದು ವಿಷಾದನೀಯ. ಚುನಾವಣಾ ಅಕ್ರಮಗಳ ಬಗ್ಗೆ ನಮ್ಮ ನಾಯಕರಾದ ರಾಹುಲ್‌ ಗಾಂಧಿ ಅವರು ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅದನ್ನು 'ತಪ್ಪು' ಎಂದು ಬಿಂಬಿಸುವ ಕುತಂತ್ರ ನಡೆಯುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವ ಈ ಸುಳ್ಳು ಕಥನದ ವಿಶ್ವಾಸಾರ್ಹತೆಯನ್ನು ತುಸು ಆಳಕ್ಕೆ ಇಳಿದು ಪರಿಶೀಲಿಸಿದರೆ ಇದರ ಹಿಂದಿನ ದುರುದ್ದೇಶ ಸ್ಪಷ್ಟವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇವಿಎಂ ಕುರಿತ ಸರ್ವೇ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಪ್ರತಿಕ್ರಿಯಿಸಿದ್ದು, ಮೊದಲನೆಯದಾಗಿ, ಈ ತಥಾಕಥಿತ ಸಮೀಕ್ಷೆ ರಾಜ್ಯ ಚುನಾವಣಾ ಆಯೋಗವು ಮೇ 2025ರಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಸಿದ ಸಿಸ್ಟಮ್ಯಾಟಿಕ್ ವೋಟರ್ಸ್‌ ಎಜುಕೇಷನ್ ಆ್ಯಂಡ್ ಎಲೆಕ್ಟೋರಲ್‌ ಪಾರ್ಟಿಸಿಪೇಷನ್‌ (ಸ್ವೀಪ್‌) ಕಾರ್ಯಕ್ರಮದ ಒಂದು ಭಾಗವಾಗಿದೆ. ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿತ್ತೇ ಹೊರತು ಇದು ರಾಹುಲ್ ಗಾಂಧಿ ಅವರು ಆರೋಪಿಸಿರುವ ಮತಗಳ್ಳತನದ ಜನಾಭಿಪ್ರಾಯ ಸಂಗ್ರಹ ಅಲ್ಲ.. ಮತದಾರರ ಜಾಗೃತಿಯ ಉದ್ದೇಶವನ್ನು ಚುನಾವಣಾ ಅಕ್ರಮದ ಕುರಿತಾದ ಜನಾಭಿಪ್ರಾಯವೆಂದು ಬಿಂಬಿಸುವುದು ಸರಿಯಲ್ಲ. ಇದು ಜನರ ದಾರಿ ತಪ್ಪಿಸುವ ದುರುದ್ದೇಶದ ರಾಜಕೀಯ ಹುನ್ನಾರವಾಗಿದೆ ಎಂದು ಟೀಕಿಸಿದ್ದಾರೆ.

ಎರಡನೆಯದಾಗಿ, ಸಮೀಕ್ಷೆ ನಡೆಸಲಾದ ಸಮಯವೇ ಸತ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ. ಸಮೀಕ್ಷೆಯನ್ನು ಮೇ 2025ರಲ್ಲಿ ನಡೆಸಲಾಗಿದೆ. ರಾಹುಲ್ ಗಾಂಧಿ ಅವರು ಚುನಾವಣಾ ಅಕ್ರಮಗಳ ಕುರಿತು ಪುರಾವೆ ಸಹಿತ ಸುದ್ದಿಗೋಷ್ಠಿ ನಡೆಸಿದ್ದು ಆಗಸ್ಟ್‌ 2025ರಲ್ಲಿ, ಅಂದರೆ ಸಮೀಕ್ಷೆಯಾದ 3 ತಿಂಗಳ ಬಳಿಕ ರಾಹುಲ್‌ ಗಾಂಧಿ ಅವರು ಮತಗಳ್ಳತನದ ವಿರುದ್ಧ ಧ್ವನಿಯೆತ್ತಿದ್ದಾರೆ. ಹಿಂದಿನ ಜನಾಭಿಪ್ರಾಯದ ಡಾಟಾವನ್ನು ಬಳಸಿಕೊಂಡು ನಂತರದ ಮತಗಳ್ಳತನದ ಆರೋಪಕ್ಕೆ ಜನಮನ್ನಣೆ ನೀಡಿಲ್ಲ ಎನ್ನುವುದು ಹಾಸ್ಯಾಸ್ಪದ. ಸತ್ಯಾಂಶವನ್ನು ಪರಿಶೀಲಿಸದೆ ಮಾಡಿರುವ ಈ ವರದಿಗೆ ಸತ್ಯಾಂಶವನ್ನು ಮರೆಮಾಚುವ ಉದ್ದೇಶವಿದ್ದಂತಿದೆ.



ಮೂರನೆಯದಾಗಿ, ಸಮೀಕ್ಷೆಯಲ್ಲಿ ಬಳಸಲಾದ ಮಾದರಿ ಪ್ರಮಾಣವು ರಾಜ್ಯದ ಜನಾಭಿಪ್ರಾಯವೆಂದು ಪರಿಗಣಿಸುವಷ್ಟು ಸಮರ್ಥನೀಯವಾಗಿಲ್ಲ. ಸುಮಾರು 5.3 ಕೋಟಿಗೂ ಹೆಚ್ಚು ವಯಸ್ಕ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಕೇವಲ 5,100 ಜನರನ್ನಷ್ಟೇ ಸಮೀಕ್ಷೆಗೆ ಒಳಪಡಿಸಲಾಗಿದೆ. ಇದು ಮತದಾರರನ್ನು 0.01% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪ್ರತಿನಿಧಿಸುತ್ತದೆ. ಗಂಭೀರವಾದ ವಿಷಯಕ್ಕೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಸಂಗ್ರಹಿಸುವಾಗ ಇಷ್ಟು ಸಣ್ಣ ಪ್ರಮಾಣದ ಮಾದರಿಯು ಸಮೀಕ್ಷೆಯ ದೊಡ್ಡ ಲೋಪವಾಗಿದೆ. ಬೆಂಗಳೂರು ಸೆಂಟ್ರಲ್‌ ನಂತಹ ಕ್ಷೇತ್ರದಲ್ಲಿ ಮತದಾರರ ಪಟ್ಟಿಯನ್ನು ತಿರುಚಿರುವುದು ಸತ್ಯಾಂಶವಿರುವ ಆರೋಪವಾಗಿದೆ. ಅಂತಹ ಕ್ಷೇತ್ರದಲ್ಲಿ ಸಮೀಕ್ಷೆಗೆ ಒಳಪಟ್ಟಿರುವವರ ಸಂಖ್ಯೆ ಎರಡಂಕಿಯನ್ನು ದಾಟಿಲ್ಲ. ಇದನ್ನೇ ಜನರ ತೀರ್ಮಾನ ಎಂದು ಬಿಂಬಿಸುವುದು ಸಮಂಜಸವೆನಿಸುವುದಿಲ್ಲ ಎಂದು ಹೇಳಿದ್ದಾರೆ.

ನಾಲ್ಕನೆಯದಾಗಿ, ಸಮೀಕ್ಷೆ ನಡೆಸಿದವರ ಹಿನ್ನೆಲೆಯನ್ನು ಮಾಧ್ಯಮಗಳು ಕೂಡಾ ಪರಿಶೀಲಿಸಿದಂತಿಲ್ಲ. ಈ ಸಮೀಕ್ಷೆಯನ್ನು ಡಾ. ಆರ್. ಬಾಲಸುಬ್ರಮಣ್ಯಂ ಸ್ಥಾಪಿಸಿದ GRAAM ಎಂಬ NGO ನಡೆಸಿದೆ. ಬಾಲಸುಬ್ರಮಣ್ಯಂ ಅವರು ಪ್ರಸ್ತುತ ಕೇಂದ್ರ ಸರ್ಕಾರ ನೇಮಿಸಿರುವ ಒಂದು ಹುದ್ದೆಯಲ್ಲಿದ್ದಾರೆ. ಇವರು 2024ರಲ್ಲಿ ಪ್ರಧಾನಿ ಮೋದಿ ಅವರ ಬಗ್ಗೆ ಬರೆದಿರುವ ಪುಸ್ತಕವನ್ನು ನೋಡಿದರೆ ಈ ಮಹಾಶಯರು ಮೋದಿಯವರ ಅಂಧ ಅಭಿಮಾನಿಯಂತೆ ಕಾಣುತ್ತಾರೆ. ಇಂತಹ ಹೊಗಳುಭಟರು ನಡೆಸಿರುವ ಸಮೀಕ್ಷೆಯನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಿರುವುದಕ್ಕೆ ಯಾವ ವಿಶ್ವಾಸಾರ್ಹತೆ ಇರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಐದನೆಯದಾಗಿ, ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಲ್ಲಿ ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿಯವರ ಆರೋಪದಲ್ಲಿ ಹುರುಳಿಲ್ಲ ಎನ್ನುವುದನ್ನು ಹೇಳಲು ಪ್ರಯತ್ನಿಸಿರುವುದು ವಿಷಾದನೀಯ.

ರಾಹುಲ್‌ ಗಾಂಧಿ ಅವರು ಪ್ರಜಾಪ್ರಭುತ್ವವನ್ನಾಗಲಿ, ಚುನಾವಣೆಯನ್ನಾಗಲಿ ಪ್ರಶ್ನಿಸಿಲ್ಲ. ಅವರು ಚುನಾವಣಾ ಆಯೋಗ ಪಾರದರ್ಶಕವಾಗಿ ತಯಾರಿಸಿರುವ ಮತದಾರರ ಪಟ್ಟಿ ಮತ್ತು ಮತಗಟ್ಟೆಗಳ ಸಿಸಿಟಿವಿ ದೃಶ್ಯಗಳನ್ನು ಕೇಳಿದ್ದಾರೆ. ಇವಿಎಂನ ಕಾರ್ಯವೈಖರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯುಕ್ತರನ್ನು ನೇಮಕಗೊಳಿಸುವ ಪ್ರಕ್ರಿಯೆ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಈ ಯಾವ ಪ್ರಶ್ನೆಗಳಿಗೂ ಚುನಾವಣಾ ಆಯೋಗ ಸಮಂಜಸ ಉತ್ತರವನ್ನು ಕೊಟ್ಟಿಲ್ಲ.

ಅಂತಿಮವಾಗಿ, ಮತಗಳವು ಒಂದು ಘೋಷಣೆಯಲ್ಲ. ಅದು ಆರೋಪಪಟ್ಟಿ. ಅಳಂದದಲ್ಲಿ ಸುಮಾರು 5,994 ಅಧಿಕೃತ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಪ್ರಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಎಸ್ಐಟಿ 22,000 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ. ಅದರಲ್ಲಿ ಬಿಜೆಪಿ ಪಕ್ಷದ ಮಾಜಿ ಶಾಸಕರು ಸೇರಿದಂತೆ 7 ಮಂದಿ ಆರೋಪಿಗಳಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರೂ ಆರೋಪದ ಕುರಿತು ರಾಜ್ಯ ಸರ್ಕಾರವು ಎಸ್ಐಟಿ ತನಿಖೆಯನ್ನು ನಡೆಸಿದೆ. ಆರೋಪವನ್ನು ಮರೆಮಾಚಲು ಚುನಾವಣಾ ಆಯೋಗವೇ ವ್ಯವಸ್ಥಿತವಾಗಿ ಪ್ರಯತ್ನಿಸಿರುವುದು ಕಂಡುಬಂದಿದೆ.

ಚುನಾವಣಾ ಆಯೋಗ ದುರುದ್ದೇಶದಿಂದ ಸಂಶಾಯಸ್ಪದ ಸಂಸ್ಥೆಯ ಮೂಲಕ ನಡೆಸಿರುವ ದೋಷಪೂರಿತ ಸಮೀಕ್ಷೆಯ ವರದಿಯನ್ನು ಬಳಸಿಕೊಂಡು ನಂತರದ ದಿನಗಳಲ್ಲಿ ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎನ್ನುವುದನ್ನು ಭಾರತೀಯ ಜನತಾ ಪಕ್ಷ ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

Safari Ban: ಸಫಾರಿಗೆ ಮತ್ತೆ ಅನುಮತಿ; ಪರಿಶೀಲನೆಗೆ ತಾಂತ್ರಿಕ ಸಮಿತಿ ರಚಿಸಲು ಸಿಎಂ ಸೂಚನೆ

ಮೇಲ್ನೋಟದಲ್ಲಿಯೇ ಸ್ಪಷ್ಟವಾಗಿ ಕಾಣುವಂತೆ, ರಾಜಕೀಯ ದುರುದ್ದೇಶದಿಂದಲೇ ಮಾಡಲಾಗಿರುವ ಸಮೀಕ್ಷೆಯ ಒಳ-ಹೊರಗನ್ನು ಸೂಕ್ಷ್ಮವಾಗಿ ಪರಿಶೀಲಿಸದೆ, ಅದರ ಗುಪ್ತ ಅಜೆಂಡಾವನ್ನು ಅರ್ಥಮಾಡಿಕೊಳ್ಳದೆ, ಆ ವರದಿಯ ಕೆಲವು ಭಾಗಗಳನ್ನಷ್ಟೇ ಹೆಕ್ಕಿ ತೆಗೆದು ಮಾಧ್ಯಮಗಳು ವರದಿ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.