Bidar News: ಬೈಕ್ ಸವಾರನ ಕತ್ತು ಸೀಳಿದ ಗಾಳಿಪಟ ಮಾಂಜಾ ದಾರ; ಹಬ್ಬಕ್ಕೆ ಮಗಳನ್ನು ಕರೆತರಲು ಹೋಗುತ್ತಿದ್ದ ತಂದೆ ಸಾವು!
ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಘಟನೆ ನಡೆದಿದೆ. ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆದೊಯ್ಯಲು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಮಾಂಜಾ ದಾರ ಕುತ್ತಿಗೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾರೆ.
-
ಬೀದರ್: ಬೈಕ್ ಮೇಲೆ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Kite String) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ (Bidar News) ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ. ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜಕುಮಾರ ಗುಂಡಪ್ಪ (48) ಮೃತರು. ಮೃತರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ ಎಂದು ತಿಳಿದುಬಂದಿದೆ.
ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಮಾಂಜಾ ದಾರ ತಗುಲಿ ಕುತ್ತಿಗೆ ಕೊಯ್ದುಕೊಂಡಿದೆ. ಬಳಿಕ ಬೈಕ್ ಮೇಲಿಂದ ಕೆಳಗೆ ಬಿದ್ದು ಕೆಲವೊತ್ತು ರಕ್ತದ ಮಡವಿನಲ್ಲಿ ಹೊರಳಾಡಿ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮನ್ನಾಏಖೆಳ್ಳಿ ಠಾಣೆಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಕ್ರಾಂತಿ ಆಚರಣೆ ವೇಳೆ ಚಿಟಗುಪ್ಪ ತಾಲೂಕಿನಲ್ಲಿ ಗಾಳಿಪಟಗಳನ್ನು ಹಾರಿಸುವ ಸಂಪ್ರದಾಯ ಇದೆ. ಈ ಸಂಬಂಧ ಎರಡು ದಿನಗಳ ಹಿಂದೆ ಓರ್ವ ಬಾಲಕನ ಕೈಗೆ ಗಾಳಿಪಟದ ಮಾಂಜಾ ಸಿಲುಕಿ ಗಂಭೀರ ಗಾಯಗೊಂಡಿದ್ದ ಘಟನೆ ನಡೆದಿತ್ತು. ಅದನ್ನು ಮನಗಂಡು ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ ಪಾಂಚಾಳ ಅವರು ತಾಲೂಕಿನಾದ್ಯಂತ ಗಾಳಿಪಟ ಹಾರಿಸುವ ವೈರ್ ಮಾಂಜಾ (ದಾರ) ಮಾರಾಟ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.
ಸಚಿವ ಈಶ್ವರ ಖಂಡ್ರೆ ಸಂತಾಪ
ಮಕರ ಸಂಕ್ರಾಂತಿ ಅಂಗವಾಗಿ ಗಾಳಿಪಟ ಹಾರಿಸುವ ವೇಳೆ ನಿಷೇಧಿತ ಚೀನಾ ತಯಾರಿಕೆಯ ಮಾಂಜಾ ದಾರ ಬಳಕೆ ಮಾಡಿರುವ ಪರಿಣಾಮ ದ್ವಿಚಕ್ರ ವಾಹನ ಓಡಿಸುತ್ತಿದ್ದ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಾದ್ಯಂತ ಯಾವುದೇ ಮಳಿಗೆಯಲ್ಲಿ ನಿಷೇಧಿತ ಚೀನಿ ಮಾಂಜಾ ದಾರ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು ಹಾಗೂ ವ್ಯಕ್ತಿಯ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಜರುಗಿಸಬೇಕು ಹಾಗೂ ಮುಂದೆ ಈ ತರಹ ಘಟನೆ ಮರುಕಳಿಸದಂತೆ ಜನ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಟೆಕ್ಕಿ ಶರ್ಮಿಳಾ ಕೊಲೆ ಕೇಸ್; ಯುವತಿ ಮೋಹಕ್ಕೆ ಬಿದ್ದಿದ್ದ ಆರೋಪಿ ಎಸ್‌ಎಸ್‌ಎಲ್‌ಸಿ ಟಾಪರ್!
ಪೋಲಿಸ್ ವರಿಷ್ಠಾಧಿಕಾರಿ ಹೇಳಿದ್ದೆನು?
ಹೆದ್ದಾರಿಯ ಮೇಲೆ ಬೈಕ್ ಸವಾರ ಸಂಜುಕುಮಾರ ಎನ್ನುವವರು ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಮ್ಮ ಗಮನಕ್ಕೆ ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಸಂಕ್ರಾಂತಿ ಹಬ್ಬದಲ್ಲಿ ಗಾಳಿಪಟ ಹಾರಿಸಲು ಮಾಂಜಾ ದಾರ ನಿಷೇಧ ಮಾಡಲಾಗಿದೆ. ಅಂಗಡಿಗಳು ಸೀಜ್ ಮಾಡಲಾಗಿತ್ತು. ಆದರೂ ಕೂಡ ಕೆಲವು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂತಹವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು.