ಹನೂರಿನಲ್ಲಿ ಮೂವರ ಎನ್‌ಕೌಂಟರ್: ಮೃತರ ಕುಟುಂಬಸ್ಥರ ಮನವೊಲಿಸಲು ಶಾಸಕ ಮಂಜುನಾಥ್ ಕೊನೆಗೂ ಯಶಸ್ವಿ; ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ
Chamarajanagara Shootout Case: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯ ಜೀವಿಧಾಮದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಮೂವರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕುಟುಂಬಸ್ಥರ ಮನವೊಲಿಸಲು ಶಾಸಕ ಮಂಜುನಾಥ್ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಹಲವು ಭರವಸೆ ನೀಡಿದ್ದಾರೆ.
ಹನೂರು ತಾಲೂಕಿನಲ್ಲಿ ನಡೆದ ಪ್ರತಿಭಟನೆ -
ಚಾಮರಾಜನಗರ, ಆ. 16: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯ ಜೀವಿಧಾಮದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ ಸದ್ಯ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ (Chamarajanagara Shootout Case). ಹನೂರು ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ಅಂತೋನಿ ಸ್ವಾಮಿ, ಪೀಟರ್, ಕುಮಾರ್ ಮೃತಪಟ್ಟಿದ್ದು, ಮಹಿಮದಾಸ್ ಎಂಬಾತ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಈ ಮಧ್ಯೆ ಕುಟುಂಬಸ್ಥರ ಜತೆ ಶಾಸಕ ಮಂಜುನಾಥ್ (MLA Manjunath) ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸಿಕ್ಕಿದೆ.
ಮೂವರ ಹತ್ಯೆ ಖಂಡಿಸಿ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿಕೊಂಡು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ್ದರು. ಯಾವ ಅಧಿಕಾರಿಗಳ ಮನವಿಗೂ ಬಗ್ಗದವರನ್ನು ಮನವೊಲಿಸುವಲ್ಲಿ ಕೊನೆಗೂ ಹಾನೂರು ಶಾಸಕ ಮಂಜುನಾಥ್ ಯಶಸ್ವಿಯಾಗಿದ್ದಾರೆ. ಮೃತ ಕುಟುಂಬಕ್ಕೆ 15 ಲಕ್ಷ ರುಪಾಯಿ ಪರಿಹಾರ ಜತೆಗೆ ಉದ್ಯೋಗದ ಭರವಸೆಯನ್ನು ಮಂಜುನಾಥ್ ನೀಡಿದ್ದಾರೆ. ಈ ಪೈಕಿ ಸರ್ಕಾರ 5 ಲಕ್ಷ ರುಪಾಯಿ ನೀಡಲಿದ್ದು, ಶಾಸಕರು ವೈಯಕ್ತಿಕವಾಗಿ 10 ಲಕ್ಷ ರುಪಾಯಿ ಒದಗಿಸಲಿದ್ದಾರೆ. ಹಾಗೇ ಉನ್ನತ ಮಟ್ಟದ ತನಿಖೆ ನಡೆಸುವ ಆಶ್ವಾಸನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಜತೆಗೆ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಸಮ್ಮತಿಸಿದ್ದಾರೆ. ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ 3 ಮೃತದೇಹಗಳ ಪೋಸ್ಟ್ ಮಾರ್ಟಂ ನಡೆಯಲಿದೆ.
ಕಾಡುಗಳ್ಳರ ಮೇಲೆ ಮೇಲೆ ಅರಣ್ಯ ಸಿಬ್ಬಂದಿ ಗುಂಡಿನ ದಾಳಿ; ಮೂವರು ಸಾವು
ಘಟನೆ ವಿವರ
ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆ ಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ ಶನಿವಾರ (ಆಗಸ್ಟ್ 15) ಬೆಳಗಿನ ಜಾವ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ವನ್ಯಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿರುವ ಕುರಿತು ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೇಟೆಗಾರರನ್ನು ಹಿಡಿಯಲು ಮುಂದಾದಾಗ ಅವರು ಗುಂಡಿನ ದಾಳಿ ನಡೆಸಿದ್ದರು. ಆತ್ಮರಕ್ಷಣೆಗಾಗಿ ಅರಣ್ಯ ಇಲಾಖೆಯವರು ಪ್ರತಿದಾಳಿ ನಡೆಸಿದಾಗ ಮೂವರು ಮೃತಪಟ್ಟಿದ್ದರು.
ಮೂವರ ಎನ್‌ಕೌಂಟರ್ ಸುದ್ದಿ ತಿಳಿಯುತ್ತಲೇ ಆಕ್ರೋಶಗೊಂಡ ಸ್ಥಳೀಯರು ಶಾಗ್ಯ ಡಿಆರ್‌ಎಫ್‌ಒ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ್ದರು. ಗುಂಡೇಟಿಗೆ ಬಲಿಯಾದ ಮೂವರು ಕಳ್ಳ ಬೇಟೆಗಾರರಲ್ಲ. ಅವರು ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿರಲಿಲ್ಲ. ಆದರೂ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು.
ಸಿಎಂ ಹೇಳಿದ್ದೇನು?
ಚಾಮರಾಜನಗರ ಅರಣ್ಯದಲ್ಲಿ ನಡೆದಿರುವ ಎನ್ ಕೌಂಟರ್ ಸಂಬಂಧ ಮ್ಯಾಜಿಸ್ಟೇಟ್ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಎನ್‌ಕೌಂಟರ್ ನಡೆದ ವಿಚಾರ ನನಗೆ ಬೆಳಗ್ಗೆ ಐದು ಗಂಟೆಗೆ ತಿಳಿಯಿತು. ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದೇವೆ. ತನಿಖೆಯ ವೇಳೆ ವಾಸ್ತವಾಂಶ ತಿಳಿಯುತ್ತದೆ. ಮಾಧ್ಯಮದಲ್ಲಿ ಕೆಲ ವಿಚಾರಗಳನ್ನು ತೋರಿಸುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೆಲವು ವಸ್ತು ಹಾಗೂ ಬಂದೂಕುಗಳನ್ನು ಸೀಜ್ ಮಾಡಲಾಗಿದೆ. ಪರಿಶೀಲನೆ ಸಹ ನಡೆಯುತ್ತಿದೆ. ಮ್ಯಾಜಿಸ್ಟ್ರೇಟ್ ತನಿಖೆ ಬಳಿಕ ಎಲ್ಲ ಮಾಹಿತಿ ತಿಳಿಯಲಿದೆʼʼ ಎಂದು ಹೇಳಿದರು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.