Chikkaballapur News: ಮಾಜಿ ಸೈನಿಕನಿಗೆ ಲಂಚದ ಬೇಡಿಕೆ ಆರೋಪ; ತಾಲೂಕು ಕಚೇರಿ ಮುಂದೆ ಅಸ್ವಸ್ಥ, ಸ್ಥಿತಿ ಚಿಂತಾಜನಕ
ಮಾಜಿ ಸೈನಿಕರಿಗೆ ಅನ್ವಯಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಧಿಕಾರಿಗಳು, ರಾಜಕೀಯ ಪ್ರಭಾವ ಹೊಂದಿರುವವರು ಭೂಮಿ ಹಾಗೂ ಆಸ್ತಿ ವಿಚಾರದಲ್ಲಿ ನಡೆಸಿಕೊಳ್ಳುವ ರೀತಿಯ ಬಗ್ಗೆ ಪ್ರಶ್ನೆ ಮಾಡಬೇಕಾಗಿದೆ. ತಮ್ಮ ಸಹೋದರ 20 ವರ್ಷಗಳಿಂದ ಭೂಮಿಗಾಗಿ ಹೋರಾಡುತ್ತಿದ್ದರೂ ಸಮಸ್ಯೆ ಬಗೆಹರಿಯದಿರುವುದು ಬೇಸರ ತಂದಿದೆ
-
ಚಿಕ್ಕಬಳ್ಳಾಪುರ: ಮಾಜಿ ಸೈನಿಕರ ಕೋಟಾ(Ex-servicemen quota)ದಡಿ ಭೂಮಿ ಮಂಜೂರು ಮಾಡಿಸುವಂತೆ ಕಳೆದ 20 ವರ್ಷಗಳಿಂದ ಕಂದಾಯ ಕಚೇರಿಗಳಿಗೆ ಅಲೆದಾಡುತ್ತಿದ್ದ ಚಿಂತಾಮಣಿ ತಾಲೂಕಿನ ರಾಯಪಲ್ಲಿ ಗ್ರಾಮದ ಶಿವಾನಂದ ರೆಡ್ಡಿ (55) ಅವರು ಅಧಿಕಾರಿಗಳಿಂದ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದಿಂದ ಬೇಸತ್ತು ತಾಲೂಕು ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ನಡೆದಿದೆ.
ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಮಾಜಿ ಸೈನಿಕರ ಕೋಟಾದಡಿ ಭೂಮಿ ಮಂಜೂರು ಮಾಡಿಸಿಕೊಳ್ಳಲು ಶಿವಾನಂದ ರೆಡ್ಡಿ ಹಲವು ವರ್ಷಗಳಿಂದ ಕಂದಾಯ ಇಲಾಖೆಯ ಕಚೇರಿಗಳಿಗೆ ಅಲೆದಾಡುತ್ತಿದ್ದರು ಎನ್ನಲಾಗಿದೆ. ಆದರೆ ಇದುವರೆಗೆ ಭೂಮಿ ಮಂಜೂರಾಗಿಲ್ಲ. ತಮ್ಮ ಕೆಲಸ ಮಾಡಿಕೊಡಲು ಅಧಿಕಾರಿಗಳು ರೂಪಾಯಿ 10 ಲಕ್ಷ ಲಂಚ ಕೇಳಿದ್ದಾರೆ ಎಂದು ಅವರು ಆರೋಪಿ ಸಿದ್ದು, ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆ ಬಳಿಕ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಬೆಂಗಳೂರಿಗೆ ಕಳುಹಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕ ವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
‘ದೇಶ ಸೇವೆ ಮಾಡಿದವರಿಗೆ ಇದೇನಾ ಗೌರವ?’
ಶಿವಾನಂದ ರೆಡ್ಡಿ ಅವರ ಸೋದರಿ ಮುನಿಯಮ್ಮ ಮಾತನಾಡಿ, ದೇಶದ ಗಡಿಯಲ್ಲಿ ಕುಟುಂಬದಿಂದ ದೂರವಿದ್ದು ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ನಿವೃತ್ತಿಯ ಬಳಿಕ ತಮ್ಮ ಹಕ್ಕಿನ ಭೂಮಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದು ನೋವಿನ ಸಂಗತಿ ಎಂದರು.
ಮಾಜಿ ಸೈನಿಕರಿಗೆ ಅನ್ವಯಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಧಿಕಾರಿಗಳು, ರಾಜಕೀಯ ಪ್ರಭಾವ ಹೊಂದಿರುವವರು ಭೂಮಿ ಹಾಗೂ ಆಸ್ತಿ ವಿಚಾರದಲ್ಲಿ ನಡೆಸಿಕೊಳ್ಳುವ ರೀತಿಯ ಬಗ್ಗೆ ಪ್ರಶ್ನೆ ಮಾಡಬೇಕಾಗಿದೆ. ತಮ್ಮ ಸಹೋದರ 20 ವರ್ಷಗಳಿಂದ ಭೂಮಿಗಾಗಿ ಹೋರಾ ಡುತ್ತಿದ್ದರೂ ಸಮಸ್ಯೆ ಬಗೆಹರಿಯದಿರುವುದು ಬೇಸರ ತಂದಿದೆ ಎಂದು ಹೇಳಿದರು.
ಅಧಿಕಾರಿಗಳು ಲಂಚ ಕೇಳಿದ್ದಾರೆ ಎಂಬ ಆರೋಪದ ಕುರಿತು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ಮಾಜಿ ಸೈನಿಕರ ಕೋಟಾದಡಿ ಅರ್ಹರಾಗಿರುವ ಕುಟುಂಬಕ್ಕೆ ಕೂಡಲೇ ಭೂಮಿ ಮಂಜೂರು ಮಾಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಸೂಕ್ತ ತನಿಖೆಗೆ ಆಗ್ರಹ
ದೇಶ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಸರ್ಕಾರ ರೂಪಿಸಿರುವ ಸೌಲಭ್ಯಗಳು ಸಕಾಲದಲ್ಲಿ ದೊರೆ ಯುವಂತೆ ಅಧಿಕಾರಿಗಳು ಕ್ರಮವಹಿಸಬೇಕು. 20 ವರ್ಷಗಳಿಂದ ಬಾಕಿ ಉಳಿದಿರುವ ಭೂಮಿ ಮಂಜೂರಾತಿ ಅರ್ಜಿಯನ್ನು ಪರಿಶೀಲಿಸಿ, ಅರ್ಹತೆ ಇದ್ದಲ್ಲಿ ಶೀಘ್ರವಾಗಿ ಮಂಜೂರು ಮಾಡಬೇಕು. ಲಂಚದ ಬೇಡಿಕೆ ಮಾಡಲಾಗಿದೆ ಎಂಬ ಆರೋಪವೂ ಸ್ವತಂತ್ರವಾಗಿ ತನಿಖೆಯಾಗಬೇಕು ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಾಜಿ ಸೈನಿಕರು ನಿವೃತ್ತಿಯ ನಂತರವೂ ತಮ್ಮ ಹಕ್ಕುಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ದೇಶ ಸೇವೆ ಮಾಡಿದವರ ಸಮಸ್ಯೆಗಳಿಗೆ ಆದ್ಯತೆ ನೀಡಿ ತ್ವರಿತವಾಗಿ ಪರಿಹರಿಸುವ ವ್ಯವಸ್ಥೆ ರೂಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.