ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CET Exam: ವಿದ್ಯಾರ್ಥಿನಿಯರ ಮೂಗಿಗೆ ಗಮ್‌ ಟೇಪ್‌ ಅಂಟಿಸಿದ ಭದ್ರತಾ ಸಿಬ್ಬಂದಿ; ಚಿಕ್ಕಮಗಳೂರಲ್ಲಿ ಅಚ್ಚರಿಯ ದೃಶ್ಯ

ರಾಜ್ಯಾದ್ಯಂತ ಎಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಮೂಗುತಿ ಧರಿಸಿ ಬಂದ ವಿದ್ಯಾರ್ಥಿನಿಯರ ಮೂಗಿಗೆ ಭದ್ರತಾ ಸಿಬ್ಬಂದಿ ಗಮ್ ಟೇಪ್ ಅಂಟಿಸಿದ್ದಾರೆ.

ವಿದ್ಯಾರ್ಥಿನಿಯರ ಮೂಗಿಗೆ ಗಮ್‌ ಟೇಪ್‌ ಅಂಟಿಸಿದ ಭದ್ರತಾ ಸಿಬ್ಬಂದಿ

ಮೆಟಾ ಎಐ ಚಿತ್ರ -

Ramesh Ballamoole
Ramesh Ballamoole Apr 23, 2026 3:58 PM

ಚಿಕ್ಕಮಗಳೂರು, ಏ. 23: ರಾಜ್ಯಾದ್ಯಂತ ಎಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET Exam) ನಡೆಯುತ್ತಿದೆ. ಈ ಬಾರಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಕಲ ಸಿದ್ಧತೆ ಮಾಡಿಕೊಂಡಿದ್ದು, ಪರೀಕ್ಷಾ ಕೇಂದ್ರಗಳು ಸಂಪೂರ್ಣವಾಗಿ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿನಿಯರ ಜತೆ ಭದ್ರತಾ ಸಿಬ್ಬಂದಿ ಕಟ್ಟುನಿಟ್ಟಾಗಿ ನಡೆದುಕೊಂಡಿದ್ದು, ಮೂಗಿಗೆ ಗಮ್ ಟೇಪ್ ಅಂಟಿಸಿದ್ದಾರೆ.

ಹೌದು, ಮೂಗುತಿ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರ ಮೂಗಿಗೆ ಸಿಬ್ಬಂದಿ ಗಮ್ ಟೇಪ್ ಅಂಟಿಸಿ ಪರೀಕ್ಷಾ ಕೊಠಡಿಯೊಳಗೆ ಕಳುಹಿಸಿದ್ದಾರೆ. ಮೂಗುತಿ ತೆಗೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯರಿಗೆ ಈ ರೀತಿ ಗಮ್ ಟೇಪ್ ಅಂಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದಿನಿಂದಲೂ ಆಭರಣಗಳನ್ನು ಧರಿಸುವುದನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿಸಲಾಗುತ್ತಿದೆ. ಈ ಬಾರಿಯೂ ವಿದ್ಯಾರ್ಥಿಗಳನ್ನು ಕಟ್ಟುನಿಟ್ಟಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅದರ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಮೂಗುತಿ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಆರಂಭದಲ್ಲಿ ಅವುಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಲಾಯಿತು. ಆಭರಣ ತೆಗೆಯಲು ಸೂಚಿಸಿದರೂ ಸಾಧ್ಯವಾಗದ ವಿದ್ಯಾರ್ಥಿನಿಯರಿಗೆ ಸಿಬ್ಬಂದಿ ತಾತ್ಕಾಲಿಕ ಪರಿಹಾರವಾಗಿ ಟೇಪ್ ಅಂಟಿಸಿದ್ದಾರೆ ಎಂದು ವರದಿ ತಿಳಿಸಿದೆ.

ಇಂದು, ನಾಳೆ ಕರ್ನಾಟಕ ಸಿಇಟಿ ಪರೀಕ್ಷೆ, ಎಚ್ಚರಿಕೆಯ ಕಣ್ಗಾವಲು

ಕಟ್ಟುನಿಟ್ಟಿನ ಸೂಚನೆ

ಸದ್ಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದರ ಭಾಗವಾಗಿ ವಸ್ತ್ರ ಸಂಹಿತೆ ಮತ್ತು ನಿರ್ಬಂಧಗಳನ್ನು ಅಳವಡಿಸಲಾಗಿದೆ. ಜತೆಗೆ ಇದೇ ಮೊದಲ ಬಾರಿಗೆ ಪ್ರತಿ ಕೇಂದ್ರಕ್ಕೆ ಒಬ್ಬ ’ವಸ್ತ್ರಸಂಹಿತೆ ಅಧಿಕಾರಿ’ಯನ್ನು ನೇಮಿಸಲಾಗಿದೆ. ನಿಯಮದ ಪ್ರಕಾರ ವಿದ್ಯಾರ್ಥಿಗಳು ಅರ್ಧ ತೋಳಿನ ಶರ್ಟ್ ಧರಿಸುವುದು ಉತ್ತಮ. ಕಾಲರ್ ಇಲ್ಲದ ಬಟ್ಟೆ, ಜೇಬುಗಳಿಲ್ಲದ ಸರಳ ಪ್ಯಾಂಟ್ ಧರಿಸಲು ಸೂಚಿಸಲಾಗಿದೆ. ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಮತ್ತು ಶೂ ಧರಿಸುವುದನ್ನು ನಿಷೇಧಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಮಾಂಗಲ್ಯ ಸರ ಮತ್ತು ಕಾಲುಂಗುರ ಹೊರತುಪಡಿಸಿ ಉಳಿದ ಯಾವುದೇ ಆಭರಣ ಧರಿಸಲು ಅನುಮತಿಯಿಲ್ಲ.

ಇನ್ನು ಮೊಬೈಲ್, ಬ್ಲೂಟೂತ್, ಇಯರ್‌ಫೋನ್, ಮೈಕ್ರೋ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ. ಏಪ್ರಿಲ್ 23ರ ಬೆಳಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆದಿದ್ದು, ಏಪ್ರಿಲ್ 24ರ ಬೆಳಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ಆಯೋಜಿಸಲಾಗಿದೆ.