64ನೇ ವರ್ಷದ ಊರದೇವತೆ ಜಾಲಾರಿ ಗಂಗಮ್ಮದೇವಿ, ಧರ್ಮರಾಯಸ್ವಾಮಿ ಅದ್ಧೂರಿ ಹೂವಿನ ಕರಗ ಮಹೋತ್ಸವಕ್ಕೆ ದಿನಗಣನೆ
ಪೊಲೀಸ್ ಇಲಾಖೆ, ಮಾಧ್ಯಮ ಬಳಗ ಎಂದೆಂದಿಗೂ ಜತೆಯಾಗಿ ನಿಂತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಡಳಿತವೂ ನೆರವು ನೀಡಲಿದೆ. ಇಂತಹ ಮಹೋನ್ನತ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮದೇವತೆಯ ಕೃಪೆಗೆ ಪಾತ್ರ ರಾಗಬೇಕೆಂದು ಎಂದು ಕರಗ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಮನವಿ ಮಾಡಿದರು.
-
ಚಿಕ್ಕಬಳ್ಳಾಪುರ: ನಗರದ ಗ್ರಾಮದೇವತೆ ಶ್ರೀಜಾಲಾರಿ ಗಂಗಮ್ಮ ದೇವಾಲಯದ 64ನೇ ವರ್ಷದ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವವು ಏ.6ರಿಂದ 12ರ ತನಕ ನಡೆಯಲಿದ್ದು 11ರ ರಾತ್ರಿ ಹೂವಿನ ಕರಗ ಮಹೋತ್ಸವ(Hoovina Karaga Festival) ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಗಂಗಮಾಂಬದೇವಿ ಕರಗ ಮಹೋತ್ಸವ ಸೇವಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
1961ರಲ್ಲಿ ಪ್ರಾರಂಭವಾದ ಜಾಲಾರಿ ಗಂಗಮ್ಮದೇವಿ ಧರ್ಮರಾಯಸ್ವಾಮಿ ಕರಗ ಮಹೋತ್ಸವವು 64 ವರ್ಷಗಳಿಂದ ನಿರಾತಂಕವಾಗಿ ಸರ್ವಧರ್ಮ ಸಮನ್ವಯತೆ ಸಾರುತ್ತಾ ಸಾಗಿರುವುದು ಸಂತೋಷದ ಸಂಗತಿಯಾಗಿದೆ. ವರ್ಷದಿಂದ ವರ್ಷಕ್ಕೆ ಇದರ ಹಿರಿಮೆ ಹೆಚ್ಚುತ್ತಲೇ ಸಾಗುತ್ತಿದೆ. ಕಳೆದ ವರ್ಷ 1 ಲಕ್ಷದಷ್ಟೂ ಭಕ್ತರು ಆಗಮಿಸಿದ್ದರು ಎನ್ನಲಾಗಿದ್ದು ಈವರ್ಷವೂ ಇದನ್ನು ಮೀರಿ ಬರುವ ನಿರೀಕ್ಷೆ ನಮ್ಮದು.
ಪೊಲೀಸ್ ಇಲಾಖೆ, ಮಾಧ್ಯಮ ಬಳಗ ಎಂದೆಂದಿಗೂ ಜತೆಯಾಗಿ ನಿಂತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಡಳಿತವೂ ನೆರವು ನೀಡಲಿದೆ. ಇಂತಹ ಮಹೋನ್ನತ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮದೇವತೆ ಯ ಕೃಪೆಗೆ ಪಾತ್ರರಾಗಬೇಕೆಂದು ಎಂದು ಕರಗ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಮನವಿ ಮಾಡಿದರು.
ಇದನ್ನೂ ಓದಿ: Chikkaballapur News: 1564 ಬಾಕಿ ಯುಡಿಐಡಿ ಕಾರ್ಡ್ಗಳ ವಿಲೇ ಬಗ್ಗೆ ತ್ವರಿತ ಕ್ರಮ ವಹಿಸಿ: ಜಿಲ್ಲಾಧಿಕಾರಿ ಜಿ.ಪ್ರಭು
ಏಪ್ರಿಲ್ 6ರ ಬೆಳಗ್ಗೆ 10ಕ್ಕೆ ಗಣಪತಿಹೋಮ, ಮಹಾಮಂಗಳಾರತಿ ಮೂಲಕ ಕರಗ ಮಹೋ ತ್ಸವಕ್ಕೆ ಚಾಲನೆ ದೊರೆಯಲಿದ್ದು, ಏಪ್ರಿಲ್ 7 ರಂದು ಚಂಡಿಕಾ ಹೋಮ, ಜಾಲಾರಿ ಗಂಗಾ ದೇವಿ ಸಹಸ್ರನಾಮಾರ್ಚನೆ, ಏಪ್ರಿಲ್ 8 ರಂದು ಕಳಶ ಸ್ಥಾಪನೆ, ಏ.9ರಂದು ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಶ್ರೀಧರ್ಮರಾಯಸ್ವಾಮಿ ಹಸಿ ಕರಗ, ಏ.10ರಂದು ಗಂಗಾದೇವಿ ಜಾತ್ರಾ ಮಹೋತ್ಸವ, ಧರ್ಮರಾಯರ ಸಪ್ತಕಳಸ ಕರಗ ನಡೆಯಲಿದೆ ಎಂದರು.
ಉತ್ತಮ ಮಳೆ ಬೆಳೆಯೊಂದಿಗೆ ಜನಜಾನುವಾರುಗಳು ಸಮೃದ್ಧವಾದ ಜೀವನ ನಡೆಸಲೆಂದು ಪ್ರಾರ್ಥಿಸಿ ಏ.11ರಂದು ಮಧ್ಯಾಹ್ನ 12ಕ್ಕೆ ಧರ್ಮರಾಯಸ್ವಾಮಿ ಮತ್ತು ದ್ರೌಪದಮ್ಮರ ಕಲ್ಯಾಣೋತ್ಸವ, ರಾತ್ರಿ 9ಕ್ಕೆ ಧರ್ಮರಾಯನ ಹೂವಿನ ಕರಗ ಮಹೋತ್ಸವವು ನಡೆಯ ಲಿದೆ ಎಂದು ಹೇಳಿದರು.
ಹೂವಿನ ಕರಗದ ದಿನ ಎಂ.ಜಿ ರಸ್ತೆ,ಎಸ್‌ಎಸ್ ಗಾರ್ಡನ್, ಕುರುಬರ ಪೇಟೆ, ಭುವನೇಶ್ವರಿ ವೃತ್ತ, ಸಂತೆಮಾರುಕಟ್ಟೆಯಲ್ಲಿ ರಸಮಂಜರಿ, ವಾದ್ಯಗೋಷ್ಠಿ, ನಾಟಕ ಪ್ರದರ್ಶನ ನಡೆಯಲಿದ್ದು, ಸುಮಾರು 25ಕ್ಕೂ ಹೆಚ್ಚಿನ ಮುತ್ತಿನ ಪಲ್ಲಕ್ಕಿಗಳಲ್ಲಿ ಗ್ರಾಮದೇವತೆಗಳ ಮೆರವಣಿಗೆ ನಡೆಯಲಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಭಕ್ತರಿಂದ ಅನ್ನದಾನ,ಪಾನಕ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಏ.12ರ ರಾತ್ರಿ 7 ಗಂಟೆಗೆ ಜಾಲಾರಿ ಗಂಗಮ್ಮ ದೇವಾಲಯದ ಮುಂಭಾಗ ಕರಗವು ಅಗ್ನಿಕೊಂಡ ಪ್ರವೇಶ, ಏಪ್ರಿಲ್೧೩ ರಂದು ಬೆಳಗ್ಗೆ ೧೦ಕ್ಕೆ ಭುವನೇಶ್ವರಿ ವೃತ್ತದಲ್ಲಿ ವಸಂತೋತ್ಸವ ನಡೆಯಲಿದೆ. ಮೇಲೂರಿನ ಕೆ.ಧರ್ಮೇಂದ್ರ ಅವರು ಕರಗವನ್ನು ಹೊರ ಲಿದ್ದಾರೆ ಎಂದು ವಿವರಿಸಿದರು.
ಕರಗ ವೀಕ್ಷಣೆಗೆ ತಮಿಳುನಾಡು, ಆಂಧ್ರ ಸೇರಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದು, ನಗರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಗೌರವಾಧ್ಯಕ್ಷ ವಿ.ಗಂಗಾಧರಮೂರ್ತಿ, ಕೆ.ರಾಮು, ರಾಜ್ ದರ್ಶಿನಿ ಲೋಕೇಶ್, ನಗರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ನಗರಸಭೆ ಮಾಜಿ ಸದಸ್ಯ ಮೋಬೈಲ್ ಬಾಬು, ಕೋದಂಡರಾಮ ದೇವಾಲಯದ ಅಧ್ಯಕ್ಷ ಕೆ.ಎಸ್. ಸುದರ್ಶನ್, ಗೋವಿಂದರಾಜು, ವೆಂಕಟಸ್ವಾಮಿ, ಬಾಬು, ಶೇಖರ್, ರಾಜಣ್ಣ, ನಂಜುಂಡಚಾರಿ,, ರಘು, ಹರ್ಷ,ಅರ್ಚಕರಾದ ರಾಮಕೃಷ್ಣ ಬುಚಿ, ಮತ್ತಿತರರು ಇದ್ದರು.