ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gudibande News: ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಒಗ್ಗಟ್ಟಿನ ಹೋರಾಟಕ್ಕೆ ಮುಖಂಡರ ನಿರ್ಧಾರ

ದೇಶದಲ್ಲಿ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಗಳು ನಡೆಯಲಿರುವ ಸುದ್ದಿಯ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಯನ್ನು ಮಂಡಿಸಲು ಇದುವೇ ಅತ್ಯಂತ ಪ್ರಶಸ್ತ ಸಮಯವಾಗಿದೆ ಎಂದು ತಿಳಿಸಿದರು. ಈ ಹಿಂದೆ ನಡೆದ ಹಲವು ಪ್ರತಿಭಟನೆಗಳು ತಾರ್ಕಿಕ ಅಂತ್ಯ ಕಾಣದಿದ್ದರೂ, ಈ ಬಾರಿ ಜಾತಿ ಮತ್ತು ರಾಜಕೀಯ ಪಕ್ಷ ಗಳ ಭೇದ ಮರೆತು ಒಗ್ಗಟ್ಟಿನಿಂದ ಹೆಜ್ಜೆ ಇಡಬೇಕಿದೆ

ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ

-

Profile
Ashok Nayak Apr 20, 2026 12:26 AM

ಗುಡಿಬಂಡೆ: ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಮುಖ ಸಭೆಯಲ್ಲಿ ಗುಡಿಬಂಡೆ, ಮಂಡಿಕಲ್ ಮತ್ತು ನಗರಗೆರೆ ಹೋಬಳಿಗಳ ಮುಖಂಡರು ಭಾಗವಹಿಸಿ, ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಯ ದಶಕಗಳ ಬೇಡಿಕೆಗಾಗಿ ಉಗ್ರ ಹೋರಾಟ ನಡೆಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಈ ಮೂಲಕ ಈ ಭಾಗದ ಜನರ ದೀರ್ಘಕಾಲದ ಕನಸನ್ನು ನನಸು ಮಾಡಲು ಈಗ ಹೊಸದೊಂದು ಹೋರಾಟಕ್ಕೆ ಅಧಿಕೃತವಾಗಿ ಮುನ್ನುಡಿ ಬರೆಯಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಅಮೀರ್ ಜಾನ್ ಅವರು, ದೇಶದಲ್ಲಿ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಗಳು ನಡೆಯಲಿರುವ ಸುದ್ದಿಯ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆಯನ್ನು ಮಂಡಿಸಲು ಇದುವೇ ಅತ್ಯಂತ ಪ್ರಶಸ್ತ ಸಮಯವಾಗಿದೆ ಎಂದು ತಿಳಿಸಿದರು. ಈ ಹಿಂದೆ ನಡೆದ ಹಲವು ಪ್ರತಿಭಟನೆಗಳು ತಾರ್ಕಿಕ ಅಂತ್ಯ ಕಾಣದಿದ್ದರೂ, ಈ ಬಾರಿ ಜಾತಿ ಮತ್ತು ರಾಜಕೀಯ ಪಕ್ಷ ಗಳ ಭೇದ ಮರೆತು ಒಗ್ಗಟ್ಟಿನಿಂದ ಹೆಜ್ಜೆ ಇಡಬೇಕಿದೆ ಎಂದು ಅವರು ಕರೆ ನೀಡಿದರು. ಅಲ್ಲದೆ, ಗುಡಿಬಂಡೆ ಪ್ರತ್ಯೇಕ ಕ್ಷೇತ್ರವಾಗುವವರೆಗೂ ವಿಭಿನ್ನ ರೀತಿಯ ಪ್ರತಿಭಟನೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Gudibande News: ಗುಡಿಬಂಡೆಯಲ್ಲಿ ಅದ್ದೂರಿ ಅಂಬೇಡ್ಕರ್, ಬಾಬು ಜಗಜೀವನ್ ರಾಂ ಜಯಂತಿ

ಬಳಿಕ ಮಾತನಾಡಿದ ಹಿರಿಯ ಮುಖಂಡ ರಾಜಶೇಖರ ನಾಯ್ಡು ಅವರು, ಈಗಾಗಲೇ ಜನಗಣತಿ ಕಾರ್ಯ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರ ಮರುವಿಂಗಡಣೆ ಸಮಿತಿಗಳು ರಚನೆಯಾಗಲಿವೆ ಎಂದರು.

ಈ ಸಮಿತಿಗಳಿಗೆ ನಾವು ಕೇವಲ ಆವೇಶದಿಂದ ಮನವಿ ಸಲ್ಲಿಸದೆ, ಕಾನೂನಾತ್ಮಕವಾಗಿ ಬೇಕಾದ ಅಗತ್ಯ ದಾಖಲೆಗಳು ಮತ್ತು ಅಂಕಿಅಂಶಗಳನ್ನು ವ್ಯವಸ್ಥಿತವಾಗಿ ಒದಗಿಸುವ ಮೂಲಕ ಪ್ರಬಲವಾಗಿ ಒತ್ತಾಯಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಹಿಂದೆ ಆರಂಭವಾದ ಹೋರಾಟಗಳು ರಾಜಕೀಯ ಹಿತಾಸಕ್ತಿಗಳಿಂದ ತಣ್ಣಗಾಗಿದ್ದವು, ಆದರೆ ಈ ಬಾರಿ ಅಂಕಿಅಂಶಗಳ ಸಹಿತ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ನಗರಗೆರೆ ಮತ್ತು ಮಂಡಿಕಲ್ ಹೋಬಳಿಗಳ ಮುಖಂಡರು ತಮ್ಮ ಬೆಂಬಲ ಸೂಚಿಸುತ್ತಾ, ಪ್ರಸ್ತುತ ತಾಲೂಕು ಕೇಂದ್ರಗಳು ತಮಗೆ ತೀರಾ ದೂರವಿರುವುದರಿಂದ ಕಂದಾಯ ಹಾಗೂ ಅಭಿವೃದ್ಧಿ ಕೆಲಸ ಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಿದರೆ ಮಾತ್ರ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಒತ್ತಿ ಹೇಳಿದರು.

ಹೋರಾಟದ ಮುಂದಿನ ಹಂತಗಳ ಕುರಿತು ಚರ್ಚಿಸಿದ ಸಭೆಯು, ಮುಂಬರುವ ದಿನಗಳಲ್ಲಿ ಪಾದ ಯಾತ್ರೆ, ತಾಲೂಕು ಕಚೇರಿಯ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಹಾಗೂ ಸಂಬಂಧಪಟ್ಟ ಸಚಿವರು, ಸಂಸದರು ಮತ್ತು ಚುನಾವಣಾ ಆಯೋಗಕ್ಕೆ ನಿಯೋಗದ ಮೂಲಕ ತೆರಳಿ ಮನವಿ ಸಲ್ಲಿಸುವಂತಹ ತೀವ್ರತರವಾದ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದೆ. ಈ ಸಭೆಯ ಮೂಲಕ ಗುಡಿಬಂಡೆ ಭಾಗದ ಜನರ ನ್ಯಾಯಯುತ ಬೇಡಿಕೆಗಾಗಿ ಜನಾಂದೋಲನವೊಂದು ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ.