ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kannada and English Bilingual Web Portal: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ ಬೆರಳ ತುದಿಯಲ್ಲಿ: ದ್ವಿಭಾಷಾ ವೆಬ್ ಪೋರ್ಟಲ್‌ಗೆ ಸಚಿವ ಬಿ.ಎಸ್. ಸುರೇಶ್ ಚಾಲನೆ

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಲಭ್ಯತೆ ಕುರಿತು ಸಾರ್ವಜನಿಕರು ಮತ್ತು ರೋಗಿಗಳು ಸುಲಭವಾಗಿ ಮಾಹಿತಿ ಪಡೆಯಲು ಅನುಕೂಲ ವಾಗುವಂತೆ ರೂಪಿಸಿರುವ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ವೆಬ್ ಪೋರ್ಟಲ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್(B S Suresh) ಶುಕ್ರವಾರ ಚಾಲನೆ ನೀಡಿದರು.

ದ್ವಿಭಾಷಾ ವೆಬ್ ಪೋರ್ಟಲ್‌ಗೆ ಸಚಿವ ಬಿ.ಎಸ್. ಸುರೇಶ್ ಚಾಲನೆ

-

Profile
Ashok Nayak Nov 13, 2026 11:37 PM

ಚಿಕ್ಕಬಳ್ಳಾಪುರ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ಲಭ್ಯತೆ ಕುರಿತು ಸಾರ್ವಜನಿಕರು ಮತ್ತು ರೋಗಿಗಳು ಸುಲಭವಾಗಿ ಮಾಹಿತಿ ಪಡೆಯಲು ಅನುಕೂಲ ವಾಗುವಂತೆ ರೂಪಿಸಿರುವ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ವೆಬ್ ಪೋರ್ಟಲ್‌(Kannada and English Bilingual Web Portal)ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್(B S Suresh) ಶುಕ್ರವಾರ ಚಾಲನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2026-27ನೇ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ www.chikballapurdoctorsinfo.com ವೆಬ್ ಪೋರ್ಟಲ್‌ನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ವೈದ್ಯರ ವಿವರಗಳನ್ನೂ ಇದೇ ಪೋರ್ಟಲ್‌ನಲ್ಲಿ ಸೇರ್ಪಡೆಗೊಳಿಸ ಲಾಗುವುದು. ವೈದ್ಯರು ನಿಗದಿತ ರೋಸ್ಟರ್ ಪ್ರಕಾರ ನಿಜವಾಗಿಯೂ ಕರ್ತವ್ಯಕ್ಕೆ ಹಾಜರಾಗಿ ದ್ದಾರೆಯೇ ಎಂಬುದರ ಕುರಿತು ಸಾರ್ವಜನಿಕರು ಪೋರ್ಟಲ್ ಮೂಲಕ ಪ್ರತಿಕ್ರಿಯೆ ನೀಡಬಹುದು. ಈ ಮಾಹಿತಿಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Passport seva portal: ದೇಶದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಸ್ಥಗಿತ; ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ

ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳು ಸುಗಮವಾಗಿ ದೊರೆಯುವಂತೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ಹೊಸ ವೆಬ್ ಪೋರ್ಟಲ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಹೆಚ್ಚಿನ ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಗೆ ತೆರಳುವ ಮುನ್ನವೇ ಪೋರ್ಟಲ್‌ನಲ್ಲಿ ವೈದ್ಯರ ಲಭ್ಯತೆ ಪರಿಶೀಲಿಸಿ, ಅನಗತ್ಯ ಪ್ರಯಾಣ, ಸಮಯ ಮತ್ತು ಹಣದ ವ್ಯಯ ತಪ್ಪಿಸಿಕೊಳ್ಳಬೇಕು. ಸಾರ್ವಜನಿಕರು ಈ ಸೌಲಭ್ಯದ ಮಾಹಿತಿಯನ್ನು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

ಪೋರ್ಟಲ್‌ನಲ್ಲಿರುವ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ (ದೂರವಾಣಿ: 08156-277100, ಇ-ಮೇಲ್: [email protected]) ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

13cbpm3bya ok

ರೋಗಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪ್ರಯತ್ನ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಸರ್ಕಾರದ ಕಾರ್ಯದರ್ಶಿ ಡಾ. ಎನ್. ಮಂಜುಳ ಅವರು ಅಕ್ಟೋಬರ್ 13ರಂದು ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ ಕುರಿತು ಸಾರ್ವಜನಿಕರು ಮತ್ತು ರೋಗಿಗಳು ಎದುರಿಸು ತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿದ್ದವು. ದೂರದ ಗ್ರಾಮಗಳಿಂದ ಆಸ್ಪತ್ರೆಗೆ ಬಂದ ಬಳಿಕ ವೈದ್ಯರು ಲಭ್ಯವಿಲ್ಲ ಎಂಬ ಕಾರಣಕ್ಕೆ ವಾಪಸ್ ತೆರಳುವ ಪರಿಸ್ಥಿತಿಯೂ ಇತ್ತು ಎಂದರು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕರ್ತವ್ಯ ನಿರತ ವೈದ್ಯರ ವಿವರ, ಕರ್ತವ್ಯದ ಸಮಯ, ವಿರಾಮದ ಅವಧಿ ಹಾಗೂ ಆಸ್ಪತ್ರೆಗಳ ವೇಳಾಪಟ್ಟಿಯನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸುವಂತೆ ಸೂಚಿಸಲಾಗಿತ್ತು. ಅದರಂತೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿಗಳು, ವೈದ್ಯರು ಮತ್ತು ವೆಬ್ ತಾಂತ್ರಿಕ ತಂಡದೊಂದಿಗೆ ವಿಡಿಯೋ ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿ ಪೋರ್ಟಲ್ ರೂಪಿಸಲಾಗಿದೆ. ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) ತಾಂತ್ರಿಕ ಸಹಕಾರದೊಂದಿಗೆ ಮೊಬೈಲ್ ಸ್ನೇಹಿ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.

ಪೋರ್ಟಲ್‌ನ ಪ್ರಮುಖ ಸೌಲಭ್ಯಗಳು

  • ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ವಿವರ.
  • ವೈದ್ಯರ ಕರ್ತವ್ಯದ ಸಮಯ ಮತ್ತು ವಿರಾಮದ ಅವಧಿ.
  • ಪ್ರತಿ ಆಸ್ಪತ್ರೆಯ ಕರ್ತವ್ಯದ ವೇಳಾಪಟ್ಟಿ (ರೋಸ್ಟರ್).
  • ರೋಗಿಗಳಿಗೆ ಉಪಯುಕ್ತವಾದ ಇತರೆ ಮಾಹಿತಿ.
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ಲಭ್ಯ.
  • ಮೊಬೈಲ್ ಸ್ನೇಹಿ ಬಳಕೆ; ಯಾವುದೇ ಆ್ಯಪ್ ಡೌನ್‌ಲೋಡ್ ಅಥವಾ ನೋಂದಣಿ ಅಗತ್ಯವಿಲ್ಲ.

ಸಾರ್ವಜನಿಕರಿಗೆ ಆಗುವ ಅನುಕೂಲಗಳು

ಮನೆಯಿಂದ ಹೊರಡುವ ಮುನ್ನವೇ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ಇದರಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ಅನಗತ್ಯ ಪ್ರಯಾಣ, ಸಮಯ ಮತ್ತು ಹಣದ ಉಳಿತಾಯವಾಗಲಿದೆ. ಸರ್ಕಾರಿ ಆಸ್ಪತ್ರೆಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚುವುದರ ಜೊತೆಗೆ ಸರ್ಕಾರಿ ಆರೋಗ್ಯ ಸೇವೆಗಳ ಮೇಲಿನ ಜನರ ವಿಶ್ವಾಸವೂ ವೃದ್ಧಿಯಾಗಲಿದೆ.

ಸಭೆಯಲ್ಲಿ ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಬಿ.ಎನ್. ರವಿಕುಮಾರ್, ಡಿ.ಟಿ. ಶ್ರೀನಿವಾಸ್, ಜಿಲ್ಲಾಧಿಕಾರಿ ಜಿ. ಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್. ರಮೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಶೋಭಿತಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.