ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA S.R. Vishwanath: 'ನಮ್ಮ ಒಬ್ಬ ಮುಖಂಡರನ್ನು ಮುಟ್ಟಿದರೆ ನಿಮ್ಮ ಕಡೆಯಿಂದ ಇಬ್ಬರನ್ನು ಕರೆತರುತ್ತೇನೆ'

"ಒಡೆದು ಆಳುವ ನೀತಿ ಯಲಹಂಕದಲ್ಲಿ ನಡೆಯುವುದಿಲ್ಲ. ನಮ್ಮ ಬುಡಕ್ಕೆ ಬಂದರೆ ನಾವು ಕೂಡ ಚಿಕ್ಕಬಳ್ಳಾಪುರದಲ್ಲಿ ನಿಮ್ಮ ಬುಡಕ್ಕೆ ಬರುತ್ತೇವೆ. ಇನ್ನು ಮುಂದೆ ಪ್ರತಿ ತಿಂಗಳು ಚಿಕ್ಕಬಳ್ಳಾಪುರಕ್ಕೆ ಬಂದು ಪಕ್ಷ ಸಂಘಟನೆ ಮಾಡುತ್ತೇನೆ" ಈ ಜಿಲ್ಲೆಯಲ್ಲಿ ನಾನು ಉಸ್ತುವಾರಿಯಾಗಿ ಕೆಲಸ ಮಾಡಿದ್ದು ಎಲ್ಲರ ಸಂಪರ್ಕ ಚೆನ್ನಾಗಿದೆ. ಸಂಘಟನೆ ಮಾಡುವುದು ಗೊತ್ತಿದೆ ಎಂದರು.

ಸಂಸದರ ವಿರುದ್ಧ ಶಾಸಕ ಎಸ್.ಆರ್. ವಿಶ್ವನಾಥ್ ಗುಡುಗು

-

Profile
Ashok Nayak Jun 27, 2026 7:28 AM

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ವಿಚಾರ ಯಲಹಂಕ ಬಿಜೆಪಿ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಶಾಸಕ ಎಸ್.ಆರ್.ವಿಶ್ವನಾಥ್(MLA S.R. Vishwanath) ಅವರು ಸಂಸದರ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ನಗರದ ಸಮಾರಾಸ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಜಾತ್ಯಾತೀತ ನೆಲೆಯಲ್ಲಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದಾರೆ. ಆದರೆ ಯಲಹಂಕ ದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಕೆಂಪೇಗೌಡ ಜಯಂತಿ ಆಚರಿಸ ಲಾಗುತ್ತಿದೆ" ಎಂದು ಹೇಳುವ ಮೂಲಕ ಸಂಸದರ ನಡೆಯನ್ನು ಪರೋಕ್ಷವಾಗಿ ಟೀಕಿಸಿದರು.

"ಯಲಹಂಕ ಬಿಜೆಪಿಯನ್ನು ಯಾರಿಂದಲೂ ಏನೂ ಮಾಡಲಾಗುವುದಿಲ್ಲ. ಸ್ವಲ್ಪ ಅಲುಗಾಡಿಸ ಬಹುದಷ್ಟೇ. ನಮ್ಮ ಮುಖಂಡರು ಹಣಕ್ಕೋ ಆಮಿಷಗಳಿಗೋ ಒಳಗಾಗುವವರಲ್ಲ" ಎಂದು ಸ್ಪಷ್ಟಪಡಿಸಿದ ಅವರು, ಸಂಸದರ ಹಿಂದೆ ಬಿಜೆಪಿ ಕಾರ್ಯಕರ್ತರಿಗಿಂತ ಕಾಂಗ್ರೆಸ್ ಮುಖಂಡರೇ ಹೆಚ್ಚಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: MLA S R Srinivas: ಅಡ್ಡ ಮತದಾನ ತಿಳಿದೂ ಅಭ್ಯರ್ಥಿ ಬೇಕಿರಲಿಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್

48 ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ  ಕಟ್ಟಿದ್ದೇನೆ. ಪ್ರತಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಯಲಹಂಕ ಕ್ಷೇತ್ರದಿಂದ ಭಾರೀ ಮುನ್ನಡೆ ನೀಡಿರುವುದನ್ನು ನೆನಪಿಸಿದ ಅವರು, "ನಮ್ಮದು ವ್ಯಕ್ತಿ ಬದ್ಧ ರಾಜಕಾರಣವಲ್ಲ, ಪಕ್ಷ ಬದ್ಧ ರಾಜಕಾರಣ" ಎಂದು ಹೇಳಿದರು.

ಸಂಸದರ ನಡೆ ಪ್ರಶ್ನಿಸಿದ ಅವರು, "ಪಕ್ಷದ ಮುಖಂಡರು ಮೃತಪಟ್ಟಾಗ ಬರಲಿಲ್ಲ. ಆದರೆ ಕಾಂಗ್ರೆಸ್ ನಾಯಕರ ಮನೆಗಳಿಗೆ ಹೋಗುತ್ತೀರಿ. ನಿಮ್ಮ ವಿರುದ್ಧ ಮತ ಹಾಕಿದವರೊಂದಿಗೆ ಸಖ್ಯ ಬೆಳೆಸುತ್ತೀರಿ. ಇದರ ಮರ್ಮವೇನು?" ಎಂದು ಪ್ರಶ್ನಿಸಿದರು.

"ಒಡೆದು ಆಳುವ ನೀತಿ ಯಲಹಂಕದಲ್ಲಿ ನಡೆಯುವುದಿಲ್ಲ. ನಮ್ಮ ಬುಡಕ್ಕೆ ಬಂದರೆ ನಾವು ಕೂಡ ಚಿಕ್ಕಬಳ್ಳಾಪುರದಲ್ಲಿ ನಿಮ್ಮ ಬುಡಕ್ಕೆ ಬರುತ್ತೇವೆ. ಇನ್ನು ಮುಂದೆ ಪ್ರತಿ ತಿಂಗಳು ಚಿಕ್ಕಬಳ್ಳಾಪುರಕ್ಕೆ ಬಂದು ಪಕ್ಷ ಸಂಘಟನೆ ಮಾಡುತ್ತೇನೆ" ಈ ಜಿಲ್ಲೆಯಲ್ಲಿ ನಾನು ಉಸ್ತುವಾರಿಯಾಗಿ ಕೆಲಸ ಮಾಡಿದ್ದು ಎಲ್ಲರ ಸಂಪರ್ಕ ಚೆನ್ನಾಗಿದೆ. ಸಂಘಟನೆ ಮಾಡುವುದು ಗೊತ್ತಿದೆ ಎಂದರು.

ಇದೇ ವೇಳೆ ತೀವ್ರ ಸ್ವರದಲ್ಲಿ ಮಾತನಾಡಿದ ಅವರು ಯಲಹಂಕದಲ್ಲಿ "ನಮ್ಮ ಒಬ್ಬ ಮುಖಂಡ ರನ್ನು ಮುಟ್ಟಿದರೆ ನಿಮ್ಮ ಕಡೆಯಿಂದ ಇಬ್ಬರನ್ನು ಕರೆತರುತ್ತೇನೆ. ಎಚ್ಚರವಿರಲಿ" ಎಂದು ಎಚ್ಚರಿಕೆ ನೀಡಿದರು.

26cbpm1a ok

ಸಂಸದರ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆ ಎತ್ತಿದ ಅವರು, "2029ಕ್ಕೆ ನೀವೇ ಲೋಕಸಭಾ ಅಭ್ಯರ್ಥಿ ಎಂದು ಈಗಲೇ ಹೇಳಿ. ನಿಮ್ಮನ್ನು ಗೆಲ್ಲಿಸಲು ನಾವು ಕಾರ್ಯತಂತ್ರ ರೂಪಿಸುತ್ತೇವೆ. ದ್ವೇಷ ರಾಜಕಾರಣ ಮಾಡುವುದಿಲ್ಲ. ಇಲ್ಲದಿದ್ದರೆ ಯಲಹಂಕಕ್ಕೆ ಬರುವುದಿದ್ದರೆ ಬಿಜೆಪಿಯಿಂದ ನಾನೇ ಅಭ್ಯರ್ಥಿ ನೀವು ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೀರಿ ಎಂದು ಸ್ಪಷ್ಟಪಡಿಸಿ" ಎಂದು ಸವಾಲು ಹಾಕಿದರು.

ಚಿಕ್ಕಬಳ್ಳಾಪುರ ರಾಜಕೀಯದ ಕುರಿತು ಪ್ರತಿಕ್ರಿಯಿಸಿದ ಅವರು,ಸಂದೀಪ್‌ರೆಡ್ಡಿ ಅಂತಹ ಯುವಕರು ಇಲ್ಲಿ ಶಾಸಕರಾಗಬೇಕು ಎಂಬುದು ಜನತೆಯ ಬಯಕೆ. ನನ್ನದೂ ಕೂಡ ಅದೇ ಆಗಿದೆ.ಟಿಕೆಟ್ ಕೊಡುವಂತೆ ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ.ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡುತ್ತೇನೆ. ಒಂದು ವೇಳೆ "ಪಕ್ಷದ ಹೈಕಮಾಂಡ್ ನನಗೇ ಟಿಕೆಟ್ ನೀಡಿದರೆ ನಾನು ಚಿಕ್ಕಬಳ್ಳಾಪುರ ದಲ್ಲೂ ಸ್ಪರ್ಧಿಸಲು ಸಿದ್ಧ" ಎಂದು ಘೋಷಿಸಿದರು.

ಪುತ್ರ ಸಂದೀಪ್ ರೆಡ್ಡಿ ಆಗಲಿ ನನ್ನ ಮಗನಾಗಲಿ ಯುವಕರಿದ್ದಾರೆ. "ನನ್ನ ಮಗ ಎಂಎಲ್‌ಎ ಆಗಬಾರದಾ? ಎಂಪಿ ಆಗಬಾರದಾ? ಯುವಕರಿಗೆ ಅವಕಾಶ ಸಿಗಬೇಕು ಎಂದು ಹೇಳಿದ್ದೇನೆ. ಟಿಕೆಟ್ ನೀಡುವುದು ಹೈಕಮಾಂಡ್ ತೀರ್ಮಾನ" ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಒಟ್ಟಾರೆ ಯಲಹಂಕ ಕ್ಷೇತ್ರದ ಬಿಜೆಪಿ ರಾಜಕಾರಣದಲ್ಲಿನ ಈ ಎಲ್ಲಾ ಬೆಳವಣಿಗೆಗಳು. ಸಂಸದ ಮತ್ತು ಶಾಸಕ ವಿಶ್ವನಾಥ್ ಅವರ ಈ ಹೇಳಿಕೆಗಳು ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಪಕ್ಷದೊಳಗಿನ ಬಣ ರಾಜಕಾರಣ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು ಪಕ್ಷವನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆಯೋ ಕಾಲವೇ ನಿರ್ಧರಿಸಲಿದೆ.