ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭರವಸೆಯಲ್ಲೇ ಉಳಿದ ಹಲಗೆವಡೇರಹಳ್ಳಿ ಕೆರೆ ಅಭಿವೃದ್ಧಿ

ನಗರೀಕರಣದ ಒತ್ತಡದಿಂದ ಬೆಂಗಳೂರಿನ ಅನೇಕ ಕೆರೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಉಳಿದಿರುವ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾ ಗಿದ್ದರು. ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿ ಕೆರೆಯ ಅಭಿವೃದ್ಧಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬದಿಂದ ಸ್ಥಗಿತಗೊಂಡಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಭರವಸೆಯಲ್ಲೇ ಉಳಿದ ಹಲಗೆವಡೇರಹಳ್ಳಿ ಕೆರೆ ಅಭಿವೃದ್ಧಿ

-

Profile
Ashok Nayak Jun 27, 2026 8:30 AM

ವೈಭವ ಚ.ಕೊಳ್ಳಿ, ಬೆಂಗಳೂರು

ಮೂರುವರೆ ವರ್ಷ ಕಳೆದರೂ ಟೆಂಡರ್ ಕಾಮಗಾರಿ ಅಪೂರ್ಣ

ಹೂಳು ತುಂಬಿದ ಕೆರೆ, ಕೊಳಚೆ ನೀರಿನಿಂದ ದುರ್ವಾಸ

ರಾಜರಾಜೇಶ್ವರಿ ನಗರದ ಹಲಗೆವಡೇರ ಹಳ್ಳಿ ಕೆರೆ ಅಭಿವೃದ್ಧಿಗೆ ಮೂರುವರೆ ವರ್ಷಗಳ ಹಿಂದೆ ಟೆಂಡರ್ ಮಂಜೂರಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗದೇ ಇರುವುದರಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ಪಕ್ಷಿಗಳ ಆಶ್ರಯ ತಾಣವಾಗಿದ್ದ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ನೀರಿನ ಮೂಲವಾಗಿದ್ದ ಐತಿಹಾಸಿಕ ಕೆರೆ ಇಂದು ಹೂಳು ತುಂಬಿದ ನೀರು ಹೊಂದಿ ದುರ್ವಾಸನೆ ಬೀರುತ್ತಿದ್ದು, ಅಭಿವೃದ್ಧಿ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎನ್ನುವ ಪ್ರಶ್ನೆ ಸಾರ್ವಜನಿಕ ರಲ್ಲಿ ಶುರುವಾಗಿದೆ.

ನಗರೀಕರಣದ ಒತ್ತಡದಿಂದ ಬೆಂಗಳೂರಿನ ಅನೇಕ ಕೆರೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಉಳಿದಿರುವ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದ್ದರು. ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿ ಕೆರೆಯ ಅಭಿವೃದ್ಧಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬದಿಂದ ಸ್ಥಗಿತಗೊಂಡಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: Bangalore News: ಮತ್ತೊಮ್ಮೆ ಎಲ್‌ಪಿಜಿ ಬೆಲೆ ಏರಿಕೆ: ಉಜ್ವಲ ಸಿಲೆಂಡರ್ 4ಕ್ಕೆ ಇಳಿಸಿ ಅಡುಗೆ ಮನೆಗೆ ಕೊಳ್ಳಿ ಇಟ್ಟ ಪ್ರಧಾನಿ ಮೋದಿ: ಡಾ.ಆನಂದ ಕುಮಾರ್

ಸುಮಾರು 17 ಎಕರೆ 10 ಗುಂಟೆ ವಿಸ್ತಾರ ಹೊಂದಿರುವ ಈ ಕೆರೆಯ ಸುತ್ತ ದೇವಸ್ಥಾನಗಳು ಹಾಗೂ ವಸತಿ ಬಡಾವಣೆಗಳಿವೆ. ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕಾಗಿ ನೂರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಬಾತುಕೋಳಿಗಳು, ಹೆರಾನ್, ಕೊಕ್ಕರೆ, ಎಗ್ರೆಟ್, ಸ್ನೇಕ್ ಬರ್ಡ್, ಕಿಂಗ್‌ಫಿಶರ್ ಸೇರಿದಂತೆ ಹಲವು ಜಾತಿಯ ಪಕ್ಷಿಗಳು ಮತ್ತು ಮೀನುಗಳು ಕಾಣಸಿಗುತ್ತಿದ್ದ ಈ ಪ್ರದೇಶ ಈಗ ತ್ಯಾಜ್ಯ ಮತ್ತು ಹೂಳು ತುಂಬಿದ ನೀರಿನ ದುರ್ವಾಸನೆಯಿಂದ ನರಳುತ್ತಿದೆ.

ಮೂರು ವರ್ಷಗಳ ಹಿಂದೆ ಹಲಗೆ ವಡೇರಹಳ್ಳಿ ಹಾಗೂ ನಾಗರಬಾವಿ ಕೆರೆಗಳ ಅಭಿವೃದ್ಧಿಗೆ ಒಂದೇ ವೇಳೆ ಟೆಂಡರ್ ಮಂಜೂರಾಗಿತ್ತು. ಆದರೆ ಎರಡೂ ಕೆರೆಗಳ ಕಾಮಗಾರಿ ಏಕಕಾಲದಲ್ಲಿ ಕೈಗೊಳ್ಳಲು ಸಾಧ್ಯವಾಗದಿರುವುದು ಹಾಗೂ ಸರ್ವೇ ಕಾರ್ಯ ವಿಳಂಬವಾಗಿರುವುದರಿಂದ ಹಲಗೆವಡೇರಹಳ್ಳಿ ಕೆರೆಯ ಅಭಿವೃದ್ಧಿ ಹಿನ್ನಡೆ ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಪರಿಸರ ಸಮತೋಲನ ಕಾಪಾಡು ವಲ್ಲಿ ಕೆರೆಗಳ ಪಾತ್ರ ಮಹತ್ವದ್ದಾಗಿರುವ ಸಂದರ್ಭ ದಲ್ಲಿ, ಐತಿಹಾಸಿಕ ಹಲಗೆವಡೇರ ಹಳ್ಳಿ ಕೆರೆಯ ಅಭಿವೃದ್ಧಿ ಇನ್ನಷ್ಟು ವಿಳಂಬವಾಗದಂತೆ ಸಂಬಂಧಿತ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಲಗೆವಡೇರಹಳ್ಳಿ ಕೆರೆ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ ?

ಹಲಗೆವಡೇರಹಳ್ಳಿ ಕೆರೆಗೆ ಕೊಳಚೆ ನೀರು ಹರಿದು ಸೇರುವುದನ್ನು ತಡೆಯಲು ನಿರ್ಮಿಸ ಲಾಗುತ್ತಿರುವ ತಿರುವು ಗಾಲುವೆ ಕಾಮಗಾರಿ ಈಗಾಗಲೇ ಶೇ.60ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ 15 ದಿನಗಳೊಳಗೆ ಮುಗಿಸುವಂತೆ ಎಫ್‌ʼಇಸಿಸಿ ವಿಶೇಷ ಆಯುಕ್ತೆ ಸುಷಮಾ ಗೋಡ ಬೋಲೆ ಅವರು ಜೂನ್ 9ರಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಕೆರೆ ಅಭಿವೃದ್ಧಿ ಕಾಮಗಾರಿಯ ಭಾಗವಾದ ವಾಕ್‌ವೇ ಗ್ರಾವೆಲ್ ಅಳವಡಿಕೆ, ಬಾಕಿ ಫೆನ್ಸಿಂಗ್ ಕಾಮಗಾರಿ ಪೂರ್ಣ ಗೊಳಿಸುವುದು ಹಾಗೂ ಕೆರೆ ಸುತ್ತ ಅಲಂಕಾರಿಕ ಮತ್ತು ಹಣ್ಣಿನ ಸಸಿಗಳನ್ನು ನೆಡುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

image

ಟೆಂಡರ್ ಮಂಜೂರಾಗಿ ಮೂರುವರೆ ವರ್ಷ ಕಳೆದರೂ ಕೆರೆಯ ಸ್ಥಿತಿಯಲ್ಲಿ ಯಾವುದೇ ಮಹತ್ವದ ಬದಲಾವಣೆ ಕಾಣುತ್ತಿಲ್ಲ. ಕೆರೆಯಿಂದ ಹರಡುವ ದುರ್ವಾಸನೆ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದು, ಕಾರ್ಯರೂಪಕ್ಕೆ ತರುತ್ತಿಲ್ಲ.

-ದೇವರಾಜ, ಸ್ಥಳೀಯ ನಿವಾಸಿ
image

ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಸಮಯ ಬೇಕಾಗಿದೆ. ಅನುದಾನ ಮಂಜೂರಾಗಿದ್ದರೂ ಹಣ ಬಿಡುಗಡೆ ಆಗದ ಕಾರಣ ಕಾಮಗಾರಿ ವಿಳಂಬಗೊಂಡಿದೆ. 3.5 ವರ್ಷಗಳಿಂದ ಗುತ್ತಿಗೆದಾರರಿಗೆ ಒಂದು ರುಪಾಯಿ ಪಾವತಿ ಆಗಿಲ್ಲ. ಆರ್ಥಿಕ ಕಾರಣಗಳಿಂದ ಕಾಮಗಾರಿ ಕುಂಠಿತಗೊಂಡಿದೆ. ಆದರೂ ಗುತ್ತಿಗೆದಾರರು ಕೆಲಸ ಸಂಪೂರ್ಣವಾಗಿ ನಿಲ್ಲಿಸಿಲ್ಲ.

-ರಾಕೇಶ್, ಎಂಜಿನಿಯರ್